Saturday, January 18, 2025
Homeಸುದ್ದಿಜ.20ರಂದು ಅಂಬಿಕಾ ವಿದ್ಯಾಲಯಕ್ಕೆ ಗಾಯಕಿ ಸೂರ್ಯಗಾಯತ್ರಿ - ದಶಾಂಬಿಕೋತ್ಸವ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಜ.20ರಂದು ಅಂಬಿಕಾ ವಿದ್ಯಾಲಯಕ್ಕೆ ಗಾಯಕಿ ಸೂರ್ಯಗಾಯತ್ರಿ – ದಶಾಂಬಿಕೋತ್ಸವ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ – ದಶಾಂಬಿಕೋತ್ಸವದ ಪ್ರಯುಕ್ತ ಯುವಗಾಯಕಿ ಸೂರ್ಯಗಾಯತ್ರಿ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಜ.20ರಂದು ಆಯೋಜಿಸಲಾಗಿದೆ.

ಸಂಸ್ಥೆಯ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಸಂಜೆ 5.30ರಿಂದ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ.
ದಶಾಂಬಿಕೋತ್ಸವದ ನೆಲೆಯಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ, ಆರೋಗ್ಯ, ಜಾಗೃತಿಯೇ ಮೊದಲಾದ ಹತ್ತುಹಲವು ಬಗೆಯ ಕಾರ್ಯಕ್ರಮಗಳನ್ನು ಅಂಬಿಕಾ ವಿದ್ಯಾಲಯದ ವತಿಯಿಂದ ವರ್ಷಪೂರ್ತಿ ಆಯೋಜಿಸುತ್ತಾ ಬರಲಾಗಿದೆ.

ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಮ್ಮೋಹಿನಿ ತಜ್ಞ, ಕುಂಡಲಿನಿ ಯೋಗ ಗುರು ಡಾ.ರಾಮಚಂದ್ರ ಗುರೂಜಿಯವರ ಕಾರ್ಯಕ್ರಮವೂ ಆಯೋಜನೆಗೊಂಡಿತ್ತು. ಇದೀಗ ಮೊಟ್ಟ ಮೊದಲ ಬಾರಿಗೆ ಸೂರ್ಯಗಾಯತ್ರಿ ಅವರು ಪುತ್ತೂರಿಗೆ ಆಗಮಿಸಿ ಕಾರ್ಯಕ್ರಮ ನೀಡುತ್ತಿದ್ದಾರೆ.


ಸೂರ್ಯಗಾಯತ್ರಿ: ಇವರು ಕೇರಳದ ವಡಕರದ ಪುರಮೇರಿ ಗ್ರಾಮದ ಮೃದಂಗ ವಾದಕ ಪಿ.ವಿ.ಅನಿಲ್ ಕುಮಾರ್ ಹಾಗೂ ಕವಯಿತ್ರಿ ಪಿ.ಕೆ.ದಿವ್ಯಾ ದಂಪತಿ ಪುತ್ರಿ. ಸಂಗೀತ ಗುರುಗಳಾದ ಆನಂದಿ ಹಾಗೂ ನಿಶಾಂತ್ ಅವರಲ್ಲಿ ಕರ್ನಾಟಕ ಸಂಗೀತವನ್ನು ಕಲಿತಿದ್ದಾರೆ. ಗುರು ರಮಣ ಬಾಲಚಂದ್ರನ್ ಅವರಿಂದ ವೀಣೆಯನ್ನೂ ಅಭ್ಯಾಸ ಮಾಡುತ್ತಿದ್ದಾರೆ.

ಆರಂಭಿಕ ದಿನಗಳಲ್ಲಿ ಕುಲದೀಪ್ ಪೈ ಅವರು ಸೂರ್ಯಗಾಯತ್ರಿ ಅವರನ್ನು ರೂಪಿಸುವ ನೆಲೆಯಲ್ಲಿ ಶ್ರಮಿಸಿದ್ದಾರೆ.
ಸೂರ್ಯಗಾಯತ್ರಿ ಅವರು ಶ್ರೀರಾಮಭಕ್ತ ಆಂಜನೇಯನ ಬಗೆಗಿನ ಹನುಮಾನ್ ಚಾಲೀಸಾ ಸ್ತೋತ್ರ ಗಾಯನದ ಮೂಲಕ ಮನ ಮನೆಗಳಲ್ಲಿ ಭಕ್ತಿಸುಧೆಯ ರಸಧಾರೆಯನ್ನು ಹರಿಸಿ, ಸಂಗೀತ ಸಾಗರದ ಒಂದೊಂದೇ ಮಜಲನ್ನು ದಾಟುತ್ತಾ ಬಂದವರು.

ಎಳೆಯ ವಯಸ್ಸಿನಲ್ಲಿಯೇ ಗಾಯನಲೋಕದ ನೂತನ ವಿಸ್ಮಯವಾಗಿ ಕಾಣ ಸಿಕೊಂಡು ಅಸಂಖ್ಯ ಜನ ಬೆರಗಾಗುವಂತೆ ಮಾಡಿದ್ದಲ್ಲದೆ ದೇಶ ವಿದೇಶಗಳಲ್ಲೂ ಸಂಗೀತದ ಇಂಪನ್ನೂ ಕಂಪನ್ನೂ ಪಸರಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಸಮಾಜದ ಮೂಲೆ ಮೂಲೆಗಳಿಗೂ ಸುಸ್ವರ ಕಂಠದ ಸುಮಧುರ ಗಾಯನವನ್ನು ವಿಸ್ತರಿಸುವ ಮುಖೇನ ಭಾವತೀವ್ರತೆಯ ಉತ್ತುಂಗ ಅನುಭೂತಿಯನ್ನು ಕಲ್ಪಿಸಿಕೊಟ್ಟಿದ್ದಾರೆ. ಅಮೇರಿಕಾ, ಆಸ್ಟ್ರೇಲಿಯಾ, ಸಿಂಗಾಪುರ, ದುಬೈ, ಕತಾರ್, ಕೀನ್ಯವೇ ಮೊದಲಾದ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಗೀತಭಾಷೆಯ ಅಂತಃಸತ್ವವನ್ನು ಸಾದರಪಡಿಸಿ, ದೇಶದ ಕೀರ್ತಿ ಪತಾಕೆಯನ್ನು ಜಾಗತಿಕವಾಗಿ ವಿಜ್ರಂಭಿಸಿದ್ದಾರೆ.

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಲೋಕಾರ್ಪಣೆಯ ಶುಭಾವಸರದ ಈ ಸಂದರ್ಭದಲ್ಲಿ, ಸೂರ್ಯಗಾಯತ್ರಿ ಹಾಡಿದ ‘ಶ್ರೀರಾಮಚಂದ್ರ ಕೃಪಾಳು’ ಹಾಡಿನ ಬಗೆಗೆ ಸ್ವತಃ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರು ಶ್ಲಾಘಿಸಿರುವುದು ಅವರ ಸಾಧನೆಯ ಉತ್ಕರ್ಷಕ್ಕೆ ಹಿಡಿದ ಕೈಗನ್ನಡಿಯೆನಿಸಿದೆ.

ಯೂಟ್ಯೂಬ್‌ನಲ್ಲಿ ಸುಮಾರು ನೂರು ಕೋಟಿಗೂ ಮೀರಿ ವೀಕ್ಷಕರನ್ನು ಹೊಂದಿದ ಕೀರ್ತಿ ಹದಿನೇಳು ವರ್ಷದ ಬಾಲಕಿ ಸೂರ್ಯಗಾಯತ್ರಿ ಅವರಿಗೆ ಸಲ್ಲುತ್ತದೆ. ಮುಂಬೈಯ ಷಣ್ಮುಖಾನಂದ ಸಭಾದಿಂದ ತನ್ನ ಹತ್ತನೆಯ ವಯಸ್ಸಿನಲ್ಲಿಯೇ ಎಂ.ಎಸ್.ಸುಬ್ಬುಲಕ್ಷ್ಮಿ ಫೆಲೋಶಿಪ್, ತ್ರಿವೆಂಡ್ರಮ್ ಕಲಾನಿಧಿ ಸಂಗೀತ ರತ್ನ ಪ್ರಶಸ್ತಿ, ಸಮಾಜ್ ಶಕ್ತಿ ಪ್ರಶಸ್ತಿ, ಬಾಲಗಣ ಕಲಾ ಭಾರತಿ ಪ್ರಶಸ್ತಿ, ಭಕ್ತಿಗಣ ಕೋಕಿಲ ಪ್ರಶಸ್ತಿಯೇ ಮೊದಲಾದ ಅನೇಕ ಪ್ರಶಸ್ತಿ, ಪಾರಿತೋಷಕ ಹಾಗೂ ಫೆಲೋಶಿಪ್ ಪಡೆದ ಹೆಮ್ಮೆ ಸೂರ್ಯಗಾಯತ್ರಿ ಅವರಿಗಿದೆ. ಭಾರತ ಸರ್ಕಾರ, ತೆಲಂಗಾಣ, ದೆಹಲಿ, ಉತ್ತರಾಕಾಂಡ್ ಹಾಗೂ ಆಂದ್ರ ಸರ್ಕಾರದ ಆಶ್ರಯದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments