ಒಂದು ಶತಮಾನದ ಯಕ್ಷಗಾನ ಚರಿತ್ರೆಯ ಸಾಕ್ಷಿಯಂತೆ ಬದುಕಿದ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟರು ಇಂದು (31.10.2023) ನಿಧನರಾಗಿದ್ದಾರೆ.
ಬಾಲ್ಯದಲ್ಲಿ ಶಾಲಾ ವಿದ್ಯಾಭ್ಯಾಸದೊಂದಿಗೆ ಸಂಸ್ಕೃತ ಪಾಠವನ್ನು ಕಲಿತಿದ್ದರು. ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು, ಅಗರಿ ಶ್ರೀನಿವಾಸ ಭಾಗವತರು ಮೊದಲಾದ ದಿಗ್ಗಜಗಳೊಂದಿಗೆ ಒಡನಾಟ ಲಭ್ಯವಾಯಿತು. ದೇರಾಜೆ ಸೀತಾರಾಮಯ್ಯರಿಂದ ಪ್ರಭಾವಿತರಾದರು.
ಪೆರುವಡಿ ನಾರಾಯಣ ಭಟ್ಟರ ಯಕ್ಷಗಾನದ ಮಾತು ಕೇವಲ ಅರ್ಥವಾಗದೆ ‘ವಾಗರ್ಥ’ ವೆನಿಸಿಕೊಳ್ಳುತ್ತಿತ್ತು. ಹಾಸ್ಯಪಾತ್ರದಲ್ಲಿ ಅವರಂತೆ ಭಾಷೆಯನ್ನು ಸೊಗಸಾಗಿ ಬಳಸಿದವರಿಲ್ಲ. ಹಾಸ್ಯಗಾರರೆಂದು ಪ್ರಸಿದ್ಧರಾದರೂ ಗಂಭೀರ ಪೋಷಕ ಪಾತ್ರಗಳ ಪ್ರಸ್ತುತಿಗೆ ಹೆಸರಾಗಿದ್ದರು.
ಅವರು ಯಜಮಾನ ನಾರಾಯಣ ಭಟ್ಟರೂ ಹೌದು! ತಮ್ಮ ಸೋದರ ಬಂಧುಗಳೊAದಿಗೆ ಒಂದು ದಶಕಕ್ಕಿಂತಲೂ ಅಧಿಕ ಕಾಲ ಮುಲ್ಕಿ ಮೇಳವನ್ನು ನಡೆಸಿದ್ದರು. ಕಾರವಾರದವರೆಗೆ ತೆಂಕುತಿಟ್ಟಿನ ದಿಗ್ವಿಜಯ ನಡೆಸಿದ್ದರು. ಪುತ್ತಿಗೆ ರಾಮಕೃಷ್ಣ ಜೋಯಿಸರನ್ನು, ಕಿರಿಯ ಬಲಿಪ ನಾರಾಯಣ ಭಾಗವತರನ್ನು ಮುಲ್ಕಿ ಮೇಳಕ್ಕೆ ಸೇರಿಸಿದ್ದರು.
ಕಡತೋಕಾ ಮಂಜುನಾಥ ಭಾಗವತರನ್ನು ಮೊದಲ ಬಾರಿಗೆ ತೆಂಕುತಿಟ್ಟಿಗೆ ಪರಿಚಯಿಸಿದ ಕೀರ್ತಿ ಅವರದಾಗಿತ್ತು. ಪುತ್ತೂರು ನಾರಾಯಣ ಹೆಗಡೆ, ಎಂಪೆಕಟ್ಟೆ ರಾಮಯ್ಯ ರೈಯಂಥವರು ಮುಲ್ಕಿ ಮೇಳದಿಂದ ತಮ್ಮ ಯಶಸ್ವಿ ವೃತ್ತಿಬದುಕನ್ನು ಆರಂಭಿಸಿದ್ದರು. ಧರ್ಮಸ್ಥಳ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಜರಗಿದ, ಹಾರಾಡಿ ರಾಮ ಗಾಣಿಗ, ಕೊಕ್ಕರ್ಣೆ ನರಸಿಂಹ ಕಮ್ತಿ, ಕುರಿಯ ವಿಠಲ ಶಾಸ್ತ್ರಿ, ಅಳಿಕೆ ರಾಮಯ್ಯ ರೈ, ಕಡಂದೇಲು ಪುರುಷೋತ್ತಮ ಭಟ್ಟ, ಕೋಳ್ಯೂರು ರಾಮಚಂದ್ರ ರಾವ್ ಮೊದಲಾದವರ ಕೂಡುವಿಕೆಯಲ್ಲಿ ಜರಗಿದ ತೆಂಕು-ಬಡಗಿನ ಪ್ರತ್ಯೇಕ ಸ್ಪರ್ಧಾತ್ಮಕ ಪ್ರದರ್ಶನಗಳಲ್ಲಿ ಪೆರುವಡಿಯವರ ನಾರದನ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು.
ಬಡಗಿನ ಸಾಲಿಗ್ರಾಮ ಮೇಳದಲ್ಲಿ ಗುಂಡ್ಮಿ ಕಾಳಿಂಗ ನಾವಡ, ಚಿಟ್ಟಾಣ ರಾಮಚಂದ್ರ ಹೆಗಡೆ ಮೊದಲಾದವರೊಂದಿಗೆ ತಿರುಗಾಟ ನಡೆಸಿದ್ದರು. ಸುರತ್ಕಲ್ ಮೇಳದ ‘ಪಾಪಣ್ಣ ವಿಜಯ’ದ ಪಾಪಣ್ಣನ ಪಾತ್ರದಲ್ಲಿ ಇವರನ್ನು ಮೀರಿಸಿದವರು ಇವತ್ತಿನವರೆಗೂ ಇಲ್ಲ. ಬಾಹುಕನ ಪಾತ್ರಕ್ಕೆ ಹೊಸ ಭಾವನಾತ್ಮಕ ಆಯಾಮವನ್ನು ಕೊಟ್ಟಿದ್ದರು.
ಸದಾ ಅಧ್ಯಯನಶೀಲರಾಗಿ ಇತ್ತೀಚೆಗಿನವರೆಗೂ ‘ನಳದಮಯಂತಿ’ ಕಥನದ ಬೇರೆ ಬೇರೆ ಪಾಠಾಂತರಗಳನ್ನು ಓದುತ್ತ ಪಾತ್ರವನ್ನು ಬಾಹುಕನನ್ನು ಹೇಗೆ ಹೊಸರೀತಿಯಲ್ಲಿ ಮಾಡಬಹುದೆಂದು ಯೋಚನೆ ಮಾಡುತ್ತಿದ್ದರು. ಕದ್ರಿ ಮೇಳದಲ್ಲಿ ‘ಗೆಜ್ಜೆದ ಪೂಜೆ’ ಪ್ರಸಂಗದ ಬೇಚನ ಪಾತ್ರಚಿತ್ರಣ ಇವತ್ತಿಗೂ ಸ್ಮರಣೀಯ.
ಬಪ್ಪನಾಡು ಮೇಳದಲ್ಲಿ ರಾಮದಾಸ ಸಾಮಗರ ಕೈಲಾಸ ಶಾಸ್ತ್ರಿ ಪಾತ್ರಕ್ಕೆ ಮಾಣಿಯಾಗಿ ಜನಪ್ರಿಯರಾಗಿದ್ದರು. ಪೆರುವಡಿ ನಾರಾಯಣ ಭಟ್ಟರ ಆತ್ಮಕಥನವನ್ನು ನಾ. ಕಾರಂತ ಪೆರಾಜೆಯವರು ನಿರೂಪಿಸಿದ್ದು ಅದು ಪ್ರಕಟವಾಗಿದೆ.
ಪೆರುವಡಿ ನಾರಾಯಣ ಭಟ್ಟರು ಉಡುಪಿ ಯಕ್ಷಗಾನ ಕಲಾರಂಗದ ಆಹ್ವಾನದ ಮೇರೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ‘ಯಕ್ಷಗಾನ ಕಲಾರಂಗ’ ಪ್ರಶಸ್ತಿಗೆ ಭಾಜನರಾಗಿದ್ದರು. ಎರಡು ವರ್ಷಗಳ ಹಿಂದೆ ಮಾಸಪೂರ್ತಿ ಆಯೋಜನೆಗೊಂಡ ‘ಕೋಳ್ಯೂರು ವೈಭವ’ ಸಮಾರೋಪದ ಉದ್ಘಾಟಕರಾಗಿ ಭಾಗವಹಿಸಿ ಅರ್ಥಪೂರ್ಣವಾಗಿ ಮಾತನಾಡಿದ್ದರು.
ಪೆರುವಡಿ ನಾರಾಯಣ ಭಟ್ಟರ ನಿಧನದೊಂದಿಗೆ ಯಕ್ಷಗಾನದಲ್ಲಿ ‘ಹಾಸ್ಯರಸ’ದ ಘನತೆಯ ಅಭಿವ್ಯಕ್ತಿಯ ಮಾದರಿಯೊಂದು ಮರೆಗೆ ಸರಿದಂತಾಗಿದೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

