ಕಾಸರಗೋಡು: ಯಕ್ಷಗಾನ ಕಲಾವಿದರಿಗೆ ಸಮಗ್ರ ಮಾಹಿತಿ ಇರುವ ತೆಂಕು ತಿಟ್ಟು ಯಕ್ಷಮಾರ್ಗ ಸರಣಿಯ ಮೊದಲ ಪ್ರಾತ್ಯಕ್ಷಿಕೆಯನ್ನು ಹಿರಿಯ ಯಕ್ಷಗಾನ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಗುರುವಾರ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಸಿಕೊಟ್ಟರು.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಗಾನ ಕಲಾಪೋಷಕ ಶ್ರೀಕರ ಭಟ್ ಮುಂಡಾಜೆ, ‘ಈಗಿನ ಯಕ್ಷಗಾನ ಹಾದಿ ತಪ್ಪುತ್ತಿದೆ. ಯಕ್ಷಗಾನ ಪ್ರದರ್ಶನಕ್ಕೂ ನಿಯಂತ್ರಕ ಶಕ್ತಿ ಬೇಕು. ಭಾಗವತರು ನಿರ್ದೇಶಕರು, ಆದರೆ ಅವರಿಗೆ ಹೇಳಲು ದಾಕ್ಷಿಣ್ಯ. ಈ ಕಾರಣದಿಂದಾಗಿ ಯಕ್ಷಗಾನದ ಸತ್ವ ಕ್ಷೀಣಿಸುತ್ತಿದೆ. ಜೊತೆಗೆ, ಯಕ್ಷಗಾನ ಆಡಿಸುವವರು ಕೂಡ “ಬಹುಜನರ ಅಪೇಕ್ಷೆ ಮೇರೆಗೆ” ಎಂದು ಪ್ರೇಕ್ಷಕರ ಮೇಲೆಯೇ ಎಲ್ಲವನ್ನೂ ಹಾಕಿ ನುಣುಚಿಕೊಳ್ಳುತ್ತಾರೆ’ ಎಂದು ವಿಷಾದಿಸಿದರು.

‘ಅಕಾಡೆಮಿಯೊಂದು ಮಾಡಬೇಕಿರುವ ಕಾರ್ಯಕ್ರಮವನ್ನು ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮಾಡುತ್ತಿದ್ದಾರೆ. ಈಗ ಸಮಯವಿದ್ದರೂ ವ್ಯವಧಾನವಿಲ್ಲದ ಈ ಕಾಲದಲ್ಲಿ, ಸಿರಿಬಾಗಿಲು ಪ್ರತಿಷ್ಠಾನವು ಮಾಡುತ್ತಿರುವ ದಾಖಲೀಕರಣಗಳು ಕಲಾವಿದರಿಗೆ ಸದಾ ಕಾಲಕ್ಕೂ ಪ್ರಯೋಜನಕರ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ಮಾತನಾಡಿ, ‘ಯಕ್ಷಗಾನವೊಂದು ಚೌಕಟ್ಟಿನ ಆಧಾರದಲ್ಲಿರುವ ಕಲೆಯಾಗಿದ್ದು, ಆ ಚೌಕಟ್ಟು ಮೀರಿ ಹೋಗಬಾರದು, ಇದು ಗುರು ಪರಂಪರೆಯನ್ನು ಬೆಳೆಸಿದ ಕಲೆ’ ಎಂದರಲ್ಲದೆ, ‘ಈಗಿನ ಗಾನವೈಭವ ಅಥವಾ ನಾಟ್ಯವೈಭವಗಳು ಒಂದು ಕಮ್ಮಟವಾಗಿ ಬದಲಾಗಬೇಕು. ಅದರಿಂದಲೇ ಹೊಸ ಕಲಾವಿದರು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಏನನ್ನಾದರೂ ಕಲಿಯುವಂತಿರಬೇಕು’ ಎಂದು ಅಭಿಪ್ರಾಯಪಟ್ಟರು.

ಯಕ್ಷಗಾನ ಹೇಗಿತ್ತು, ಅದರಲ್ಲಿ ಏನೆಲ್ಲ ಮಾರ್ಪಾಟು ಮಾಡಬಹುದು ಎಂಬುದನ್ನೆಲ್ಲ ಮನದಟ್ಟು ಮಾಡಿಸಿ, ಮುಂದಿನ ಪೀಳಿಗೆಗೆ ದಾಟಿಸುವ ಸಿರಿಬಾಗಿಲು ಪ್ರತಿಷ್ಠಾನದ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅಮ್ಮಣ್ಣಾಯರು ಹೇಳಿದರು.

ಅತಿಥಿಗಳಾಗಿ ಕಲಾಪೋಷಕ, ಅಮೆರಿಕದ ನಿವಾಸಿ ವಾಸುದೇವ ಐತಾಳ್ ಪಣಂಬೂರು, ಕಲಾವಿದ, ದುಬೈ ನಿವಾಸಿ ಶೇಖರ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ಅವರು ಶುಭ ಹಾರೈಸಿದರು. ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರನ್ನು ಕಾರ್ಯಕ್ರಮದ ಸಂಯೋಜಕರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಪ್ರತಿಷ್ಠಾನದ ಪರವಾಗಿ ಗೌರವಿಸಿದರು. ಕಲಾವಿದ, ನಾಟ್ಯಗುರು ಲಕ್ಷ್ಮಣ ಕುಮಾರ್ ಮರಕಡ ಅವರು ಕಾರ್ಯಕ್ರಮ ನಿರ್ವಹಿಸಿದರು.


ಸಭಾ ಕಾರ್ಯಕ್ರಮದ ಬಳಿಕ, ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಶಾಸ್ತ್ರೀಯ ಚೌಕಟ್ಟಿನಲ್ಲಿ ಯಕ್ಷಗಾನದ ನಾಟ್ಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪ್ರಾತ್ಯಕ್ಷಿಕೆಯನ್ನು ಹಿರಿಯ ಕಲಾವಿದ ಶಂಭಯ್ಯ ಕಂಜರ್ಪಣೆ ನಿರ್ವಹಿಸಿದರು. ಆರಾಧನಾ ಕಲೆಯಾದ ಯಕ್ಷಗಾನವು ಜನಪದವಾಗಿ, ಜಾನಪದೀಯವಾಗಿ ಮತ್ತು ಶಾಸ್ತ್ರೀಯತೆಯ ಚೌಕಟ್ಟು ಸೃಷ್ಟಿಸಿಕೊಂಡು ವಿಕಾಸಗೊಂಡ ಬಗೆಯನ್ನು ಅವರು ವಿವರಿಸಿದರು.

ಯಕ್ಷಗಾನದಲ್ಲಿ ವಂದನೆ, 6 ವಿಧದ ಪಾದ-ಘಾತಗಳು, ಗತಿಗಳು, ತಿತ್ತಿತೈ ಹೆಜ್ಜೆಗಳ ವಿವರಣೆ, ನೃತ್ತ, ನೃತ್ಯ, ನಾಟ್ಯದ ವ್ಯತ್ಯಾಸಗಳು, 7 ವಿಧದ ಮೂಲಭೂತ ಹೆಜ್ಜೆಗಳ ವಿವರಣೆ, ಚಲನೆ-ಸ್ಥಿತಿಗಳನ್ನು ಪ್ರಸ್ತುತಪಡಿಸಿದರು. ದೇಸೀ ಕಲೆಯಾದ ಯಕ್ಷಗಾನವನ್ನು ಶಾಸ್ತ್ರೀಯವಾಗಿ ವಿಕಾಸವಾಗಿಲು ಅವಕಾಶಗಳ, ಸಾಧ್ಯತೆಗಳ ಅಗಾಧತೆಯನ್ನು ಅವರು ತೆರೆದಿಟ್ಟರು. ಜೊತೆಗೆ, ಪೂರ್ವರಂಗದ ಮಹತ್ವವೇನೆಂಬುದನ್ನು ಖಚಿತವಾಗಿ ವಿವರಿಸಿದರು. ಬಳಿಕ ಪ್ರೇಕ್ಷಕರೊಂದಿಗೆ ಸಂವಾದ ಜರುಗಿತು.
