ಬ್ಯಾಂಕಿಂಗ್ ಕ್ಷೇತ್ರದ ಧುರೀಣ ಕೀರ್ತಿಶೇಷ ಮೂಲ್ಕಿ ಸುಂದರ್ ರಾಮ್ ಶೆಟ್ಟಿಯವರು ವಿಜಯ ಬ್ಯಾಂಕಿನ ಆಡಳಿತ ನಿರ್ದೇಶಕರಾಗಿದ್ದ ಕಾಲಘಟ್ಟದಲ್ಲಿ ತುಳುನಾಡಿನ ವಿದ್ಯಾವಂತರನ್ನು ಕರೆ ಕರೆದು ಮನೆಗೊಬ್ಬರಂತೆ ಕೆಲಸ ನೀಡಿದವರು ಎಂದು ತುಂಗಾ ಸಮೂಹ ಹೋಟೆಲುಗಳ ಆಡಳಿತ ನಿರ್ದೇಶಕ ಶ್ರೀ ಸುಧಾಕರ್ ಹೆಗ್ಡೆಯವರು ನುಡಿದರು. ಅವರು ಎಪ್ರಿಲ್ 2ರಂದು ಮಲಾಡ್ ಪಶ್ಚಿಮದ ಹೋಟೆಲ್ ಸಾಯಿ ಪ್ಯಾಲೇಸ್ ಗ್ರ್ಯಾಂಡ್ ಇಲ್ಲಿ ನಡೆದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜ್ ಶಿರ್ವ ಹಳೆ ವಿದ್ಯಾರ್ಥಿ ಸಂಘ ಮುಂಬೈ ಘಟಕದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮುಂದುವರಿದು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ವ್ಯಾಸಂಗಮಾಡಿದವರು ಇಂದು ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಹೆತ್ತು ಹೊತ್ತು ಸಾಕಿದ ತಂದೆ ತಾಯಿಗಳನ್ನು ಹಾಗೂ ನಮಗೆ ವಿದ್ಯೆ ನೀಡಿದ ಸಂಸ್ಥೆಗಳನ್ನು ಎಂದಿಗೂ ನಾವು ಮರೆಯಬಾರದು. ಉದಯ್ ಸುಂದರ್ ಶೆಟ್ಟಿಯವರ ದಕ್ಷ ಅಧ್ಯಕ್ಷತೆಯಲ್ಲಿ ಈ ಹಿರಿಯ ವಿದ್ಯಾರ್ಥಿಗಳ ಸಂಘವು ಬೆಳೆದು ಬಂದ ರೀತಿ ಮತ್ತು ತಾವು ಕಲಿತ ಕಾಲೇಜಿನ ಬಲವರ್ಧನೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು.

ಸಂಘದ ಸಲಹೆಗಾರ ನಡಿಬೆಟ್ಟು ಶ್ರೀ ನಿತ್ಯಾನಂದ ಹೆಗ್ಡೆಯವರು ಮಾತನಾಡಿ, ಸಂಘ ಸಂಸ್ಥೆಗಳ ಹುರುಪು ಉಲ್ಲಾಸ ಐದಾರು ವರ್ಷಗಳಲ್ಲಿ ಇಳಿಮುಖವಾಗುವುದನ್ನು ಕಾಣುತ್ತೇವೆ. ಆದರೆ ಈ ಹಳೆ ವಿದ್ಯಾರ್ಥಿ ಸಂಘದ ಉತ್ಸಾಹ ಕುಂದದೆ ಚಿಗುರುತ್ತಿರುವುದು ಮತ್ತು ಹದಿಮೂರು ವರ್ಷಗಳಲ್ಲಿ ಏರಿದ ಎತ್ತರ ಸಂತಸ ತಂದಿದೆ ಎಂದರು. ಸಂಘದ ಪೋಷಕರಾರದ ಪೆನಿನ್ಸುಲಾ ಸಮೂಹ ಹೋಟೆಲುಗಳ ಆಡಳಿತ ನಿರ್ದೇಶಕ ಶ್ರೀ ಸತೀಶ್ ಶೆಟ್ಟಿಯವರು, ಇಂದಿನ ಮಕ್ಕಳಿಗೆ ನಮ್ಮ ಊರಿನ ಶ್ರೀಮಂತ ಸಂಸ್ಕೃತಿಯನ್ನು ತೋರಿಸುವ, ತಿಳಿಸುವ ಅಗತ್ಯವಿದೆ ಎಂದರು.
ಮಾರ್ಗದರ್ಶಕ, ಎಂ. ಎಸ್. ಆರ್. ಎಸ್. ಕಾಲೇಜಿನ ಮಾಜಿ ಪ್ರಾಧ್ಯಾಪಕ, ಪ್ರಸ್ತುತ ಬಂಟರ ಸಂಘ ಮುಂಬಯಿ ಪ್ರಾಯೋಜಿತ ಎಸ್. ಎಂ. ಶೆಟ್ಟಿ ಕಾಲೇಜ್ ಪೊವೈ ಇಲ್ಲಿಯ ಪ್ರಾಂಶುಪಾಲರಾದ ಡಾ. ಶ್ರೀಧರ್ ಶೆಟ್ಟಿಯವರು ಮಾತನಾಡಿ, ಕೀರ್ತಿಶೇಷರಾದ ಮುದ್ದು ಶೆಟ್ಟಿ, ಸುಂದರ್ ರಾಮ್ ಶೆಟ್ಟಿ, ಸತೀಶ್ಚಂದ್ರ ಹೆಗ್ಡೆಯವರಂಥ ಧೀಮಂತ ವ್ಯಕ್ತಿಗಳು ಸಮರ್ಪಣಾ ಭಾವದೊಂದಿಗೆ ಶಿರ್ವದಂಥ ಗ್ರಾಮೀಣ ಪ್ರದೇಶದಲ್ಲಿ ಕಟ್ಟಿ ಬೆಳೆಸಿದ ವಿದ್ಯಾದೇಗುಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ.
ಹಳೆ ವಿದ್ಯಾರ್ಥಿಗಳಿಂದ ಪ್ರಸ್ತುತ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಬಿಸಿಯೂಟದ ವ್ಯವಸ್ಥೆ ವಿನೂತನವಾದುದು. ಅದನ್ನು ಉಳಿಸಿ ಬೆಳೆಸುವ ತೀವ್ರ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನನ್ನನ್ನೂ ಸೇರಿ ಎಲ್ಲರೂ ಉದಾರತೆಯಿಂದ ಆರ್ಥಿಕವಾಗಿ ಸ್ಪಂದಿಸಬೇಕೆಂದು ಹಳೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷ, ಉದಯ್ ಸುಂದರ್ ಶೆಟ್ಟಿ ಮಾತನಾಡಿ, ಸಮಾಜದ ಶ್ರೇಷ್ಠ ವ್ಯಕ್ತಿಗಳೊಂದಿಗಿನ ಒಡನಾಟವು ನಮ್ಮ ವ್ಯಕ್ತಿತ್ವದಲ್ಲಿ ಅಮೂಲಗ್ರಹ ಬದಲಾವಣೆಗಳನ್ನು ತರಬಲ್ಲುದು. ನಮ್ಮ ಜೀವನದಲ್ಲಿ ಅನುಭವಿ ಹಾಗೂ ಮಾಗಿದ ವ್ಯಕ್ತಿಗಳಿಂದ ಕಲಿಯುವ ಜೀವನ ಮೌಲ್ಯಗಳನ್ನು ಯಾವ ವಿಶ್ವ ವಿದ್ಯಾಲಯಗಳು ಕಲಿಸಲಾರವು. ಸಂಘವು 2016ರಿಂದ ಪ್ರಸ್ತುತ ವಿದ್ಯಾರ್ಥಿಗಳಿಗೆ ಪ್ರಾಯೋಜಿಸುತ್ತಿರುವ ಬಿಸಿಯೂಟದ ಪ್ರಯೋಜನವನ್ನು 250 ವಿದ್ಯಾರ್ಥಿಗಳು ಪಡೆಯುತ್ತಿರುವುದು ಸಂತಸದ ಸಂಗತಿ. ಪದಾಧಿಕಾರಿಗಳ ಸಾಂಘಿಕ ಪ್ರಯತ್ನ ಹಾಗೂ ಉದಾರತೆಯ ಫಲವಾಗಿ ಸಂಘವು 13 ವರ್ಷಗಳಲ್ಲಿ ಈ ಎತ್ತರಕ್ಕೆ ಏರಲು ಸಾಧ್ಯವಾಯಿತು. ಕೋವಿಡ್ ಸಂಕಷ್ಟದಲ್ಲಿ ನಾವೆಲ್ಲ ಪರಸ್ಷರ ಸಂಪರ್ಕದಲ್ಲಿದ್ದು ಸಹಕರಿಸುತ್ತಿದ್ದೆವು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸುಧಾಕರ್ ಹೆಗ್ಡೆ ಹಾಗೂ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ದಂಪತಿಗಳನ್ನು ಸನ್ಮಾನಿಸಲಾಯಿತು. ಶ್ರೀಮತಿ ಜ್ಯೋತಿ ಶೆಟ್ಟಿ ಸೂಡ ಸನ್ಮಾನ ಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ಶ್ರೀ ಅಶೋಕ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಮೊದಲಿಗೆ ಶ್ರೀಮತಿ ಲಕ್ಷ್ಮೀ ಸತೀಶ್ ಶೆಟ್ಟಿಯವರ ಪ್ರಾರ್ಥನಾ ಗೀತೆಯೊಂದಿಗೆ ನೆರೆದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಪಲಿಮಾರು ವಸಂತ್ ಶೆಟ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಸಿ.ಎ. ರವಿರಾಜ್ ಶೆಟ್ಟಿಯವರು 2020 ರಿಂದ 2023ರ ಈ ವರೆಗಿನ ಸಂಘದ ಖರ್ಚು ವೆಚ್ಚಗಳ ಯಾದಿಯನ್ನು ವಾಚಿಸಿದರು.
ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಎರಡು ವರ್ಷಗಳಲ್ಲಿ ಸಂಘವು ನಿರ್ವಹಿಸಿದ ಕಾರ್ಯಗಳ ಮೇಲೆ ಬೆಳಕು ಚೆಲ್ಲಿದರು. ಸಂಘದ ಸದಸ್ಯ ಹರೀಶ್ ಶೆಟ್ಟಿ ಪಂಜಿಮಾರು ಅವರ ಪ್ರತಿಭಾವಂತ ಮಗಳು ಡಾ. ಹರ್ಷಿತಾ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಅಭ್ಯಾಸದ ಕುರಿತಾಗಿ ಸಲಹೆಯನ್ನೂ ಹಿರಿಯರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಿವಿಮಾತು ಹೇಳಿದರು.
ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಶಬುನ ಸತೀಶ್ ಶೆಟ್ಟಿ ಹಾಗೂ ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಜಾತ ಶೆಟ್ಟಿಯವರು ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಅಶೋಕ್ ಶೆಟ್ಟಿ, ಪಲಿಮಾರು ವಸಂತ್ ಶೆಟ್ಟಿ, ಖಾಂದೇಶ್ ಭಾಸ್ಕರ್ ಶೆಟ್ಟಿ, ಮೋಹನ್ ಶೆಟ್ಟಿ ಕಾಪು ಹಾಗೂ ಸಮನ್ವಯಕ ವಾಲ್ಟರ್ ಮಥಾಯಸ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ನಡೆದ ಸಂಗೀತಗೋಷ್ಠಿಯಲ್ಲಿ ಸುರೇಶ್ ಶೆಟ್ಟಿ ಶಿಬರೂರು ಮತ್ತು ಲಕ್ಷ್ಮೀ ಸತೀಶ್ ಶೆಟ್ಟಿಯವರು ದೇವರನಾಮಗಳನ್ನು ಹಾಡಿದರು. ಸದಸ್ಯರ ಮತ್ತು ಅವರ ಮಕ್ಕಳ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಸುರೇಶ್ ಶೆಟ್ಟಿಯವರು ನಡೆಸಿಕೊಟ್ಟರು. ಸಾಯಿ ಪ್ಯಾಲೇಸ್ ಹೋಟೆಲಿನ ಆದರಾತಿಥ್ಯದ ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ವರದಿ: ಉದಯ ಬಿ. ಶೆಟ್ಟಿ, ಪಂಜಿಮಾರು




