Wednesday, December 4, 2024
Homeಸುದ್ದಿಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಇಂಟರಾಕ್ಟಿವ್ ಸ್ಮಾಟ್ ಬೋರ್ಡ್ ಅನಾವರಣ

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಇಂಟರಾಕ್ಟಿವ್ ಸ್ಮಾಟ್ ಬೋರ್ಡ್ ಅನಾವರಣ

ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಣ ಪರಿಕರಗಳು ಪ್ರಮುಖ ಪಾತ್ರ ವಹಿಸುತ್ತವೆ. ಆಧುನಿಕ ತಂತ್ರಜ್ಞಾನಗಳ ಮೂಲಕ ನಡೆಯುವ ಪಾಠ ಪ್ರವಚನಗಳು ವಿದ್ಯಾರ್ಥಿಗಳಿಗೆ ಸುಲಭವಾಗಿ ಮನನವಾಗುತ್ತವೆ. ಆ ದಿಸೆಯಲ್ಲಿ ಶೈಕ್ಷಣಿಕ ಕ್ಷೇತ್ರ ಆಧುನಿಕತೆಗೆ ತನ್ನನ್ನು ತಾನು ತೆರೆದುಕೊಳ್ಳುವುದು ಅಗತ್ಯ ಎಂದು ಅಂಬಿಕಾ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಡಾ.ವಿವೇಕ್ ಕಜೆ ಹೇಳಿದರು.‌


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ನೂತನವಾಗಿ ಅಳವಡಿಸಿರುವ ಇಂಟರಾಕ್ಟಿವ್ ಸ್ಮಾರ್ಟ್ ಬೋರ್ಡ್ ಅನ್ನು ಉದ್ಘಾಟನೆಗೈದು ಶುಕ್ರವಾರ ಮಾತನಾಡಿದರು.


ನಾವಿಂದು ಅನೇಕ ತಂತ್ರಜ್ಞಾನಗಳ ಮೂಲಕ ವಿಷಯಗಳನ್ನು ಸುಲಭವಾಗಿ ಕರಗತ ಮಾಡಿಕೊಳ್ಳುತ್ತಿರುವುದು ಹೌದಾದರೂ ನಡವಳಿಕೆಯನ್ನು ಸುಂದರವಾಗಿ ಕಾಪಾಡಿಕೊಳ್ಳಬೇಕಾದದ್ದು ಅಗತ್ಯ. ಅದು ಜ್ಞಾನಕ್ಕಿಂತಲೂ ಮೊದಲು ಸಿದ್ಧವಾಗಬೇಕಾದದ್ದು. ಹಾಗಾಗಿ ಉತ್ಕೃಷ್ಟ ನಡವಳಿಕೆಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವ ಶಿಕ್ಷಣ ಬೇಕಾಗಿದೆ. ಶಿಕ್ಷಕರು ಅಂತರಂಗದಾಳದಿಂದ ಬೋಧಿಸಿದಾಗ ಆ ಪಾಠಗಳು ವಿದ್ಯಾರ್ಥಿಗಳ ಮನಸ್ಸನ್ನು ಮುಟ್ಟುತ್ತವೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಜಗತ್ತು ಹೊಸತನದೆಡೆಗೆ ಮುಖ ಮಾಡುವಾಗ ನಾವೂ ಅದರೊಂದಿಗೆ ಹೆಜ್ಜೆ ಹಾಕಬೇಕಾದ್ದು ಅನಿವಾರ್ಯ. ಪುತ್ತೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಅಂಬಿಕಾ ಮೊಟ್ಟ ಮೊದಲ ಬಾರಿಗೆ ಇಂತಹ ಇಂಟರಾಕ್ಟಿವ್ ಸ್ಮಾರ್ಟ್ ಬೋರ್ಡ್ ಅನ್ನು ಅಳವಡಿಸಿದೆ ಎಂಬುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳ ಅರ್ಥ ಮಾಡಿಕೊಳ್ಳುವ ಶಕ್ತಿ ಇದರಿಂದ ವೃದ್ಧಿಸಲಿದೆ ಎಂದು ಹೇಳಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ ಸ್ವಾಗತಿಸಿದರು. ಶಿಕ್ಷಕಿ ಗೌರಿ ವಂದಿಸಿದರು. ಶಿಕ್ಷಕಿ ಅನಘಾ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments