Sunday, July 7, 2024
Homeಸುದ್ದಿಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ‘ಬಾಲಸ್ತುತಿ – 2023’ ಉದ್ಘಾಟನೆ

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ‘ಬಾಲಸ್ತುತಿ – 2023’ ಉದ್ಘಾಟನೆ

ದೇಶ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿರುವುದು ಇಲ್ಲಿನ ಸಂಸ್ಕೃತಿ ಸಂಸ್ಕಾರಗಳಿ0ದ. ಆದರೆ ಅಂತಹ ಸಂಸ್ಕೃತಿಯಿ0ದ ನಾವು ನಿಧಾನವಾಗಿ ದೂರ ಸರಿಯುತ್ತಿರುವುದು ಆತಂಕಕಾರಿ ವಿಚಾರ. ಮನೆಯಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. ಹಿಂದೂ ಧಾರ್ಮಿಕ ಶ್ಲೋಕಗಳನ್ನು ಮಕ್ಕಳು ನಿತ್ಯವೂ ಉಚ್ಚರಿಸುವಂತೆ ಮಾಡಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಮಾತೃ ಸುರಕ್ಷಾ ಪ್ರಮುಖ್ ಬಡೆಕ್ಕಿಲ ಗಣರಾಜ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಹಿಂದೂ ಧಾರ್ಮಿಕ ಶ್ಲೋಕಗಳ ಕಂಠಪಾಠ ಸ್ಪರ್ಧೆ – ಬಾಲಸ್ತುತಿ 2023 ಅನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.


ದೇಶವಿಂದು ನಾನು ಎಂಬ ಅಹಂಕಾರದಿ0ದ ವಿಭಜಿಸಲ್ಪಡುತ್ತಿದೆ. ಹಾಗಾಗಿ ನಾವು ಎಂಬ ಮನೋಭಾವ ಬೆಳೆಯಬೇಕು. ಪರಸ್ಪರ ಒಗ್ಗೂಡುವಿಕೆಯಿಂದ ದೇಶವನ್ನು ಉನ್ನತಿಕೆಯೆಡೆಗೆ ಒಯ್ಯುವುದಕ್ಕೆ ಸಾಧ್ಯ. ಮಕ್ಕಳ ಮನಸ್ಸಿನಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವುದರಿಂದ ಸಾಮಾಜಿಕ ಒಗ್ಗೂಡುವಿಕೆ ಸಾಧ್ಯವಾಗುತ್ತದೆ. ಪಠಿಸುವ ಶ್ಲೋಕಗಳ ಅರ್ಥವನ್ನೂ ಮಕ್ಕಳಿಗೆ ತಿಳಿಸಿಕೊಡುವ ಕೆಲಸಗಳಾಗಬೇಕು. ಆಗ ಶ್ಲೋಕಗಳ ಪಠಣ ಹೆಚ್ಚು ಪರಿಣಾಮಕಾರಿ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.


ಇಂದು ಸಮಾಜದಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳು ಹೆಚ್ಚುತ್ತಿವೆ ಎಂದು ಬೇಸರಿಸುತ್ತಿದ್ದೇವೆ. ಆದರೆ ಭಾವನೆಗಳನ್ನು, ಸಂಬ0ಧಗಳನ್ನು ತುಂಡರಿಸುವ ಮನೋಭೂಮಿಕೆಯನ್ನು ನಾವು ಎಳವೆಯಲ್ಲೇ ಮಕ್ಕಳಿಗೆ ತುಂಬುತ್ತಿದ್ದೇವೆ. ಜನ್ಮದಿನದಂದು ಕೇಕ್ ಕತ್ತರಿಸುವ, ದೀಪ ಆರಿಸುವ ಮೂಲಕ ಕತ್ತರಿಸುವುದನ್ನು, ಆರಿಸುವುದನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ. ಬದಲಾಗಿ, ಜೋಡಿಸುವುದನ್ನು, ಬೆಳಗುವುದನ್ನು ಕಲಿಸಬೇಕಿದೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಪೂರ್ವದ ಸಿಂಗಾಪುರದಿ0ದ ಪಶ್ಚಿಮದ ಸೌದಿ ಅರೇಬಿಯಾದವರೆಗೂ ಭಾರತ ವಿಸ್ತರಿಸಿತ್ತು ಎಂಬುದು ಅಧ್ಯಯನದಿಂದ ಹಾಗೂ ಐತಿಹಾಸಿಕ ಕುರುಹುಗಳಿಂದ ಅರಿವಾಗುತ್ತದೆ. ಆದರೆ ನಮ್ಮ ಧರ್ಮದಿಂದ ನಾವು ವಿಮುಖರಾದದ್ದರಿಂದ ನಮ್ಮ ಪ್ರದೇಶಗಳನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಮತ್ತೆ ಧರ್ಮಜಾಗೃತಿಯ ಕೆಲಸ ಆಗಬೇಕಿದೆ. ಎಳೆಯ ಮಕ್ಕಳಿಂದಲೇ ಅಂತಹ ಕಾರ್ಯ ನಡೆದಾಗ ಸಮಾಜದೆಲ್ಲೆಡೆ ಅದು ಪಸರಿಸುವುದಕ್ಕೆ ಸಾಧ್ಯ ಎಂದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಐದನೇ ತರಗತಿ ವಿದ್ಯಾರ್ಥಿ ಸನ್ಮಯ್ ಹಾಗೂ ಆರನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಧಾರ್ಮಿಕ ಶ್ಲೋಕ ಪಠಿಸುವ ಮೂಲಕ ಪ್ರಾರ್ಥಿಸಿದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಭಟ್ ಸ್ವಾಗತಿಸಿ, ಶಿಕ್ಷಕಿ ಮಲ್ಲಿಕಾ ವಂದಿಸಿದರು. ಶಿಕ್ಷಕಿಯರಾದ ಪ್ರಿಯಾಶ್ರೀ ಕೆ.ಎಸ್ ಹಾಗೂ ದಿವ್ಯಾ ಕಾರ್ಯಕ್ರಮ ನಿರ್ವಹಿಸಿದರು.


ಬಾಲಸ್ತುತಿ ಸ್ಪರ್ಧೆ 3, 4 ಹಾಗೂ 5ನೇ ವಯಸ್ಸಿನ ಮಕ್ಕಳ ವಿಭಾಗಗಳಲ್ಲಿ ನಡೆಯಿತು. ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ, ಅಂಬಿಕಾ ಮಹಾವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ, ಸಂಸ್ಕೃತ ವಿಭಾಗದ ಉಪನ್ಯಾಸಕಿ ಶಶಿಕಲಾ ವರ್ಕಾಡಿ ಹಾಗೂ ಅಂಬಿಕಾ ವಿದ್ಯಾಲಯದ ಸಂಸ್ಕೃತ ಶಿಕ್ಷಕಿ ಸೌಂದರ್ಯಲಕ್ಷ್ಮಿ ತೀರ್ಪುಗಾರರಾಗಿ ಸಹಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments