Monday, November 25, 2024
Homeಸುದ್ದಿಥಕ ಥೈ ತೋಂ ಎಂದು ಕಲಿಸಿ ಕುಣಿಸುವ ಮಹಾನುಭಾವರು - ಯಕ್ಷಗಾನದ  ಗುರುಗಳು

ಥಕ ಥೈ ತೋಂ ಎಂದು ಕಲಿಸಿ ಕುಣಿಸುವ ಮಹಾನುಭಾವರು – ಯಕ್ಷಗಾನದ  ಗುರುಗಳು

ಯಾವುದೇ ಒಂದು ಕ್ಷೇತ್ರದಲ್ಲಿ ತನ್ನ ಸಾಧನೆಯನ್ನು  ಪ್ರದರ್ಶಿಸುವುದಕ್ಕೆ ಪ್ರತಿಯೊಬ್ಬ ವ್ಯಕ್ತಿಗೂ ತರಬೇತಿ ಎನ್ನುವುದು ಅತ್ಯವಶ್ಯಕ. ಅದು ಉದ್ಯೋಗ ಕ್ಷೇತ್ರವಿರಲಿ ಅಥವಾ ಬೇರೆ ಯಾವುದೇ ಸಾಧನೆಯನ್ನು ಪ್ರದರ್ಶಿಸಲು ಅವಕಾಶವಿರುವ ಇನ್ನಿತರ ಕ್ಷೇತ್ರಗಳಿರಲಿ, ಅಲ್ಲಿ ತರಬೇತಿಯೆಂಬುದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೊಸಬನೊಬ್ಬ ಉದ್ಯೋಗ ರಂಗವನ್ನು ಪ್ರವೇಶಿಸುವಾಗ “ಪ್ರೊಬೇಷನರಿ ಪಿರೇಡ್” ಎನ್ನುವುದು ಕಡ್ಡಾಯ. ಇಲ್ಲದಿದ್ದರೆ ಆ ಕೆಲಸಕ್ಕೆ ಅಥವಾ ಉದ್ಯೋಗಕ್ಕೆ ಆತನಿಂದ ನ್ಯಾಯ ಸಲ್ಲಿಸಲು ಸಾಧ್ಯವಾಗದು. 

ಭಾರತೀಯ ರಂಗಕಲೆಗಳೆಂಬುದು ಅತ್ಯದ್ಭುತ, ಸೋಜಿಗಗಳ ವರ್ತುಲವಾಗಿದೆ. ಭಾರತೀಯ ರಂಗ ಸಂಸ್ಕೃತಿಗಳ ಅಧ್ಯಯನದ ಪ್ರಕಾರ ನಮ್ಮ ದೇಶದಲ್ಲಿರುವ ಸಾವಿರಾರು ರಂಗಕಲೆಗಳಲ್ಲಿ ಭರತನಾಟ್ಯ, ಕಥಕ್, ಕೂಚುಪುಡಿ, ಮಣಿಪುರಿ, ಒಡಿಸ್ಸಿ, ಭಾಂಗ್ರಾ, ಮೋಹಿನಿಯಾಟ್ಟಂ, ರಾಜಸ್ತಾನಿ ಕಲ್ಬೇಲಿಯನ್ ನೃತ್ಯವೇ ಮೊದಲಾದ ಕಲೆಗಳಲ್ಲಿರುವ ಸೋಜಿಗದ ವಿಚಾರಗಳು ನಮ್ಮನ್ನು ಅಚ್ಚರಿಯ ಲೋಕದಲ್ಲಿ ವಿಹರಿಸುವಂತೆ ಮಾಡುತ್ತವೆ. 

ಹೌದು. ಹಲವಾರು ನೃತ್ಯ ಪ್ರಕಾರದ ಕಲೆಗಳು ಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿರಬಹುದು. ಆದರೆ ಸಾಧಕರಿಗೆ ಅದು ಸುಲಭವಾಗಿ ಗಂಟಲಲ್ಲಿಳಿಯುವ ತುತ್ತು. ಕಠಿಣ ಪರಿಶ್ರಮ, ಆಸಕ್ತಿ ಮತ್ತು ಸರಿಯಾದ ತರಬೇತಿಯಿದ್ದರೆ ಯಾವುದೇ ಕಲಾಪ್ರಕಾರಗಳಲ್ಲಿ ಕೂಡಾ ಯಶಸ್ಸು ಸಾಧಿಸಿ ಜನಪ್ರಿಯರಾಗಬಹುದು ಎಂಬುದು, ಅಳಿದರೂ ಅಚ್ಚಳಿಯದೆ ಜನರ ಮನಸ್ಸಿನಲ್ಲಿ ಉಳಿದ ಮಹಾನ್ ಕಲಾವಿದರ ಜೀವನಗಾಥೆಗಳಿಂದ ತಿಳಿಯಬಹುದಾದ ಸತ್ಯ. 

ಆದುದರಿಂದ ತರಬೇತಿ ಎನ್ನುವುದು ಇಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ ಎಂದಾಯಿತು. ಕಲೆಯನ್ನು ಕರತಲಾಮಲಕ ಮಾಡಿಕೊಳ್ಳುವವರಿಗೆ ಬರಿಯ ಆಸಕ್ತಿ, ಅವಕಾಶಗಳಿದ್ದರೆ ಸಾಲದು. ಸೂಕ್ತ ಗುರುವಿನ ಮಾರ್ಗದರ್ಶನ, ತರಬೇತಿಗಳು ಒಬ್ಬ ಕಲಾವಿದನ ಕಲಾಜೀವನದಲ್ಲಿ ಮಹತ್ತರ ಪಾತ್ರ ಮತ್ತು ಪರಿಣಾಮಗಳನ್ನು ಬೀರುತ್ತವೆ ಎನ್ನುವುದು ಜೀವಂತ ಸತ್ಯ. 

ಭರತನಾಟ್ಯ ಮೊದಲಾದ ನಾಟ್ಯಕಲಾ ಪ್ರಾಕಾರಗಳಲ್ಲಿ ಪರಿಣತಿ ಹೊಂದಿದ ಹೊಸ ಕಲಾವಿದರು ಅಥವಾ ವಿದ್ಯಾರ್ಥಿಗಳು ಕೊಡುವ ಪ್ರಥಮ ರಂಗಪ್ರವೇಶ ‘ಅರಂಗೇಟ್ರಮ್’ ಎಂದು ಕರೆಯಲ್ಪಡುತ್ತದೆ. ಪ್ರಥಮ ಪ್ರದರ್ಶನವನ್ನು ಕೊಡಬೇಕಾದರೆ ಆ ಭರತನಾಟ್ಯ ಕಲಾವಿದ/ಕಲಾವಿದೆ ಕೆಲವು ವರ್ಷಗಳ ಕಾಲ ಸಂಬಂಧಿತ ಕಲೆಯನ್ನು  ಅಭ್ಯಸಿಸಿ ಅದರಲ್ಲಿ ಸ್ವಲ್ಪ ಮಟ್ಟಿಗಾದರೂ ಪಳಗಿ ಪರಿಣತಿಯನ್ನು ಸಾಧಿಸಬೇಕಾಗುತ್ತದೆ. 

ಆದರೆ ಕರ್ನಾಟಕದ ಹೆಮ್ಮೆಯ ಗಂಡುಕಲೆ ಎಂದು ಕರೆಯಲ್ಪಟ್ಟ ಯಕ್ಷಗಾನವು ಈ ನಿಟ್ಟಿನಲ್ಲಿ ತುಸು ವ್ಯತಿರಿಕ್ತವಾದ ಹಾದಿಯನ್ನು ತುಳಿದು ಸಾಗಿಬಂದಂತೆ ತೋರುತ್ತದೆ. ಯಾಕೆಂದರೆ ಸುಮಾರು ಹನ್ನೆರಡು ಅಥವಾ ಹದಿಮೂರನೇ ಶತಮಾನದಲ್ಲಿ ಆವಿರ್ಭವಿಸಿ ಬೆಳೆದು ಬಂದ ಈ ಕಲೆಗೆ ಒಂದು ಶಾಸ್ತ್ರೀಯವಾದ ಲಿಖಿತ ನಿರ್ದೇಶನಗಳು ಇಲ್ಲದಿದ್ದುದು ಕಲಿಕೆಗೆ ಒಂದು ತೊಡಕಾಗಿತ್ತು. ಕೇವಲ ಅಲಿಖಿತವಾದ ಮತ್ತು ಬಾಯ್ದೆರೆಯ ಟಿಪ್ಪಣಿಗಳು ಮತ್ತು ನಿರ್ದೇಶನಗಳಿಂದ ಈ ಕಲಾಪ್ರಾಕಾರ ಬೆಳೆದುಬಂದಿತ್ತು. ಯಕ್ಷಗಾನದ ಹುಟ್ಟಿಗೆ ಕಾರಣರಾದ ಅಂದಿನ ಮೂಲಪುರುಷರು ಯಕ್ಷಗಾನದ ಸರ್ವಾಂಗಗಳ ಮಾಹಿತಿಗಳನ್ನು ತಾಳೆಗರಿಗಳ ಬರಹದಲ್ಲಿ ಬರೆದಿಟ್ಟಿರಬಹುದಾದರೂ ತಾಳೆಗರಿಗಳ ಕಾಲದಿಂದ ನಾವು ಪತ್ರ, ಲೇಖನಿಗಳ ಹಂತಕ್ಕೆ ಮೇಲ್ದರ್ಜೆಗೇರಿದಾಗ ಅಪರೂಪದ ತಾಳೆಗರಿಯ ಮಾಹಿತಿಗಳು ನಾಶವಾದದ್ದೇ ಈ ಕ್ಷೇತ್ರಕ್ಕಾದ ದೊಡ್ಡ ನಷ್ಟ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಆದರಿಂದಲೇ ತಾಳೆಗರಿಯಲ್ಲಿ ಶೇಖರವಾಗಿದ್ದ ಅಮೂಲ್ಯ ಮಾಹಿತಿಗಳು ಆ ನಂತರ ಬಾಯ್ದೆರೆಯಾಗಿಯೇ ಮುಂದಿನ ಪೀಳಿಗೆಗೆ ದಾಟಿಸಲ್ಪಟ್ಟಿದೆ. ಹೀಗೆಯೇ ಇದು ಮುಂದುವರಿದು ಯಕ್ಷಗಾನಕ್ಕೊಂದು ಶಾಸ್ತ್ರೀಯ ಶಿಕ್ಷಣ ಅಥವಾ ತರಬೇತಿಗೆ ತೊಡಕಾಯಿತು. ಇಪ್ಪತ್ತನೇ ಶತಮಾನದ ಅಂತ್ಯದ ಕಾಲಘಟ್ಟಕ್ಕೆ ಬರುವ ಮೊದಲು ಅಥವಾ ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಮಳೆಗಾಲದಲ್ಲಿ ಪ್ರದರ್ಶನವು ಇರುತ್ತಿರಲಿಲ್ಲವಾದ್ದರಿಂದ ಯಕ್ಷಗಾನ ಕಲಿಕೆಗಾಗಿ ಅದೇ ಪ್ರಶಸ್ತವಾದ ಕಾಲವಾಗಿತ್ತು. ಸಾಧಾರಣವಾಗಿ ಹಿರಿಯ ಕಲಾವಿದರ ಮನೆಯಲ್ಲಿದ್ದುಕೊಂಡು ಅವರ ಮನೆ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಸೇವೆ ಸಲ್ಲಿಸಿ ಅವರ ಮೆಚ್ಚುಗೆ ಗಳಿಸಿ ಅವರಿಂದ ಕಲೆಯ ಬಗ್ಗೆ ಪೂರ್ಣ ಪಾಠವನ್ನು ಹೇಳಿಸಿಕೊಳ್ಳಬೇಕಾಗುತ್ತಿತ್ತು.

ಆ ಕಾಲದಲ್ಲಿ ಮೇಳಗಳಲ್ಲಿ ಕಲಾವಿದನಾಗಿ ಮೇಳಕ್ಕೆ ಸೇರ್ಪಡೆಯಾಗುವುದು ಕಡಿಮೆ. ಅದರ ಬದಲು ಚೌಕಿಯ ಸಹಾಯಕರಾಗಿ ಅಥವಾ ಪರಿಚಾರಕರಾಗಿ ಸೇರಿ ಆಮೇಲೆ ಹಿರಿಯ ಕಲಾವಿದರ ಒಡನಾಟದಿಂದ ಅವರಿಂದ ಕೇಳಿ ಅಥವಾ ಅವರ ಪ್ರದರ್ಶನಗಳನ್ನು ನೋಡಿ ಕಲಿಯುತ್ತಿದ್ದುದೇ ಹೆಚ್ಚು. ಚೌಕಿ, ಬಿಡಾರಗಳಲ್ಲಿ ಸಂದರ್ಭ ಸಿಕ್ಕಾಗ ಅಭ್ಯಾಸಿಗಳಿಗೆ ಹಿರಿಯ ಕಲಾವಿದರಿಂದ ಮತ್ತು ಭಾಗವತರಿಂದ ಪಾಠವಾಗುತ್ತಿತ್ತು. ರಾತ್ರಿಯ ಪ್ರದರ್ಶನಗಳಿಂದ ನಿದ್ರಾಹೀನತೆಯ ದೆಸೆಯಿಂದ ಸಿಟ್ಟು, ಕೋಪ, ತಾಪಗಳನ್ನೆಲ್ಲಾ ಅನುಭವಿಸುವುದರ ಜೊತೆಗೆ ಹೊಡೆತವನ್ನೂ ಕಿರಿಯ ಕಲಾವಿದರು ಕಲಿಯುವ ಸಂದರ್ಭದಲ್ಲಿ ತಿನ್ನಬೇಕಾಗುತ್ತಿತ್ತು. ಹೀಗೆ ಅಂದು ರಂಗಸ್ಥಳವೇ ಕಲಿಯುವವರಿಗೆ ಪಾಠಶಾಲೆಯಾಗಿತ್ತು. 

          ಕಲಿಕಾ ಶಾಲೆಗಳಿಲ್ಲದೆ ಇದ್ದುದು ಯಕ್ಷಗಾನದ ಮಟ್ಟಿಗೆ ದೊಡ್ಡ ಕೊರತೆಯಾಗಿ ತೋರುತ್ತಿತ್ತು. ಕರ್ನಾಟಕದ ಜನಪ್ರಿಯ  ರಂಗಕಲೆಯಾದ ಯಕ್ಷಗಾನವು ಕಣ್ಮನ ಸೆಳೆಯುವ ವೇಷಭೂಷಣಗಳು, ,ನೃತ್ಯಶೈಲಿ, ಸಂಗೀತ ಹಾಗೂ ಉತ್ಕೃಷ್ಟ ಪೌರಾಣಿಕ ಸಂಭಾಷಣೆಗಳು ಅಂದರೆ ವಾದನ, ಗಾಯನ,ನರ್ತನ, ವಾಚಿಕವೇ ಮೊದಲಾದ ನಾಲ್ಕಂಗಗಳಿಂದ ಕೂಡಿದ್ದರೂ ಒಂದು ಕೊರತೆಯಿತ್ತು. ಅದುವೇ ಸೂಕ್ತ ತರಬೇತಿಯ ಕೊರತೆ. ಇಂತಹ ಒಂದು ಋಣಾತ್ಮಕ ಅಂಶವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೆಲವು ತರಬೇತಿ ಕೇಂದ್ರಗಳು ತಲೆಯೆತ್ತಿದುವು.  ಇದಕ್ಕೊಂದು ಶಾಶ್ವತ ಪರಿಹಾರವನ್ನು ರೂಪಿಸುವ ನಿಟ್ಟಿನಲ್ಲಿ ವ್ಯಾಪಕವಾದ ಚರ್ಚೆಗಳಾದುವು. ವಿದ್ವಾಂಸರು ಕುಳಿತು ಮಾತನಾಡಿದರು.

ಇದರ ಫಲರೂಪವೇ ಎಂಬಂತೆ ಯಕ್ಷಗಾನ ಕಲಿಕಾ ಕೇಂದ್ರಗಳು ಅಥವಾ ತರಬೇತಿ ಕೇಂದ್ರಗಳು ಜನ್ಮ ತಳೆದುವು. ಈ ನಿಟ್ಟಿನಲ್ಲಿ ಡಾ.ಶಿವರಾಮ ಕಾರಂತ ಮತ್ತು ಕೆ.ಎಸ್. ಹರಿದಾಸ ಭಟ್ಟರ ಆಸಕ್ತಿಯಲ್ಲಿ ಹಾಗೂ ಇನ್ನಿತರ ಮಹನೀಯರ ಸಹಕಾರದಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ಬಡಗುತಿಟ್ಟು ಯಕ್ಷಗಾನದ ಕಲಿಕಾ ಕೇಂದ್ರವಾದ ‘ಯಕ್ಷಗಾನ ಕೇಂದ್ರ, ಉಡುಪಿ’. ಈ  ಸಂಸ್ಥೆ 1971ರಲ್ಲಿ ಜನ್ಮ ತಾಳಿತು. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ| ಹರಿದಾಸ ಭಟ್ಟರ ಪ್ರಯತ್ನದಿಂದ ಕಾಲೇಜಿನ ಹೊರಗಿನ ಕಟ್ಟಡದಲ್ಲಿ ‘ಯಕ್ಷಗಾನ ಕೇಂದ್ರ ಉಡುಪಿ’ ತಲೆಯೆತ್ತಿತು. 

ಯಕ್ಷಗಾನ ಕೇಂದ್ರ ಉಡುಪಿ: ಈ ಕೇಂದ್ರದ ಮೊದಲ ಗುರು ಮತ್ತು ಕೇಂದ್ರದ ಮುಖ್ಯಸ್ಥರಾಗಿದ್ದವರು ಬಡಗುತಿಟ್ಟು ಯಕ್ಷಗಾನದ ಖ್ಯಾತ ಕಲಾವಿದರಾಗಿದ್ದ ವೀರಭದ್ರ ನಾಯಕ್ . ಕಲಾವಿದರಾಗಿ ನಲುವತ್ತಕ್ಕೂ ಹೆಚ್ಚು ತಿರುಗಾಟಗಳನ್ನು ನಡೆಸಿ ಯಕ್ಷಗಾನದಿಂದ ನಿವೃತ್ತರಾಗಿದ್ದವರು. ಹಿಮ್ಮೇಳ ಗುರುಗಳಾಗಿದ್ದವರು ಭಾಗವತರಾದ ನೀಲಾವರ ರಾಮಕೃಷ್ಣಯ್ಯ ಮತ್ತು ಮದ್ದಳೆಗಾರರಾದ ಹಿರಿಯಡಕ ಗೋಪಾಲ ರಾವ್. ಭಾರತ ಸರಕಾರದ ಸಂಸ್ಕೃತಿ ಇಲಾಖೆಯಿಂದ  ಐನೂರು ರೂಪಾಯಿಯಂತೆ ಮುಖ್ಯಸ್ಥರಾದ ವೀರಭದ್ರ ನಾಯಕರಿಗೆ ಗೌರವಧನ ಲಭಿಸುತ್ತಿತ್ತು. ಹಿಮ್ಮೇಳ ಗುರುಗಳ ವೇತನವನ್ನು ಎಂ.ಜಿ.ಎಂ ಕಾಲೇಜು ಟ್ರಸ್ಟ್ ಪಾವತಿಸುತ್ತಿತ್ತು. ಪ್ರಾರಂಭದ ವರ್ಷದಲ್ಲಿ ಹತ್ತು ವಿದ್ಯಾರ್ಥಿಗಳಿರುವ ಒಂದು ತಂಡವನ್ನು (ಬ್ಯಾಚ್) ತರಬೇತಿಗಾಗಿ ಆಯ್ಕೆ ಮಾಡಲಾಯಿತು. ಅವರಿಗೆ ಉಡುಪಿ ಶ್ರೀಕೃಷ್ಣ ಮಠದಿಂದ ಉಚಿತ ಆಹಾರ, ವಸತಿ ವ್ಯವಸ್ಥೆಯನ್ನು ಮಾಡಲಾಯಿತು.

ಕರ್ನಾಟಕ ಸರಕಾರದ ವತಿಯಿಂದ ಹತ್ತು ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ಮಂಜೂರು ಮಾಡಲಾಯಿತು. ಶಿವರಾಮ ಕಾರಂತರೂ ಯಕ್ಷಗಾನ ಗುರುಗಳೂ ಸೇರಿ ರಚಿಸಿದ ಪಠ್ಯದ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನದ ಶಿಕ್ಷಣ ಆರಂಭವಾಯಿತು. ವರ್ಷದಿಂದ ವರ್ಷಕ್ಕೆ ಈ ಪಠ್ಯವು ತೀವ್ರ ವೇಗದಲ್ಲಿ ಸುಧಾರಣೆಗೊಂಡು ಈಗ ತುಂಬಾ ಸುಧಾರಿತ ಪಠ್ಯಕ್ರಮವನ್ನು ಅನುಸರಿಸಲಾಗುತ್ತಿದೆ. ಇದುವರೆಗೂ ಸುಮಾರು 400 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿತು ಕಲಾವಿದರಾಗಿ ಪ್ರದರ್ಶನ ನೀಡಿದ್ದಾರೆ. ಈ ಕೇಂದ್ರವು ವಿದೇಶಿಗರನ್ನು ಕೂಡ ಆಕರ್ಷಿಸಿದೆ. ಹಲವಾರು ವಿದೇಶಿ ಪ್ರಜೆಗಳೂ ಇಲ್ಲಿ ಯಕ್ಷಗಾನವನ್ನು ಕಲಿತಿದ್ದಾರೆ.  ಇವರಲ್ಲಿ ಜರ್ಮನಿಯ ರಾಮಾ, ಆಸ್ಟ್ರೇಲಿಯಾದ ಜಾನ್ ಅಲೀ, ಅಮೆರಿಕಾದ ಶ್ರೀಮತಿ ಮಾರ್ಥಾ ಆಷ್ಟನ್, ಇಟಲಿಯ ಬ್ರೂನಾ ಸಿರಬೆಲ್ಲಾ ಮುಂತಾದವರು ಸೇರಿದ್ದಾರೆ. 

ಯಕ್ಷಗಾನ ಕೇಂದ್ರ ಉಡುಪಿಯು ಕೆಲವು ಪುಸ್ತಕಗಳನ್ನು ಪ್ರಕಟಿಸಿದೆ. ಇವುಗಳಲ್ಲಿ ,ಒಡ್ಡೋಲಗ, ಯಕ್ಷಗಾನದ ವಿವಿಧ ಅಂಶಗಳ ,ಲೇಖನ ಮಾಲೆಗಳು, ಯಕ್ಷಗಾನ ಸಂಗೀತ ಮತ್ತು ಯಕ್ಷಗಾನ ಪಥಗಳು ಸೇರಿವೆ.  ಅದೂ ಅಲ್ಲದೆ ಈ ಕೇಂದ್ರವು ‘ಯಕ್ಷರಂಗ’ ಎಂಬ ಯಕ್ಷಗಾನದ ಸಮೂಹ ನೃತ್ಯವನ್ನು ಸಂಯೋಜಿಸಿದೆ. ಶಿವರಾಮ ಕಾರಂತರ ನಿರ್ದೇಶನದಲ್ಲಿ ಈ ತಂಡವು ಪ್ರಸ್ತುತಪಡಿಸಿದ ‘ಯಕ್ಷಗಾನ ಬ್ಯಾಲೆ’ಯು ದೇಶದಾದ್ಯಂತ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತ್ತು. ಭಾರತಾದ್ಯಂತ ‘ಯಕ್ಷರಂಗ’ ತಂಡವು ನೂರಾ ಐವತ್ತಕ್ಕೂ ಮಿಕ್ಕಿದ ಪ್ರದರ್ಶನಗಳನ್ನು ನೀಡಿದುದು ಮಾತ್ರವಲ್ಲದೆ ವಿದೇಶಿ ಪ್ರವಾಸಗಳನ್ನು ಕೈಗೊಂಡು ವಿದೇಶದಲ್ಲಿಯೂ ಹಲವಾರು ಪ್ರದರ್ಶನಗಳನ್ನು ನೀಡಿ ಮೆಚ್ಚುಗೆ ಗಳಿಸಿದೆ. ಯಕ್ಷಗಾನ ಕೇಂದ್ರದ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳಲು ಕಾರ್ಯಕಾರಿ ಸಮಿತಿ ಇದೆ. ಈ ಕೇಂದ್ರಕ್ಕೆ ಕಾರ್ಯನಿರ್ವಹಣೆಗೆ ಹೆಚ್ಚಿನ ಕೊಡುಗೆಗಳನ್ನು ಕೊಟ್ಟವರು ಡಾ. ಶಿವರಾಮ ಕಾರಂತ ಮತ್ತು ಪ್ರೊ| ಕೆ.ಎಸ್ ಹರಿದಾಸ ಭಟ್. 

ಈ ಕೇಂದ್ರದ ಯಶಸ್ಸಿಗೆ ಕಾರಣರಾದವರಲ್ಲಿ ಇಲ್ಲಿ ಗುರುಗಳಾಗಿ ವಿದ್ಯಾಧಾರೆಯೆರೆದ ವೀರಭದ್ರ ನಾಯಕ್, ನೀಲಾವರ ರಾಮಕೃಷ್ಣಯ್ಯ,ಮಹಾಬಲ ಕಾರಂತ್, ನೀಲಾವರ ಲಕ್ಷ್ಮೀನಾರಾಯಣಯ್ಯ , ಗೋರ್ಪಾಡಿ ವಿಠ್ಠಲ ಪಾಟೀಲ್, ಸಂಜೀವ ಸುವರ್ಣ ಮೊದಲಾದವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಪ್ರಸ್ತುತ ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಹಲವಾರು ಕಲಾವಿದರಲ್ಲಿ ಹೆಚ್ಚಿನವರು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಕಲಿತ ವಿದ್ಯಾರ್ಥಿಗಳೇ ಆಗಿದ್ದಾರೆ ಎಂಬುದು ಗಮನಾರ್ಹವಾದ ವಿಚಾರ. 

ಧರ್ಮಸ್ಥಳ ಯಕ್ಷಗಾನ ಕಲಾ ಸಂಘ (ಲಲಿತಕಲಾ ಕೇಂದ್ರ): ಅದೇ ಸಮಯಕ್ಕೆ ತೆಂಕುತಿಟ್ಟು ಯಕ್ಷಗಾನದಲ್ಲಿ ಕಲಿಕೆಗಾಗಿ ಸೂಕ್ತ ವ್ಯವಸ್ಥೆಗಳಿಲ್ಲದ ಕಾರಣವನ್ನು ಮನಗಂಡ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ತಮ್ಮ ತೀರ್ಥರೂಪರಾದ ಶ್ರೀ ರತ್ನವರ್ಮ ಹೆಗ್ಗಡೆಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನಕ್ಕೊಂದು ಶಾಸ್ತ್ರೀಯ ಕಲಿಕಾ ಕೇಂದ್ರವನ್ನು ಒದಗಿಸುವ ದೃಷ್ಟಿಯಿಂದ ‘ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ಕೇಂದ್ರ’ವನ್ನು ಸ್ಥಾಪಿಸಿದರು. ಅದು ಮುಂದಕ್ಕೆ ‘ಲಲಿತ ಕಲಾ ಕೇಂದ್ರ’ವೆಂದೇ ಪ್ರಸಿದ್ಧಿಯನ್ನು ಪಡೆಯಿತು. ಮೊದಲು ಮೇಳಕ್ಕೆ ಸೇರಿ, ಮೇಳದ ಸಹಾಯಕನಾಗಿ,ಕೋಡಂಗಿ ವೇಷಗಳನ್ನು ಮಾಡಿ ಹೆಜ್ಜೆಹೆಜ್ಜೆಗೂ ನಾಟ್ಯ ಕಲಿಯುತ್ತಾ ಔನ್ನತ್ಯವನ್ನು ಸಾಧಿಸುವುದು ಆಗಿನ ರಂಗ ಪದ್ಧತಿಯಾಗಿತ್ತು. ಈ ಪದ್ಧತಿಯನ್ನು ಸರಳೀಕರಿಸಲು ಪೂಜ್ಯ ಹೆಗ್ಗಡೆಯವರು ‘ಲಲಿತ ಕಲಾ ಕೇಂದ್ರ’ವನ್ನು ಆರಂಭಿಸುವ ನಿರ್ಧಾರ  ಮಾಡಿದರು. ಮಳೆಗಾಲದ ಆರು ತಿಂಗಳುಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಿಮ್ಮೇಳ ಮತ್ತು ಮುಮ್ಮೇಳಗಳನ್ನು ಕಲಿಸುವ ಯೋಜನೆ ಸಿದ್ಧವಾಯಿತು.

ಅದರಂತೆ ಮೊದಲ ವರ್ಷವೇ ಮುಮ್ಮೇಳದ ಗುರುಗಳಾಗಿ ಕುರಿಯ ವಿಠಲ ಶಾಸ್ತ್ರಿಗಳೂ ಹಿಮ್ಮೇಳಕ್ಕೆ ಮಾಂಬಾಡಿ ನಾರಾಯಣ ಭಾಗವತರೂ ಸಿದ್ಧರಾದರು. ಹೀಗೆ ಆರಂಭವಾದ ತೆಂಕುತಿಟ್ಟಿನ ಲಲಿತಕಲಾ ಕೇಂದ್ರವು ಯಶಸ್ವೀ ಹೆಜ್ಜೆಗಳನ್ನು ಇಡುತ್ತಾ ಮುಂದೆ ಸಾಗತೊಡಗಿತು. ನಂತರದ ದಿನಗಳಲ್ಲಿ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಕಲಿತ ವಿದ್ಯಾರ್ಥಿಗಳನೇಕರು ಖ್ಯಾತ ಕಲಾವಿದರಾಗಿ ಯಶಸ್ವಿಯಾಗಿ ರಂಗದಲ್ಲಿ ಮಿಂಚತೊಡಗಿದರು. ತೆಂಕುತಿಟ್ಟಿನ ಈಗಿನ ಪ್ರಮುಖ ಕಲಾವಿದರಲ್ಲಿ ಹೆಚ್ಚಿನವರು ನಾಟ್ಯ ಕಲಿತುದು ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ. ಇಂದು ತೆಂಕುತಿಟ್ಟು ಯಕ್ಷಗಾನ ರಂಗಸ್ಥಳದಲ್ಲಿ ಅಗ್ರಗಣ್ಯರಾಗಿ ಮೆರೆಯುತ್ತಿರುವ ಹಿಮ್ಮೇಳ ಮುಮ್ಮೇಳ ಕಲಾವಿದರಲ್ಲಿ ಅನೇಕರು ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಕಲಿತವರೇ ಆಗಿದ್ದಾರೆ. ಆದ್ದರಿಂದ ಲಲಿತಕಲಾ ಕೇಂದ್ರವೆಂಬುದು ಯಕ್ಷ ವಿದ್ಯಾರ್ಜನೆಗೆ ಆಶ್ರಯ ತಾಣವಾಯಿತು. ಕಲಾವಿದರನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸುವ ಒಂದೊಳ್ಳೆಯ ಶಿಕ್ಷಣ ಸಂಸ್ಥೆಯಾಯಿತು. 

ಇದರ ಯಶಸ್ಸಿನ ಬಹುಪಾಲು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮತ್ತು ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಯಕ್ಷಗಾನದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಶ್ರೀ ಡಿ. ಹರ್ಷೇ೦ದ್ರ ಕುಮಾರ್ ಮತ್ತು ಗುರುಗಳಾಗಿ ವಿದ್ಯಾದಾನ ಮಾಡಿದ ಹಿರಿಯ ಕಲಾವಿದರಿಗೆ ಸಲ್ಲಬೇಕು. ಇಲ್ಲಿ ಗುರುಗಳಾಗಿದ್ದ ಪ್ರಸಿದ್ಧ ಕಲಾವಿದರಾದ ಕುರಿಯ ವಿಠಲ ಶಾಸ್ತ್ರಿ, ಮಾಂಬಾಡಿ ನಾರಾಯಣ ಭಾಗವತರು, ಮಾಣಂಗಾಯಿ ಕೃಷ್ಣ ಭಟ್, ಕುಂಡಂಕುಳಿ ರಾಮಕೃಷ್ಣ ಮದ್ದಳೆಗಾರ, ಪಡ್ರೆ ಚಂದು, ಕೆ.ಗೋವಿಂದ ಭಟ್, ನೆಡ್ಲೆ ನರಸಿಂಹ ಭಟ್, ಅಳಿಕೆ ರಾಮಯ್ಯ ರೈ, ಕರ್ಗಲ್ಲು ವಿಶ್ವೇಶ್ವರ ಭಟ್, ಗೋಪಾಲಕೃಷ್ಣ ಕುರುಪ್, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಪದ್ಮನಾಭ ಉಪಾಧ್ಯಾಯ, ಶಿವರಾಮ ಶಿಶಿಲ, ಬೆಳಾಲು ಲಕ್ಷ್ಮಣ ಗೌಡ, ತಾರಾನಾಥ ಬಲ್ಯಾಯ ವರ್ಕಾಡಿ, ದಿವಾಣ ಶಿವಶಂಕರ ಭಟ್ ಮೊದಲಾದವರು ತಮ್ಮ ಶ್ರಮವನ್ನು ಧಾರೆಯೆರೆದು ಅನೇಕ ಕಲಾವಿದರನ್ನು ರೂಪುಗೊಳಿಸಿದ್ದರು. 

ಅದರಲ್ಲೂ ನೆಡ್ಲೆ ನರಸಿಂಹ ಭಟ್, ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರು ಜೊತೆಯಾಗಿ ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಹೊಸ ಹೊಸ ಆವಿಷ್ಕಾರಗಳ ಜೊತೆಗೆ ಸಂಪ್ರದಾಯಬದ್ಧವಾಗಿ ಕಲಿಸಿ ತೆಂಕುತಿಟ್ಟಿನ ನೃತ್ಯ ವಿಭಾಗದಲ್ಲಿ ವೈವಿಧ್ಯತೆಯನ್ನು ತಂದರು. 

ಹೀಗೆ ಒಂದು ಹಂತದಲ್ಲಿ ಏರುಗತಿಯಲ್ಲಿ ಮೇರುಸದೃಶವಾಗಿ ಸಾಗುತ್ತಿದ್ದ ಲಲಿತಾಕಲಾಕೇಂದ್ರಕ್ಕೆ ವಿದ್ಯಾರ್ಥಿಗಳ ಕೊರತೆಯುಂಟಾಯಿತು. ಯಕ್ಷಗಾನದಿಂದ ಬರುವ ಆದಾಯ ಮತ್ತು ಜೀವನ ನಿರ್ವಹಣೆಯ ಮಟ್ಟವನ್ನು ಅರಿತು ಹೆತ್ತವರು ತಮ್ಮ ಮಕ್ಕಳನ್ನು ಯಕ್ಷಗಾನ ಕಲಿಯುವತ್ತ ಪ್ರೇರೇಪಿಸದೆ ಇದ್ದುದೇ ಒಂದು ಕಾರಣವಿರಬಹುದು ಎಂದು ಹಲವರು ಅಭಿಪ್ರಾಯಪಡುತ್ತಾರೆ. ಆದ್ದರಿಂದ ಕಲಿಕಾಸಕ್ತರ ಕೊರತೆಯಿಂದ ಲಲಿತಕಲಾ ಕೇಂದ್ರದಲ್ಲಿ ಯಕ್ಷಗಾನ ಶಿಕ್ಷಣ ಮುಂದುವರಿಯದೆ ಇದ್ದುದು ಕಲಾಪ್ರಪಂಚಕ್ಕಾದ ಅದರಲ್ಲೂ ತೆಂಕುತಿಟ್ಟು ಯಕ್ಷಗಾನಕ್ಕೆ ಆದ ದೊಡ್ಡ ನಷ್ಟವೆಂದೇ ಹೇಳಬೇಕು. 

ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ: ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಈ ಎರಡು ತರಬೇತಿ ಕೇಂದ್ರಗಳಲ್ಲದೆ ಗಡಿನಾಡು ಕನ್ನಡನಾಡು ಕಾಸರಗೋಡಿನ ಪೆರ್ಲದಲ್ಲಿರುವ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ) 2005ನೇ ಇಸವಿಯಲ್ಲಿ ಪ್ರಾರಂಭವಾಯಿತು. ಯಕ್ಷಗಾನ ಕಲಾವಿದರಾದ ಸಬ್ಬಣಕೋಡಿ ರಾಮ ಭಟ್ಟರು ಈ ತರಬೇತಿ ಕೇಂದ್ರದ ರೂವಾರಿ ಹಾಗೂ ಸ್ಥಾಪಕರು. ತನ್ನ ಗುರುಗಳಾದ ಪಡ್ರೆ ಚಂದು ಅವರ ನೆನಪಿಗಾಗಿ ಅವರ ಹೆಸರಿನಲ್ಲಿಯೇ ಈ ಯಕ್ಷಗಾನ ಕೇಂದ್ರವನ್ನು ಸ್ಥಾಪಿಸಿದರು.

ಕಳೆದ ಹದಿನೇಳು ವರ್ಷಗಳಿಂದ ನಿರಂತರವಾಗಿ ಕಾರ್ಯಾಚರಿಸಿಕೊಂಡು ಬರುತ್ತಿರುವ ಶ್ರೀ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರವು ತನ್ನದೇ ಸ್ವಂತ  ಕಟ್ಟಡದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಶಿಕ್ಷಣವನ್ನು ನೀಡಿದೆ. ಇಲ್ಲಿ ದೂರದೂರಿನಿಂದ ಬಂದು ಯಕ್ಷಗಾನ ಕಲಿಯುವ ವಿದ್ಯಾರ್ಥಿಗಳಿಗೆ ವಸತಿಯ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಈ ಕೇಂದ್ರದಲ್ಲಿ ಕಲಿತ ಹಲವಾರು ಮಂದಿ ಕಲಾವಿದರು ಇಂದು ವೃತ್ತಿಪರರಾಗಿ ಹಲವಾರು ಮೇಳಗಳಲ್ಲಿ ಪ್ರಬುದ್ಧ, ಪ್ರಸಿದ್ಧ ಕಲಾವಿದರಾಗಿ ಮಿಂಚುತ್ತಿದ್ದಾರೆ. ಕೇಂದ್ರಕ್ಕೆ ಬೇಕಾದ ಸಂಪನ್ಮೂಲಗಳನ್ನು ಕ್ರೂಢೀಕರಿಸಲು ಶ್ರಮಪಟ್ಟು ಸಬ್ಬಣಕೋಡಿ ರಾಮ ಭಟ್ಟರು ಈ ಕೇಂದ್ರವನ್ನು ಬೆಳೆಸಿದ್ದಾರೆ. 

ಮಾಂಬಾಡಿ ಸುಬ್ರಹ್ಮಣ್ಯ ಭಟ್:  ಯಕ್ಷಗಾನ ತರಬೇತಿ ಕೇಂದ್ರಗಳು ಮಾಡುವ ತರಬೇತಿ ಕಾರ್ಯಕ್ರಮವನ್ನು ಓರ್ವ ವ್ಯಕ್ತಿಯಾಗಿ ಸಮರ್ಥ ರೀತಿಯಲ್ಲಿ ನಿರ್ವಹಿಸುತ್ತಿರುವ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರನ್ನು ಇಲ್ಲಿ ಉಲ್ಲೇಖಿಸಲೇ ಬೇಕು. ಸುಮಾರು ಇಪ್ಪತ್ತು ವರ್ಷಗಳಷ್ಟು ವಿವಿಧ ಮೇಳಗಳಲ್ಲಿ ವೃತ್ತಿಪರ ಹಿಮ್ಮೇಳ ಕಲಾವಿದರಾಗಿ ತಿರುಗಾಟ ಮಾಡಿದ್ದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಆ ನಂತರ ಯಾಕೋ ತನ್ನ ಮೇಳದ ಕಲಾ ವ್ಯವಸಾಯವನ್ನು ಮುಂದುವರಿಸುವ ಮನಸ್ಸು ಮಾಡಲಿಲ್ಲ. ಆದರೆ ತನ್ನ ಕಲಾಸೇವೆಯ ಕೈಂಕರ್ಯದಿಂದ ದೂರ ಸರಿಯಲಿಲ್ಲ.

ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಯಕ್ಷಗಾನದ ಹಿಮ್ಮೇಳ ತರಗತಿಗಳನ್ನು ನಡೆಸುತ್ತಾ ಬಹಳಷ್ಟು ಮಂದಿ ಭಾಗವತರು, ಚೆಂಡೆ ಮದ್ದಳೆ ವಾದಕರನ್ನು ರೂಪುಗೊಳಿಸಿದ್ದಾರೆ. ಇಂದು ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುವ ಪ್ರಸಿದ್ಧ ಭಾಗವತ, ಮದ್ದಳೆಗಾರರಲ್ಲಿ ಹೆಚ್ಚಿನವರು ಶ್ರೀ ಮಾಂಬಾಡಿಯವರ ಶಿಷ್ಯರು. ಇಂದು ತೆಂಕುತಿಟ್ಟಿನ ಹಿಮ್ಮೇಳದಲ್ಲಿರುವ ಬಹುಪಾಲು ಕಲಾವಿದರು ಮಾಂಬಾಡಿಯವರ ನಿರ್ದೇಶನದಲ್ಲಿ ಪಳಗಿದವರೇ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ಮೂಕವಿಸ್ಮಿತರಾಗುವಂತಹ ಅಪೂರ್ವ ಶಿಷ್ಯ ಸಂಕುಲವನ್ನು ಹೊಂದಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಗುರು-ಶಿಷ್ಯ ಪರಂಪರೆಯ ಓರ್ವ ಸಮರ್ಥ ಗುರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಇರುವ ಸರಳೀಕೃತವಾದ ಪಾಠವೇ ಇದಕ್ಕೆ ಕಾರಣವಿರಬಹುದು. ಯಾವ ರೀತಿಯ ವಿದ್ಯಾರ್ಥಿಗೆ ಯಾವ ರೀತಿಯಿಂದ ಹೇಳಿಕೊಡಬೇಕೆಂಬುದು ಇವರಿಗೆ ಚೆನ್ನಾಗಿ ತಿಳಿದಿದೆ. ಅದರಂತೆ ಮುಂದುವರಿದು ಯಶಸ್ಸು ಸಾಧಿಸಿದ ಇವರಿಗೆ ಶಿಷ್ಯಂದಿರೆಲ್ಲಾ ಸೇರಿ ಮಾಡಿದ ಸನ್ಮಾನ ಕಾರ್ಯಕ್ರಮ ಅಭೂತಪೂರ್ವವಾಗಿತ್ತು. ಅಂದು ಸೇರಿದ ಶಿಷ್ಯಗಡಣವನ್ನು ನೋಡಿಯೇ ಅಲ್ಲಿ ಸೇರಿದ ಜನರು ಬೆರಗಾಗಿದ್ದರು. 

ವೈಯುಕ್ತಿಕ ನೆಲೆಯಲ್ಲಿ ನೋಡುವುದಾದರೆ ನಮಗೆ ಯಕ್ಷಗಾನದಲ್ಲಿ ಹಲವಾರು ಮಂದಿ ಗುರುಗಳು ಅಥವಾ ತರಬೇತುದಾರರು ಕಾಣಸಿಗುತ್ತಾರೆ. ಇವರಿಂದೆಲ್ಲಾ ಯಕ್ಷಗಾನ ರಂಗಕ್ಕೆ ಅದೆಷ್ಟೋ ಪ್ರಯೋಜನಗಳಾಗಿವೆ. 

ಮೋಹನ ಬೈಪಾಡಿತ್ತಾಯ: ಉಜಿರೆಯಲ್ಲಿ ಖ್ಯಾತ ಹಿಮ್ಮೇಳ ಕಲಾವಿದರಾದ ಮೋಹನ ಬೈಪಾಡಿತ್ತಾಯರು ನಡೆಸಿಕೊಂಡು ಬರುತ್ತಿರುವ ‘ಶ್ರೀ ಜನಾರ್ದನ ಸ್ವಾಮಿ ಯಕ್ಷ ಕಲಿಕಾ ಹಿಮ್ಮೇಳ ಕೇಂದ್ರ’ ಎಂಬ ತರಬೇತಿ ಕೇಂದ್ರ ಕಾರ್ಯಾಚರಿಸುತ್ತಿದೆ. 2014ರ ಆಗಸ್ಟ್ ತಿಂಗಳಲ್ಲಿ ಆರಂಭವಾದ ಈ ಕೇಂದ್ರದ ಗುರುಗಳು ಪ್ರಸಿದ್ಧ ಭಾಗವತರೂ ಮದ್ದಳೆಗಾರರೂ ಆದ ಮೋಹನ ಬೈಪಾಡಿತ್ತಾಯರು. ಇಲ್ಲಿಯ ವರೆಗೆ ಸುಮಾರು ಐವತ್ತಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಹೊಂದಿ ಮೇಳದಲ್ಲಿ ಮತ್ತು ಹವ್ಯಾಸಿ ಕಲಾವಿದರಾಗಿ ಪ್ರದರ್ಶನ ನೀಡುತ್ತಿದ್ದಾರೆ. 

ಪುತ್ತೂರು ಶ್ರೀಧರ ಭಂಡಾರಿ: ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಯವರದು ಒಂದು ಪ್ರಮುಖ ಹೆಸರು. ಒಂದು ಕಾಲದಲ್ಲಿ ಪ್ರಚಂಡ ಪುಂಡುವೇಷಧಾರಿಯಾಗಿ ಯಕ್ಷರಾತ್ರಿಗಳಲ್ಲಿ ರಂಗಸ್ಥಳದಲ್ಲಿ ಹುಡಿಹಾರಿಸಿದ ಶ್ರೀಧರ ಭಂಡಾರಿಯವರು ನಾಟ್ಯ ಕಲಿಸುವುದರಲ್ಲಿಯೂ ಸೈ ಎನಿಸಿಕೊಂಡವರು. ತನ್ನ ಹುಟ್ಟೂರಾದ ಪುತ್ತೂರಿನಲ್ಲಿ ಕೆಲವು ಕಡೆಗಳಲ್ಲಿ ನಾಟ್ಯ ತರಗತಿಗಳನ್ನು ನಡೆಸಿದ್ದಾರೆ. ದೂರದ ಮುಂಬಯಿಯಲ್ಲಿಯೂ ನಾಟ್ಯ ತರಗತಿ, ನಿರ್ದೇಶನಗಳನ್ನು ಮಾಡಿದ್ದಾರೆ. ಹಲವು ಯಕ್ಷಗಾನಾಕಾಂಕ್ಷಿ ವಿದ್ಯಾರ್ಥಿಗಳು ಅವರ ಮನೆಗೆ ಬಂದು ಕಲಿತಿದ್ದಾರೆ. ಪುತ್ತೂರಿನಲ್ಲಿ ಅವರ ಶಿಷ್ಯಂದಿರಿಂದ ‘ಯಕ್ಷಕೂಟ’ ಎಂಬ ಯಕ್ಷಗಾನ ತಂಡವೂ ಕಾರ್ಯಾಚರಿಸುತ್ತಿದೆ. 

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ: ಖ್ಯಾತ ಭಾಗವತ ದಿ। ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಯಕ್ಷಗಾನ ಶಿಕ್ಷಕರಾಗಿಯೂ ಗುರುತಿಸಿಕೊಂಡವರು. ಹಲವಾರು ಮಂದಿ ಕಲಿಕಾಸಕ್ತರಿಗೆ ಪಾಠ ಮಾಡಿದ್ದಾರೆ. ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ವಿವಿಧ ಸಂಘ ಸಂಸ್ಥೆಗಳು ನಡೆಸುವ ತರಗತಿಗಳಲ್ಲಿಯೂ ಹಿಮ್ಮೇಳ ಶಿಕ್ಷಣ ನೀಡಿದ್ದಾರೆ. ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿಯೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 

ಕರ್ಗಲ್ಲು ವಿಶ್ವೇಶ್ವರ ಭಟ್: ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ಪ್ರಮುಖ ಶಿಕ್ಷಕರಾಗಿದ್ದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ಅಲ್ಲಲ್ಲಿ ತರಬೇತಿಗಳನ್ನು ನಡೆಸಿ ಮುಂದಿನ ಪೀಳಿಗೆಗೆ ಯಕ್ಷಗಾನದ ಅಭಿರುಚಿಯನ್ನು ನಿರಂತರವಾಗಿ ದಾಟಿಸಿ ಬೆಳೆಸುತ್ತಿದ್ದಾರೆ. ತೆಂಕುತಿಟ್ಟು ಯಕ್ಷಗಾನವನ್ನಲ್ಲದೆ, ಮೂಡಲಪಾಯ ಯಕ್ಷಗಾನ ಹಾಗೂ ಬಡಗುತಿಟ್ಟು ಯಕ್ಷಗಾನವನ್ನು ಕೂಡ ಅಭ್ಯಾಸ ಮಾಡಿದ್ದ ಇವರು ಪರಿಣಾಮಕಾರಿಯಾಗಿ ಹೇಳಿಕೊಡಬಲ್ಲ ಓರ್ವ ಯಕ್ಷಗಾನ ಶಿಕ್ಷಕರು. ಯಕ್ಷಗಾನ ಪಠ್ಯವನ್ನು ರೂಪಿಸುವ ಸಮಿತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. 

ದಿವಾಣ ಶಿವಶಂಕರ ಭಟ್: ಧರ್ಮಸ್ಥಳ ಯಕ್ಷಗಾನ ಕಲಾ ಸಂಘ (ಲಲಿತಕಲಾ ಕೇಂದ್ರ)ದಲ್ಲಿ ಹಿಂದೆ ತರಬೇತುದಾರ ಹಾಗೂ ಮುಖ್ಯ ಶಿಕ್ಷಕರಾಗಿದ್ದ ದಿವಾಣ ಶಿವಶಂಕರ ಭಟ್ಟರು ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಯಕ್ಷಗಾನ ತರಬೇತಿಗಳನ್ನು ನಡೆಸುತ್ತಿದ್ದಾರೆ. 1982ನೇ ಇಸವಿಯಿಂದಲೇ ಯಕ್ಷಗಾನ ತರಗತಿಗಳನ್ನು ನಡೆಸುತ್ತಿರುವುದು ಮಾತ್ರವಲ್ಲ, ವಿವಿಧೆಡೆ ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡಿದ್ದಾರೆ. ಅಲ್ಲಲ್ಲಿ ಸುಮಾರು 750ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ಯಕ್ಷಗಾನದ ಯಕ್ಷಗಾನದ ಪಾಠ ಮಾಡಿದ್ದಾರೆ. ಅದರಲ್ಲಿ ಹಲವಾರು ಮಂದಿ ಮೇಳದ ಕಲಾವಿದರೂ ಹವ್ಯಾಸಿ ಕಲಾವಿದರೂ ಸೇರಿದ್ದಾರೆ. 

ಬೇಗಾರು ಶಿವಕುಮಾರ್: ಬೆಂಗಳೂರಿನಲ್ಲಿ ಇದ್ದುಕೊಂಡು ಯಕ್ಷಗಾನ ಶಾಲೆಯೊಂದನ್ನು ಪ್ರಾರಂಭಿಸಿ ನಡೆಸುತ್ತಿರುವವರು ತೆಂಕು ಮತ್ತು ಬಡಗಿನ ಪ್ರಸಿದ್ಧ ಸ್ತ್ರೀ ವೇಷಧಾರಿಯಾಗಿರುವ ಬೇಗಾರು ಶಿವಕುಮಾರ್. ಬಡಗುತಿಟ್ಟಿನ ಮೂಲಕ ತನ್ನ ಯಕ್ಷಪಯಣವನ್ನು ಆರಂಭಿಸಿದ ಬೇಗಾರು ಶಿವಕುಮಾರರು ಸುಮಾರು ಎಂಟು ವರ್ಷಗಳ ಬಡಗುತಿಟ್ಟಿನ ತಿರುಗಾಟದ ನಂತರ ತೆಂಕುತಿಟ್ಟಿಗೆ ಮುಖಮಾಡಿದವರು. ಆಮೇಲೆ ಸುಮಾರು ಹನ್ನೆರಡು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿ ತಿರುಗಾಟ ನಡೆಸಿದರು. ಆ ನಂತರ 2013ರಲ್ಲಿ ಬೆಂಗಳೂರಿನಲ್ಲಿ ‘ಗಾನಸೌರಭ ಯಕ್ಷಗಾನ ಶಾಲೆ’ ಎಂಬ ಹೆಸರಿನಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನು ಆರಂಭಿಸಿ ಇಲ್ಲಿ ನೂರಾರು ಆಸಕ್ತ ಹಿರಿ-ಕಿರಿಯ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ. 

ಉಂಡೆಮನೆ ಶ್ರೀಕೃಷ್ಣ ಭಟ್: ಯಕ್ಷಗಾನ ಶಿಕ್ಷಣ ಕ್ಷೇತ್ರದಲ್ಲಿ ನಮಗೆ ಕಾಣಸಿಗುವ ಇನ್ನೊಂದು ಹೆಸರು ಉಂಡೆಮನೆ ಶ್ರೀಕೃಷ್ಣ ಭಟ್. ಕೆಲವು ವರ್ಷಗಳ ಹಿಂದೆ ಅಂದರೆ ತನ್ನ ಯಕ್ಷಗಾನ ವೃತ್ತಿ ಜೀವನದ ಆರಂಭದಲ್ಲಿ ಕಟೀಲು ಮೇಳದಲ್ಲಿ ಪುಂಡುವೇಷಧಾರಿಯಾಗಿಯೂ ಭಾಗವತರಾಗಿಯೂ ಸೇವೆ ಸಲ್ಲಿಸಿದ್ದ ಉಂಡೆಮನೆ ಶ್ರೀಕೃಷ್ಣ ಭಟ್ಟರು ಈಗ ದೇಂತಡ್ಕ ವನದುರ್ಗಾ ದೇವಿ ಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿದ್ದಾರೆ. ಹಿಮ್ಮೇಳ, ಮುಮ್ಮೇಳಗಳೆರಡನ್ನೂ ಸಮರ್ಥವಾಗಿ ನಿಭಾಯಿಸುವ ಇವರು ತರಬೇತಿ ಕ್ಷೇತ್ರದಲ್ಲಿ ನಾಟ್ಯ ಶಿಕ್ಷಕರಾಗಿ ಹೆಚ್ಚು ಪರಿಚಿತರು. ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವಾರು ಯಕ್ಷಗಾನ ತರಗತಿಗಳನ್ನು ನಡೆಸಿದ್ದಾರೆ. ಸುಮಾರು ಐನೂರಕ್ಕೂ ಹೆಚ್ಚು ಮಂದಿಗೆ ಹೇಳಿಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ ಹಲವಾರು ಹವ್ಯಾಸಿ ತಂಡಗಳನ್ನು ತರಬೇತಿ ನೀಡಿ ಸಿದ್ಧಗೊಳಿಸಿದ್ದಾರೆ. 

ಗೋವಿಂದ ನಾಯಕ್ ಪಾಲೆಚ್ಚಾರು: ತರಬೇತಿ ಕೇಂದ್ರಗಳನ್ನು ಹೊರತುಪಡಿಸಿ ಅಲ್ಲಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸುವ ಯಕ್ಷಗಾನ ಶಿಕ್ಷಕರು ನಮ್ಮ ನಡುವೆ ಹಲವಾರು ಮಂದಿ ಇದ್ದಾರೆ. ಅವರಲ್ಲಿ ಗೋವಿಂದ ನಾಯಕ್ ಪಾಲೆಚ್ಚಾರು ಕೂಡಾ ಒಬ್ಬರು. ಇವರು ಹಿಮ್ಮೇಳದ ಎಲ್ಲಾ ಅಂಗಗಳಲ್ಲಿಯೂ ತರಬೇತಿಯನ್ನು ನೀಡುತ್ತಿದ್ದಾರೆ. ಪ್ರಾರಂಭದಲ್ಲಿ ತಮ್ಮ ಮನೆಯಲ್ಲಿಯೇ ಹಲವಾರು ವಿದ್ಯಾಕಾಂಕ್ಷಿಗಳಿಗೆ ಯಕ್ಷಗಾನ ಹಿಮ್ಮೇಳವನ್ನು ಕಲಿಸುತ್ತಿದ್ದರು. ಆಮೇಲೆ ಅರ್ಲಪದವು, ಪಾಣಾಜೆ, ಪುತ್ತೂರು ಮೊದಲಾದ ಪ್ರದೇಶಗಳಲ್ಲಿ ಯಕ್ಷಗಾನ ತರಬೇತಿ ಮತ್ತು ಶಿಕ್ಷಣವನ್ನು ನೀಡುತ್ತಿದ್ದರು. ಪುತ್ತೂರಿನಲ್ಲಿ ಹಲವು ವರ್ಷಗಳಿಂದ ಭಾಗವತಿಕೆ, ಚೆಂಡೆ, ಮೃದಂಗದ ತರಗತಿಯನ್ನು ನಡೆಸುತ್ತಾ ಬಂದಿರುತ್ತಾರೆ.  ಇದುವರೆಗೆ ಸುಮಾರು ಇನ್ನೂರಕ್ಕೂ ಹೆಚ್ಚು ಆಸಕ್ತರಿಗೆ ಪಾಠ ಮಾಡಿದ ಗೋವಿಂದ ನಾಯಕ್ ಪಾಲೆಚ್ಚಾರರಲ್ಲಿ ಕಲಿತ ಹಲವರು ಇಂದು ಹವ್ಯಾಸಿ ಮತ್ತು ವೃತ್ತಿಪರರಾಗಿ ರಂಗದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಅವರಲ್ಲಿ ಮುರಾರಿ ಕಡಂಬಳಿತ್ತಾಯ, ಅಮೃತಾ ಅಡಿಗ ಮೊದಲಾದವರು ಪ್ರಮುಖರು. 

(ಲೇಖನ ಭಾಗ-2ರಲ್ಲಿ ಮುಂದುವರಿಯುವುದು. ಮುಂದಿನ ಭಾಗದಲ್ಲಿ ‘ಶ್ರೀಮಯ ಯಕ್ಷಗಾನ ರಂಗ ಶಿಕ್ಷಣ ಕೇಂದ್ರ ಗುಣವಂತೆ, ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಮತ್ತು ಇನ್ನುಳಿದ ಯಕ್ಷಗಾನ ಶಿಕ್ಷಕರ ಬಗ್ಗೆ ನಿರೀಕ್ಷಿಸಿ)

(ಹೆಚ್ಚಿನ ಕಲಾವಿದರೂ ಒಂದು ಕೋನದಲ್ಲಿ ನೋಡಿದರೆ ಗುರುಗಳೇ ಆಗಿರುತ್ತಾರೆ. ಯಾರಾದರೂ ಒಬ್ಬರಿಗಾದರೂ ಹೇಳಿಕೊಟ್ಟಿರುತ್ತಾರೆ ಅಥವಾ ಪಾಠ ಮಾಡಿರುತ್ತಾರೆ. ಅಂತಹಾ ಎಲ್ಲರನ್ನೂ ಇಲ್ಲಿ ಉಲ್ಲೇಖಿಸುತ್ತಿಲ್ಲ. ಕೆಲವು ಮಂದಿ ಶಿಷ್ಯಂದಿರನ್ನು ಸಿದ್ಧಗೊಳಿಸಿದ ಯಕ್ಷಗಾನದ ಗುರುಗಳನ್ನು ಉಲ್ಲೇಖಿಸುವ  ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ನಿಮಗೆ ತಿಳಿದ ಯಕ್ಷಗಾನದ ಶಿಕ್ಷಕರ ಬಗ್ಗೆ ಮಾಹಿತಿಯಿದ್ದವರು ನಮಗೆ ಕಳುಹಿಸಿಕೊಡಬಹುದು. ನಮ್ಮ ಇಮೇಲ್ [email protected] Whatsapp: 9164828688)

ಲೇಖಕ: ಮನಮೋಹನ್ ವಿ.ಎಸ್ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments