ಕೆಲವೊಂದು ವಿಚಾರಗಳನ್ನು ಇಲ್ಲಿ ಯಾರಿಗೂ ನೋವಾಗದಂತೆ ಬರೆಯಬೇಕಾಗಿದೆ. ಯಾಕೆಂದರೆ ಹೆಚ್ಚಿನ ಕಲಾವಿದರು ನಾನು ತಿಳಿದಿರುವಂತೆ ಸೂಕ್ಷ್ಮ ಮನೋಭಾವದವರಾಗಿರುತ್ತಾರೆ. ಇತ್ತೀಚಿನ ಕೆಲವು ವಿದ್ಯಮಾನಗಳನ್ನು ಗಮನಿಸುವಾಗ ಯಕ್ಷಗಾನ ಕಲಾವಿದರು ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದಂತೆ ಜಾಗ್ರತೆಯಿಂದಿರುವುದು ಒಳ್ಳೆಯದು ಎಂದು ಅನಿಸುತ್ತದೆ. ಯಾಕೆಂದರೆ ಈಗ ನಿಮ್ಮ ಪ್ರದರ್ಶನಗಳನ್ನು ಸಾಮಾಜಿಕ ಜಾಲತಾಣವೆಂಬ ಹದ್ದಿನ ಕಣ್ಣು ತದೇಕಚಿತ್ತದಿಂದ ನೋಡುತ್ತಿರುತ್ತದೆ. ಆದುದರಿಂದ ಕಲಾವಿದರು ತಮ್ಮ ಅಭಿನಯ ಮತ್ತು ಮಾತುಗಳ ಮೇಲೆ ಸ್ವಲ್ಪ ನಿಯಂತ್ರಣವನ್ನು ಅವರವರೇ ಸಾಧಿಸಬೇಕಾಗಿದೆ.
ಒಂದು ಮಾತನ್ನು ಖೇದದಿಂದ ಹಾಗೂ ವಿಷಾದದಿಂದ ಹೇಳಬಯಸುತ್ತೇನೆ. ನಾವು ಈಗ ಇಪ್ಪತ್ತೊಂದನೇ ಶತಮಾನದಲ್ಲಿದ್ದೇವೆ. ಜಾತಿ ಪದ್ಧತಿಯನ್ನು ಹೊಡೆದೋಡಿಸಿದ್ದೇವೆ ಎಂದು ಯಾರಾದರೂ ಧೈರ್ಯದಿಂದ ಎದೆತಟ್ಟಿ ಹೇಳಬಹುದೇ?
ಅದು ಸಾಧ್ಯವಿಲ್ಲ. ಈಗ ಜಾತಿಯ ಭೂತ ಬೃಹದಾಕಾರವಾಗಿ ಬೆಳೆಯುತ್ತಿದೆ. ಅದು ಮತ್ತೂ ಬೆಳೆಯಬಹುದು. ಈ ಜಾತಿ ಎಂಬ ಭೂತವನ್ನು ಸಾಕುತ್ತಿರುವವರು ಹಲವಾರು ಮಂದಿ ಇದ್ದಾರೆ. ಓಟಿನ ಬೇಟೆಗೆ, ಮತವನ್ನು ಗಳಿಸುವುದಕ್ಕೋಸ್ಕರ ಈ ಜಾತಿ ಎಂಬುದು ಜೀವಂತವಿರಲೇ ಬೇಕು. ನಮ್ಮ ಧರ್ಮ, ನಮ್ಮ ಜಾತಿ, ನಮ್ಮ ಮಠ, ನಮ್ಮ ಸ್ವಾಮಿಗಳು (ಸ್ವಾಮಿಗಳು ಎಂತಹವರೇ ಇರಲಿ, ಅದು ನಗಣ್ಯ) ಈ ಮನೋಭಾವ ಈಗ ಜನರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.
ಇತ್ತೀಚೆಗೆ ಯಕ್ಷಗಾನದಲ್ಲೂ ಜಾತಿ ವಿಪರೀತ ಸದ್ದು ಮಾಡುತ್ತಿದೆ. ಪುರಾಣ ಪ್ರಸಂಗಗಳಲ್ಲಿ ಸಾಧಾರಣವಾಗಿ ಎಲ್ಲಾ ಜಾತಿಯ ಪಾತ್ರಗಳು ಬರುತ್ತವೆ. ಅದರಲ್ಲಿ ಕೆಲವೊಂದು ಜಾತಿಯ ಪಾತ್ರಗಳು ಹೆಚ್ಚಾಗಿ ಕಾಣಸಿಗುತ್ತವೆ. ಇಂತಹಾ ಸಂದರ್ಭದಲ್ಲಿ ಈ ಪಾತ್ರಗಳನ್ನು ನಿರ್ವಹಿಸುವ ಕಲಾವಿದರು ಎಚ್ಚರ ವಹಿಸದಿದ್ದರೆ ವಿವಾದ ಕಟ್ಟಿಟ್ಟ ಬುತ್ತಿ.
ಮೊದಲಾಗಿ ಪಾತ್ರೋಚಿತವಾಗಿ ಮಾತನಾಡುವುದು ಮುಖ್ಯವಾಗುತ್ತದೆ. ಅನಗತ್ಯವಾಗಿ ಕೆಲವು ಶಬ್ದಗಳನ್ನು ಉಪಯೋಗಿಸುವುದು, ಜಾತಿಯ ಹೆಸರುಗಳನ್ನು ಎತ್ತಿ ಹೇಳುವುದು ಮೊದಲಾದುವುಗಳನ್ನು ಮಾಡದಿದ್ದರೆ ಒಳ್ಳೆಯದು. ಚಪ್ಪಾಳೆ ಹೊಡೆಯುವವರು, ವಿಸಿಲ್ ಹಾಕುವವರು ಹಲವಾರು ಮಂದಿ ಇರುತ್ತಾರೆ. ಆದರೆ ಅದರಿಂದ ಕಲಾವಿದರು ಪ್ರೇರಿತರಾಗಬಾರದು. ಅಲ್ಲಿ ಚಪ್ಪಾಳೆ ಹೊಡೆದವರೇ ಆಮೇಲೆ ವಿವಾದಗಳುಂಟಾದಾಗ “ಅವನಿಗೆ ಇದು ಬೇಕಿತ್ತಾ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದದ್ದನ್ನೂ ಕಂಡಿದ್ದೇವೆ.
ಇನ್ನೂ ಒಂದು ಮುಖ್ಯವಾದ ವಿಚಾರ. ಕೆಲವೊಂದು ಹಿಂದಿನಿಂದ ಬಂದ ಪಾತ್ರ ಹಾಗೂ ಸಂಪ್ರದಾಯ ಸನ್ನಿವೇಶಗಳನ್ನು ಕಲಾವಿದರು ಈಗ ಪ್ರದರ್ಶನದಲ್ಲಿ ಮಾಡದೆ ಬಿಡುವುದು ಒಳಿತು. ಇಲ್ಲದಿದ್ದರೆ ಅದು ವಿವಾದಕ್ಕೆಡೆಯಾಗಬಹುದು. ಹಿಂದಿನ ಹಿರಿಯ ಕಲಾವಿದರು ಹೀಗೆ ಹೇಳಿದ್ದಾರೆ, ಅಥವಾ ಅವರು ಮಾಡಿದ್ದಾರೆ ಎಂದು ಈಗ ಅದನ್ನೇ ಮುಂದುವರಿಸಲು ಸಾಧ್ಯವಿಲ್ಲ. ಯಾಕೆಂದರೆ ಕೆಲವು ಪುರಾಣಗಳಲ್ಲಿಲ್ಲದ ವಿಚಾರ ಹಾಗೂ ಪಾತ್ರಗಳನ್ನು ಮನೋರಂಜನೆ ಮತ್ತು ಹಾಸ್ಯಕ್ಕಾಗಿ ಯಕ್ಷಗಾನದಲ್ಲಿ ಸೇರಿಸಲಾಗಿದೆ. ಇವುಗಳನ್ನು ಭವಿಷ್ಯದಲ್ಲಿ ಬಿಡಬೇಕಾಗಿ ಬರಬಹುದು.
ಹೆಚ್ಚಿನ ಕ್ಷೇತ್ರ ಮಹಾತ್ಮೆ ಪ್ರಸಂಗಗಳು ಪುರಾಣಗಳಲ್ಲಿ ಇಲ್ಲದ ವಿಚಾರಗಳಾದ್ದರಿಂದ ಅವುಗಳನ್ನು ಪ್ರದರ್ಶಿಸುವಾಗ ಕಲಾವಿದರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಕ್ಷಗಾನದ ಕಾಲ್ಪನಿಕ ಪ್ರಸಂಗಗಳಲ್ಲಿ ಹಾಸ್ಯಕ್ಕಾಗಿ ಅನಗತ್ಯ ಜಾತಿಯ ಪಾತ್ರಗಳನ್ನು ದಯವಿಟ್ಟು ತುರುಕಬೇಡಿ ಎಂದು ಪ್ರಸಂಗಕರ್ತರಲ್ಲಿ ವಿನಂತಿಸುತ್ತೇನೆ. ಪುರಾಣ ಪ್ರಸಂಗಗಳಲ್ಲಿಯೂ ಅನಗತ್ಯ ಪಾತ್ರಗಳನ್ನು ಮುಂದುವರಿಸುವ ಅಗತ್ಯ ಇಲ್ಲ.
ಯಕ್ಷಗಾನದಲ್ಲಿ ಎಷ್ಟೆಲ್ಲಾ ಬದಲಾವಣೆ ತಂದಿದ್ದೇವೆ. ಈ ವಿಚಾರದಲ್ಲಿಯೂ ಸಮಾಜದ ಹಾಗೂ ಕಲಾವಿದರ ಒಳಿತಿಗಾಗಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ತರಬಾರದೇಕೆ? ವೃಥಾ ವಿವಾದಕ್ಕೆಡೆಯಾಗದಂತೆ ಸುಮ್ಮನಿರುವುದೇ ಒಳ್ಳೆಯದು. ಯಾವುದೇ ಜಾತಿ, ಹಾಗೂ ಸಂಬಂಧಿತ ವಿಚಾರಗಳನ್ನು ಅನಗತ್ಯವಾಗಿ ಅಪಹಾಸ್ಯ ಮಾಡದಿರುವುದರಿಂದ ವಿವಾದಗಳಿಂದ ದೂರವಿರಬಹುದು. ಜಾತಿಯ ವಿಚಾರ ಬೇಡ. ಜಾತಿಯ ವಿವಾದದ ಕಿಚ್ಚನ್ನು ನೀರೆರೆದು ನಂದಿಸಿ.
ಬರಹ: ಯಕ್ಷರಸಿಕ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು