ಬೆಳಗಾವಿಯ ಅಧಿವೇಶನ ಮುಗಿದಿದೆ. ಹಾವೇರಿಯ ನೆಲ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿ ನಿಂತಿದೆ. ಗಡಿ ಸಮಸ್ಯೆಗಳ ಗುಡುಗಿನ ನಡುವೆ ಕಾಸರಗೋಡಿನ ಬಗ್ಗೆ ಮಂದ್ರಸ್ವರದಲ್ಲಾದರೂ ಶಬ್ದಗಳೇ ಕೇಳಿ ಬರುತ್ತಿಲ್ಲ. ಕಾಸರಗೋಡಿನ ಕನ್ನಡಿಗರು ಮೌನವಾಗುತ್ತಿರುವ ಆಕ್ರಂದನದಲ್ಲಿ ನರಳುತ್ತಿರುವಂತೆ ಕಾಣುತ್ತದೆ.
ಕಳೆದ ಸುಮಾರು 65 ವರ್ಷಗಳಿಂದ ಈ ಪ್ರದೇಶದಲ್ಲಿ ಬಾಳಿ ಬದುಕುತ್ತಿರುವ ಕನ್ನಡಿಗರ ಒಡಲಾಳದ ಅಳಲು ಅರಣ್ಯರೋದನವಾಗಿ ಪರಿಣಮಿಸಿತೇ? ಸುದೀರ್ಘ ಕಾಲಾವಧಿಯಲ್ಲಿ ಪ್ರತಿಕೂಲ ಸನ್ನಿವೇಶಗಳಲ್ಲೂ ಮಾತೃಭೂಮಿಯನ್ನೂ ಮಾತೃಭಾಷೆಯನ್ನೂ ಮಾತೃ ಸಂಸ್ಕೃತಿಯನ್ನೂ ಪ್ರೀತಿಸುತ್ತಾ ಬಂದಿರುವುದೇ ಒಂದು ಅಪರಾಧವಾಯಿತೇ? ಹೀಗೆ ಕಣ್ಣೀರು ಸುರಿಸುವ ವಾತಾವರಣ ನಿರ್ಮಾಣವಾಗಿದೆ.
ಮಹಾಜನ ಆಯೋಗದ ವರದಿಯೇ ಅಂತಿಮವೆಂದಾದರೆ ಆ ವರದಿ ಕಾಸರಗೋಡಿನ ಪರವಾಗಿ ನೀಡಿದ ತೀರ್ಪನ್ನು ಯಾಕೆ ಕರ್ನಾಟಕ ಎತ್ತಿ ಹಿಡಿಯುವುದಿಲ್ಲ? ಕೇಂದ್ರ ಸರಕಾರದ ಸಾರಥ್ಯವನ್ನು ವಹಿಸಿರುವವರು ಇದನ್ನು ಯಾಕೆ ಗಮನಿಸುತ್ತಿಲ್ಲ?
ಕಾಸರಗೋಡಿನ ಇಬ್ಬರು ಮಹಾ ಕವಿಗಳು ತಾಯ್ನಾಡಿನ ವಿಮೋಚನೆಯನ್ನು ಕನವರಿಸುತ್ತಲೇ ನಮ್ಮನ್ನು ಅಗಲಿ ಹೋಗಿದ್ದಾರೆ. ಒಬ್ಬರು ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರು ಮತ್ತೊಬ್ಬರು ಕನ್ನಡವನ್ನೇ ಉಸಿರಾಡುತ್ತಿದ್ದ ಮಹಾಕವಿ ಕಯ್ಯಾರ ಕಿಞ್ಞಣ್ಣ ರೈಯವರು. ಈ ಎರಡು ಹೆಸರುಗಳನ್ನು ಕೇವಲ ಸಾಂಕೇತಿಕವಾಗಿ ಮಾತ್ರ ಮುಂದಿಟ್ಟುಕೊಂಡರೂ ಅಂದಿನಿಂದ ಇಂದಿನ ತನಕ ಇಲ್ಲಿ ಕನ್ನಡ ಸಂಸ್ಕೃತಿ ಸಾಹಿತ್ಯ ಕಲೆ ಇತ್ಯಾದಿಗಳಿಗೆ ನಿಜಾರ್ಥದಲ್ಲಿ ಅಪೂರ್ವವಾದ ಕೊಡುಗೆಗಳನ್ನು ಕೊಟ್ಟ ಇನ್ನೂ ಅನೇಕ ಮಂದಿ ಸಾಧಕರಿದ್ದಾರೆ.
ಕರ್ನಾಟಕದ ರಾಜಕಲೆಯೆಂಬ ಗೌರವಕ್ಕೆ ಪಾತ್ರವಾಗಿರುವ ಯಕ್ಷಗಾನಕ್ಕಂತೂ ಅಂದೂ ಇಂದೂ ಇದೊಂದು ಆಡುಂಬೊಲವೇ ಆಗಿದೆ. ಜಾನಪದ ಮಹಾ ಕವಿ ಯಕ್ಷಗಾನದ ಆಚಾರ್ಯ ಪುರುಷ ಪಾರ್ತಿಸುಬ್ಬ ನಡೆದಾಡಿದ್ದು ಕನ್ನಡದ ಕಾಸರಗೋಡಿನ ಪುಣ್ಯಭೂಮಿ ಕಣಿಪುರದಲ್ಲಿ ಎಂಬುದನ್ನಷ್ಟೇ ಸ್ಮರಿಸಿಕೊಂಡರೆ ಸಾಕು. ಪ್ರಾಯಃ ಒಂದು ಭೌಗೋಳಿಕ ಚೌಕಟ್ಟಿನಲ್ಲಿ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಕಲಾವಿದರನ್ನೂ ಕಲಾಭಿಮಾನಿಗಳನ್ನೂ ಪ್ರಸಂಗ ರಚನಾ ಸಾಹಿತಿಗಳನ್ನೂ ಕನ್ನಡಕ್ಕೆ ಕೊಟ್ಟಂತಹ ಇನ್ನೊಂದು ಪ್ರದೇಶ ಕರ್ನಾಟಕದಲ್ಲೂ ಕಾಣಸಿಗಲಾರದು.
ಗಮನಿಸಬೇಕಾದ ಮುಖ್ಯವಾದ ಮಾತೆಂದರೆ ಕಾಸರಗೋಡಿನಲ್ಲಿ ಇರುವ ಪ್ರಶ್ನೆ ಸಂಸ್ಕೃತಿಗೆ ಸಂಬಂಧಿಸಿದ್ದು. ರಾಜ್ಯ ಪುನಾರಚನೆ ನಡೆದುದು ಭಾಷೆಗಳ ಆಧಾರದ ಮೇಲೆ ಎಂಬುದರಿಂದ ಮೇಲ್ನೋಟಕ್ಕೆ ಇದು ಭಾಷೆಗಳ ಸಮಸ್ಯೆಯಂತೆ ಕಾಣಿಸಿಕೊಂಡಿದೆ. ಎಂದರೆ ಸಂಸ್ಕೃತಿಯ ಸಮಸ್ಯೆಯೇ ಆದರೂ ಅದನ್ನು ಇತ್ಯರ್ಥಗೊಳಿಸುವಲ್ಲಿ ಪರಿಗಣಿಸಬೇಕಾದದ್ದು ರಾಷ್ಟ್ರಮಟ್ಟದಲ್ಲಿ ಅಂಗೀಕೃತವಾದ ಮಲೆಯಾಳ ಮತ್ತು ಕನ್ನಡ ಭಾಷೆಗಳನ್ನು ಮಾತ್ರ. ಕಾಸರಗೋಡಿನಲ್ಲಿ ಅಸ್ತಿತ್ವದಲ್ಲಿರುವ ಇತರ ಉಪಭಾಷೆಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಅಂತರ್ಗತವಾಗಿವೆ ಎನ್ನುವ ಸತ್ಯದ ಆಧಾರದ ಮೇಲೆ ಈ ಪ್ರಶ್ನೆಯ ತೀರ್ಮಾನವಾಗಬೇಕು.
ಆಗಾಗ ಉಲ್ಬಣಾವಸ್ಥೆಗೆ ಬರುತ್ತಿರುವ ಭಾಷಾ ಸಂಬಂಧವಾದ (ಸಂಸ್ಕೃತಿ) ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎನ್ನುವುದೇ ನಿಜವಾದ ಪ್ರಶ್ನೆ.
ಪರಿಹಾರ
ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಬೀದಿ ಕಾಳಗಕ್ಕೆ ಮುಂದಾಗುವುದರಿಂದ ಪ್ರಯೋಜನವೇನೂ ಆಗಲಾರದು. ಭಾಷೆಯ ಅಥವಾ ಸಂಸ್ಕೃತಿಯ ಕುರಿತಾದ ಅಂಧಾಭಿಮಾನ ದುರಭಿಮಾನ ಉದ್ವೇಗ ಆವೇಶಗಳು ಕಷ್ಟವನ್ನು ಬೆಟ್ಟವಾಗಿಸಬಹುದೇ ಹೊರತು ಪರಿಹಾರ ಕಾಣುವುದಕ್ಕೆ ನೆರವಾಗಲಾರವು. ಪ್ರೀತಿ ವಿವೇಕ ಸೌಹಾರ್ದ ಸಮನ್ವಯ ಇತ್ಯಾದಿಗಳ ನೆಲೆಯಲ್ಲಿ ಮಾತ್ರವೇ ನೆಮ್ಮದಿಯ ಪರಿಹಾರ ದೊರಕಬಹುದು.
ಪರಿಹಾರವನ್ನು ಎರಡು ದೃಷ್ಟಿಯಿಂದ ಲಕ್ಷಿಸಬೇಕು.
1. ಶಾಶ್ವತವಾದ ಪರಿಹಾರವೆಂದರೆ ಮಹಾಜನ ಆಯೋಗದ ಆಧಾರದಲ್ಲಿ ಕಾಸರಗೋಡನ್ನು ಭೌಗೋಳಿಕವಾಗಿ ಕರ್ನಾಟಕದೊಂದಿಗೆ ವಿಲೀನಗೊಳಿಸಬೇಕು. ವೋಟ್ ಬೇಂಕ್ ರಾಜಕೀಯವನ್ನು ಬದಿಗಿರಿಸಿ ಪರಸ್ಪರ ಮಾತುಕತೆಯ ಮೂಲಕ ಸರ್ವಪಕ್ಷಗಳ ಸರ್ವಸಮ್ಮತ ಸಿದ್ಧಾಂತಕ್ಕೆ ಬದ್ಧರಾಗುವುದಕ್ಕೆ ಸಾಧ್ಯವಾದರೆ ಮಾತ್ರ ಇದು ಯಶಸ್ವಿಯಾಗಬಹುದು. ಗುಣಕಾರಕ ಚಿಕಿತ್ಸೆ (Curative treatment) ಸಾಧ್ಯವಾಗದಿದ್ದರೆ ನಾವು ಸಾಂತ್ವನ ಚಿಕಿತ್ಸೆ (palliative treatment) ಗೆ ಮೊರೆ ಹೋಗಬೇಕು.
2.ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲೀನೀಕರಣ ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಉತ್ತಮವಾದ ಸೂತ್ರ. ಶಾಸನಾತ್ಮಕವಾಗಿ ಮೂಡಿ ಬಂದರೆ ಅದೊಂದು ಶಾಶ್ವತವಾದ ಪರಿಹಾರವಾಗಬಹುದು. ಕಾಸರಗೋಡಿನ ಸಂಸ್ಕೃತಿ ಪರವಾದ ಎಲ್ಲ ಚಟುವಟಿಕೆಗಳನ್ನೂ ಅದು ಕರ್ನಾಟಕದ ಅವಿಭಾಜ್ಯ ಅಂಗವೆಂಬಂತೆ ಕರ್ನಾಟಕ ಸರಕಾರ ನಿರ್ವಹಿಸಬೇಕು. ಅಥವಾ ಪೋಷಿಸಬೇಕು. ಅದರೊಂದಿಗೆ ಹೆಚ್ಚುವರಿ ಸೌಲಭ್ಯಗಳನ್ನೂ ನೀಡಬೇಕು. ಕೇರಳ ಸರಕಾರದಿಂದ ಸಿಗಲೇಬೇಕಾದ ಸವಲತ್ತುಗಳು ಸಿಗುವಂತೆಯೂ ಸಂಸ್ಕೃತಿಯ ಮೇಲೆ ಆಕ್ರಮಣ ನಡೆಯದಂತೆಯೂ ಎಚ್ಚರಿಕೆ ವಹಿಸಬೇಕು. ಈಗಾಗಲೇ ಡಾ.ಸಿ. ಸೋಮಶೇಖರ್ ಅವರು ಈ ಕುರಿತು ಕೆಲವು ದೃಢವಾದ ಹೆಜ್ಜೆಗಳನ್ನು ಮುಂದಿರಿಸಿದ್ದಾರೆ. ಇದಕ್ಕೇ ಶಾಸನಾತ್ಮಕವಾದ ಶಾಶ್ವತವಾದ ಸ್ವರೂಪವನ್ನು ಕೊಟ್ಟರೆ ಸಮಗ್ರವಾದ ಸೂತ್ರವೊಂದನ್ನು ಅನುಷ್ಠಾನಕ್ಕೆ ತರಬಹುದು.
ಕೇಂದ್ರಾಡಳಿತ ಪ್ರದೇಶವಾಗಿ ಪರಿಗಣಿಸಬೇಕೆಂಬ ಬೇಡಿಕೆ ಅಷ್ಟು ಪರಿಣಾಮಕಾರಿಯಾಗುವುದು ಕಷ್ಟ. ಆದರೆ ಕಾಸರಗೋಡನ್ನು ರಾಷ್ಟ್ರಮಟ್ಟದಲ್ಲಿ ಸಂಸ್ಕೃತಿಯ ಸಾಮರಸ್ಯದ ನಾಡೆಂದು ಗುರುತಿಸಿ ಎಲ್ಲ ಭಾಷೆಗಳ ಮತ್ತು ಸಂಸ್ಕೃತಿಗಳ ಸರ್ವತೋಮುಖವಾದ ಅಭಿವೃದ್ಧಿಯನ್ನು ಸಾಧಿಸಬಹುದಾದದ್ದು ಇನ್ನೊಂದು ಉಚಿತವಾದ ಮಾರ್ಗ. ಯಾವುದು ಹೆಚ್ಚು ಪ್ರಾಯೋಗಿಕವೂ ಅದನ್ನು ಆಯ್ಕೆ ಮಾಡಿಕೊಳ್ಳಬಹುದು.
ಕಾಸರಗೋಡು ಕೇರಳಕ್ಕೆ ಸೇರಿ ಹೋದ ನೋವು ಮತ್ತು ಆವೇಶದ ಭರದಲ್ಲಿ ಕಯ್ಯಾರ ಕಿಞ್ಞಣ್ಣ ರೈಯವರು ‘ಬೆಂಕಿ ಬಿದ್ದಿದೆ ಮನೆಗೆ’ ಎಂದು ಹಾಡಿದ್ದರು. ಅಂದು ಹೊತ್ತಿದ ಬೆಂಕಿ ಇಂದೂ ಉರಿಯುತ್ತಲೇ ಇದೆ. ಹಾಗಾಗಿ ಈಗ ನಾವು ಹಾಡಬೇಕಾಗಿದೆ
‘ಬೆಂಕಿ ಆರಿಸುವವರೆ ಬನ್ನಿ ಬನ್ನಿ. ಕನ್ನಡದ ಸಂಸ್ಕೃತಿಯ ಬೆಳಗೆ ಬನ್ನಿ’
ಡಾ. ರಮಾನಂದ ಬನಾರಿ ಮಂಜೇಶ್ವರ
ಅಧ್ಯಕ್ಷರು,
ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ) ದೇಲಂಪಾಡಿ
ಅಂಚೆ: ಪಂಜಿಕಲ್ಲು 671543
ಕಾಸರಗೋಡು ಜಿಲ್ಲೆ
ಮೊ: 9846673422
ವಾಟ್ಸಪ್: 9446297226
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions