‘ಅರ್ಥಗಾರಿಕೆಯ ವಿಶ್ಲೇಷಣೆ – ಪ್ರಾತ್ಯಕ್ಷಿಕೆ ಸಹಿತ’ ಎನ್ನುವ ವಿಶೇಷ ಯಕ್ಷಗಾನ ಗೋಷ್ಠಿಯು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ) ದೇಲಂಪಾಡಿಯ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ದಿನಾಂಕ 25-12-2022ನೇ ರವಿವಾರ ಜರಗಿತು. ವಿಟ್ಲ ಶಂಭು ಶರ್ಮ, ರಾಧಾಕೃಷ್ಣ ಕಲ್ಚಾರ್ ಹಾಗೂ ವೆಂಕಟರಾಮ ಭಟ್ಟ ಸುಳ್ಯ ಇವರಿಂದ ನಡೆಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ತಾಳಮದ್ದಳೆ ಅರ್ಥಗಾರಿಕೆಯ ಸೂಕ್ಷ್ಮವಾದ ತಾಂತ್ರಿಕಾಂಶಗಳಿಗೆ ಒತ್ತು ಕೊಟ್ಟು ‘ಹಿಮ್ಮೇಳ ಮುಮ್ಮೇಳಗಳ ಸಾಂಗತ್ಯ’ ‘ಪೀಠಿಕೆ, ಸ್ವಗತ’ ‘ವಾದ – ಸಂವಾದ’ ಮೂರು ವಿಭಾಗಗಳಲ್ಲಿ ವಿಚಾರ ಮಂಡನೆ ಮಾಡಲಾಯಿತು. ಬನಾರಿ ಕಲಾ ಸಂಘದ ವಾರ್ಷಿಕೋತ್ಸವ ಮತ್ತು ಗಡಿ ಸಂಸ್ಕೃತಿ ಉತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿತ್ತು.
ಹಿಮ್ಮೇಳ ಮುಮ್ಮೇಳಗಳ ಸಾಂಗತ್ಯ ವಿಚಾರವಾಗಿ ಉಪನ್ಯಾಸ ನೀಡಿದ ವೆಂಕಟರಾಮ ಭಟ್ಟ ಸುಳ್ಯ ಅವರು ಹಿಮ್ಮೇಳ ಮುಮ್ಮೇಳಗಳ ನಡೆಯುವ, ನಡೆಯಬೇಕಾದ ಸಾಮರಸ್ಯವನ್ನು ವಿವರಿಸಿದರು. “ಪುರಾಣ ಪ್ರಪಂಚವನ್ನು ಬೇರೆ ಬೇರೆ ಬದಿಯಿಂದ ಅನಾವರಣಗೊಳಿಸಿದ ಪ್ರಕಾರವೇ ಯಕ್ಷಗಾನ ಅರ್ಥಗಾರಿಕೆ. ಶುದ್ಧವಾದ ಕಲೆಯನ್ನು ಹೇಗೆ ಆಸ್ವಾದಿಸಬಹುದು ಎಂಬುದು ಅರ್ಥಗಾರಿಕೆಯಿಂದ ತಿಳಿಯಲು ಸಾಧ್ಯವಿದೆ. ಪ್ರಸಂಗವನ್ನು ಕೊಂಡೊಯ್ಯುವಲ್ಲಿ ಭಾಗವತನ ಪಾತ್ರ ಬಹಳ ಮುಖ್ಯ” ಎಂದು ಶ್ರೀಯುತರು ಅಭಿಪ್ರಾಯ ವ್ಯಕ್ತಪಡಿಸಿದರು.
ಪೀಠಿಕೆ, ಸ್ವಗತ ಎಂಬ ವಿಷಯವಾಗಿ ರಾಧಾಕೃಷ್ಣ ಕಲ್ಚಾರ್ ಅವರು ಉಪನ್ಯಾಸ ನೀಡಿದರು. ಸ್ವಗತದಲ್ಲಿ ಒಂದು ಪಾತ್ರಕ್ಕೆ ಒಂದು ಅಥವಾ ಎರಡು ಪದ್ಯ. ಅದಕ್ಕಿಂತ ಹೆಚ್ಚು ಹೇಳಬಾರದು ಎಂಬುದನ್ನು ಸ್ಪಷ್ಟೀಕರಿಸಿದರು. ಪ್ರಾತ್ಯಕ್ಷಿಕೆಯ ಮೂಲಕ ಅವರು ಈ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ನೀಡಿದರು.
ಶಂಭು ಶರ್ಮ ವಿಟ್ಲ ಅವರು ವಾದ ಸಂವಾದದ ಕುರಿತಾಗಿ ಉಪನ್ಯಾಸ ನೀಡಿದರು. ಅಗತ್ಯಕ್ಕಿಂತ ಹೆಚ್ಚಿನ ವಾದ ಅಗತ್ಯವಿಲ್ಲ. ಪ್ರಸಂಗಪ್ರಜ್ಞೆ, ಸಾಹಿತ್ಯಪ್ರಜ್ಞೆಗಳು ಪಾತ್ರಧಾರಿಯಲ್ಲಿರಬೇಕೆಂದು ಶ್ರೀಯುತರು ಅಭಿಪ್ರಾಯ ಪಟ್ಟರು.
ಮೂರೂ ವಿಷಯಗಳ ಬಗ್ಗೆ ಉಪನ್ಯಾಸವು ಅತ್ಯಂತ ಮನೋಜ್ಞಾವಾಗಿ ಮೂಡಿಬಂತು. ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಮತ್ತು ಪ್ರಶಾಂತ್ ರೈ ಮುಂಡಾಲಗುತ್ತು, ಚೆಂಡೆ ಮದ್ದಳೆ ಚಕ್ರತಾಳಗಳಲ್ಲಿ ಶಂಕರ ಭಟ್ ಕಲ್ಮಡ್ಕ, ಚಂದ್ರಶೇಖರ ಗುರುವಾಯನಕೆರೆ ಸಹಕರಿಸಿದರು.
ದಿವಾಣ ಶಿವಶಂಕರ ಭಟ್, ಬೆಳ್ಳಿಪ್ಪಾಡಿ ಸದಾಶಿವರ ರೈ, ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಕೀರಿಕ್ಕಾಡು ಗಣೇಶ ಶರ್ಮ ಸಿದ್ಧಕಟ್ಟೆ, ಡಾ. ಸೂರ್ಯನಾರಾಯಣ ಕೆ, ಐತ್ತಪ್ಪ ಗೌಡ ಮುದಿಯಾರು, ಕಲ್ಲಡ್ಕ ಗುತ್ತು ರಾಮಯ್ಯ ರೈ ಸಂವಾದದಲ್ಲಿ ಪಾಲ್ಗೊಂಡರು.
ರಾಮಣ್ಣ ಮಾಸ್ತರ್ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions