ಯಕ್ಷಗಾನ ಕಲೆಯ ಪೋಷಕ, ನಿರ್ದೇಶಕ ಟಿ, ಶ್ಯಾಮ ಭಟ್ ಅವರನ್ನು ತಿಳಿಯದವರು ಯಕ್ಷಗಾನ ಲೋಕದಲ್ಲಿ ಇರಲಾರರು. ಆದುದರಿಂದ ಅವರನ್ನು ಪರಿಚಯ ಮಾಡುವುದು ಇಲ್ಲಿ ಅಪ್ರಸ್ತುತವೆಂದು ಭಾವಿಸುತ್ತೇನೆ. ಯಕ್ಷಗಾನ ಮತ್ತು ಅವರಿಗೆ ಅವಿನಾಭಾವ ಸಂಬಂಧ. ಇಂದು ಅವರ ಜನ್ಮದಿನ. ಆದ ಕಾರಣ ಅವರ ವಿಶೇಷತೆಗಳಲ್ಲಿ ಕೆಲವನ್ನು ತಿಳಿದುಕೊಳ್ಳೋಣ.
ಡಾ. ಶ್ಯಾಮ್ ಭಟ್ ಅವರ ವಿಶೇಷತೆಗಳು ಮತ್ತು ವಿಸ್ಮಯಗಳು:
ಕಲೆಯ ಸೆಳೆತ ಎನ್ನುವುದು ಹಾಗೆಯೇ. ಅದೊಂದು ಭಾವದೊಳಗಿನ ತುಡಿತ. ಪಂಡಿತ, ಪಾಮರ ಅಥವಾ ಬಡವ, ಬಲ್ಲಿದನೆಂಬ ಭೇದಭಾವವನ್ನು ತೋರದೆ ಕಲೆಯು ಶ್ರದ್ಧೆಯನ್ನು ತೋರಿದವನಿಗೆ ಒಲಿಯುತ್ತದೆ. ಎಷ್ಟೇ ಕಲಿತು ವಿದ್ಯಾವಂತನಾಗಿ ಉನ್ನತ ಹುದ್ದೆಯಲ್ಲಿದ್ದವರಲ್ಲಿ ಇಂದ ಹಲವಾರು ಮಂದಿ ತಾನೊಂದು ಕಲೆಯ ಜೊತೆಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅಂತಹ ಸೆಳೆತ ಸಂಗೀತಾದಿ ಕಲೆಗಳಿವೆ.
ಹೆಚ್ಚಿನ ಕಲೆಗಳಿಗೆ ಮೂಲ ಸಂಗೀತವಾದರೂ ಸಂಗೀತವಲ್ಲದ ಚಿತ್ರಕಲೆ, ಶಿಲ್ಪಕಲೆ ಮುಂತಾದ ಇತರ ಕಲೆಗಳೂ ಇವೆ. ಕಲೆಗಳ ಮೇಲಿನ ವ್ಯಾಮೋಹ ಹೀಗೇಕೆ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವುದು ಕಷ್ಟಕರ. ಅದು ಕೇವಲ ಮನರಂಜನೆಯೂ ಹವ್ಯಾಸವೋ ಜನಪ್ರಿಯತೆಯನ್ನು ಪಡೆಯುವ ಹಂಬಲವೋ ಎಂದು ಹೇಳುವ ಹಾಗಿಲ್ಲ. ಕಲೆಯ ತುಡಿತ ಮಿಡಿತಗಳು ಮನುಷ್ಯನ ರಕ್ತದ ಕಣಕಣದಲ್ಲಿಯೂ ಅಡಗಿರಬಹುದೇನೋ ಎಂಬ ಭಾವನೆಗಳು ಮೂಡಿದರೆ ಅಚ್ಚರಿಯೇನಿಲ್ಲ.
ಕಲೆ ಎಂಬುದು ಮಾನವನಿಗೆ ಅದರಲ್ಲೂ ಭಾರತೀಯರಿಗೆ ಮಾನಸಿಕ ನೆಮ್ಮದಿಯನ್ನು ಕೊಡುತ್ತದೆ. ದಿನನಿತ್ಯದ ಕರ್ತವ್ಯದ ನಿಬಿಡ ಜಂಜಾಟಗಳಿಂದ ಒಂದರೆಕ್ಷಣ ಬದಲಾವಣೆಯ ಶಾಂತಿಯನ್ನು ಕೊಡುತ್ತದೆ. ಆದ ಕಾರಣ ಎಷ್ಟೋ ಉನ್ನತ ಉದ್ಯೋಗಸ್ಥರು ಕಲಾಸೇವೆಯಲ್ಲಿ ನಿರತರಾಗಿದ್ದುದನ್ನು ನಾವು ಕಾಣುತ್ತೇವೆ. ರಾಜಕಾರಣಿಗಳು, ವಿಜ್ಞಾನಿಗಳು, ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಭಾರತೀಯ ಆಡಳಿತ ಸೇವೆಯ(ಇಂಡಿಯನ್ ಸಿವಿಲ್ ಸರ್ವಿಸ್) ಉನ್ನತ ಉದ್ಯೋಗಸ್ಥರು ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಆದರೆ ಕಲೆಯ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದುದು ಮಾತ್ರವಲ್ಲದೆ ಅಂತಹ ಕಲೆಗಳ ಏಳಿಗೆಗಾಗಿ ನಿರಂತರ ಪ್ರೋತ್ಸಾಹವನ್ನು ಕೊಡುತ್ತಾ ಜೊತೆಗೆ ಅದರ ಬಗ್ಗೆ ನಿರ್ದಿಷ್ಟವಾದ ನಿರ್ದೇಶನವನ್ನೂ ಕೊಡಬಲ್ಲ ಮಹಾನುಭಾವರುಗಳಿರುವುದು ಅಪರೂಪ. ಕೇವಲ ಬೆರಳೆಣಿಕೆಯಲ್ಲಿ ಮಾತ್ರವೇ ಅಂತಹವರು ಕಾಣಸಿಗಬಹುದಷ್ಟೆ. ಅವರೊಲ್ಲಬ್ಬರು ಡಾ. ಟಿ. ಶ್ಯಾಮ ಭಟ್.
ಜಿಲ್ಲಾಧಿಕಾರಿ, ಸಾರಿಗೆ ಇಲಾಖೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಕರ್ನಾಟಕ ಲೋಕಸೇವಾ ಆಯುಕ್ತರೇ ಮೊದಲಾದ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಶ್ಯಾಮ್ ಭಟ್ಟರ ಕಲಾಪ್ರೀತಿ ಅನನ್ಯವಾದದ್ದು. ಎಷ್ಟೋ ಕಲಾವಿದರಿಗೆ ಮತ್ತು ಕಲಾಪ್ರದರ್ಶನಗಳಿಗೆ ಸಹಾಯಹಸ್ತ ನೀಡಿದುದು ಇವರ ಹೆಚ್ಚುಗಾರಿಕೆ. ಹಾಗೆಂದು ಅದನ್ನು ಅವರು ಎಂದೂ ಹೇಳಿಕೊಂಡಿಲ್ಲ. ತನ್ನ ಕರ್ತವ್ಯದ ಒಂದು ಭಾಗವೆಂದೇ ಭಾವಿಸಿದ್ದಾರೆ. ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಮತ್ತು ಸಂಪಾಜೆ ಯಕ್ಷೋತ್ಸವದ ಮುಖಾಂತರ ಅವರು ನಡೆಸಿದ ಕಲಾಸೇವೆ ಕಲಾಭಿಮಾನಿಗಳು, ಪ್ರೇಕ್ಷಕರು ಮತ್ತು ಕಲಾವಿದರು ಅನಾವರತವೂ ನೆನಪಿನಲ್ಲಿಡಬೇಕಾದುದು. ಎಲ್ಲರಿಗೂ ತಿಳಿದ ವಿಚಾರವಾದ್ದರಿಂದ ಅದರ ಬಗ್ಗೆ ಮತ್ತೆ ಮತ್ತೆ ನಾನು ಇಲ್ಲಿ ಉಲ್ಲೇಖಿಸಲು ಹೋಗುವುದಿಲ್ಲ.
ಆದರೆ ಎಲ್ಲರಿಗೂ ತಿಳಿದಿರದ ಅವರನ್ನು ಹತ್ತಿರದಿಂದ ಬಲ್ಲವರು ಮಾತ್ರ ತಿಳಿದಿರುವ ವಿಚಾರವನ್ನು ನಾನಿಲ್ಲಿ ಹೇಳಲೇಬೇಕು. ಡಾ. ಶ್ಯಾಮ ಭಟ್ಟರು ಕೇವಲ ಯಕ್ಷಗಾನದ ಪ್ರೋತ್ಸಾಹಕ ಅಥವಾ ಯಕ್ಷಗಾನದ ಪ್ರೇಕ್ಷಕ, ಆರಾಧಕ ಎಂದು ತಿಳಿದುಕೊಂಡರೆ ಅದು ನಮ್ಮ ಅಜ್ಞಾನ ಎಂದು ಹೇಳಬಹುದು. ಅವರೊಬ್ಬ ಯಕ್ಷಗಾನದ ಶ್ರೇಷ್ಠ ನಿರ್ದೇಶಕ ಎಂದು ತಿಳಿದರೆ ಹಲವರಿಗೆ ಆಶ್ಚರ್ಯವಾಗಬಹುದು. ಪ್ರದರ್ಶನಗಳಲ್ಲಿ ಕೆಲವೊಮ್ಮೆ ಕಲಾವಿದರಿಂದಲೋ ಅಥವಾ ಇತರರಿಂದಲೋ ತಪ್ಪುಗಳು ಘಟಿಸಿ ಹೋದಾಗ ಅವರೊಳಗಿನ ನಿರ್ದೇಶಕ ಜಾಗೃತನಾಗುತ್ತಾನೆ.
ಹೀಗೆಯೇ ಪ್ರದರ್ಶನ ನಡೆಯಬೇಕೆಂದು ಅವರು ನಿರ್ದೇಶಿಸಬಲ್ಲರು. ಆಶ್ಚರ್ಯವೆಂದರೆ ಅವರಿಗೆ ಹೆಚ್ಚಿನ ಎಲ್ಲಾ ಪ್ರಸಂಗಗಳ ನಡೆ ಗೊತ್ತಿದೆ. ಯಾವ ದೃಶ್ಯದ ನಂತರ ಮುಂದಿನ ದೃಶ್ಯ ಎಂದು ಕರಾರುವಾಕ್ಕಾಗಿ ಹೇಳುತ್ತಾರೆ. ಮಾತ್ರವಲ್ಲದೆ ಸಮಯದ ಅಭಾವವಿದ್ದಾಗ ಯಾವ ದೃಶ್ಯವನ್ನು ಬಿಡಬಹುದು ಯಾವುದನ್ನೂ ಪ್ರದರ್ಶಿಸಬೇಕೆಂದು ಭಾಗವತರಿಗೆ ತಿಳಿಹೇಳಬಲ್ಲರು.
ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಅವರಿಗೆ ಹೆಚ್ಚಿನೆಲ್ಲಾ ಯಕ್ಷಗಾನ ಪ್ರಸಂಗಗಳ ನಡೆ ಗೊತ್ತಿದೆ. ಇತ್ತೀಚಿಗೆ ಪ್ರದರ್ಶನಗಳನ್ನು ಕಾಣದೆ ಮೂಲೆಯಲ್ಲಿ ಬಿದ್ದ ಪ್ರಸಂಗಗಳ ನಡೆ ಹೇಗಿರಬೇಕೆಂದು ಅವರು ನಿರ್ದೇಶನ ಮಾಡಿದ್ದೂ ಇದೆಯಂತೆ. ಅಂತಹಾ ಚಾಲ್ತಿಯಲ್ಲಿಲ್ಲದ ಪ್ರಸಂಗಗಳೂ ಅದರ ಪದ್ಯಗಳೂ ಅವರಿಗೆ ಕಂಠಪಾಠ! ಇಂತಹ ಪ್ರಸಂಗಗಲ್ಲಿ ಇಂತದ್ದೇ ಪದ್ಯಗಳನ್ನು ಹೇಳಬೇಕೆಂದೂ ಇಂತಹುದೇ ಪದ್ಯಗಳನ್ನು ಬಿಡಬೇಕೆಂದೂ ಕರಾರುವಕ್ಕಾಗಿ ಅವರು ನಿರ್ದೇಶಿಸುತ್ತಾರೆ ಎಂದು ಹೇಳುವುದನ್ನೂ ಕೇಳಿದ್ದೇನೆ.
ಕಥೆಯಲ್ಲಿ ಲೋಪವಾದರೆ, ಮಾತಿನಲ್ಲಿ ಆಭಾಸಗಳು ಉಂಟಾದರೆ, ದೃಶ್ಯ ಸಂಯೋಜನೆಯಲ್ಲಿ ತಪ್ಪುಗಳು ಸಂಭವಿಸಿದರೆ ಅವರದನ್ನು ತಿದ್ದಿ ತಿಳಿಹೇಳಬಲ್ಲರು. ಆದುದರಿಂದ ಡಾ. ಶ್ಯಾಮ್ ಭಟ್ಟರು ಕೇವಲ ಒಬ್ಬ ಕಲಾಪೋಷಕ, ಕಲಾಪ್ರೇಮಿಯಲ್ಲ. ಬದಲಾಗಿ ಯಕ್ಷಗಾನದ ಶ್ರೇಷ್ಠ ನಿರ್ದೇಶಕರೂ ಹೌದು. ಆದುದರಿಂದ ಶ್ರೇಷ್ಠ ವಿದ್ವಾಂಸರೂ ಕಲಾ ನಿರ್ದೇಶಕರೂ ಆದ ಅವರಿಂದ ಈ ಕಲಾಜಗತ್ತು ಬಹಳಷ್ಟು ಶ್ರೀಮಂತವಾಗಿದೆ.
ಟಿ. ಶ್ಯಾಮ್ ಭಟ್ಟರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
ಬರಹ: ಮನಮೋಹನ್ ವಿ. ಎಸ್.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions