

ವಿಶ್ವ ಮಣ್ಣಿನ ದಿನಾಚರಣೆ:
ಪುತ್ತೂರು: ನಮ್ಮ ಆಹಾರದ ಮುಖ್ಯ ಮೂಲ ಮಣ್ಣು, ಮಾನವನ ಜೀವನಕ್ಕೆ ಪೋಷಕಾಂಶಗಳು ಹೇಗೆ ಅಗತ್ಯವೋ ಮಣ್ಣಿಗೂ ಇದು ಆವಶ್ಯಕ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮೆರೈನ್ ಜಿಯಾಲಜಿ ವಿಭಾಗದ ವಿಶ್ರಾಂತ ಪ್ರೊಫೆಸರ್ ಡಾ.ಎಚ್.ಗಂಗಾಧರ ಭಟ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ0ಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರ್ ವಿಭಾಗ ಮತ್ತು ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಣ್ಣಿನ ದಿನಾಚರಣೆ ಸಮಾರಂಭದಲ್ಲಿ ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಜಿಯೋ ಇನ್ಫಾರ್ಮೇಟಿಕ್ಸ್ನ ಪಾತ್ರ ಎನ್ನುವ ವಿಷಯದ ಬಗ್ಗೆ ಮಾತಾಡಿದರು.
ಅವ್ಯಾಹತವಾದ ಮಾಲಿನ್ಯದಿಂದ ಮಣ್ಣು ತನ್ನತನವನ್ನು ಕಳೆದುಕೊಳ್ಳುತ್ತಿದೆ. ಪೋಷಕಾಂಶಗಳ ಕೊರತೆಯಿಂದ ಅದರಲ್ಲಿ ಬೆಳೆಯುವ ಆಹಾರ ಪದಾರ್ಥಗಳೂ ಸತ್ವ ಹೀನವಾಗುತ್ತಿವೆ ಇದು ಅಪಾಯದ ಸಂಕೇತ ಎಂದು ನುಡಿದರು. ಮಣ್ಣಿನ ಪದರದ ಸವಕಳಿಯನ್ನು ತಪ್ಪಿಸುವುದರಿಂದ ಪೋಷಕಾಂಶಗಳ ನಷ್ಟವನ್ನು ತಡೆಗಟ್ಟಬಹುದು ಎಂದರು.
ಅವೈಜ್ಞಾನಿಕ ಕೃಷಿ ಪದ್ದತಿ, ಅಪಾರ ಪ್ರಮಾಣದ ರಾಸಾಯನಿಕಗಳ ಬಳಕೆ, ಮಿತಿಮೀರಿದ ಪ್ಲಾಸ್ಟಿಕ್‌ಗಳ ಉಪಯೋಗ, ಸಸ್ಯ ಸಂಕುಲಗಳ ನಾಶದಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಪರಿಸರ ಸಂರಕ್ಷಣೆಯ ಜತೆಯಲ್ಲಿ ನಾವೆಲ್ಲರೂ ಮಣ್ಣಿನ ರಕ್ಷಣೆಯನ್ನೂ ಮಾಡಬೇಕು ಎಂದು ನುಡಿದರು.
ಮಣ್ಣಿನ ದಿನದ ನೆನಪಿಗಾಗಿ ಅತಿಥಿಗಳೊಂದಿಗೆ ಕಾಲೇಜು ಆವರಣದಲ್ಲಿ ಗಿಡ ನೆಡಲಾಯಿತು.
ಸಿವಿಲ್ ಎಂಜಿನಿಯರಿ0ಗ್ ವಿಭಾಗ ಮುಖ್ಯಸ್ಥ ಡಾ.ಆನಂದ್.ವಿ.ಆರ್ ಸ್ವಾಗತಿಸಿದರು, ಡಾ.ಸೌಮ್ಯ.ಎನ್.ಜೆ ಪ್ರಾಸ್ತಾವನೆಗೈದರು. ಕಾರ್ಯಕ್ರಮ ಸಂಯೋಜಕ ಪ್ರೊ.ಜಯಕೃಷ್ಣ.ಭಟ್.ಡಿ ವಂದಿಸಿದರು. ಮಧುಶ್ರೀ ಕಾರ್ಯಕ್ರಮ ನಿರ್ವಹಿಸಿದರು.
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ ಸಮಾರಂಭ:
ಪುತ್ತೂರು: ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ, ನಮ್ಮ ನಿಮ್ಮೆಲ್ಲರ ಒಳಿತಿಗಾಗಿ ಇರುವ ಈ ಕಾನೂನಿಗೆ ನಾವು ವಿಧೇಯರಾಗಿರಬೇಕು ಎಂದು ಪುತ್ತೂರಿನ ಟ್ರಾಫಿಕ್ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮ ನಾಯ್ಕ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ0ಗ್ ಟೆಕ್ನಾಲಜಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯೂತ್ ರೆಡ್‌ಕ್ರಾಸ್ ಘಟಕ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀರಾಮ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು.
ಇತ್ತೀಚಿನ ದಿನಗಳಲ್ಲಿ 18 ವರ್ಷ ತುಂಬದವರು ವಾಹನಗಳನ್ನು ಚಲಾಯಿಸುವುದು ಹೆಚ್ಚಾಗಿದ್ದು, ಪೋಷಕರು ಇದರ ಬಗ್ಗೆ ಜಾಗರೂಕರಾಗಿರಬೇಕು. ಅಪಘಾತ ಸಂಭವಿಸಿದರೆ ಯಾವುದೇ ನೆರವು ಸಿಗಲಾರದು ಮತ್ತು ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಮಂಗಳೂರಿನ ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ನಾಯ್ಕ್ ಮಾಲಿನ್ಯ ನಿಯಂತ್ರಣದ ಬಗ್ಗೆ ಮಾತನಾಡಿ ನಾವೆಷ್ಟು ಅನಾಚಾರ ಮಾಡಿದರೂ ಪ್ರಕೃತಿಯು ಸಹಿಸಿಕೊಂಡಿದೆ. ಅದರಿಂದಾಗಿ ಇನ್ನಷ್ಟು ಹೆಚ್ಚು ದಬ್ಬಾಳಿಕೆ ಮಾಡುತ್ತಲೇ ಇದ್ದೇವೆ, ಪ್ರಕೃತಿ ಏನಾದರೂ ಮುನಿದರೆ ನಮ್ಮ ಅಸ್ತಿತ್ವವೇ ಕೊನೆಯಾಗುತ್ತದೆ ಎಂದರು.
ಸಾರ್ವಜನಿಕರಲ್ಲಿ ಮಾಲಿನ್ಯ ನಿಯಂತ್ರಣದ ಅರಿವು ಮೂಡಿಸುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಇಲಾಖೆಗಳು ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸಬೇಕು ಎಂದರು. ನೆಲ, ಜಲ ಮತ್ತು ವಾಯು ಮಾಲಿನ್ಯವನ್ನು ತಡೆಗಟ್ಟುವುದಕ್ಕಾಗಿ ನಾವೆಲ್ಲರೂ ಕಂಕಣಬದ್ದರಾಗಬೇಕು ಎಂದು ನುಡಿದರು.
ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ಅಜಿಲ ಗೌರವ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಸ್ವಾಗತಿಸಿದರು. ಕಾಲೇಜಿನ ಐಎಸ್‌ಟಿಇ ಸಂಯೋಜಕ ಡಾ.ಮನುಜೇಶ್.ಬಿ.ಜೆ ಪ್ರಸ್ತಾವನೆಗೈದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕಿ ಪ್ರೊ.ನಿಶಾ.ಜಿ.ಆರ್ ವಂದಿಸಿದರು. ಭುವನೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಲ್ಲಿ ಹಾಗೂ ವಾಹನ ಚಾಲಕರಲ್ಲಿ ಮಾಲಿನ್ಯ ನಿಯಂತ್ರಣದ ಅರಿವು ಮೂಡಿಸುವುದಕ್ಕಾಗಿ ಪಡೀಲ್ ಮತ್ತು ಮುರದಲ್ಲಿ ಕರಪತ್ರಗಳನ್ನು, ಸ್ಟಿಕ್ಕರ್‌ಗಳನ್ನು ಹಂಚಲಾಯಿತು. ಪ್ರೊ.ಅಜಿತ್.ಕೆ ಮತ್ತು ಪ್ರೊ.ತಪಸ್ವಿನಿ ಅವರ ನೇತೃತ್ವದಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರು ಈ ಜಾಗೃತಿ ಕಾರ್ಯಕ್ರಮದಲ್ಲಿ ಬಾಗವಹಿಸಿದರು.