

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಭಿನ್ನ ಕೌಶಲಗಳನ್ನು ಹೊಂದಿದ್ದು, ಸೂಕ್ತ ವೇದಿಕೆ ಲಭಿಸಿದಾಗ ಪ್ರತಿಭೆಯನ್ನು ಪ್ರದರ್ಶಿಸಬೇಕು. ಇದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯೆಯ ಪ್ರಸರಣದ ಜತೆಗೆ ವಿದ್ಯಾರ್ಥಿಗಳಲ್ಲಿರುವ ವಿಶೇಷ ಸಾಮರ್ಥ್ಯವೂ ಹೊರಬರಲು ಸಾಧ್ಯವಾಗುತ್ತದೆ. ವಿದ್ಯಾಲಯಗಳಲ್ಲಿ ಲಭಿಸುವ ಅವಕಾಶಗಳ ಸದ್ಬಳಕೆ ಮಾಡಿದಾಗ ಆತ್ಮವಿಶ್ವಾಸ ಮೂಡಿ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಣೆ ದೊರಕುತ್ತದೆ ಎಂದು ಅಂಬಿಕಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ. ಹೇಳಿದರು.
ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗ ರೂಪಿಸಿದ ‘ಅನುಪಮ ಪ್ರತಿಭಾ ವೇದಿಕೆ’ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ಆಧುನಿಕ ದಿನಮಾನದ ಶೈಕ್ಷಣಿಕ ವ್ಯವಸ್ಥೆ ವಿದ್ಯಾರ್ಥಿಗಳು ಪಠ್ಯ ವಿಷಯಕ್ಕಷ್ಟೇ ಗಮನಹರಿಸುವಂತೆ ರೂಪುಗೊಳ್ಳುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಂದ ದೂರ ಉಳಿಯುವಂತಾಗಿದೆ. ಆದಾಗ್ಯೂ ವಿದ್ಯಾರ್ಥಿಗಳು ಅವಕಾಶ ಸೃಷ್ಟಿಸಿಕೊಂಡು ನೃತ್ಯ, ಹಾಡುಗಾರಿಕೆ, ಕ್ರೀಡೆ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ನಮ್ಮನ್ನು ನಾವು ಮಾನಸಿಕವಾಗಿ ಸದೃಢವಾಗಿರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ, ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಸಿಗುವ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳುವುದು ಅಗತ್ಯ. ವಿವಿಧ ವೇದಿಕೆಗಳು ಹೊಸ ಪ್ರತಿಭೆಗಳನ್ನು ಹೊರತರುವ ಕಾರ್ಯ ನಡೆಸುತ್ತವೆ. ನಾನಾ ಬಗೆಯ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲೂ ಇಂತಹ ವೇದಿಕೆಗಳು ಸಹಕಾರಿಯಾಗುತ್ತವೆ ಎಂದರು.
ವಿದ್ಯಾರ್ಥಿಗಳಾದ ಶೇಖರ್, ವಿಕ್ರಂ, ವೈಭವ್, ಗುರುಪ್ರಸಾದ್ ಕವನ ವಾಚನ, ಭಾಷಣ ಹಾಗೂ ಗಾಯನದಲ್ಲಿ ತಮ್ಮ ಪ್ರತಿಭೆ ವ್ಯಕ್ತಪಡಿಸಿದರೆ ವಿದ್ಯಾರ್ಥಿನಿಯರಾದ ಶ್ರಾವ್ಯಶ್ರೀ, ನಯನಾ, ವರೇಣ್ಯ, ಲೇಖಾ, ಚೈತನ್ಯ ಹಾಗೂ ಅಪೂರ್ವ ಹಾಡು, ಚರ್ಚೆ ಮತ್ತು ಮೆಹೆಂದಿ ವಿನ್ಯಾಸ ರಚಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿಯರಾದ ಪಂಚಮಿ ಬಾಕಿಲಪದವು ಸ್ವಾಗತಿಸಿ, ಜಯಶ್ರೀ ವಂದಿಸಿದರು. ಪ್ರತಿಭಾ ವೇದಿಕೆ ಕಾರ್ಯದರ್ಶಿ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಮೇಘಾ ಡಿ. ನಿರೂಪಿಸಿದರು.