Saturday, January 18, 2025
Homeಸುದ್ದಿಅಂಬಿಕಾದಲ್ಲಿ ‘ಸೈ-ಫೈ' ಸ್ಪರ್ಧೆಗೆ ಚಾಲನೆ, "ಸಮಾಲೋಚನಾ ಕೇಂದ್ರ ಉದ್ಘಾಟನೆ ತಂತ್ರಜ್ಞಾನದೊಂದಿಗೆ ಮಾನಸಿಕ ಸದೃಢತೆ ಅವಶ್ಯ": ತೀರ್ಥರಾಮ...

ಅಂಬಿಕಾದಲ್ಲಿ ‘ಸೈ-ಫೈ’ ಸ್ಪರ್ಧೆಗೆ ಚಾಲನೆ, “ಸಮಾಲೋಚನಾ ಕೇಂದ್ರ ಉದ್ಘಾಟನೆ ತಂತ್ರಜ್ಞಾನದೊಂದಿಗೆ ಮಾನಸಿಕ ಸದೃಢತೆ ಅವಶ್ಯ”: ತೀರ್ಥರಾಮ ವಳಲಂಬೆ


ಪುತ್ತೂರು: ಮನುಷ್ಯ ಸಂಘ ಜೀವಿಯಾಗಿದ್ದು, ವಿಶ್ವದಲ್ಲಿರುವ ಇತರ ಜೀವಿಗಳಿಗಿಂತ ಭಿನ್ನವಾಗಿ ಬದುಕುತ್ತಾನೆ. ಹಲವು ಶತಮಾನಗಳು ಉರುಳಿದರೂ ಪ್ರಾಣಿ – ಪಕ್ಷಿಗಳು ಒಂದು ನಿರ್ದಿಷ್ಟ ಸೂತ್ರದೊಂದಿಗೆ ಮಾತ್ರ ಬದುಕುತ್ತಿವೆ. ಆದರೆ ಮನುಷ್ಯ ಮಾತ್ರ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಸಾಧಿಸುತ್ತಾ ಇದೀಗ ತಂತ್ರಜ್ಞಾನದ ಯುಗದಲ್ಲಿ ಜೀವಿಸುತ್ತಿದ್ದಾನೆ. ಈ ಸಂದರ್ಭದಲ್ಲಿ ಮಾನಸಿಕ ಸದೃಢತೆ ಸಾಧಿಸುವುದು ಅತ್ಯವಶ್ಯಕವಾಗಿದೆ ಎಂದು ಲೇಖಕ ಹಾಗೂ ಚಿಂತಕ ತೀರ್ಥರಾಮ ವಳಲಂಬೆ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದಲ್ಲಿರುವ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಪಿ.ಯು. ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ‘ಐಕ್ಯೂ’ ಪರೀಕ್ಷಾ ಸ್ಪರ್ಧೆ ಸೈ- ಫೈಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು.


ತಂತ್ರಜ್ಞಾನದ ಬಳಕೆಯಿಂದ ಜನತೆ ಆರೋಗ್ಯ, ಸಂಬಂಧ ಹಾಗೂ ನೆಮ್ಮದಿ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆಧುನಿಕತೆಯ ಪ್ರವಾಹದಲ್ಲಿ ಯಾವುದೇ ವಸ್ತು ಅಥವಾ ವಿಚಾರಗಳ ಬಳಕೆಯ ಅವಶ್ಯಕತೆಯ ಬಗ್ಗೆ ಪ್ರತಿಯೊಬ್ಬರೂ ಚಿಂತನೆ ನಡೆಸಬೇಕು. ವಸ್ತುಗಳು ಮನುಷ್ಯನನ್ನು ನಿಯಂತ್ರಿಸುವ ಸ್ಥಿತಿ ಬರಲು ಬಿಡಬಾರದು, ಇದಕ್ಕಾಗಿ ಮನಸ್ಸಿನ ಮೇಲೆ ಹತೋಟಿ ಸಾಧಿಸುವುದು ಅಗತ್ಯ ಎಂದರು.


ವಿದ್ಯಾರ್ಥಿಗಳು ಮಾನಸಿಕ ಕೀಳರಿಮೆ ದೂರ ಮಾಡಿಕೊಂಡು ಯಾವುದನ್ನೂ ಸಾಧಿಸಬಲ್ಲೆ ಎಂಬ ದೃಢತೆ ಹೊಂದಿದಾಗ ಎಲ್ಲಾ ಮಿತಿಗಳನ್ನು ಮೀರಿ ಸಾಧನೆ ಮಾಡಲು ಸಾಧ್ಯ. ಕಷ್ಟಗಳೇ ಮನುಷ್ಯನನ್ನು ಸಾಧಕರಾಗಲು ಪ್ರೇರೇಪಣೆ ನೀಡುತ್ತವೆ. ಸರಿಯಾದ ಮಾರ್ಗದರ್ಶನ ಹಾಗೂ ಪರಿಶ್ರಮದಿಂದ ಪ್ರತಿಯೊಬ್ಬರೂ ಗೆಲುವಿನ ಮೆಟ್ಟಿಲು ಏರಬಹುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾಲೇಜಿನ ಮನಃಶಾಸ್ತ್ರ ವಿಭಾಗದ ಆಶ್ರಯದಲ್ಲಿ ರೂಪಿಸಲಾಗಿರುವ ಆಪ್ತ ಸಮಾಲೋಚನಾ ಕೇಂದ್ರ ‘ಚಿತ್ತ ಚಿಕಿತ್ಸಾ’ವನ್ನು ಉದ್ಘಾಟಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಬಹುತೇಕರಿಗೆ ತಮ್ಮ ಶಕ್ತಿಯ ಅರಿವು ಇರುವುದಿಲ್ಲ, ಇದು ಅವರ ಸಾಧನೆಗೆ ಅಡ್ಡಿಯಾಗುತ್ತಿರುತ್ತದೆ.

ನಮ್ಮ ಶಕ್ತಿಯನ್ನು ನಾವು ಅರಿತುಕೊಂಡು ನಿರ್ದಿಷ್ಟ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಮಹತ್ತರ ಸಾಧನೆ ಮಾಡಲು ಸಾಧ್ಯ. ಐಕ್ಯೂ ಪರೀಕ್ಷೆಯ ಮೂಲಕ ನಮ್ಮನ್ನು ನಾವು ತಿಳಿದುಕೊಂಡು, ಹೆಚ್ಚಿನ ತರಬೇತಿ ಪಡೆದಾಗ ಯಶಸ್ಸು ಗಳಿಸಬಹುದು. ಭಾರತ ಹಲವು ವಿಚಾರಗಳ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದು, ಉತ್ಕೃಷ್ಟ ಭಾರತೀಯರ ನಿರ್ಮಾಣವಾಗಬೇಕಿದೆ ಎಂದರು.


ತೀರ್ಥರಾಮ ವಳಲಂಬೆ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ವಿವಿಧ ಸಂಸ್ಥೆಗಳ 400ಕ್ಕೂ ಹೆಚ್ಚು ಪಿಯು ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಐಕ್ಯೂ ಪರೀಕ್ಷಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ, ಅಂಬಿಕಾ ಸಿ.ಬಿ.ಎಸ್.ಇ. ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ., ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು ಉಪಸ್ಥಿತರಿದ್ದರು.


ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕುಮಾರ ಕಮ್ಮಜೆ ಸ್ವಾಗತಿಸಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ವಂದಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ನಿರೂಪಣೆ ಮಾಡಿದರು. ಐಕ್ಯೂಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಐಕ್ಯೂ ಪರೀಕ್ಷೆ ನಡೆಸಿದರು. ಅಂಬಿಕಾ ಮಹಾವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಸ್ಪರ್ಧಾ ವಿವರಗಳನ್ನು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments