ಪುತ್ತೂರು: ಹದತಪ್ಪಿದ ಆಹಾರಪದ್ದತಿ, ಪ್ಲಾಸ್ಟಿಕ್ ಸಹಿತ ರಾಸಾಯನಿಕಗಳ ಅತಿಯಾದ ಬಳಕೆ, ಮಾದಕ ದ್ರವ್ಯಗಳ ವ್ಯಸನ ಮಹಾಮಾರಿ ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣ ಎಂದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಸರ್ಜಿಕಲ್ ಆಂಕಾಲಜಿಸ್ಟ್ ಡಾ.ಕಾರ್ತಿಕ್.ಕೆ.ಎಸ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿ0ಗ್ ಎಂಡ್ ಟೆಕ್ನಾಲಜಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯೂತ್ ರೆಡ್ ಕ್ರಾಸ್, ಪೇರೆಂಟ್ ರಿಲೇಶನ್ ಸೆಲ್, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಹಾಗೂ ಸೀಡ್ಸ್ ಆಫ್ ಹೋಪ್ ಮುಳಿಯ ಫೌಂಡೇಶನ್ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ದಿನದ ಪ್ರಯುಕ್ತ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ಕೂದಲು ದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕ್ಯಾನ್ಸರ್ ಎಂದಾಕ್ಷಣ ಧೃತಿಗೆಡುವ ಅಗತ್ಯವಿಲ್ಲ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದರೆ ಇದನ್ನು ಸಂಪೂರ್ಣ ಗುಣಪಡಿಸಬಹುದು ಎಂದರು. ಅದಕ್ಕಾಗಿ ನಿಯಮಿತವಾದ ಆರೋಗ್ಯ ತಪಾಸಣೆ ಅಗತ್ಯ ಎಂದರು. ಯಾವುದೇ ರೋಗವಾದರೂ ಸ್ವಯಂ ವೈದ್ಯ ಪದ್ದತಿಯನ್ನು ಅಳವಡಿಸದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ನುಡಿದರು.

ಸೀಡ್ಸ್ ಆಫ್ ಹೋಪ್ ಸಂಸ್ಥೆಯ ಇಶಾ ಸುಲೋಚನ ಮುಳಿಯ ಹಾಗೂ ಕಾವ್ಯ ಶೆಟ್ಟಿ ಕೂದಲು ದಾನದ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ಕ್ಯಾನ್ಸರ್ ರೋಗಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸದಲ್ಲಿ ಸಂಸ್ಥೆಯು ನಿರತವಾಗಿದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಹಾಗೂ ಪುತ್ತೂರಿನ ಮಹಾವೀರ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಸುರೇಶ್ ಪುತ್ತೂರಾಯ ಮಾತನಾಡಿ ಕೂದಲು ದಾನ ಮಾಡುವ ವಿದ್ಯಾರ್ಥಿಗಳ ನಿರ್ಧಾರವನ್ನು ಶ್ಲಾಘಿಸಿದರು. ಮಾನವೀಯ ಮೌಲ್ಯಗಳೇ ಮರೆತುಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ವಿದ್ಯಾರ್ಥಿಗಳು ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಸಮಾಜಕ್ಕೆ ಸಹಕಾರಿಯಾಗುವ ಕೆಲಸದಲ್ಲಿ ನಿರತರಾಗಬೇಕು ಎಂದರು.
ಪ್ರಾ0ಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಳಿಯ ಫೌಂಡೇಶನ್‌ನ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.

ಇಂಜಿನಿಯರಿ0ಗ್ ಕಾಲೇಜಿನ 3 ಉಪನ್ಯಾಸಕರು ಮತ್ತು 10 ವಿದ್ಯಾರ್ಥಿನಿಯರು ಹಾಗೂ ವಿವೇಕಾನಂದ ಪದವಿ ಕಾಲೇಜಿನ 3 ವಿದ್ಯಾರ್ಥಿನಿಯರು ಕೂದಲು ದಾನ ಮಾಡಿದರು.
ಐಎಸ್‌ಟಿಇ ಸಂಯೋಜಕ ಡಾ.ಮನುಜೇಶ್.ಬಿ.ಜೆ ಪ್ರಾಸ್ತಾವನೆಗೈದರು. ವಿದ್ಯಾರ್ಥಿಗಳಾದ ಶ್ರೀನಿಧಿ ಸ್ವಾಗತಿಸಿ,
ಸ್ನೇಹಾ ವಂದಿಸಿದರು. ಸುಪ್ರೀತ್.ಜಿ.ಎಸ್ ಕಾರ್ಯಕ್ರಮ ನಿರ್ವಹಿಸಿದರು.
