ಖ್ಯಾತ ಕೀರಿಕ್ಕಾಡು ಮನೆತನದ ಶ್ರೀ ವಿಶ್ವವಿನೋದ ಬನಾರಿ ಅವರು ತೆಂಕುತಿಟ್ಟು ಯಕ್ಷಗಾನದ ಅನುಭವೀ ಹಿರಿಯ ಕಲಾಸಾಧಕರು. ಕಲಾಕ್ಷೇತ್ರದಲ್ಲಿ ಇವರು ಸುಮಾರು ಐದೂವರೆ ದಶಕಗಳ ಅನುಭವಿ. ಭಾಗವತರಾಗಿ, ಗುರುವಾಗಿ, ಸಂಘಟಕರಾಗಿ, ಪ್ರಸಂಗಕರ್ತರಾಗಿ ಇವರು ಯಕ್ಷಗಾನ ವಲಯದಲ್ಲಿ ಪರಿಚಿತರು. ನಗುಮೊಗದ, ಸರಳ, ಸಜ್ಜನ, ನಿಗರ್ವಿ ವ್ಯಕ್ತಿತ್ವದ ಇವರಿಗೀಗ ಎಪ್ಪತ್ತಾರನೆಯ ವಯಸ್ಸು.
ಕಲಾಭಿಮಾನಿಗಳು, ಶಿಷ್ಯಂದಿರು, ಬಂಧುಮಿತ್ರರೆಲ್ಲಾ ಶ್ರೀಯುತರ ಎಪ್ಪತ್ತೈದರ ಸಂಭ್ರಮಾಚರಣೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಚಾರ. ನವೆಂಬರ್ 13ರಂದು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಈ ಸತ್ಕಾರ್ಯವು ನಡೆಯಲಿದೆ. ಅಂದು ಬೆಳಗಿನಿಂದ ಸಂಜೆಯ ತನಕ ಯಕ್ಷಗಾನ ಕಲಾ ಕಾರ್ಯಕ್ರಮಗಳೊಂದಿಗೆ ಈ ಕಾರ್ಯಕ್ರಮವು ನಡೆಯುತ್ತದೆ.
ಅನುಭವೀ ಕಲಾಸಾಧಕರಾದ ಶ್ರೀ ವಿಶ್ವವಿನೋದ ಅವರ ಹುಟ್ಟೂರು ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಬನಾರಿ. 1947 ಮೇ 11ರಂದು ಕೀರಿಕ್ಕಾಡು ಮಾಸ್ತರ್ ಶ್ರೀ ವಿಷ್ಣು ಭಟ್ ಮತ್ತು ಶ್ರೀಮತಿ ಪರಮೇಶ್ವರಿ ಅಮ್ಮ ದಂಪತಿಗಳ ಪುತ್ರನಾಗಿ ಜನನ. ಓದಿದ್ದು ದೇಲಂಪಾಡಿ ಸರಕಾರಿ ಶಾಲೆಯಲ್ಲಿ. (ಒಂದರಿಂದ ಐದನೇ ತರಗತಿ) ಅಡ್ಯನಡ್ಕ ಶಾಲೆಯಲ್ಲಿ (ಆರರಿಂದ ESLC ವರೆಗೆ) ಬಳಿಕ ವಿಟ್ಲ ಪ್ರೌಢಶಾಲೆಯಲ್ಲಿ.
ಯಕ್ಷಗಾನವು ಕೀರಿಕ್ಕಾಡು ಮಾಸ್ತರರ ಪುತ್ರನಾಗಿ ರಕ್ತಗತವಾಗಿಯೇ ಬಂದಿತ್ತು. ತಂದೆಯವರು ಕಲಾವಿದನಾಗಿ, ಸಂಘಟಕನಾಗಿ, ಗುರುವಾಗಿ ನಡೆಸುತ್ತಿದ್ದ ಯಕ್ಷಗಾನ ಚಟುವಟಿಕೆಗಳನ್ನು ನೋಡುತ್ತಾ ಬೆಳೆದವರು. ಇದರಿಂದಾಗಿ ಕಲಾಸಕ್ತಿಯುಂಟಾಗಿ ತೊಡಗಿಸಿಕೊಳ್ಳಬೇಕೆಂಬ ಆಸೆಯಾಗಿತ್ತು. ಮಗನ ಯಕ್ಷಗಾನಾಸಕ್ತಿಯನ್ನು ಕೀರಿಕ್ಕಾಡು ಮಾಸ್ತರರು ಗಮನಿಸಿ ಪ್ರೋತ್ಸಾಹವನ್ನೂ, ಅವಕಾಶವನ್ನೂ ನೀಡಿದ್ದರು.
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಯಕ್ಷಗಾನ ನಾಟಕ ಪ್ರದರ್ಶನದಲ್ಲಿ ಬಾಲಕೃಷ್ಣನಾಗಿ ರಂಗಪ್ರವೇಶ. (ಪೂತನೀ ಸಂಹಾರದ ವರೆಗೆ) ಬಳಿಕ ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ಸಿತಕೇತ, ಸಂಪೂರ್ಣ ರಾಮಾಯಣದಲ್ಲಿ ಅಂಗದ, ಮೇಧಿನೀ ನಿರ್ಮಾಣದಲ್ಲಿ ವಿಷ್ಣು ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದರು. ತರಬೇತಿ ಪಡೆಯುವ ವಿದ್ಯಾರ್ಥಿಗಳಿಗಾಗಿ ನಡೆಸುವ ತಾಳಮದ್ದಳೆಗಳಲ್ಲೂ ಅರ್ಥ ಹೇಳಿದ್ದರು. ಇದರಿಂದ ಅರ್ಥಜ್ಞಾನ ಬೆಳೆಯಲು ಅವಕಾಶವಾಗಿತ್ತು.
ಬಳಿಕ ಅಡ್ಯನಡ್ಕ ಶಾಲೆಯಲ್ಲಿ ಓದುತ್ತಿರುವಾಗಲೂ ತಾಳಮದ್ದಳೆಗಳಲ್ಲಿ ಅರ್ಥಹೇಳಲು ಅವಕಾಶಗಳು ಸಿಕ್ಕಿತ್ತು. ವಿಟ್ಲ ಶಾಲೆಯ ವಿದ್ಯಾರ್ಥಿಯಾಗಿರುವಾಗ ಭಾಷಣ ಕಲೆಯನ್ನು ಅಭ್ಯಸಿಸಿ ತೊಡಗಿಸಿಕೊಂಡಿದ್ದರು. ವಿಟ್ಲ ಪ್ರೌಢಶಾಲಾ ವಿದ್ಯಾರ್ಜನೆಯ ಬಳಿಕ ಬನಾರಿಯಲ್ಲಿ ಕೃಷಿ ಮತ್ತು ಯಕ್ಷಗಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಣ್ಣ ಶ್ರೀ ವನಮಾಲಾ ಕೇಶವ ಭಟ್ಟರು ಅಧ್ಯಾಪಕರಾಗಿ, ಜತೆಗೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವನ್ನು ಮುನ್ನಡೆಸುತ್ತಿದ್ದರು. ಅವರ ಜತೆ ವಿಶ್ವವಿನೋದರೂ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಅದೇ ಸಮಯಕ್ಕೆ ಪತ್ರಿಕೆಯೊಂದರಲ್ಲಿ “ಮನೆಯಲ್ಲೇ ಕುಳಿತು ವೈದ್ಯರಾಗಿ” ಎಂಬ ಜಾಹೀರಾತನ್ನು ಓದಿದ್ದರು. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಅಂಚೆ ಶಿಕ್ಷಣದ ಮೂಲಕ ಬೆಂಗಳೂರಿನ ಎ.ಎಂ. ರತ್ನಂ ಅವರ ಹೋಮಿಯೋ ಕರೆಸ್ಪಾಂಡೆನ್ಸ್ ಕಾಲೇಜಿನಿಂದ ಹೋಮಿಯೋಪಥಿಯಲ್ಲಿ ಎಂ.ಬಿ.ಎಚ್.ಎಸ್ ಪದವಿಯನ್ನು ಪಡೆದರು. ಆ ಸಂಸ್ಥೆಯು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಡೆಸಿದ ಪ್ರಾಯೋಗಿಕ ತರಬೇತಿಯಲ್ಲೂ ಭಾಗವಹಿಸಿ ರೋಗಿಗಳನ್ನು ಶುಶ್ರೂಷಿಸುವ, ಔಷಧಿ ನೀಡುವ ಕ್ರಮವನ್ನು ಅರಿತುಕೊಂಡರು.
ಅದೇ ಸಮಯಕ್ಕೆ ಅಣ್ಣ ಶ್ರೀ ರಮಾನಂದ ಬನಾರಿ ಅವರು ಎಂ.ಬಿ.ಬಿ.ಎಸ್ ಪೂರೈಸಿ ಬಂದಿದ್ದರು. ಅವರು ಆದೂರು,ಬೋವಿಕ್ಕಾನ ಮೊದಲಾದೆಡೆ ಸರಕಾರೀ ವೈದ್ಯರಾಗಿ ಸೇವೆ ಸಲ್ಲಿಸಿದರು. ಬಳಿಕ ಮಂಜೇಶ್ವರದಲ್ಲಿ ಕ್ಲಿನಿಕ್ ತೆರೆದಿದ್ದರು. ಈ ಸಂದರ್ಭಗಳಲ್ಲಿ ಶ್ರೀ ವಿಶ್ವವಿನೋದ ಅವರು ಅಣ್ಣ ಡಾ. ರಮಾನಂದ ಬನಾರಿ ಅವರ ಸಹಾಯಕರಾಗಿ ಅನುಭವಗಳನ್ನು ಗಳಿಸಿಕೊಂಡರು. 1968ರಿಂದ ಬನಾರಿ ಮನೆಯಲ್ಲಿದ್ದು ವೈದ್ಯರಾಗಿಯೂ ಸೇವೆ ಸಲ್ಲಿಸಲು ಆರಂಭ. ಸುಮಾರು 54 ವರ್ಷಗಳಿಂದ ಈ ಕಾಯಕವನ್ನು ನಡೆಸುತ್ತಿದ್ದಾರೆ.
ಶ್ರೀ ವಿಶ್ವವಿನೋದ ಬನಾರಿ ಅವರಿಗೆ ಯಕ್ಷಗಾನ ಹಿಮ್ಮೇಳದಲ್ಲಿ ಆಸಕ್ತಿ. ನಡುಮನೆ ಜತ್ತಪ್ಪ ರೈಗಳು ಅಣ್ಣ ವನಮಾಲಾ ಕೇಶವ ಭಟ್ಟರಿಗೆ ಭಾಗವತಿಕೆ ಪಾಠ ಮಾಡುವಾಗ ಗಮನವಿಟ್ಟು ಕೇಳುತ್ತಿದ್ದರು. ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಬನಾರಿಯಲ್ಲಿ 1968ರಲ್ಲಿ ತರಬೇತಿ ಆರಂಭಿಸಿದ್ದರು. ಅವರ ಸೂಚನೆಯಂತೆ ಮಾಂಬಾಡಿಗೆ ತೆರಳಿ ಮಾಂಬಾಡಿ ಶ್ರೀ ನಾರಾಯಣ ಭಾಗವತರಿಂದ ಭಾಗವತಿಕೆ ಅಭ್ಯಾಸ. ಬಳಿಕ ಪ್ರದರ್ಶನಗಳಲ್ಲಿ ಭಾಗವಹಿಸುವಾಗ ಖ್ಯಾತ ಭಾಗವತ ತಲೆಂಗಳ ಶಂಭಟ್ಟರ ನಿರ್ದೇಶನವೂ ದೊರಕಿತ್ತು. ನಂತರದ ದಿನಗಳಲ್ಲಿ ಇವರ ಪುತ್ರ ಮದ್ದಳೆಗಾರರಾದ ತಲೆಂಗಳ ಗೋಪಾಲಕೃಷ್ಣ ಭಟ್ಟರ ಸಹಕಾರವೂ ದೊರೆತಿತ್ತು.
ಶ್ರೀ ವಿಶ್ವವಿನೋದ ಬನಾರಿ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಮೇಳದ ತಿರುಗಾಟ ನಡೆಸದಿದ್ದರೂ ಉತ್ತಮ ಭಾಗವತರೆಂಬ ಹೆಸರು ಗಳಿಸಿದ್ದರು. 1981ರಲ್ಲಿ ನಡೆದ ಅಪಘಾತದ ಬಳಿಕ ಪ್ರದರ್ಶನಗಳಲ್ಲಿ ಹಾಡುವುದನ್ನು ಅನಿವಾರ್ಯವಾಗಿ ಕಡಿಮೆ ಮಾಡಬೇಕಾಗಿ ಬಂದಿತ್ತು. ಆದರೂ ಕಲಿಕಾಸಕ್ತರಿಗೆ ಭಾಗವತಿಕೆಯನ್ನು ಕಲಿಸು ಎಂಬ ಸಲಹೆ ತಂದೆಯವರಿಂದ ಬಂದಿತ್ತು. ಕಲಿಕಾಸಕ್ತರಿಗೆ ತರಬೇತಿ ಜತೆಗೆ ಪ್ರಸಂಗ ರಚನಾ ಕಾಯಕದಲ್ಲೂ ತೊಡಗಿಸಿಕೊಂಡರು.
1982ರಲ್ಲಿ “ಸೌಭಾಗ್ಯ ವಿಜಯ” ಎಂಬ ಪ್ರಸಂಗ ರಚಿಸಿದ್ದರು. ಇದು ಆದಿ ಸುಬ್ರಹ್ಮಣ್ಯ ಮೇಳದಲ್ಲಿ ಜಯಭೇರಿ ಬಾರಿಸಿದ ಪ್ರಸಂಗ. ಭಾಗವತರಾಗಿ ಶ್ರೀ ವಿಶ್ವವಿನೋದ ಬನಾರಿ ಅವರಿಗೆ ಅನೇಕ ಪ್ರಸಂಗಗಳ ನಡೆ, ಪದ್ಯಗಳು ಕಂಠಪಾಠವಾಗಿತ್ತು. ಶ್ರೀಯುತರು ರಚಿಸಿದ ಎರಡನೇ ಪ್ರಸಂಗ ಆದಿಚುಂಚನ ಕ್ಷೇತ್ರ ಮಹಾತ್ಮೆ. ಬಳಿಕ ‘ಶಬರಿಮಲೆ ಅಯ್ಯಪ್ಪ’ ಎಂಬ ಪ್ರಸಂಗ ರಚನೆ. ಬಳಿಕ ಕಲಾಪೋಷಕ, ಸಂಪಾಜೆ ಯಕ್ಷೋತ್ಸವದ ರೂವಾರಿ ಶ್ರೀ ಡಾ.ಟಿ. ಶ್ಯಾಮ ಭಟ್ಟರ ಕೋರಿಕೆಯಂತೆ ತೊಡಿಕಾನ ಕ್ಷೇತ್ರ ಮಹಾತ್ಮೆ ಎಂಬ ಪ್ರಸಂಗವನ್ನೂ ರಚಿಸಿದ್ದರು.
ಇವರು ರಚಿಸಿದ ಕೃತಿಗಳು ಈ ರೀತಿ ಇವೆ. ಶ್ರೀ ಶಬರಿಮಲೆ ಅಯ್ಯಪ್ಪ, ತೊಡಿಕಾನ ಕ್ಷೇತ್ರ ಮಹಾತ್ಮೆ, ದಕ್ಷಾಧ್ವರ (ಹವ್ಯಕ ಭಾಷೆ), ಮಾಗಧ ವಧೆ (ಹವ್ಯಕ ಭಾಷೆ), ಇವಿಷ್ಟು ಪ್ರಕಟಿತ ಕೃತಿಗಳು. ಅಪ್ರಕಟಿತ ಕೃತಿಗಳು – ಸೌಭಾಗ್ಯ ವಿಜಯ, ಆಲಿಂಜ ವೈಭವ, ಆದಿಚುಂಚನಗಿರಿ ಮಹಾತ್ಮೆ, ನಿಮಿಷಾಂಬ ದೇವಿ ಮಹಾತ್ಮೆ, ಪಂಚವಟಿ (ಮಲಯಾಳಂ ಮತ್ತು ತುಳು), ಗ್ರಾಮಾಭ್ಯುದಯ, ಯಕ್ಷಗಾನ ತುಂಡು ಪದ್ಯಗಳ ಸಂಕಲನ (ಕಿಸೆಪದ್ಯ), ಅತಿಕಾಯ ಕಾಳಗ (ಅರ್ಥಸಹಿತ), ಅಂಗದ ಸಂಧಾನ (ಅರ್ಥ ಸಹಿತ), ಮದ್ಯಾಸುರ ಕಾಳಗ, ವೀರರಾಣಿ ಅಬ್ಬಕ್ಕ ಮತ್ತು ಕಿತ್ತೂರರಾಣಿ ಚೆನ್ನಮ್ಮ (ಇವೆರಡೂ ದೂರದರ್ಶನದಲ್ಲಿ ಪ್ರಸಾರಿತ), ಪರಿಸರ ಸಂರಕ್ಷಣೆ, ಗೋಕರ್ಣ ಕ್ಷೇತ್ರ ಮಹಾತ್ಮೆ, ಕೊರೋನಾ ಜಾಗೃತಿ ಯಕ್ಷಗಾನ ಇತ್ಯಾದಿ.
ಶ್ರೀ ವಿಶ್ವವಿನೋದ ಅವರು ಸುಳ್ಯ ವನಜ ರಂಗಮನೆ, ಕೋಡ್ಲ ಗಣಪತಿ ಭಟ್ಟರ ಭುವನೇಶ್ವರೀ ಯಕ್ಷಗಾನ ಕಲಾಸಂಘ ಸುಳ್ಯ, ಮಂಗಳೂರು ಚಿಲಿಂಬಿ, ತಲಪಾಡಿ ಶಾರದಾ ವಿದ್ಯಾಲಯ ಮೊದಲಾದ ಕಡೆ ಭಾಗವತಿಕೆ ತರಬೇತಿಯನ್ನು ನೀಡಿರುತ್ತಾರೆ. ಶ್ರೀಯುತರ ಕಲಾಚಟುವಟಿಕೆಗಳಿಗೆ ತಂದೆ ಕೀರಿಕ್ಕಾಡು ಮಾಸ್ತರರ, ಅಣ್ಣಂದಿರಾದ ಶ್ರೀ ವನಮಾಲಾ ಕೇಶವ ಭಟ್ಟರ ಮತ್ತು ಡಾ. ರಮಾನಂದ ಬನಾರಿ ಅವರ ಆಶೀರ್ವಾದ, ಪ್ರೋತ್ಸಾಹವು ಇತ್ತು. ಪ್ರಸ್ತುತ ಅಣ್ಣ ಡಾ. ರಮಾನಂದ ಬನಾರಿ ಅವರ ಜತೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಮತ್ತು ಅಧ್ಯಯನ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ.
ಶ್ರೀ ವಿಶ್ವವಿನೋದ ಬನಾರಿ ಅವರ ಪತ್ನಿ ಶ್ರೀಮತಿ ಉಮಾ ಪರಮೇಶ್ವರಿ. (1974ರಲ್ಲಿ ವಿವಾಹ). ಇವರಿಗೆ ನಾಲ್ಕು ಮಂದಿ ಮಕ್ಕಳು. ಪ್ರಥಮ ಪುತ್ರಿ ಶ್ರೀಮತಿ ಸುಮನಾರ್ಚಿನಿ. ಇವರ ಪತಿ ಶ್ರೀ ಶ್ಯಾಮಪ್ರಸಾದ. ದ್ವಿತೀಯ ಪುತ್ರಿ ಶ್ರೀಮತಿ ಗಾಯತ್ರಿ. ಇವರ ಪತಿ ಶ್ರೀ ಶಂಭಯ್ಯ. ತೃತೀಯ ಪುತ್ರಿ ಶ್ರೀಮತಿ ಸೌಜನ್ಯ. ಇವರ ಪತಿ ಶ್ರೀ ಶ್ಯಾಮಪ್ರಕಾಶ.
ಪುತ್ರ ಶ್ರೀ ವಿಷ್ಣುಶರಣ. ಇವರು ಕೃಷಿಕರು ಮತ್ತು ಯಕ್ಷಗಾನ ಚೆಂಡೆವಾದಕರು. ಇವರ ಪತ್ನಿ ಶ್ರೀಮತಿ ಸರೋಜಿನಿ. ಇವರು ಖಂಡಿಗೆಮೂಲೆ ಯಕ್ಷಸಿರಿ ಕಲಾವೇದಿಕೆಯ ಶ್ರೀ ಶ್ಯಾಮ ಭಟ್ಟರ ಪುತ್ರಿ. ವಿದ್ಯಾರ್ಥಿನಿಯಾಗಿರುವಾಗಲೇ ನಾಟ್ಯ ಕಲಿತು ವೇಷ ಮಾಡುತ್ತಿದ್ದರು. ಭರತನಾಟ್ಯವನ್ನೂ ಕಲಿತಿರುತ್ತಾರೆ. ಪ್ರಸ್ತುತ ಕಲಿಕಾಸಕ್ತರಿಗೆ ನಾಟ್ಯ ತರಬೇತಿಯನ್ನು ನೀಡುತ್ತಿದ್ದಾರೆ. ಕಲಾಸಾಧಕ, ನಗುಮೊಗದ ಶ್ರೀ ವಿಶ್ವವಿನೋದ ಬನಾರಿ ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಅಭಿನಂದನೆಗಳು.
ಶ್ರೀ ವಿಶ್ವವಿನೋದ ಬನಾರಿ, ‘ಬನಸಿರಿ’, ಕೊಳಂಬೆ, ಅಂಚೆ ಪಂಜಿಕಲ್ಲು -671543, ಕಾಸರಗೋಡು, ಮೊಬೈಲ್: 9483922201
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions