ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ವಿದ್ಯಾರ್ಥಿಗಳು ಬುಧವಾರ ಅಪರಾಹ್ನದವರೆಗೆ ತರಗತಿಗೆ ಬಂದಿರಲಿಲ್ಲ. ಎಲ್ಲ ವಿದ್ಯಾರ್ಥಿಗಳು ಶಾಲೆಯ ಎದುರಿನ ಸಭಾಂಗಣದಲ್ಲಿ ಜಮಾಯಿಸಿದ್ದರು. ಗೌಜು, ಗದ್ದಲ ಸುತ್ತಮುತ್ತಲಿನವರ ಕಿವಿಗೆ ಅಪ್ಪಳಿಸುತ್ತಿತ್ತು.

ಇದೇನು ಮಕ್ಕಳೆಲ್ಲ ಸೇರಿ ತರಗತಿ ಬಹಿಷ್ಕಾರ ಮಾಡಿದರೇ ಅಂತ ಯೋಚಿಸಬೇಡಿ. ಮಕ್ಕಳೆಲ್ಲ ಈ ದಿನ ಉದ್ಯಮಿಗಳಾಗಿದ್ದರು! ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವ ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅರ್ಧ ದಿನ ವ್ಯಾಪಾರ ವಹಿವಾಟು ನಡೆಸುವಂತೆ ಕರೆ ನೀಡಿತ್ತು. ಪರಿಣಾಮವಾಗಿ ಶಾಲೆಯ ಎದುರಿನ ವಿಶಾಲವಾದ ಶ್ರೀ ಶಂಕರ ಸಭಾಭವನದಲ್ಲಿ ಭರ್ತಿ ಇಪ್ಪತ್ತನಾಲ್ಕು ಭಿನ್ನ ಭಿನ್ನ ವ್ಯಾಪಾರ ಕೇಂದ್ರಗಳು ತಲೆ ಎತ್ತಿ ನಿಂತಿದ್ದವು.
ಸ್ಯಾ0ಡ್‌ವಿಚ್, ದೋಸೆ, ಬಿಸಿ ಬಿಸಿ ಬಜ್ಜಿ, ಕೇಕ್, ಸಮೋಸಾ, ಪಾನಿಪುರಿ, ಚರುಂಬುರಿ, ಬರ್ಫಿ, ಬರ್ಗರ್‌ನಂತಹ ತಿಂಡಿ ತಿನಿಸುಗಳ ಸ್ಟಾಲ್‌ಗಳು ನೆರೆದವರನ್ನು ಕೈಬೀಸಿ ಕರೆಯುತ್ತಿದ್ದವು. ಇನ್ನು ಎಳನೀರು, ಮಜ್ಜಿಗೆ, ವಿವಿಧ ಬಗೆಯ ಜ್ಯೂಸ್, ರೆಡಿಮೇಡ್ ತಂಪು ಪಾನೀಯಗಳೇ ಮೊದಲಾದ ಪಾನೀಯಗಳು ಆಗಮಿಸಿದವರ ಬಾಯಾರಿಕೆಯನ್ನು ತಣಿಸುತ್ತಿದ್ದವು.
ಇನ್ನು ಮಹಿಳೆಯರ ಕಿವಿ, ಮೂಗಿನ ಆಭರಣಗಳು, ಎಲೆಕ್ಟ್ರಿಕ್ ಸಾಧನಗಳು, ಪುಸ್ತಕಗಳು, ಕೀ ಪಂಚ್‌ಗಳು ಕ್ಷಣಮಾತ್ರದಲ್ಲಿ ಬಿಕರಿಯಾದವು. ಅಲಂಕಾರಿಕ ಗಿಡಗಳು, ಅಲಂಕಾರಿಕ ಕೈ ಕುಸುರಿಗಳು, ಟೇಬಲ್ ಡೆಕರೇಟಿವ್ ವಸ್ತುಗಳೇ ಮೊದಲಾದವುಗಳು ಜನಮನ ಸೆಳೆದವು. ರಿಂಗ್ ಎಸೆತ, ಚೆಂಡೆಸೆತ, ಬಾಣ ಎಸೆತದಂತಹ ಆಟಗಳು ಹಾಗೂ ಗೆದ್ದವರಿಗೆ ಬಹುಮಾನಗಳು ಯುವಸಮೂಹವನ್ನು ಹುಚ್ಚೆದ್ದು ಆಡುವಂತೆ ಮಾಡಿದವು.
ಆಗಮಿಸಿದವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೇ ಇದ್ದುದರಿಂದ ಇಂತಹ ಆಟದ ಸ್ಟಾಲ್ ಗಳು ಭರ್ಜರಿ ವಹಿವಾಟು ನಡೆಸಿದವು.
ಈ ಮಧ್ಯೆ ಮನರಂಜನೆಯ ಕೊಠಡಿಯಂತೂ ಹೌಸ್ ಫುಲ್! ಹೌದು, ಕೊಠಡಿಯೊಂದರಲ್ಲಿ ನಸುಗತ್ತಲೆಯ ವಾತಾವರಣ ಸಿದ್ಧಪಡಿಸಿ ಆರು ಮಂದಿ ವಿದ್ಯಾರ್ಥಿಗಳು ಜೋಕರ್‌ಸಹಿತ ವಿವಿಧ ವೇಷ ಧರಿಸಿ ಆಗಮಿಸಿದವರನ್ನು ನಗಿಸುವುದೇ ಈ ಕೊಠಡಿಯ ವಿಶೇಷತೆ.
ಇದರ ಪ್ರವೇಶ ದರ 10ರೂಪಾಯಿ. ಒಳಗೆ ಬಂದವರಿಗೆ ಕಡ್ಲೆಕಾಯಿ ಉಚಿತ! ಅಚ್ಚರಿಯ ಸಂಗತಿಯೆ0ದರೆ ಕೆಲವು ವ್ಯಾಪಾರ ಕೇಂದ್ರಗಳ ಆದಾಯ ಐದಾರು ಸಾವಿರವನ್ನೂ ಮೀರಿಸಿತ್ತು! ಅಂದಹಾಗೆ ಲಾಭ ನಷ್ಟ ಏನೇ ಇದ್ದರೂ ಅದು ಸ್ಟಾಲ್ ಇಟ್ಟ ವಿದ್ಯಾರ್ಥಿ ಉದ್ಯಮಿಗಳಿಗೇ! ಸ್ಟಾಲ್‌ನಲ್ಲಿ ಉಳಿಕೆಯಾದ ವಸ್ತುಗಳ ಹೊಣೆಯೂ ಅವರದ್ದೇ.
‘ಮಕ್ಕಳಲ್ಲಿ ಉದ್ಯಮ ಶೀಲತೆಯ ಕಲ್ಪನೆ ಬೆಳೆಯಬೇಕು. ಸ್ವಂತ ವ್ಯವಹಾರ. ಸ್ಟಾಟ್ ಅಪ್ ಮಾಡುವ ಮನಸ್ಥಿತಿ ಎಳೆಯ ಹಂತದಿ0ದಲೇ ಬೆಳೆಯಬೇಕು. ವಿದೇಶದ ಯಾವುದೋ ಕಂಪೆನಿಗೆ ಹೋಗಿ ಶರಣಾಗುವ ಬದಲು ತಾನೇ ಸ್ವಯಂ ಉದ್ಯಮ ನಿರ್ಮಿಸಿ ಹತ್ತಾರು ಜನರಿಗೆ ಉದ್ಯೋಗದಾತ ಎನಿಸುವ ಕಲ್ಪನೆ ಮಕ್ಕಳಲ್ಲಿ ಬಂದರೆ ಮುಂದೆ ಅದು ನೂತನ ಉದ್ಯಮಗಳಿಗೆ ತಳಹದಿಯಾಗಬಹುದು. ಆದ್ದರಿಂದಲೇ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂಬುದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರ ಮಾತು.

ತೆರೆಮರೆಯ ಸಿದ್ಧತೆ:
ಈ ಕಾರ್ಯಕ್ರಮ ಆಯೋಜನೆಯಲ್ಲಿ ಆಡಳಿತ ಮಂಡಳಿಯ ಜತೆಗೆ ಶಿಕ್ಷಕ ಶಿಕ್ಷಕೇತರ ವೃಂದ ಹಾಗೂ ಹೆತ್ತವರ ಉತ್ಸಾಹವೂ ಪ್ರಮುಖ ಪಾತ್ರ ವಹಿಸಿತ್ತು. ಐದನೆಯ ತರಗತಿಯಿಂದ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಸ್ಟಾಲ್ ನಡೆಸುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಪ್ರತಿ ತರಗತಿಯಿಂದ ನಾಲ್ಕು ಸ್ಟಾಲ್ ರೂಪಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಅದರನ್ವಯ ವಿದ್ಯಾರ್ಥಿಗಳೇ ತಮ್ಮ ತಮ್ಮ ತಂಡವನ್ನು ರೂಪಿಸಿಕೊಂಡು, ತಮ್ಮದೇ ಯೋಜನೆಯ ಸ್ಟಾಲ್ ನಡೆಸುವುದಕ್ಕೆ ಸಿದ್ಧರಾಗಿ ನಿಂತಿದ್ದರು.
ಕೆಲವರು ತಾವೇ ಮನೆಯಲ್ಲಿ ಸಿದ್ಧಪಡಿಸಿದ ವಸ್ತುಗಳ ಸ್ಟಾಲ್ ಅನ್ನು ಸಿದ್ಧಗೊಳಿಸಿದರೆ ಮತ್ತೆ ಕೆಲವರು ವಸ್ತುಗಳನ್ನು ಬೇರೆಡೆಯಿಂದ ತಂದು ವ್ಯಾಪಾರಕ್ಕೆ ಅಣಿಯಾಗಿದ್ದರು. ಹೀಗೆ ಒಟ್ಟು 220 ಮಂದಿ ವಿದ್ಯಾರ್ಥಿಗಳು ಸೇರಿಕೊಂಡು 24 ಸ್ಟಾಲ್ ಅನ್ನು ರೂಪಿಸಿ ವ್ಯಾಪಾರಕ್ಕೆ ಅಣಿಯಾಗಿದ್ದರು. ಈ ಸ್ಟಾಲ್ ವೀಕ್ಷಣೆ ಹಾಗೂ ಖರೀದಿಗಾಗಿ ಅಂಬಿಕಾ ವಿದ್ಯಾಲಯ ಅಲ್ಲದೆ ಅಂಬಿಕಾ ಪದವಿಪೂರ್ವ, ಪದವಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ವೃಂದ, ಹೆತ್ತವರು ಮಾತ್ರವಲ್ಲದೆ ಸಮಾಜದ ಮಂದಿ ಭಾಗಿಯಾದದ್ದು ವಿಶೇಷವೆನಿಸಿತು.
‘ಈ ‘ಮಾರ್ಕೆಟ್ ಫೆಸ್ಟ್’ ಮಾಡುವಲ್ಲಿ ಹೆತ್ತವರ ಸಹಕಾರ ದೊಡ್ಡದು. ಮಕ್ಕಳಿಗೆ ಹಣಕಾಸಿನ ವ್ಯವಸ್ಥೆಯನ್ನು ಮಾಡುವ ಮೂಲಕ ಯೋಜನೆಯನ್ನು ಬೆಂಬಲಿಸಿದ್ದಾರೆ. ಹಾಗಾಗಿಯೇ ಕಾರ್ಯಕ್ರಮ ಅತ್ಯಂತ ತೃಪ್ತಿದಾಯಕವಾಗಿ ನಡೆದಿದೆ. ಅಂತೆಯೇ ಆಡಳಿತ ಮಂಡಳಿ ಹಾಗೂ ಶಿಕ್ಷಕ ಶಿಕ್ಷಕೇತರ ಬಳಗದ ಸಹಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆ.
ವ್ಯಾಪಾರ ಹೇಗಿರುತ್ತದೆ, ಲಾಭ ನಷ್ಟ ಹೇಗಾಗುತ್ತದೆ, ವಿವಿಧ ಬಗೆಯ ಮಾಲಿಕತ್ವಗಳ ಕಲ್ಪನೆ ಈ ಕಾರ್ಯಕ್ರಮದಿಂದ ಮಕ್ಕಳಿಗೆ ಅರಿವಾಗಿದೆ’ ಎನ್ನುವುದು ಪ್ರಾಂಶುಪಾಲೆ ಮಾಲತಿ ಡಿ ಅವರ ಮಾತುಗಳು.


