Saturday, January 18, 2025
Homeಸುದ್ದಿಸಿರಿಬಾಗಿಲಿನಲ್ಲಿ ಅರ್ಥಾಂತರಂಗ - 14 ಉದ್ಘಾಟನೆ

ಸಿರಿಬಾಗಿಲಿನಲ್ಲಿ ಅರ್ಥಾಂತರಂಗ – 14 ಉದ್ಘಾಟನೆ

ಸಿದ್ದಾಂತ – ಪ್ರಯೋಗಗಳು ಕಲಾಕ್ಷೇತ್ರದಲ್ಲಿ  ಸದಾ ನಡೆಯುತ್ತಿರಬೇಕು, ಆಗ ಕಲೆ ಬೆಳೆಯುತ್ತದೆ. ರಂಗದ ಅಂತರಂಗ ಸ್ಪಷ್ಟವಾಗುತ್ತದೆ ಎಂದು ಹಿರಿಯ ಅರ್ಥದಾರಿ ಡಾ. ರಮಾನಂದ ಬನಾರಿ ಹೇಳಿದರು. ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಆಶ್ರಯದಲ್ಲಿ ನಡೆದ ಅರ್ಥಾಂತರಂಗದ ಉದ್ಘಾಟಕರಾಗಿ ಅವರು ಈ ಮಾತುಗಳನ್ನು ಹೇಳಿದರು. 

ಅಭ್ಯಾಗತರುಗಳಾಗಿ ಉದ್ಯಮಿ ಪ್ರೇಮನಾಥ ಮಾರ್ಲ, ಉದ್ಯಮಿಗಳು  ಮೂಡುಬಿದರೆ  ಮತ್ತು ನಿವೃತ್ತ ಬ್ಯಾಂಕ್ ಉದ್ಯೋಗಿ ನರಸಿಂಹ ಮೂರ್ತಿ ತೋನ್ಸೆ  ಅವರು ಭಾಗವಹಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.  ಅಧ್ಯಕ್ಷತೆ ವಹಿಸಿದ ಪ್ರೊ.ಎಂ ಎಲ್.ಸಾಮಗರು ಅಧ್ಯಕ್ಷ ಭಾಷಣದಲ್ಲೂ ಇಡೀ ದಿನ ಉಪಸ್ಥಿತರಿದ್ದು ಹಲವಾರು ವಿಚಾರಗಳೊಂದಿಗೆ – ಕಾಲಮಿತಿ, ಆಟ ಕೂಟ, ಧ್ವನಿವರ್ಧಕ, ಪ್ರಸ್ತುತಿ, ಅರ್ಥಗಾರಿಕೆ, ಹೀಗೆ ಹಲವು ವಿಚಾರಗಳ ಮೇಲೆ ಪ್ರೌಢ ಚಿಂತನೆಗಳನ್ನು ಹಂಚಿಕೊಂಡರು.

ಉಪನ್ಯಾಸಕ, ಕಲಾವಿದ ಡಾ. ಶ್ರುತಕೀರ್ತಿರಾಜ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಪ್ರತಿಷ್ಟಾನದ ಅಧ್ಯಕ್ಷ ಭಾಗವತ ರಾಮಕೃಷ್ಣ ಮಯ್ಯರು ಸರ್ವರನ್ನು ಸ್ವಾಗತಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿದ ಹೊಸಹಿತ್ಲು ಅಭಿರಾಮ ಶರ್ಮ ಅವರನ್ನು ಗೌರವಿಸಲಾಯಿತು.

.  ಮುಂದೆ ಮೂರು ಹಂತಗಳಲ್ಲಿ ಗೇರುಸೊಪ್ಪೆ ಶಾಂತಪ್ಪಯ್ಯನವರ ಸುಪ್ರಸಿದ್ಧ ಯಕ್ಷಕಾವ್ಯ ಕರ್ಣಪರ್ವದ ಈ ನೆರೆದ ಪರಿಭವವ…ಇಲ್ಲಿಂದ ತೊಡಗಿ ಕೊನೆಯವರರಗೆ  ತಾಳಮದ್ದಲೆ ನಡೆಯಿತು. ಹಂತಗಳ ನಡುವೆ ಚಿಂತಕರಿಂದ ನಿರ್ದಿಷ್ಟ ವಿಚಾರಗಳನ್ನು ಆಧರಿಸಿ ತಾಳಮದ್ದಲೆಯಾಗಿ ಕೃತಿಯನ್ನು ಕಾಲಮಿತಿಗೆ ಸೊಗಸಾಗಿ ಹೇಗೆ ತರಬಹುದು ಎಂಬ ವಿಚಾರಮಂಡನೆಗಳಾದವು.

  ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಸುಬ್ರಾಯ ಸಂಪಾಜೆ, ಪುತ್ತೂರು ರಮೇಶ ಭಟ್, ಸಿರಿಬಾಗಿಲು ರಾಮಕೃಷ್ಣ ಮಯ್ಯ ಇವರುಗಳು ಎಲ್ಲಿಯೂ ಅನಗತ್ಯ, ಅಭಾಸಗಳಿಲ್ಲದೆ ತಾಳಮದ್ದಲೆಗೆ ಹೇಳಿಮಾಡಿಸಿದಂತಹ ಪದ್ಯ ಪ್ರಸ್ತುತಿಯನ್ನು ನೀಡಿದರು. ಕೃತಿಯಲ್ಲಿ ಈ ಭಾಗದಲ್ಲಿ ಬರುವ ಪದ್ಯಗಳನ್ನು ಬಿಟ್ಟುದು ಕಡಿಮೆ. (ಮಾತಿನ ಭರಾಟೆಗಾಗಿ ಕಡಿಮೆ ಪದ್ಯಗಳನ್ನು ಆಯ್ದುಕೊಳ್ಳುವ ಕ್ರಮವೇ ಹೆಚ್ಚು) ನಿನ್ನೆ ಐವತ್ತಕ್ಕಿಂತಲೂ ಹೆಚ್ಚು ಪದ್ಯಗಳ ಬಳಕೆಯಾಗಿತ್ತು. ಮೂರು ಗಂಟೆಯ ಕೂಟಕ್ಕೆ ಮೂವತ್ತು ಪದ್ಯಗಳು ಬಹಳ ಕಷ್ಟದಲ್ಲಿ ಬಳಕೆಯಾಗುತ್ತದೆ. ಭಾಗವತರು ವಿನಾಕಾರಣ ಎಳೆತವಿಲ್ಲದೆ ಹಾಡಿದರೆ ಹೆಚ್ಚು ಪದ್ಯಗಳ ಅವಕಾಶವಾಗುತ್ತದೆ ಎಂಬುದು ಸಿದ್ಧವಾಯಿತು.

   ಚಂಡೆ ಮದ್ದಲೆಗಳಲ್ಲಿ ಹಿರಿಯರಾದ ಪದ್ಯಾಣ ಶಂಕರನಾರಾಯಣ ಭಟ್ಟರು ಉತ್ಸಾಹದಿಂದ ಭಾಗವಹಿಸಿ ಕಿರಿಯರಿಗೆ ಮಾರ್ಗದರ್ಶಕರಾದರು. ಜನಾರ್ದನ ತೋಳ್ಪಾಡಿತ್ತಾಯ, ಚಂದ್ರಶೇಖರ ಭಟ್ ಕೊಂಕಣಾಜೆ ಇವರ ಸುಶ್ರಾವ್ಯ ನುಡಿತಗಳೂ ಆಕರ್ಷಣೀಯ.

 ಅರ್ಥಧಾರಿಗಾಳಾಗಿ  ಪ್ರಮುಖ ಕಲಾವಿದರೇ ಸಮರ್ಥ ನಿರ್ವಹಣೆ ನೀಡಿದ್ದು ಒಟ್ಟು ಕಾರ್ಯಕ್ರಮದ ಆಕರ್ಷಣೀಯ ಭಾಗ. ವಾಸುದೇವ ರಂಗಾಭಟ್, ಶಂಭುಶರ್ಮ, ವಿ.ಹಿರಣ್ಯ ವೆಂಕಟೇಶ ಭಟ್ಟರು, ರಾಧಾಕೃಷ್ಣ ಕಲ್ಚಾರ್, ಹರೀಶ ಬಳಂತಿಮೊಗರು, ವೈಕುಂಠ ಹೇರಳೆ ಇವರೆಲ್ಲ ಪರಿಣಿತ ಕಲಾವಿದರೆಂದು ಹೇಳಬೇಕಿಲ್ಲ. ಈ ಪ್ರಸಂಗದಲ್ಲಿ ನೂರಾರು ಬಾರಿ ಎಲ್ಲ ಪಾತ್ರಗಳನ್ನೂ ನಿರ್ವಹಿಸಿದವರೇ. ಸಮಯದ ಚೌಕಟ್ಟಿನೊಳಗೆ ನಿರ್ವಹಿಸುವ ಚಾತುರ್ಯವಂತೂ ಸಿದ್ಧಿಗೊಂಡವರು. ಬಹುಚೆನ್ನಾಗಿ ಎಲ್ಲ ಪಾತ್ರಗಳ ಪ್ರಸ್ತುತಿಯಾಯಿತು. ಚರ್ಚೆ, ಚಿಂತನೆ ಭಾವಾಭಿವ್ಯಕ್ತಿ ಎಲ್ಲವೂ ಸೊಗಸಾದವು.

ಪ್ರೊ.ಸಾಮಗರು, ಶ್ರೀಧರ ಡಿ.ಎಸ್, ಸದಾಶಿವಶೆಟ್ಟಿಗಾರ್, ಜಿ.ಕೆ ಭಟ್ ಸೇರಾಜೆ, ಸೀತಾರಾಮ ಭಟ್ ಸೇರಾಜೆ, ಕುಮಾರ ಸುಬ್ರಹ್ಮಣ್ಯರು, ಹರಿಕೃಷ್ಣ ಹೊಳ್ಳ ಸಾಲಿಗ್ರಾಮ, ದಯಾನಂದ ಎಳಚಿತ್ತಾಯರು, ವಾಸುದೇವ ರಂಗಭಟ್, ಹಿರಣ್ಯರು, ಸುಬ್ರಾಯ ಸಂಪಾಜೆ, ಕೊಂಕಣಾಜೆಯವರು, ಎಸ್.ಎನ್ ಭಟ್ಟರು, ವೆಂಕಟ್ರಮಣ ರಾವ್ ಬನ್ನೆಂಗಳ, ಅನೇಕರು ತಮ್ಮ ಅಭಿಪ್ರಾಯಗಳನ್ನು ಅವರಿಗೆ ನೀಡಿದ ನಿರ್ದಿಷ್ಟ ವಿಚಾರಗಳ ಮೇಲೆಯೇ ಹಂಚಿಕೊಂಡರು.

ಸದಾಶಿವ ರಾವ್ ನೆಲ್ಲಿಮಾರ್,  ಡಾ.ಸತೀಶ್ ಜಿ ನಾಯ್ಕ ಹೊನ್ನಾವರ, ಶ್ಯಾಮ್ ಕುಂಚಿನಡ್ಕ,  ಲಕ್ಷ್ಮೀನಾರಾಯಣ ಕಾವುಮಠ, ಎದ್ರುಕಳ ಸದಾಶಿವ ಭಟ್, ಯೋಗೀಶ್ ರಾವ್ ಚಿಗುರುಪಾದೆ, ಪ್ರಶಾಂತ್ ಹೊಳ್ಳ  ಮೂದಲಾದವರು ಉಪಸ್ಥಿತರಿದ್ದರು. ಶ್ರೀಮತಿ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ ಇವರು ಅರ್ಥಾಂತರಂಗದ ನಿರೂಪಣೆ ಅಂದವಾಗಿ ನಡೆಸಿಕೊಟ್ಟರು.

  ರಂಗದಲ್ಲಿ ಇಂದು ಆಗುತ್ತಿರುವ ಅಪಸವ್ಯಗಳು,  ಧ್ವನಿವರ್ಧಕದ ಬಳಕೆ ಬಗ್ಗೇ ವಿಶೇಷ ವಿಚಾರ ಮಂಡನೆಗಳಾದವು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments