ಕುಮಟಾ ಶ್ರೀ ಗಣಪತಿ ನಾಯ್ಕ್ ಅವರು ಬಡಗು ತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಇವರು ಕಳೆದ ಮೂವತ್ತೆರಡು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ, ಭಾರತೀಯ ಸೇನೆಯಲ್ಲೂ ಸೇವೆ ಸಲ್ಲಿಸಿದ ಅನುಭವಿ ಇವರು.
ಮಾರುತಿ ಪ್ರತಾಪ, ರಾಮಾಂಜನೇಯ ಕಾಳಗ, ಮೊದಲಾದ ಅನೇಕ ಪ್ರಸಂಗಗಳಲ್ಲಿ ಹನುಮಂತನಾಗಿ ಅಭಿನಯಿಸಿ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ, ಈ ಪಾತ್ರವು ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ಭೂ ಕೈಲಾಸದ ಪ್ರಸಂಗದ ರಾವಣ, ಕನಕಾಂಗಿ ಕಲ್ಯಾಣದ ಘಟೋತ್ಕಚ, ಕೀಚಕ ವಧೆ ಪ್ರಸಂಗದ ವಲಲ, ಶನೀಶ್ವರ ಮಹಾತ್ಮೆ ಪ್ರಸಂಗದ ಶನಿ ಮೊದಲಾದವು ಇವರಿಗೆ ಇಷ್ಟದ ಪಾತ್ರಗಳು. ಈ ಪಾತ್ರಗಳೆಲ್ಲಾ ಶ್ರೀ ಗಣಪತಿ ನಾಯ್ಕ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.
ಇವರು ರಂಗ ಪ್ರಸಾಧನ ವಿಭಾಗದಲ್ಲೂ ಗುರುತಿಸಿಕೊಂಡಿದ್ದಾರೆ. ವೇಷಭೂಷಣ ತಯಾರಿಕಾ ಕಲೆಯೂ ಇವರಿಗೆ ಕರಗತವಾಗಿದೆ. ಬಡಗು ತಿಟ್ಟಿನ ಎಲ್ಲಾ ತರದ ವೇಷಗಳಿಗೂ ಬೇಕಾಗುವ ಕಿರೀಟಗಳನ್ನು ಇವರು ತಯಾರು ಮಾಡುತ್ತಾರೆ. ಸರಳ,ಸಜ್ಜನ,ಶಿಸ್ತಿನ ಕಲಾವಿದರಾದ ಇವರು ಸಹಕಲಾವಿದರಿಗೆ ಮತ್ತು ಗೆಳೆಯರಿಗೆ ಪ್ರೀತಿಯ ‘ಗಂಪಣ್ಣ’.
ಶ್ರೀ ಗಣಪತಿ ನಾಯ್ಕ್ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕುಮಟಾ. 1966 ಜುಲೈ 6ರಂದು ಕುಮಟಾ ಶ್ರೀ ಗೋವಿಂದ ನಾಯ್ಕ್ ಮತ್ತು ಶ್ರೀಮತಿ ಸಾವಿತ್ರಿ ದಂಪತಿಗಳಿಗೆ ಪುತ್ರನಾಗಿ ಜನನ.
ಕುಮಟಾ ಗೋವಿಂದ ನಾಯ್ಕ್ ಅವರನ್ನು ಯಕ್ಷಗಾನ ಕಲಾಭಿಮಾನಿಗಳಿಗೆಲ್ಲರಿಗೂ ತಿಳಿದೇ ಇದೆ. ಬಡಗು ತಿಟ್ಟಿನ ಖ್ಯಾತ ಕಲಾವಿದರಾಗಿದ್ದ ಇವರು ಹನುಮಂತ, ವಸಂತಸೇನೆ ಪ್ರಸಂಗದ ಶಕಾರ, ಅಲ್ಲದೇ ಅನೇಕ ಪುರಾಣ ಪ್ರಸಂಗಗಳಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದವರು.
ಕುಮಟಾ ಗಣಪತಿ ನಾಯ್ಕ್ ಅವರಿಗೆ ಯಕ್ಷಗಾನವು ರಕ್ತಗತವಾಗಿತ್ತು. ಕಲಾಸಕ್ತಿಯು ಹಿರಿಯರಿಂದ ಬಳುವಳಿಯಾಗಿ ಬಂದಿತ್ತು. ಇವರ ಮುತ್ತಜ್ಜ ಕುಮಟಾ ಗೋವಿಂದಪ್ಪ ನಾಯ್ಕ್, ಅಜ್ಜ ಕುಮಟಾ ಮುಕುಂದ ನಾಯ್ಕ್, ಸಣ್ಣಜ್ಜ ಕುಮಟಾ ಉತ್ತಮ ನಾಯ್ಕ್ ಅವರುಗಳು ಕಲಾವಿದರಾಗಿದ್ದರು.
ಕುಮಟಾ ಗಣಪತಿ ನಾಯ್ಕ್ ಅವರು ಓದಿದ್ದು ಹತ್ತನೇ ತರಗತಿ ವರೆಗೆ, ಕುಮಟಾ ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ವಿದ್ಯಾರ್ಜನೆ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. ತಂದೆಯವರ ಜತೆ ತೆರಳಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಮೊತ್ತಮೊದಲು ವೇಷ ಮಾಡಿದ್ದು ಮೂರನೆಯ ತರಗತಿಯಲ್ಲಿ ಓದುತ್ತಿರುವಾಗ. ಕುಮಟಾ ಕಲಭಾಗ ಶ್ರೀ ರಾಮನಾಥ ದೇವಸ್ಥಾನದಲ್ಲಿ ನಡೆದ ಪ್ರದರ್ಶನ. ವಾಲಿಮೋಕ್ಷ ಪ್ರಸಂಗದಲ್ಲಿ ಹನುಮಂತನಾಗಿ ರಂಗಪ್ರವೇಶ ಮಾಡಿದ್ದರು.
ಮುಂದೆ ಬೆಳೆಯುತ್ತಾ ಬಂದಂತೆ ಹನುಮಂತನ ಪಾತ್ರವು ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಬಳಿಕ ಭಾಗವತರಾದ ಶ್ರೀ ಉಮೇಶ್ ಭಟ್ ಬಾಡ ಅವರಿಂದ ಯಕ್ಷಗಾನ ಹೆಜ್ಜೆಗಾರಿಕೆ ಅಭ್ಯಾಸ ಮಾಡಿ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಶಾಲಾ ಪ್ರದರ್ಶನಗಳಲ್ಲಿ ಮತ್ತು ಊರ ಪ್ರದರ್ಶನಗಳಲ್ಲಿ ವೇಷ ಮಾಡುತ್ತಿದ್ದರು.
ಕುಮಟಾ ಗಣಪತಿ ನಾಯ್ಕ್ ಅವರಿಗೆ ಸೇನೆಗೆ ಸೇರಬೇಕೆಂಬ ಆಸೆಯೂ ಇತ್ತು. ಅದಕ್ಕೆ ಅವಕಾಶವೂ ಒದಗಿ ಬಂದಿತ್ತು. ಎಸ್ಸೆಸ್ಸೆಲ್ಸಿ ಓದಿನ ಬಳಿಕ ಕಾರವಾರದಲ್ಲಿ ನಡೆದ ಸಂದರ್ಶನದಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು. ಬೆಳಗಾವಿಯಲ್ಲಿ ತರಬೇತಿಯನ್ನು ಮುಗಿಸಿ ಭಾರತೀಯ ಶಾಂತಿಪಾಲನಾ ಪಡೆಯ ಸದಸ್ಯನಾಗಿ ಶ್ರೀಲಂಕಾ ದೇಶಕ್ಕೆ ತೆರಳಿದ್ದರು. ಅಲ್ಲಿಂದ ಮರಳಿದ ಬಳಿಕ ಯಕ್ಷಗಾನ ಕಲೆಯು ಮತ್ತೆ ಕೈಬೀಸಿ ಕರೆಯಿತು.
1990-91ರಲ್ಲಿ ಕುಮಟಾ ಶ್ರೀ ರಾಮನಾಥ ಪ್ರಸಾದಿತ ಯಕ್ಷಗಾನ ಮಂಡಳಿಯು ಕುಮಟಾ ಗೋವಿಂದ ನಾಯ್ಕ್ ಅವರ ನಾಯಕತ್ವದಲ್ಲಿ ಡೇರೆ ಮೇಳವಾಗಿ ಸಂಚಾರಕ್ಕೆ ಹೊರಟಿತ್ತು. ಸದ್ರಿ ಮೇಳವು ಮೊದಲು ಬಯಲಾಟಗಳನ್ನು ಮಾತ್ರ ಪ್ರದರ್ಶಿಸುತ್ತಿತ್ತು. ಈ ಮೇಳದಲ್ಲಿ ಎರಡು ವರ್ಷ ತಿರುಗಾಟ. ಬಳಿಕ ಬಗ್ವಾಡಿ ಮೇಳದಲ್ಲಿ ಮೂರು ವರ್ಷ ವ್ಯವಸಾಯ ಮಾಡಿದ್ದರು.
ಮುಂದಿನ ಎರಡು ವರ್ಷ ಅಮೃತೇಶ್ವರೀ ಮೇಳದಲ್ಲಿ ವ್ಯವಸಾಯ. ಬಳಿಕ ಒಂದು ವರ್ಷ ಸುರೇಂದ್ರ ಪಣಿಯೂರು ಅವರ ಸಂಚಾಲಕತ್ವದ ಗೋಳಿಗರಡಿ ಟೆಂಟ್ ಮೇಳದಲ್ಲಿ ತಿರುಗಾಟ. ಮತ್ತೆ ಎರಡು ವರ್ಷ ಗೋಳಿಗರಡಿ ಬಯಲಾಟ ಮೇಳದಲ್ಲಿ ವ್ಯವಸಾಯ. ಬಳಿಕ ನೀಲಾವರ ಮೇಳದಲ್ಲಿ ಮೂರು ವರ್ಷ, ಆಜ್ರಿ ಮೇಳದಲ್ಲಿ ಐದು ವರ್ಷ, ಸಾಲಿಗ್ರಾಮ ಮೇಳದಲ್ಲಿ ತಿರುಗಾಟ.
ಕುಮಟಾ ಗಣಪತಿ ನಾಯ್ಕ್ ಅವರು ಅತಿಥಿ ಕಲಾವಿದರಾಗಿ ಪೆರ್ಡೂರು ಮೊದಲಾದ ಹಲವು ಮೇಳಗಳಲ್ಲಿ ಕಾಣಿಸಿಕೊಂಡು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಸಾಲಿಗ್ರಾಮ ಮೇಳದ ವ್ಯವಸಾಯದ ಬಳಿಕ ಎರಡು ವರ್ಷ ಮೇಳದ ತಿರುಗಾಟ ನಿಲ್ಲಿಸಿದ್ದರೂ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಬಳಿಕ ಒಂದು ವರ್ಷ ಮತ್ತೆ ಆಜ್ರಿ ಮೇಳದಲ್ಲಿ ವ್ಯವಸಾಯ ಮಾಡಿ ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದರು.
ಈಗ ಅತಿಥಿ ಕಲಾವಿದರಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಕುಮಟಾ ಗಣಪತಿ ನಾಯ್ಕ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಯಕ್ಷಗಾನ ಕಿರೀಟ ಮೊದಲಾದ ಪರಿಕರಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಳೆಗಾಲದಲ್ಲಿ ಮುಂಬಯಿ, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಅಭಿನಯಿಸಿ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ.
ಶ್ರೀಯುತರ ಪತ್ನಿ ಶ್ರೀಮತಿ ಜಯಶ್ರೀ (2002ರಲ್ಲಿ ವಿವಾಹ) ಇವರ ಪುತ್ರಿ ಕು| ಶ್ರೀನಿಧಿ ಒಂದನೇ ತರಗತಿ ವಿದ್ಯಾರ್ಥಿನಿ. ಕುಮಟಾ ಶ್ರೀ ಗಣಪತಿ ನಾಯ್ಕ್ ಅವರಿಂದ ಯಕ್ಷಗಾನ ಕಲಾ ವ್ಯವಸಾಯಯವು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ಶ್ರೀ ಕುಮಟಾ ಗಣಪತಿ ನಾಯ್ಕ್, ಮೊಬೈಲ್: 9164940464
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions