ಬಳ್ಕೂರು ಶ್ರೀ ಕೃಷ್ಣಯಾಜಿ ಅವರು ಬಡಗುತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಕಳೆದ ನಲುವತ್ತೆಂಟು ವರ್ಷಗಳಿಂದ ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ನಾಲ್ಕೂವರೆ ದಶಕದಲ್ಲಿ ಹಲವು ಮಹಾನ್ ಕಲಾವಿದರ, ಯಕ್ಷ ಕರ್ಮಿಗಳ, ಯುವ ಪ್ರತಿಭಾವಂತ ಕಲಾವಿದರ ಜತೆ ಒಡನಾಡಿದ ಸಾಧಕರಿವರು. “ಯಕ್ಷಗಾನವು ನನಗೆ ಅಶನ ವಸನಗಳನ್ನು ನೀಡುವುದರ ಜತೆಗೆ ಕೀರ್ತಿ ಸ್ಥಾನಮಾನಗಳನ್ನು ಒದಗಿಸಿದೆ” ಎಂದು ಹೇಳುವ ಮೂಲಕ ತಾನು ವ್ಯವಸಾಯ ಮಾಡುತ್ತಿರುವ ಕಲಾಪ್ರಕಾರವನ್ನು ಶ್ರೀ ಬಳ್ಕೂರು ಕೃಷ್ಣಯಾಜಿಗಳು ಗೌರವಿಸುತ್ತಾರೆ.
ಪ್ರವೇಶದಿಂದ ತೊಡಗಿ ನಿರ್ಗಮನದ ತನಕವೂ ಇವರು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲರು. ರಂಗವನ್ನು ಪ್ರವೇಶಿಸುವಾಗಲೇ ಪ್ರದರ್ಶನವನ್ನು ಬಡಿದೆಬ್ಬಿಸಬಲ್ಲರು. ಪಾತ್ರಧಾರಿಯಾಗಿ ರಂಗದೊಳಗೆ ಇರುವಷ್ಟು ಹೊತ್ತೂ ರಂಗವು ಇವರಿಗೆ ಬಾಗುವ ರೀತಿಯನ್ನು ನಾವು ಗಮನಿಸಬಹುದು. ಎಲ್ಲಿಯೂ ಮೇರೆಯನ್ನು ಮೀರದೆ ಪಾತ್ರೋಚಿತವಾದ ಮಾತು, ಅಭಿನಯ ಕುಣಿತಗಳಿಂದ ಪ್ರದರ್ಶನವನ್ನು ಗೆಲ್ಲಿಸುವ ಕಲೆಯು ಇವರಿಗೆ ಕರಗತ. ಆದುದರಿಂದಲೇ ಇವರು ಬಡಗುತಿಟ್ಟು ಯಕ್ಷಗಾನದ ‘ರಂಗದ ರಾಜ’ ಎಂದು ಕರೆಸಿಕೊಂಡಿದ್ದಾರೆ.
“ಯಾಜಿ ಯಕ್ಷಮಿತ್ರ ಮಂಡಳಿ (ರಿ)” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ ಇವರು ಶ್ರೇಷ್ಠ ಕಲಾ ಸಂಘಟಕರೂ ಹೌದು. 2017ರಲ್ಲಿ ಇವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಒಲಿದಿತ್ತು. ಬಡಗುತಿಟ್ಟು ಯಕ್ಷಗಾನದ ‘ರಂಗದ ರಾಜ’ ಶ್ರೀ ಬಳ್ಕೂರು ಕೃಷ್ಣಯಾಜಿ ಅವರ ಹುಟ್ಟೂರು ಹೊನ್ನಾವರ ತಾಲೂಕಿನ ಬಳ್ಕೂರು (ಇದು ಗೇರುಸೊಪ್ಪ ಸೀಮೆ) 1956 ಡಿಸೆಂಬರ್ 4ರಂದು ಶ್ರೀ ವಿಷ್ಣು ಯಾಜಿ ಮತ್ತು ಶ್ರೀಮತಿ ಮಂಕಾಳಿ ಅಮ್ಮ ದಂಪತಿಗಳ ಪುತ್ರನಾಗಿ ‘ಯಾಜಿ’ ಮನೆತನದಲ್ಲಿ ಜನನ. 108 ಎಕ್ರೆ ಜಮೀನು ಹೊಂದಿದ್ದ ಮನೆ ಇದು. ಭೂಮಸೂದೆ ಕಾಯ್ದೆ ಬಂದಾಗ ಇವರಿಗೆ ಎಂಟು ಎಕ್ರೆ ಜಮೀನು ಮಾತ್ರ ಉಳಿದಿತ್ತು.
ಶ್ರೀ ವಿಷ್ಣು ಯಾಜಿ ಅವರು ಕೃಷಿಕರು. ಯಾಜಿ ಮನೆತನದ ಹಿರಿಯರಾದ ಶ್ರೀ ರಾಮಚಂದ್ರ ಯಾಜಿ ಮತ್ತು ಶ್ರೀ ಬಾಬು ಯಾಜಿ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು. ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ಓದಿದ್ದು ಹತ್ತನೇ ತರಗತಿ ವರೆಗೆ. ಏಳನೇ ತರಗತಿ ವರೆಗೆ ಕಬಾಡಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಇಡಗುಂಜಿ ಶ್ರೀ ಮಹಾಗಣಪತಿ ಶಾಲೆಯಲ್ಲಿ. ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಅಕ್ಕನ ಮದುವೆ ನಡೆದ ದಿನದಂದು ಕೂಡಾ ಯಕ್ಷಗಾನ ಪ್ರದರ್ಶನವನ್ನು ನೋಡಲು ತೆರಳಿದ್ದರು. ಅಷ್ಟರ ಮಟ್ಟಿಗೆ ಯಕ್ಷಗಾನ ಕಲೆಯು ಆಕರ್ಷಿಸಿತ್ತು.
ಬಾಲ್ಯದಲ್ಲಿ ಕೊಳಗೀಬೀಸ್ ಮೇಳದ ಪ್ರದರ್ಶನಗಳನ್ನು ನೋಡಲು ಅವಕಾಶವಾಗಿತ್ತು. ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ, ಕೊಳಗಿ ಅನಂತ ಹೆಗಡೆ ಮೊದಲಾದ ಹಿರಿಯ ಕಲಾವಿದರ ಪಾತ್ರಗಳನ್ನು ನೋಡುತ್ತಾ ಬೆಳೆದವರು. ಚಿಟ್ಟಾಣಿಯವರಂತೆಯೇ ತಾನೂ ಆಗಬೇಕೆಂಬ ಕನಸನ್ನೂ ಕಂಡಿದ್ದರು. ಅಂತಸ್ಥವಾದ ಪ್ರತಿಭೆಯು ಪರಿಪೂರ್ಣವಾಗಿ ಕಾಣಿಸಿಕೊಳ್ಳಲು ಯಕ್ಷಗಾನದಲ್ಲಿ ಅವಕಾಶವಿದೆ ಎಂಬುದು ಶ್ರೀ ಯಾಜಿಯವರ ಅನಿಸಿಕೆ. ಇವರು ಕಲಾವಿದನಾಗಿ ರಂಗಪ್ರವೇಶ ಮಾಡಿದ್ದು ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ. ಇಡಗುಂಜಿ ಶಾಲಾ ಪ್ರದರ್ಶನ. ಮಾಗದ ವಧೆ ಪ್ರಸಂಗದಲ್ಲಿ ಮಾಗಧನಾಗಿ ರಂಗವೇರಿದ್ದರು.
ಬಳಿಕ ಅಲ್ಲಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಜನೆಯ ಬಳಿಕ ಯಕ್ಷಗಾನ ಹೆಜ್ಜೆಗಾರಿಕೆ ಕಲಿಯಲು ನಿರ್ಧಾರ. 1973ರಲ್ಲಿ ಕೆರೆಮನೆ ಶ್ರೀ ಮಹಾಬಲ ಹೆಗಡೆಯವರಿಂದ ನಾಟ್ಯ ಕಲಿಕೆ. ಬೆಳಿಗ್ಗೆ ಆರು ಘಂಟೆಯಿಂದ ತೊಡಗಿ ಹನ್ನೊಂದು ಘಂಟೆಯ ತನಕ ಕೃಷಿ ಕಾರ್ಯಗಳ ನಿರ್ವಹಣೆ (ಗದ್ದೆ ಬೇಸಾಯ) ಊಟ ಮಾಡಿ ಕೆರೆಮನೆ ಶ್ರೀ ಮಹಾಬಲ ಹೆಗಡೆ ಅವರ ಮನೆಗೆ. ಸಂಜೆ ಘಂಟೆ 4ರಿಂದ 6ರ ವರೆಗೆ ನಾಟ್ಯ ಕಲಿಕೆ. ಬಳಿಕ ಮರಳಿ ಮನೆಗೆ. ಹೀಗೆ ಮೂರು ತಿಂಗಳು ಪ್ರತಿದಿನವೂ ಕೆರೆಮನೆ ಮಹಾಬಲ ಹೆಗಡೆ ಅವರ ಮನೆಗೆ ತೆರಳಿ ನಾಟ್ಯ ಕಲಿತಿದ್ದರು.
ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ತಿರುಗಾಟ ಆರಂಭಿಸಿದ್ದು 1973-74ರಲ್ಲಿ. ಖ್ಯಾತ ಕಲಾವಿದರೂ, ಸಂಘಟಕರೂ ಆದ ಕೆರೆಮನೆ ಶಂಭು ಹೆಗಡೆ ಅವರ ಸಂಚಾಲಕತ್ವದ ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ (ಕೆರೆಮನೆ). ಬಾಲಗೋಪಾಲನಾಗಿ ರಂಗಪ್ರವೇಶ. ಮುಂದಿನ ವರ್ಷ ಪೀಠಿಕಾ ಸ್ತ್ರೀವೇಷ ಮತ್ತು ಪ್ರಸಂಗದಲ್ಲಿ ಸಿಕ್ಕ ಪಾತ್ರಗಳನ್ನು ನಿರ್ವಹಿಸಿದ್ದರು. ಎರಡು ವರ್ಷ ಸದ್ರಿ ಮೇಳದಲ್ಲಿ ತಿರುಗಾಟ. ಆಗ ನೆಬ್ಬೂರು ನಾರಾಯಣ ಭಾಗವತರು ಮತ್ತು ಕಪ್ಪೆಕೆರೆ ಸುಬ್ರಾಯ ಭಾಗವತರು ಸದ್ರಿ ಮೇಳದಲ್ಲಿ ಭಾಗವತರಾಗಿದ್ದರು.
1975-76ರಲ್ಲಿ ಅಮೃತೇಶ್ವರೀ ಮೇಳದಲ್ಲಿ ತಿರುಗಾಟ. ಅಲ್ಲಿ ಒಡ್ಡೋಲಗ ವೇಷ ಮತ್ತು ಇತರ ವೇಷಗಳನ್ನು ನಿರ್ವಹಿಸಲು ಅವಕಾಶವಾಗಿತ್ತು. ಆಗ ಶ್ರೀ ನಾರ್ಣಪ್ಪ ಉಪ್ಪೂರರು ಸದ್ರಿ ಮೇಳದ ಭಾಗವತರಾಗಿದ್ದರು. ಮುಂದಿನ ವರ್ಷ (1976-77) ಶ್ರೀ ಚಂದ್ರ ಅಡಿಗ ಅವರ ಸಂಚಾಲಕತ್ವದಲ್ಲಿ ಕೆರೆಮನೆ ಮಹಾಬಲ ಹೆಗಡೆ ಅವರ ನಿರ್ದೇಶನದಲ್ಲಿ ಕಮಲಶಿಲೆ ಮೇಳ ಆರಂಭವಾಗಿತ್ತು. ಸದ್ರಿ ಮೇಳದಲ್ಲಿ ಒಂದು ವರ್ಷ ತಿರುಗಾಟ. ಈ ಸಂದರ್ಭದಲ್ಲಿ ಕೆರೆಮನೆ ಶ್ರೀ ಮಹಾಬಲ ಹೆಗಡೆ ಅವರೊಂದಿಗೆ ವೇಷಗಳನ್ನು ನಿರ್ವಹಿಸಲು ಅವಕಾಶವಾಗಿತ್ತು.
ಈ ಸಂದರ್ಭದಲ್ಲಿ ಬಳ್ಕೂರು ಕೃಷ್ಣಯಾಜಿ ಅವರು ಪುಂಡುವೇಷಧಾರಿಯಾಗಿ ಕಾಣಿಸಿಕೊಂಡಿದ್ದರು. ಚಂದ್ರಹಾಸ ಪ್ರಸಂಗದಲ್ಲಿ ಕೆರೆಮನೆ ಮಹಾಬಲ ಹೆಗಡೆ ಅವರು ದುಷ್ಟಬುದ್ಧಿಯಾಗಿ ಅಭಿನಯಿಸಿದಾಗ ಯಾಜಿಯವರು ಚಂದ್ರಹಾಸನಾಗಿ ಕಾಣಿಸಿಕೊಂಡಿದ್ದರು. ಸುಭದ್ರಾ ಕಲ್ಯಾಣ ಪ್ರಸಂಗದಲ್ಲಿ ಕೆರೆಮನೆ ಮಹಾಬಲ ಹೆಗಡೆ ಅವರ ಬಲರಾಮ ಮತ್ತು ಯಾಜಿಯವರ ಶ್ರೀಕೃಷ್ಣನ ಪಾತ್ರವು ರಂಜಿಸಿತ್ತು. ಮಾರುತಿ ಪ್ರತಾಪ ಪ್ರಸಂಗದಲ್ಲಿ ಕೆರೆಮನೆಯವರು ನಾರದನಾಗಿ ಮತ್ತು ಯಾಜಿಯವರು ಶ್ರೀಕೃಷ್ಣನಾಗಿ ಕಾಣಿಸಿಕೊಂಡಿದ್ದರು. ಆಗ ಥಂಡಿಮನೆ ತಿಮ್ಮಣ್ಣ ಭಟ್ಟರು ಹನುಮಂತನಾಗಿ ಅಭಿನಯಿಸಿದ್ದರು.
1978ರಲ್ಲಿ ಸಾಲಿಗ್ರಾಮ ಮೇಳಕ್ಕೆ ಸೇರಿದ ಶ್ರೀ ಕೃಷ್ಣಯಾಜಿ ಅವರು ಸದ್ರಿ ಮೇಳದಲ್ಲಿ ನಾಲ್ಕು ವರ್ಷ ತಿರುಗಾಟ ನಡೆಸಿದ್ದರು. ಅಲ್ಲಿ ನೆಲ್ಲೂರು ಮರಿಯಪ್ಪಾಚಾರ್, ಸದಾನಂದ ಹೆಬ್ಬಾರ್, ಜಲವಳ್ಳಿ ವೆಂಕಟೇಶ ರಾವ್, ಶಿರಿಯಾರ ಮಂಜು ನಾಯ್ಕ, ಅರಾಟೆ ಮಂಜುನಾಥ, ಮುಖ್ಯಪ್ರಾಣ ಕಿನ್ನಿಗೋಳಿ ಮೊದಲಾದ ಕಲಾವಿದರ ಒಡನಾಟವು ದೊರಕಿತ್ತು. ಸದ್ರಿ ಮೇಳದ ಜ್ವಾಲಾಪ್ರತಾಪ (ಪ್ರವೀರನ ಪಾತ್ರದಲ್ಲಿ) ರಾಜನರ್ತಕಿ ಮೊದಲಾದ ಪ್ರಸಂಗಗಳು ಯಾಜಿಯವರಿಗೆ ಹೆಸರನ್ನು ತಂದುಕೊಟ್ಟಿತ್ತು. ಬಳಿಕ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ಎರಡು ವರ್ಷ ವ್ಯವಸಾಯ.
ಮರಳಿ ಕೆರೆಮನೆ ಶ್ರೀ ಶಂಭು ಹೆಗಡೆ ಅವರ ಇಡಗುಂಜಿ ಮೇಳದಲ್ಲಿ ನಾಲ್ಕು ವರ್ಷ ವ್ಯವಸಾಯ. ಮತ್ತೆ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ಬಳಿಕ ಶ್ರೀ ವಿದ್ಯಾಧರ ರಾವ್ ಜಲವಳ್ಳಿ ಅವರ ಕಲಾಧರ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ. ಬಳಿಕ ಮರಳಿ ಸಾಲಿಗ್ರಾಮ ಮೇಳದಲ್ಲಿ 3 ವರ್ಷ ವ್ಯವಸಾಯ. ಹೀಗೆ ಸಾಗಿತ್ತು ಶ್ರೀ ಬಳ್ಕೂರು ಕೃಷ್ಣಯಾಜಿಯವರ ಮೇಳದ ವ್ಯವಸಾಯ. ಕಿರೀಟ ವೇಷ ಮಾಡುವುದಕ್ಕೆ ಮೊದಲು ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ಶ್ರೀಕೃಷ್ಣ, ಸುಧನ್ವ, ಚಂದ್ರಹಾಸ ಮೊದಲಾದ ಪಾತ್ರಗಳಲ್ಲಿ ರಂಜಿಸಿದ್ದರು. ಶ್ರೀಕೃಷ್ಣನ ಪಾತ್ರವು ಇವರಿಗೆ ಖ್ಯಾತಿಯನ್ನು ಗಳಿಸಿಕೊಟ್ಟಿತ್ತು.
ಆಗ ಪತ್ರಿಕೆಯೊಂದು ‘ಯಕ್ಷಲೋಕದ ನಿತ್ಯ ಶ್ರೀಕೃಷ್ಣ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಲೇಖನವೊಂದನ್ನು ಪ್ರಕಟಿಸಿತ್ತು. ಕರ್ಣಪರ್ವ ಪ್ರಸಂಗದ ಕರ್ಣ, ಕೀಚಕ ವಧೆಯ ಕೀಚಕ, ಪಟ್ಟಾಭಿಷೇಕದ ದಶರಥ, ಚಂದ್ರಹಾಸ ಪ್ರಸಂಗದ ಮದನ, ವರ್ಣವೈಷಮ್ಯ ಪ್ರಸಂಗದ ಕರ್ಣ, ಜಾಂಬವತಿ ಕಲ್ಯಾಣ ಪ್ರಸಂಗದ ಜಾಂಬವ, ಅತಿಕಾಯ ಮೋಕ್ಷ ಪ್ರಸಂಗದ ಅತಿಕಾಯ, ಭೀಷ್ಮ ವಿಜಯ ಮತ್ತು ಭೀಷ್ಮ ಪರ್ವ ಪ್ರಸಂಗಗಳ ಭೀಷ್ಮ, ಲವಕುಶರ ಕಾಳಗದ ಶ್ರೀರಾಮ ಮೊದಲಾದ ಪಾತ್ರಗಳಲ್ಲಿ ಶ್ರೀ ಯಾಜಿಯವರು ಜನ ಮೆಚ್ಚುವಂತೆ ಅಭಿನಯಿಸಿದ್ದರು. ಚೆಲುವೆ ಚಿತ್ರಾವತಿ ಪ್ರಸಂಗದ ಹೇಮಾಂಗದ ಮತ್ತು ನಾಗಶ್ರೀ ಪ್ರಸಂಗದ ಶಿಥಿಲ ಪಾತ್ರಗಳಲ್ಲಿ ಯಾಜಿಯವರ ನಿರ್ವಹಣೆಯನ್ನು ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದರು.
2004ರಲ್ಲಿ ‘ಯಾಜಿ ಯಕ್ಷ ಮಿತ್ರ ಮಂಡಳಿ (ರಿ) ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಯಕ್ಷಗಾನ ಕಲಾಕ್ಷೇತ್ರದಲ್ಲಿ ಸಂಘಟಕನಾಗಿಯೂ ಕಾಣಿಸಿಕೊಂಡರು. ಈ ಸಂಸ್ಥೆಯ ಪ್ರಥಮ ಕಾರ್ಯಕ್ರಮವು ಕೆರೆಮನೆ ಶ್ರೀ ಶಂಭು ಹೆಗಡೆಯವರ ಘನ ಅಧ್ಯಕ್ಷತೆಯಲ್ಲಿ ನಡೆದಿತ್ತು. ಅಂದು ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ತಮ್ಮ ಗುರುಗಳಾದ ಕೆರೆಮನೆ ಶ್ರೀ ಮಹಾಬಲ ಹೆಗಡೆಯವರನ್ನು ಗೌರವಿಸಿ ಗುರುವಂದನೆಯನ್ನು ಸಲ್ಲಿಸಿದ್ದರು. ಈ ಸಂಸ್ಥೆಯಡಿ ಕರ್ನಾಟಕ ಮತ್ತು ಹೊರರಾಜ್ಯಗಳ ಅನೇಕ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನಡೆಸುತ್ತಾ ಬಂದಿರುತ್ತಾರೆ.
ಕಳೆದ ಹದಿನಾಲ್ಕು ವರ್ಷಗಳಿಂದ ಪ್ರತಿ ವರ್ಷವೂ ಅಶಕ್ತ ಕಲಾವಿದರನ್ನು ಗುರುತಿಸಿ ಅವರಿಗೆ ಧನ ಸಹಾಯವನ್ನು ನೀಡುತ್ತಿದ್ದಾರೆ. ಈ ಸಂಸ್ಥೆಯಡಿ ಅನೇಕ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ಎರಡು ಬಾರಿ ವಿದೇಶಯಾತ್ರೆಯನ್ನು ಕೈಗೊಂಡಿದ್ದಾರೆ. 1983ರಲ್ಲಿ ಕೆರೆಮನೆ ತಂಡದ ಸದಸ್ಯನಾಗಿ ಬಹರೇನ್ ಮತ್ತು 2017ರಲ್ಲಿ ಸಿಂಗಾಪುರದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.
2017ರಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದ ಇವರು ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರಿಂದ ರಾಮ ವಿಠಲ ಪ್ರಶಸ್ತಿ, ಸ್ವರ್ಣವಲ್ಲೀ ಸಂಸ್ಥಾನದಿಂದ ಯಕ್ಷ ಕಲಾತಿಲಕ ಪ್ರಶಸ್ತಿ, ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇವರಿಂದ ಹವ್ಯಕ ಭೂಷಣ ಪ್ರಶಸ್ತಿ, ಡಾ। ಕೆರೆಮನೆ ಮಹಾಬಲ ಹೆಗಡೆ ಸ್ಮಾರಕ ರಂಗ ಪ್ರತಿಷ್ಠಾನ, ಕೆರೆಮನೆ ಈ ಸಂಸ್ಥೆಯಿಂದ ಮಹಾಬಲ ಪ್ರಶಸ್ತಿ, ಮಣಿಪಾಲ ವಿದ್ಯಾಲಯದಿಂದ ವರ್ಷದ ವ್ಯಕ್ತಿ ಪ್ರಶಸ್ತಿ, ಬೆಂಗಳೂರು ಹೋಟೆಲ್ ಉದ್ಯಮದಾರರ ಸಹಕಾರೀ ಸಂಸ್ಥೆಯಿಂದ ಮಹಾಕವಿ ಮುದ್ದಣ ಪ್ರಶಸ್ತಿಯನ್ನೂ ಪಡೆದಿರುತ್ತಾರೆ. ಅಲ್ಲದೆ ಅನೇಕ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ.
ಶ್ರೀ ಬಳ್ಕೂರು ಕೃಷ್ಣಯಾಜಿ ಅವರು 1983ರಿಂದ ತೊಡಗಿ ಕುಮಟಾ ಸಮೀಪದ ವಾಲಗಳ್ಳಿ ಎಂಬಲ್ಲಿ ವಾಸಿಸುತ್ತಿದ್ದಾರೆ. ಶ್ರೀಯುತರ ಪತ್ನಿ ಶ್ರೀಮತಿ ಶಾಂತಿ. ಇವರು ಗೃಹಣಿ. ಕಲಾಸಕ್ತೆಯಾಗಿ ಪತಿ ಶ್ರೀ ಬಳ್ಕೂರು ಕೃಷ್ಣಯಾಜಿ ಅವರ ಕಲಾಚಟುವಟಿಕೆಗಳಿಗೆ ಸದಾ ಸಹಕಾರಿಯಾಗಿ ಪ್ರೋತ್ಸಾಹ ನೀಡುತ್ತಾರೆ. ಶ್ರೀ ಕೃಷ್ಣ ಯಾಜಿ, ಶಾಂತಿ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ದೀಪಾ. ಇವರ ಪತಿ ಶ್ರೀ ಅನಂತ ಅಡಿ. ಇವರು ಶ್ರೀ ಗೋಕರ್ಣ ಕ್ಷೇತ್ರದಲ್ಲಿ ಪುರೋಹಿತರು. ಇವರಿಗೆ ಇಬ್ಬರು ಪುತ್ರರು. ಮಾ| ಅಭಿಷೇಕ್ ಮತ್ತು ಮಾ| ಅಪೂರ್ವ. ಕಿರಿಯ ಪುತ್ರಿ ಶ್ರೀಮತಿ ರೂಪಾ. ಇವರ ಪತಿ ಶ್ರೀ ದೀಪಕ್ ಹೆಗಡೆ. ಇವರು ಕೃಷಿಕರು. ಇವರ ಪುತ್ರಿ ಕುಮಾರಿ ಧನ್ಯಾ. ಶ್ರೀ ಬಳ್ಕೂರು ಕೃಷ್ಣಯಾಜಿ ಅವರು ಕಲಾವಿದನಾಗಿಯೂ ಸಾಂಸಾರಿಕವಾಗಿಯೂ ತೃಪ್ತರು. ಇವರಿಗೆ ಶ್ರೀ ದೇವರ ಅನುಗ್ರಹವು ಸದಾ ಇರಲಿ. ಇನ್ನೂ ಹೆಚ್ಚಿನ ಕಲಾಸೇವೆಯನ್ನು ಮಾಡುವಲ್ಲಿ ಕಲಾಮಾತೆಯ ಅನುಗ್ರಹವು ದೊರೆಯಲಿ ಎಂಬ ಹಾರೈಕೆಗಳು.
ಶ್ರೀ ಬಳ್ಕೂರು ಕೃಷ್ಣಯಾಜಿ, ವಾಲಗಳ್ಳಿ, ಕುಮಟಾ, ಉ.ಕ – 581332
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ – ಫೋಟೋಗಳು: ಶ್ರೀ ನಟರಾಜ ಉಪಾಧ್ಯ (ಫೇಸ್ ಬುಕ್)
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions