ಪುತ್ತೂರು: ತರಗತಿಯಲ್ಲಿ ಪಾಠ ಮಾಡುವ ಉಪನ್ಯಾಸಕರು ಅರ್ಜುನನಂತೆ ಬಣ್ಣ ಹಚ್ಚಿದ್ದರು, ಮತ್ತೊಬ್ಬರು ಸುಧನ್ವನಾಗಿ ಕಂಗೊಳಿಸಿದರು. ಇತ್ತ ಸದಾ ಓದು, ಪರೀಕ್ಷೆ, ತರಬೇತಿಗಳಲ್ಲಿ ತಲ್ಲೀನರಾಗುವ ವಿದ್ಯಾರ್ಥಿಗಳೂ ಸೈನಿಕರಂತೆ ಶೌರ್ಯ ಪ್ರದರ್ಶಿಸಿದರು, ಹುಲಿಗಳಂತೆ ಹೆಜ್ಜೆ, ಹಾಡು ಹಾಡಿ ರಂಜಿಸಿದರು. ಇದು ಕಂಡು ಬಂದಿದ್ದು, ನೆಲ್ಲಿಕಟ್ಟೆ- ಬಪ್ಪಳಿಗೆ ಅಂಬಿಕಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಮಾನಸೋಲ್ಲಾಸ, ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ.
ಹೌದು… ಯಕ್ಷಗಾನದಲ್ಲಿ ಅಂಬಿಕಾ ಮಹಾ ವಿದ್ಯಾಲಯದ ಉಪನ್ಯಾಸಕ ಅಭಿಷೇಕ್ ಅರ್ಜುನ ವೇಷಧಾರಿಯಾಗಿ, ಆಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ ಸುಧನ್ವನಾಗಿ ಹೆಜ್ಜೆ ಹಾಕಿದರು. ಇವರೊಂದಿಗೆ ಹವ್ಯಾಸಿ ಯಕ್ಷ ಕಲಾವಿದ ನಾ. ಕಾರಂತ ಪೆರಾಜೆ ಶ್ರೀ ಕೃಷ್ಣನಾಗಿ ಸಾಥ್ ನೀಡಿ ‘ಸುಧನ್ವ ಮೋಕ್ಷ’ ಪ್ರಸಂಗ ಪ್ರಸ್ತುತಪಡಿಸಿದರು.
ಮಕ್ಕಳ ಯಕ್ಷಗಾನ:
ಪಿಯು ವಿದ್ಯಾರ್ಥಿಗಳೂ ‘ರಾಜ ದಿಲೀಪ’ ಪ್ರಸಂಗದ ಮೂಲಕ ಯಕ್ಷ ಪ್ರೇಮಿಗಳನ್ನು ರಂಜಿಸಿದರು. ಮುಮ್ಮೇಳದಲ್ಲಿ ದೇವೇಂದ್ರನಾಗಿ ನಿರಂಜನ್, ಅಗ್ನಿಯಾಗಿ ಅಂಕಿತ್, ವಾಯುವಾಗಿ ಶ್ರಾವಣಿ, ವೀರಕಾಸುರರಾಗಿ ವರುಣ್ ಕುಮಾರ್, ಅಭಿರಾಮ್, ಭಂಡಾಸುರನಾಗಿ ಪ್ರಖ್ಯಾತ್, ಚಂಡಾಸುರನಾಗಿ ಶ್ರೀಮಾನ್ ಘಾಟೆ, ದೇವದೂತನಾಗಿ ಅಕ್ಷರ್ ರೈ, ಮಾನ್ವಿ ರೈ ಈಶ್ವರನಾಗಿ, ವಿಷ್ಣುವಾಗಿ ಅಪೇಕ್ಷಾ, ಅಂಬಿಕೆಯಾಗಿ ಅದ್ವಿತಿ, ಮಾತಲಿಯಾಗಿ ಅಪೂರ್ವ, ದಿಲೀಪನಾಗಿ ವಿಷ್ಣು ಹೆಜ್ಜೆ ಹಾಕಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ಉಪನ್ಯಾಸಕ ಸತೀಶ್ ಇರ್ದೆ, ಹಿಮ್ಮೇಳದಲ್ಲಿ ಚೆಂಡೆ- ಮದ್ದಳೆಯಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕಾಯ್, ಮುರಳೀಧರ ಕಲ್ಲೂರಾಯ, ಚಕ್ರತಾಳದಲ್ಲಿ ಪ್ರವೀಣ್ ರಾಜ್ ಆರ್ಲಪದವು ಸಹಕಾರ ನೀಡಿದರು. ಬಾಲಕೃಷ್ಣ ಉಡ್ಡಂಗಳ ನಿರ್ದೇಶನ ಮಾಡಿದ್ದಾರೆ.
ಕಾಲೇಜು ದಿನದಲ್ಲಿ ದೇಶಪ್ರೇಮದ ಕಂಪು:
ಕಾಲೇಜಿನ ವಿದ್ಯಾರ್ಥಿಗಳು ಸೈನಿಕರಂತೆ ಅಂಗಿಧರಿಸಿ ಶಿಸ್ತಿನ ಸಿಪಾಯಿಗಳಾದರು. ಉರಿಯಲ್ಲಿ ಉಗ್ರರ ಮೇಲಿನ ರೂಪಕ ಪ್ರದರ್ಶಿಸಿ ನೋಡುಗರ ಮೆಚ್ಚುಗೆಗೆ ಪಾತ್ರವಾದರು. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತ್ ಸಿಂಗ್ ಮೊದಲಾದ ವೀರರ ಜೀವನ ಚರಿತ್ರೆ ತೆರೆದಿಟ್ಟರು. ವಂದೇ ಮಾತರಂ, ಜೈ ಹೋ ಮೊದಲಾದ ದೇಶಭಕ್ತಿ ಮೂಡಿಸುವ ಹಾಡುಗಳಿಗೆ ನೃತ್ಯ ಮಾಡಿ ದೇಶ ಪ್ರೇಮದ ಕಂಪನ್ನು ಪಸರಿಸಿದರು.





ತುಳುನಾಡ ವೈಭವ:
ಯಕ್ಷಗಾನ, ಕಂಬಳ, ಆಟಿ ಕಳೆಂಜ, ಸುಗ್ಗಿ ಕುಣಿತ, ಖೆಡ್ಡಸ, ಕೋಟಿ ಚೆನ್ನಯ, ಮಹಿಷಾಸುರ ಪ್ರವೇಶ ಮೊದಲಾದವುಗಳ ಮೂಲಕ ತುಳು ನಾಡ ಸಂಸ್ಕೃತಿಯನ್ನು ತೆರೆದಿಟ್ಟರು.
ಭಾರತೀಯ ನೃತ್ಯಗಳ ಪ್ರದರ್ಶನ:
ದೇಶದ ವಿವಿಧ ಕಲಾಪ್ರಕಾರಗಳಾದ ಬಿಹು ಕುಣಿತ, ಭಾಂಗ್ರಾ, ಪಂಜಾಬಿ, ಗುಜರಾತಿ ನೃತ್ಯ, ಕೊಡವ ನೃತ್ಯ, ಕಾಶ್ಮೀರಿ ನೃತ್ಯ ಪ್ರದರ್ಶಿಸಿ ಸೈ ಎನಿಸಿಕೊಂಡರು.
ಕರ್ನಾಟಕದ ಕಲಾಪ್ರಕಾರಗಳ ದರ್ಶನ:
ಕರ್ನಾಟಕದ ಕಲಾ ಪ್ರದರ್ಶನಗಳಾದ ಭರತನಾಟ್ಯ, ಯಕ್ಷಗಾನ, ವೀರಗಾಸೆ, ಕಂಸಾಳೆ, ಚೆಂಡೆ ವಾದನ ಮೊದಲಾದ ಜಾನಪದ ನೃತ್ಯ ಪ್ರದರ್ಶನ ನೀಡಿದರು.
ಭಾರತ ಮಾತೆ, ಸಾಮಾಜಿಕ ಪಿಡುಗುಗಳ ಕುರಿತ ರೂಪಕ, ನವರಾತ್ರಿ ಅಂಗವಾಗಿ ವಿಶೇಷ ನೃತ್ಯ, ಶಿವ ತಾಂಡವ ನೃತ್ಯಗಳಿಗೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದರು. ಅದರಲ್ಲೂ ಕುಂಚ- ಗಾನ- ಸಂಗೀತ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ಪ್ರತಿಭಾ ಪ್ರದರ್ಶನ ವೀಕ್ಷಿಸಿದ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಮೆಚ್ಚುಗೆ ವ್ಯಕ್ತಪಡಿಸಿದರು.
ಉಪನ್ಯಾಸಕರು ಹಾಗೂ ಪೋಷಕರು, ಮಕ್ಕಳ ಪ್ರತಿಭಾ ಪ್ರದರ್ಶನ ವೀಕ್ಷಿಸಿ, ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.