Wednesday, January 29, 2025
Homeಯಕ್ಷಗಾನನಿಷ್ಠಾವಂತ ಯುವ ಮದ್ದಳೆಗಾರ ಶ್ರೀ ರಾಜೇಶ ಆಚಾರ್ಯ ಮಡಂತ್ಯಾರು 

ನಿಷ್ಠಾವಂತ ಯುವ ಮದ್ದಳೆಗಾರ ಶ್ರೀ ರಾಜೇಶ ಆಚಾರ್ಯ ಮಡಂತ್ಯಾರು 

ಯಕ್ಷಗಾನದಲ್ಲಿ ಇಂದು ಅನೇಕ ಯುವ, ಉತ್ಸಾಹೀ ಮದ್ದಳೆಗಾರರು ಕಲಾಸೇವೆಯನ್ನು ಮಾಡುತ್ತಿರುವುದು ಸಂತಸದ ವಿಚಾರ. ಯಕ್ಷಗಾನದ ಹಿಮ್ಮೇಳ ವಿಭಾಗವನ್ನು ಮೆರೆಸುವ ಕಾರ್ಯವು ಇವರಿಂದ ನಡೆಯಲಿ. ಪ್ರಸ್ತುತ ವೃತ್ತಿ ಕಲಾವಿದನಾಗಿ ತಿರುಗಾಟ ನಡೆಸುತ್ತಿರುವ ವಾದನಕಾರರಲ್ಲಿ ಶ್ರೀ ರಾಜೇಶ ಆಚಾರ್ಯ ಮಡಂತ್ಯಾರು ಅವರೂ ಒಬ್ಬರು.

ನಿಷ್ಠಾವಂತ, ಯುವ ವಾದಕರಾದ  ಶ್ರೀ ರಾಜೇಶ ಆಚಾರ್ಯರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. ತೆರೆದುಕೊಳ್ಳುವ ಸ್ವಭಾವ ಇವರದಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವ. ತಮ್ಮ ಕರ್ತವ್ಯವನ್ನು ಮುಗಿಸಿ ತಮ್ಮ ಪಾಡಿಗೆ ತಾವಿರುತ್ತಾರೆ. ಪ್ರದರ್ಶನಕ್ಕೆ ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. 

ಕಟೀಲು ಮೇಳದ ಮದ್ದಳೆಗಾರ  ಶ್ರೀ ರಾಜೇಶ ಆಚಾರ್ಯರ ಹುಟ್ಟೂರು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಪಾರೆಂಕಿ ಪುಣ್ಕೆದೊಟ್ಟು ಎಂಬಲ್ಲಿ. 1977ನೇ ಇಸವಿ ಮೇ ಒಂದರಂದು ಶ್ರೀನಿವಾಸ ಆಚಾರ್ಯ ಮತ್ತು ಶ್ರೀಮತಿ ಶಾರದಾ ದಂಪತಿಗಳ ಪುತ್ರನಾಗಿ ಜನನ. ಇವರು ಓದಿದ್ದು ಹತ್ತನೇ ತರಗತಿ ವರೆಗೆ. 7ನೇ ತರಗತಿ ವರೆಗೆ ಗಾರ್ಡಿಯನ್ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಹತ್ತನೇ ತರಗತಿ ವರೆಗೆ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ.

ಅನಿವಾರ್ಯವಾಗಿ ಓದು ನಿಲ್ಲಿಸಬೇಕಾಗಿ ಬಂದಿತ್ತು.(ತಂದೆಯವರ ಅಸೌಖ್ಯತೆಯ ಕಾರಣ) ರಾಜೇಶರ ತಂದೆ ಶ್ರೀನಿವಾಸ ಆಚಾರ್ಯರು ತಮ್ಮ ಕುಲಕಸುಬನ್ನು ಮಾಡುತ್ತಿದ್ದರು. ಚಿನ್ನ, ಬೆಳ್ಳಿ, ಕಬ್ಬಿಣ ಮತ್ತು ಮರದ ಕೆಲಸಗಳನ್ನು ಬಲ್ಲವರಾಗಿದ್ದರು. ರಾಜೇಶರ ಅಣ್ಣಂದಿರ ಪೈಕಿ ಒಬ್ಬರಾದ ಶ್ರೀ ಜಗದೀಶ ಆಚಾರ್ಯರು ತಾಳಮದ್ದಳೆ ಅರ್ಥಧಾರಿಯಾಗಿದ್ದರು. (ಹವ್ಯಾಸೀ) ಮತ್ತೊಬ್ಬ ಅಣ್ಣ ಶ್ರೀ ಜನಾರ್ದನ ಆಚಾರ್ಯ ಬಂಟ್ವಾಳದಲ್ಲಿ ಚಿನ್ನದ ಕೆಲಸವನ್ನು ಮಾಡುತ್ತಿದ್ದಾರೆ.

ಶ್ರೀ ರಾಜೇಶ ಆಚಾರ್ಯರಿಗೆ ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಇತ್ತು. ವಿದ್ಯಾರ್ಥಿಯಾಗಿದ್ದಾಗ ಡೇರೆ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ಇವರಿಗೆ ಹೆಚ್ಚಿನ ಆಸಕ್ತಿ ಇದ್ದುದು ಹಿಮ್ಮೇಳದಲ್ಲಿ. ಬಾಲಕನಾಗಿರುವಾಗಲೇ ಯಕ್ಷಗಾನ ಚೆಂಡೆವಾದಕನಾಗಬೇಕೆಂಬ ಕನಸು ಕಂಡಿದ್ದರು. ತೆಂಕುತಿಟ್ಟಿನ ಹೆಸರಾಂತ ಮದ್ದಳೆಗಾರರಾದ ಶ್ರೀ ಕಡಬ ನಾರಾಯಣ ಆಚಾರ್ಯರು ಆಗ ಮಡಂತ್ಯಾರಿನಲ್ಲಿ ವಾಸವಾಗಿದ್ದರು. ಅವರು ಮನೆಯಲ್ಲಿ ಕಲಿಕಾಸಕ್ತರಿಗೆ ತರಬೇತಿಯನ್ನು ನೀಡುತ್ತಿದ್ದರು.

ಅಣ್ಣಂದಿರ ಪ್ರೋತ್ಸಾಹದಂತೆ ರಾಜೇಶ ಆಚಾರ್ಯರು ಕಡಬ ನಾರಾಯಣ ಆಚಾರ್ಯರಿಂದ ವಾದನ ಕ್ರಮವನ್ನು ಅಭ್ಯಸಿಸಿದರು. ಬಳಿಕ 2001ರಲ್ಲಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಮನೆಗೆ ತೆರಳಿ ತರಬೇತಿಯನ್ನು ಪಡೆದರು. ಶ್ರೀ ರಾಜೇಶರಿಗೆ ಚೆಂಡೆ ನುಡಿಸುವುದರಲ್ಲಿ ಹೆಚ್ಚಿನ ಆಸಕ್ತಿ. ಹಾಗೆಂದು ಮದ್ದಳೆಯನ್ನೂ ಚೆನ್ನಾಗಿ ಬಾರಿಸಬಲ್ಲರು. ಮೊದಲಾಗಿ ರಂಗವೇರಿ ಚೆಂಡೆ ಬಾರಿಸಿದ್ದು 2003ರಲ್ಲಿ. ಬಳಿಕ ಊರ ಪರವೂರ ಕಾರ್ಯಕ್ರಮಗಳಲ್ಲಿ ಭಾಗಿ.

ಕಡಬ ನಾರಾಯಣ ಆಚಾರ್ಯರ ಪುತ್ರ ಶ್ರೀ ವಿನಯ ಆಚಾರ್ಯರು ಪ್ರದರ್ಶನಗಳಿಗೆ ರಾಜೇಶ್ ಅವರನ್ನು ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಊರ ಪರವೂರ ಪ್ರದರ್ಶನಗಳಲ್ಲಿ ಚೆಂಡೆ ಮದ್ದಳೆ ನುಡಿಸಿ ಅನುಭವ ಗಳಿಸಿಕೊಂಡರು. ಈ ಸಂದರ್ಭದಲ್ಲಿ ಅಣ್ಣ ಜನಾರ್ದನ ಆಚಾರ್ಯರಿಂದ ಬಂಟ್ವಾಳದಲ್ಲಿ ಚಿನ್ನದ ಕೆಲಸವನ್ನೂ ಕಲಿತಿದ್ದರು. ಆ ಕೆಲಸದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಅಲ್ಲದೆ ಕಲಾವಿದರು ರಜೆ ಮಾಡಿದಾಗ ಅನಿವಾರ್ಯಕ್ಕೆ ಕಟೀಲು, ಬಪ್ಪನಾಡು, ಸುಂಕದಕಟ್ಟೆ, ತಲಕಳ ಮೇಳಗಳಲ್ಲಿ ಕಲಾ ಸೇವೆಯನ್ನು ಮಾಡುತ್ತಾ ಬಂದರು. ಜತೆಗೆ ಚಿನ್ನದ ಕೆಲಸವನ್ನೂ ಮಾಡುತ್ತಿದ್ದರು. ಶ್ರೀ ರಾಜೇಶ್ ಆಚಾರ್ಯರು ವೃತ್ತಿ ಕಲಾವಿದರಾಗಿ ಮೇಳದ ತಿರುಗಾಟ ಆರಂಭಿಸಿದ್ದು 2011ರಲ್ಲಿ. ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟರ ಹೇಳಿಕೆಯಂತೆ ಮೇಳಕ್ಕೆ ಸೇರಿದ್ದರು. ಕಳೆದ ಹನ್ನೆರಡು ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಕುಬಣೂರು ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಪ್ರಸಾದ್ ಬಲಿಪ, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಅಂಡಾಲ ದೇವಿಪ್ರಸಾದ್ ಶೆಟ್ಟಿ, ಬೊಂದೇಲ್ ಸತೀಶ್ ಶೆಟ್ಟಿ, ಮೋಹನ ಶಿಶಿಲ, ದೇವಿಪ್ರಸಾದ್ ಆಳ್ವ ಮೊದಲಾದವರೊಂದಿಗೆ ತಿರುಗಾಟ ನಡೆಸಿದ್ದಾರೆ. ಚೆಂಡೆ ಮದ್ದಳೆಗಾರಿಕೆಯಲ್ಲಿ ಮಿಜಾರು ಮೋಹನ ಶೆಟ್ಟಿಗಾರ್, ಮುರಾರಿ ಕಡಂಬಳಿತ್ತಾಯ, ಮಿಜಾರು ದಯಾನಂದ ಶೆಟ್ಟಿಗಾರ್, ಮೊದಲಾದವರ ಒಡನಾಟ, ಸಹಕಾರವು ಇವರಿಗೆ ದೊರಕಿದೆ.

ಪೂಂಜರೊಂದಿಗೆ ತಿರುಗಾಟ ಮರೆಯಲಾಗದ ಅನುಭವವೆಂದು ಶ್ರೀ ರಾಜೇಶರು ಅದನ್ನು ನೆನಪಿಸುತ್ತಾರೆ. ಕಲಿಯುತ್ತಾ ಬೆಳೆಯುವಾಗ ಗುರುಗಳ ಪುತ್ರ ಶ್ರೀ ವಿನಯ ಆಚಾರ್ಯರ ಸಹಕಾರವೂ ದೊರೆತಿತ್ತು. ಒಂದನೇ ಮೇಳದಲ್ಲಿ ಅಂಡಾಲ ದೇವಿಪ್ರಸಾದ ಶೆಟ್ರು ಮತ್ತು ಮುರಾರಿ ಕಡಂಬಳಿತ್ತಾಯರ ಪ್ರೋತ್ಸಾಹವೂ ಸಿಕ್ಕಿತ್ತು. ಮಳೆಗಾಲದಲ್ಲಿ ಶ್ರೀ ರಾಜೇಶರು ಮುಂಬಯಿಯಲ್ಲಿ ಅಜೆಕಾರು ಕಲಾಭಿಮಾನೀ ಬಳಗವು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಎರಡು ಬಾರಿ ಭಾಗವಹಿಸಿದ್ದಾರೆ.

ವಿದ್ಯಾ ಕೋಳ್ಯೂರು ಅವರ “ಯಕ್ಷ ಮಂಜೂಷ” ತಂಡದಲ್ಲಿದ್ದು ದೆಹಲಿ, ಹಿಮಾಚಲ ಪ್ರದೇಶದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಶ್ರೀ ಶರತ್ ಕುಮಾರ್ ಕದ್ರಿ ಅವರ ಸಹಕಾರ, ಪ್ರೋತ್ಸಾಹವೂ ಇತ್ತು. ಶರತ್ ಅವರ ಹವ್ಯಾಸೀ ಬಳಗ ಕದ್ರಿ ತಂಡದ ಸದಸ್ಯನಾಗಿ ಕರ್ನಾಟಕದ ಹಲವೆಡೆ ನಡೆದ ಪ್ರದರ್ಶನಗಳಲ್ಲಿ ಚೆಂಡೆ ನುಡಿಸಿದ್ದರು. ಕಾರ್ಯಕ್ರಮಕ್ಕೆ ಸ್ವಲ್ಪ ಮುಂಚಿತವಾಗಿಯೇ ಬಂದು ಪೂರ್ವಸಿದ್ಧತೆಗಳೊಂದಿಗೆ ರಂಗವೇರುವ ನಿಷ್ಠಾವಂತ ಹಿಮ್ಮೇಳವಾದಕ ಶ್ರೀ ರಾಜೇಶ್ ಆಚಾರ್ಯ ಮಡಂತ್ಯಾರು.

ಇವರ ಪತ್ನಿ ಶ್ರೀಮತಿ ಜಯರೇಖಾ ಗೃಹಣಿ. (2017ರಲ್ಲಿ ವಿವಾಹ) ರಾಜೇಶ್, ಜಯರೇಖಾ ದಂಪತಿಗಳಿಗೆ ಓರ್ವ ಪುತ್ರ. ಮಾ| ರಜತ್ ಆರ್. ಆಚಾರ್ಯ (ನಾಲ್ಕು ವರ್ಷ ವಯಸ್ಸು) ಮಾ| ರಜತ್ ಗೆ ಅತ್ಯುತ್ತಮ ಭವಿಷ್ಯವು ದೊರಕಲಿ. ಶ್ರೀ ರಾಜೇಶ್ ಆಚಾರ್ಯರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ದೊರೆಯಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments