ಕನ್ನಡ ಭಾಷೆ ಪರಿಪೂರ್ಣವಾದದ್ದು : ನಾಡೋಜ ಡಾ. ಮಹೇಶ್ ಜೋಷಿ
21ನೇ ಪುತ್ತೂರು ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಲಲಿತಾಂಬಿಕಾ ವೇದಿಕೆಯಲ್ಲಿ ಕಾರ್ಯಕ್ರಮ
ಪುತ್ತೂರು: ಮಾತನಾಡುವಂತೆ ಬರೆಯುವ, ಬರೆಯುವಂತೆ ಮಾತನಾಡುವ ಜಗತ್ತಿನ ಕೇವಲ ಮೂರು ಪರಿಪೂರ್ಣ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಖಾಸಗಿ ಸಂಸ್ಥೆಯೊಂದು ಈ ಬಗ್ಗೆ ವಿಶ್ವಾದ್ಯಂತ ಸಂಶೋಧನೆ ನಡೆಸಿದ್ದು, ಸಂಸ್ಕೃತ, ಗ್ರೀಕ್ ಹಾಗೂ ಕನ್ನಡ ಭಾಷೆಗಳಷ್ಟೇ ಪರಿಪೂರ್ಣ ಎಂಬುದನ್ನು ನಿರೂಪಿಸಿದೆ.
ಜಗತ್ತಿನ್ಯಾದ್ಯಂತ ಖ್ಯಾತವಾಗಿರುವ ಇಂಗ್ಲಿಷ್ ಹಾಗೂ ಇತರೆ ಭಾಷೆಗಳಲ್ಲೂ ಲೋಪವಿದೆ ಎಂದು ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿರುವ ಲಲಿತಾಂಬಿಕಾ ವೇದಿಕೆಯಲ್ಲಿ 21ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ವಿಶೇಷ ಕೊಡುಗೆ ನೀಡಿದೆ. ಕನ್ನಡ ಮಾತನಾಡುವಂತೆ ಬರೆಯುವ, ಬರೆಯುವಂತೆ ಮಾತನಾಡುವ, ಮಾತನಾಡಿದಂತೆ ನಡೆದುಕೊಳ್ಳುವ ಏಕೈಕ ಊರು ಅದು ಕರಾವಳಿ ಪ್ರದೇಶ. ಕನ್ನಡ ಭಾಷೆಯನ್ನು ಬೇರು ಮಟ್ಟದಲ್ಲಿ ಭದ್ರವಾದ ಅಡಿಪಾಯ ಹಾಕಬೇಕಾದ ಅವಶ್ಯಕತೆಯಿದೆ. ಆದ್ದರಿಂದ ಮುಂದೆ ತಾಲೂಕು ಮಾತ್ರವಲ್ಲ ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿಯೂ ಕನ್ನಡವನ್ನು ಬಲಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾಷೆ ಬೆಳೆಸುವ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದೇನೆ ಎಂದರು.

ಮನೆಗಳಲ್ಲಿ ಭಾಷೆಯ ಆಸಕ್ತಿ ಮೂಡಲಿ:
ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಹೆಚ್.ಜಿ. ಅಧ್ಯಕ್ಷೀಯ ಮಾತುಗಳನ್ನಾಡಿ ಭಾಷೆ ಉಳಿಸುವ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಬಲಪಡಿಸಬೇಕು. ಆಧುನಿಕ ದಿನಮಾನಗಳಿಗೆ ಒಗ್ಗಿಕೊಳ್ಳುವ ನೆಲೆಯಲ್ಲಿ ಕನ್ನಡ ಶಾಲೆಗಳನ್ನು ಬಲಪಡಿಸುವ ಕೆಲಸ ನಡೆಯಬೇಕು. ಕನ್ನಡ ಶಾಲೆಗಳಿಗೆ ತಾರತಮ್ಯ ಮಾಡದೆ ಸರ್ಕಾರ ಅನುದಾನ ನೀಡುವ ಮೂಲಕ ಕನ್ನಡದ ಕಾಯಕಕ್ಕೆ ಬೆಂಬಲ ನೀಡಬೇಕು. ಮನೆಯ ಒಳಗಿನ ಪರಿಸರ ಕನ್ನಡಮಯವಾದಲ್ಲಿ ಶಾಲೆಯಲ್ಲಿ ಮಗು ಯಾವ ಮಾಧ್ಯಮದಲ್ಲಿ ಕಲಿತರೂ ಯಾವುದೇ ಪರಿಣಾಮ ಬೀರುವುದಿಲ್ಲ. ಮಕ್ಕಳಲ್ಲಿ ಕನ್ನಡಾಸಕ್ತಿ ಮೂಡಿರುತ್ತದೆ ಎಂದರು.
ವರ್ತಮಾನದ ಜಗತ್ತು ತಂತ್ರಜ್ಞಾನದ ಮೇಲೆ ನಿಂತಿದ್ದು ಇಂದು ಎಲ್ಲರೂ ತಂತ್ರಜ್ಞಾನ ಅನಿವಾರ್ಯವಾಗಿ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಸ್ಥಿತಿ ಎದುರಾಗಿದೆ. ಕನ್ನಡದ ಸಾವಿರಾರು ಪುಸ್ತಕಗಳು ಜಾಲತಾಣಗಳಲ್ಲಿ ಲಭ್ಯವಾಗುತ್ತಿದೆ. ಇಂತಹ ಪುಸ್ತಕಗಳನ್ನು ಓದುವುದಕ್ಕೂ ಆಧುನಿಕ ಟ್ಯಾಬ್‌ಗಳು ಬಂದಿವೆ. ಯುವಜನಾಂಗ ಇದರೆಡೆಗೆ ನಿಧಾನವಾಗಿ ಸರಿಯುತ್ತಿದೆ. ಆದರೆ ಇದು ಪುಸ್ತಕವನ್ನು ಖರೀದಿಸಿ ಓದುವ ಅನುಭವ ನೀಡುವುದಿಲ್ಲ. ಸಾಮಾಜಿಕ ಮಾಧ್ಯಮಗಳ ಮೂಲಕ ಗ್ರಾಮಾಂತರ ಪ್ರದೇಶವನ್ನು ತಲುಪಲು ಸಾಧ್ಯವಾಗಿದೆ ಸಾಹಿತ್ಯ ತಲುಪಲು ಸಾಧ್ಯವಾಗಿದೆ ಎಂದರು.
ಸ್ಮರಣ ಸಂಚಿಕೆ ಸಿಂಧೂರ ಬಿಡುಗಡೆಗೊಳಿಸಿ ಮಾತನಾಡಿದ ಸಹಾಯಕ ಕಮಿಷನರ್ ಗಿರೀಶ್ ನಂದನ್, ಕನ್ನಡಕ್ಕೆ ವೀಶೇಷವಾದ ಭಾಷೆ ಸಂಸ್ಕೃತಿಯಿದೆ. ಮನೆಯಲ್ಲಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸಿದಲ್ಲಿ, ಮಕ್ಕಳು ವಿಚಾರಗಳನ್ನು ಪರಿಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಆಶಯ ನುಡಿಗಳನ್ನು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕ ಡಾ.ಮನಮೋಹನ್ ಸಮ್ಮೇಳನಾಧ್ಯಕ್ಷರ ಪರಿಚಯ ನೆರವೇರಿಸಿದರು.
ಈ ಸಂದರ್ಭದಲ್ಲಿ ನಾಡೋಜ ಡಾ. ಮಹೇಶ್ ಜೋಷಿ ಅವರಿಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರು ಭಗವದ್ಗೀತೆಯ ಕನ್ನಡ ಅನುವಾದ ಪುಸ್ತಕ ನೀಡಿದರು. ಸುಬ್ರಹ್ಮಣ್ಯ ನಟ್ಟೋಜ ಅವರಿಗೆ ಮಹೇಶ್ ಜೋಷಿ ಅವರು ಗೌರವಾರ್ಪಣೆ ಮಾಡಿದರು. ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ ಎಚ್.ಜಿ. ದಂಪತಿಯನ್ನು ಸಾಂಪ್ರದಾಯಿಕವಾಗಿ ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಎಸ್.ಜಿ. ಕೃಷ್ಣ ಅವರು ಸಮ್ಮೇಳನಾಧ್ಯಕ್ಷರಿಗೆ ಧ್ವಜ ಹಸ್ತಾಂತರ ಮಾಡಿದರು. ಕಲಾಪ್ರದರ್ಶನವನ್ನು ಸಾಹಿತಿ ವಸಂತ ತಾಳ್ತಜೆ ಉದ್ಘಾಟಿಸಿದರು. ವಸ್ತುಪ್ರದರ್ಶನ ಉದ್ಘಾಟಿಸಿದ ನಗರಸಭೆ ಉಪಾಧ್ಯಕ್ಷ ವಿದ್ಯಾಗೌರಿ ಶುಭಹಾರೈಸಿದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ. ಶ್ರೀಧರ ಹೆಚ್.ಜಿ., ಕ.ಸಾ.ಪ. ಜಿಲ್ಲಾ ಗೌರವ ಕೋಶಾಧ್ಯಕ್ಷ ಬಿ. ಐತಪ್ಪ ನಾಯ್ಕ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಸ್.ಜಿ. ಕೃಷ್ಣ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್., ತಹಶೀಲ್ದಾರ್ ನಗರ ಸಭೆಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ನಿಸರ್ಗಪ್ರಿಯ, ಕ.ಸಾಪ. ಜಿಲ್ಲಾ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ., ಕ.ಸಾ.ಪ. ತಾಲೂಕು ಅಧ್ಯಕ್ಷರಾದ ಡಾ. ಮಂಜುನಾಥ್ ಎಸ್., ವಿಶ್ವನಾಥ್, ಡಿ.ಯದುಪತಿ ಗೌಡ, ಡಾ. ಧನಂಜಯ ಕುಂಬ್ಳೆ, ವೇಣುಗೋಪಾಲ ಶೆಟ್ಟಿ, ಗಾಯತ್ರಿ ಎಸ್. ಉಡುಪ, ಡಾ. ಪೀಟರ್ ವಿಲ್ಸನ್ ಪ್ರಭಾಕರ್, ಕ.ಸಾ.ಪ. ತಾಲೂಕು ಸದಸ್ಯ ಡಾ. ವಿಜಯಕುಮಾರ ಮೊಳೆಯಾರ, ಪತ್ರಕರ್ತ ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿದರು. ಕ.ಸಾ.ಪ. ತಾಲೂಕು ಘಟಕ ಗೌರವ ಕೋಶಾಧ್ಯಕ್ಷ ಡಾ. ಹರ್ಷಕುಮಾರ್ ರೈ ವಂದಿಸಿದರು. ರಾಜೇಶ್ ಬನ್ನೂರು, ಪುಷ್ಪಲತಾ ಎಂ. ನಿರೂಪಿಸಿದರು.
ಸಭಾಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನಿಂದ ಅಂಬಿಕಾ ವಿದ್ಯಾಲಯದೆಡೆಗೆ ಕನ್ನಡ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷರ ವೈಭವದ ಮೆರವಣಿಗೆ ಸಾಗಿ ಬಂತು. ಮೆರವಣಿಗೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ ಮುಳಿಯ ಉದ್ಘಾಟಿಸಿದರು.
