ಶ್ರೀ ಸುರೇಶ್ ಬಳ್ಳಿ ಇವರು ಅನುಭವಿ ಬಣ್ಣದ ವೇಷಧಾರಿಗಳಲ್ಲಿ ಒಬ್ಬರು. ಪಾತ್ರೋಚಿತವಾದ ಕುಣಿತ ಮತ್ತು ಮಾತುಗಳಿಂದ ಇವರು ಕಿರೀಟ ವೇಷಗಳನ್ನೂ ನಿರ್ವಹಿಸಬಲ್ಲ ಸಮರ್ಥರು. 1989ರಿಂದ ತೊಡಗಿ ಕಳೆದ ಮೂವತ್ತಮೂರು ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಶ್ರೀ ದೇವಿ ಮಹಾತ್ಮೆ ಪ್ರಸಂಗದ ಮಹಿಷಾಸುರ ಪಾತ್ರಧಾರಿಗಳಲ್ಲಿ ಇವರೂ ಒಬ್ಬರು. ರಂಗದಲ್ಲಿ ಬಣ್ಣದ ವೇಷಧಾರಿಯಾಗಿ ಅಬ್ಬರಿಸಿದರೂ ಯಕ್ಷಗಾನ ಕ್ಷೇತ್ರದಲ್ಲಿ ಸದ್ದಿಲ್ಲದ ಕಲಾಸೇವೆ ಇವರದ್ದು. ಕಟೀಲು ಮೇಳದ ಅನುಭವಿ ಬಣ್ಣದ ವೇಷಧಾರಿ ಶ್ರೀ ಸುರೇಶ್ ಅವರ ಹುಟ್ಟೂರು ಮಂಗಳೂರು ತಾಲೂಕಿನ ಕೆಲೆಂಜಾರು ಗ್ರಾಮದ ಬಳ್ಳಿ ಎಂಬಲ್ಲಿ. ಇದು ಕುಪ್ಪೆಪದವು ಸಮೀಪದ ಹಳ್ಳಿ. 1962ನೇ ಇಸವಿ ನವೆಂಬರ್ 1 ರಂದು ಶ್ರೀ ಚೆನ್ನಪ್ಪ ಪೂಜಾರಿ ಮತ್ತು ಶ್ರೀಮತಿ ಶಾರದಾ ದಂಪತಿಗಳಿಗೆ ಪುತ್ರನಾಗಿ ಜನನ.
ಶ್ರೀ ಚೆನ್ನಪ್ಪ ಪೂಜಾರಿ ಅವರ ಆರು ಮಂದಿ ಗಂಡು ಮಕ್ಕಳಲ್ಲಿ ಶ್ರೀ ಸುರೇಶ್ ಬಳ್ಳಿ ಅವರು ಐದನೆಯವರು. ಶ್ರೀ ಚೆನ್ನಪ್ಪ ಪೂಜಾರಿ ಕೃಷಿಕರೂ ಕಲಾಸಕ್ತರೂ ಆಗಿದ್ದರು. ಶ್ರೀ ಸುರೇಶ್ ಬಳ್ಳಿ ಅವರ ಅಣ್ಣಂದಿರಾದ ಶ್ರೀ ರಮೇಶ್ ಬಳ್ಳಿ, ಶ್ರೀ ಪುರುಷೋತ್ತಮ ಬಳ್ಳಿ, ಶ್ರೀ ಪ್ರಕಾಶ್ ಬಳ್ಳಿ ಅವರು ಬೆಂಗಳೂರಿನಲ್ಲಿ ಉದ್ಯೋಗಿಗಳು. ತಮ್ಮ ಶ್ರೀ ಸತೀಶ್ ಬಳ್ಳಿ ಅವರೂ ಬೆಂಗಳೂರಿನಲ್ಲಿ ಉದ್ಯೋಗಿ. ಅಣ್ಣ ದಿವಂಗತ ಲೋಕೇಶ್ ಬಳ್ಳಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದವರು. ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗಿಯಾಗಿದ್ದರೂ ಇವರದು ಕೂಡು ಕುಟುಂಬ. ಎಲ್ಲರೂ ಒಗ್ಗಟ್ಟಿನಲ್ಲಿ ಒಂದಾಗಿ ವ್ಯವಹಾರ ಮಾಡುತ್ತಿದ್ದಾರೆ.
ಶ್ರೀ ಸುರೇಶ್ ಬಳ್ಳಿ ಅವರು ಓದಿದ್ದು ನಾಲ್ಕನೇ ತರಗತಿ ವರೆಗೆ. ಇವರು ಅಜ್ಜನ ಮನೆಯಲ್ಲಿ ಇದ್ದುಕೊಂಡು ಕುಲಶೇಖರ ಸಂತ ಜೋಸೆಫ್ ಶಾಲೆಯಲ್ಲಿ ಓದಿದವರು. ಸೋದರ ಮಾವಂದಿರ ಆಶ್ರಯವು ಇವರಿಗೆ ದೊರೆತಿತ್ತು. ಶಾಲೆ ಬಿಟ್ಟ ಬಳಿಕ ಮನೆಯಲ್ಲಿದ್ದು ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಬಾಲ್ಯದಲ್ಲಿಯೇ ಯಕ್ಷಗಾನ ಕಲಾಸಕ್ತಿ ಇತ್ತು. ಪ್ರದರ್ಶನಗಳನ್ನು ನೋಡಿ ಆನಂದಿಸುತ್ತಿದ್ದರು. ತಾನೂ ಕಲಾವಿದನಾಗಬೇಕೆಂಬ ಆಸೆಯೂ ಹುಟ್ಟಿಕೊಂಡಿತ್ತು. ಸುಂಕದಕಟ್ಟೆ ಮೇಳದ ಕಲಾವಿದರಾದ ಬಜ್ಪೆ ಶ್ರೀ ದೇರಣ್ಣ ದೇವಾಡಿಗರಿಂದ ಯಕ್ಷಗಾನ ಹೆಜ್ಜೆಗಾರಿಕೆಯ ಅಭ್ಯಾಸ. ಏಕಾದಶೀ ದೇವಿ ಮಹಾತ್ಮೆ ಪ್ರಸಂಗದಲ್ಲಿ ರಾಕ್ಷಸ ಬಲ ವೇಷವನ್ನು ಧರಿಸಿ ರಂಗಪ್ರವೇಶ.
ಕುಪ್ಪೆಪದವಿನ ಶ್ರೀ ದುರ್ಗೇಶ್ವರೀ ಯಕ್ಷಗಾನ ಮಂಡಳಿಯಲ್ಲಿ ಸಕ್ರಿಯನಾಗಿ ವೇಷ ಮಾಡುತ್ತಾ ಬಂದಿದ್ದರು. ಕಿರೀಟ ವೇಷ ಮತ್ತು ಬಣ್ಣದ ವೇಷಗಳಲ್ಲಿ ಇವರಿಗೆ ಆಸಕ್ತಿ. ಮೇಳಕ್ಕೆ ಸೇರುವ ಮೊದಲೇ ರುಕ್ಮ, ಅಜಮುಖಿ, ಘೋರರೂಪಿ, ತಾರಕಾಸುರ ಮೊದಲಾದ ವೇಷಗಳನ್ನು ಮಾಡುವ ಅವಕಾಶವು ಸಿಕ್ಕಿತ್ತು. ಹವ್ಯಾಸೀ ಕಲಾವಿದರಾಗಿ ಶ್ರೀ ಸುರೇಶ್ ಬಳ್ಳಿ ಮತ್ತು ಶ್ರೀ ಅಶೋಕ ದೇವಾಡಿಗರಲ್ಲಿ ಇರುವ ಪ್ರತಿಭೆಯನ್ನು ಕಲಾಭಿಮಾನಿಗಳಾದ ಶ್ರೀ ಮನೋಹರ ಶೆಟ್ರು ಗುರುತಿಸಿದ್ದರು. ಅವರು ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ವಿಠಲ ಶೆಟ್ಟರಲ್ಲಿ ಮಾತನಾಡಿ ಶ್ರೀ ಸುರೇಶ್ ಬಳ್ಳಿ ಅವರನ್ನು ಕಟೀಲು ಮೇಳಕ್ಕೆ ಸೇರಿಸಿದ್ದರು.
ಶ್ರೀ ಸುರೇಶ್ ಬಳ್ಳಿ ಅವರು ತಿರುಗಾಟ ಆರಂಭಿಸಿದ್ದು ಕಟೀಲು ಮೂರನೇ ಮೇಳದಲ್ಲಿ 1989ರಿಂದ ತೊಡಗಿ ಮೂರನೇ ಮೇಳದಲ್ಲಿ 4 ವರ್ಷ ವ್ಯವಸಾಯ. ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆ. ಅವರ ನಿರ್ದೇಶನವೂ ಸಿಕ್ಕಿತ್ತು. ನೆಡ್ಲೆ ನರಸಿಂಹ ಭಟ್, ಅಡೂರು ಗಣೇಶ್ ರಾವ್, ಕೇದಗಡಿ ಗುಡ್ಡಪ್ಪ ಗೌಡ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಪುಂಡರೀಕಾಕ್ಷ ಉಪಾಧ್ಯಾಯ, ಸಂಜೀವ ಚೌಟ ಮೊದಲಾದವರ ಒಡನಾಟವೂ ದೊರಕಿತ್ತು. ಈ ಸಂದರ್ಭದಲ್ಲಿ ಕಿರೀಟ ಮತ್ತು ಬಣ್ಣದ ವೇಷಗಳನ್ನೂ ಮಾಡುತ್ತಿದ್ದರು. ಒಂದೆರಡು ಬಾರಿ ಮಹಿಷಾಸುರ ವೇಷವನ್ನು ಮಾಡಲು ಅವಕಾಶ ಸಿಕ್ಕಿತ್ತು.
ಬಳಿಕ ಕಟೀಲು ನಾಲ್ಕನೇ ಮೇಳದಲ್ಲಿ ವ್ಯವಸಾಯ. ನಾಲ್ಕನೇ ಮೇಳದಲ್ಲಿ ಐದನೇ ವರ್ಷದ ತಿರುಗಾಟ ನಡೆಸುವಾಗ ಇವರು ಮಹಿಷಾಸುರ ವೇಷಕ್ಕೆ ಆಯ್ಕೆಯಾಗಿದ್ದರು. ಜತೆಗೆ ಬೇರೆ ಪ್ರಸಂಗಗಳಲ್ಲಿ ಕೇಸರಿತಟ್ಟೆ ವೇಷ ಮತ್ತು ಕಿರೀಟ ವೇಷಗಳಲ್ಲೂ ಕಾಣಿಸಿಕೊಂಡಿದ್ದರು. ತಾರಕಾಸುರ, ಶತ್ರುಪ್ರಸೂಧನ, ತಮಾಸುರ, ಬಲಿ, ರಾವಣ, ಭಂಡಾಸುರ, ಕಾಲನೇಮಿ, ಶೂರ್ಪನಖಿ, ಪೂತನಿ, ಅಜಮುಖಿ, ಶೂರಪದ್ಮಾಸುರ, ಕರಾಳನೇತ್ರೆ, ಯಮ ಮೊದಲಾದ ವೇಷಗಳಲ್ಲಿ ಕಾಣಿಸಿಕೊಂಡಿದ್ದರು. ನಾಲ್ಕನೇ ಮೇಳದಲ್ಲಿ ಹದಿನೈದು ವರ್ಷ ವ್ಯವಸಾಯ. ಬಳಿಕ ಎರಡನೇ ಮೇಳದಲ್ಲಿ ಎರಡು ವರ್ಷ ವ್ಯವಸಾಯ ಮಾಡಿದ್ದರು. ಪಟ್ಲ ಶ್ರೀ ಸತೀಶ್ ಶೆಟ್ಟಿ ಮತ್ತು ಶ್ರೀ ಪ್ರಸಾದ ಬಲಿಪರು ಭಾಗವತರಾಗಿದ್ದರು.
ಬಳಿಕ ಶ್ರೀ ಗೋಪಾಲಕೃಷ್ಣ ಮಯ್ಯರ ಭಾಗವತಿಕೆಯಡಿ ಕಟೀಲು ಮೂರನೆಯ ಮೇಳದಲ್ಲಿ ಹತ್ತು ವರ್ಷ ವ್ಯವಸಾಯ. ಕಳೆದ ಎರಡು ವರ್ಷಗಳಿಂದ ಕಟೀಲು ಒಂದನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪ್ರಥಮ ವರ್ಷ ಒಂದನೇ ಮೇಳದಲ್ಲಿ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜರು ಮುಖ್ಯ ಭಾಗವತರಾಗಿದ್ದರು. ಪ್ರಸ್ತುತ ಅಂಡಾಲ ಶ್ರೀ ದೇವಿಪ್ರಸಾದ ಶೆಟ್ರು ಭಾಗವತರಾಗಿ ಒಂದನೇ ಮೇಳವನ್ನು ಮುನ್ನಡೆಸುತ್ತಿದ್ದಾರೆ. ಕಟೀಲು ಮೇಳದ ತಿರುಗಾಟ ಆರಂಭಿಸಿದ ವರ್ಷಗಳಲ್ಲಿ ಸಂಚಾಲಕರಾಗಿದ್ದ ಶ್ರೀ ಕಲ್ಲಾಡಿ ವಿಠಲ ಶೆಟ್ಟರ ಸಹಕಾರವಿತ್ತು. ಪ್ರಸ್ತುತ ಸಂಚಾಲಕರಾದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಸಹಕಾರ ಪ್ರೋತ್ಸಾಹವೂ ಇದೆ. ಜತೆಗೆ ಕಟೀಲು ಕ್ಷೇತ್ರದ ಶ್ರೀ ಆಸ್ರಣ್ಣ ಬಂಧುಗಳ ಸಹಕಾರ, ಪ್ರೋತ್ಸಾಹವನ್ನೂ ಶ್ರೀ ಸುರೇಶ್ ಬಳ್ಳಿ ಅವರು ಕೃತಜ್ಞತೆಯಿಂದ ನೆನಪಿಸುತ್ತಾರೆ.
ಮಳೆಗಾಲದ ಪ್ರದರ್ಶನಗಳಲ್ಲಿ ಇವರಿಗೆ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ ಮತ್ತು ಬೆಳ್ಳಾರೆ ಶ್ರೀ ಮಂಜುನಾಥ ಭಟ್ ಇವರ ಒಡನಾಟವೂ ನಿರ್ದೇಶನವೂ ದೊರಕಿತ್ತು. ಮುಂಬಯಿ ಮತ್ತು ಬೆಂಗಳೂರು ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಸಿಂಗಾಪುರದಲ್ಲಿ ಕಟೀಲು ಮೇಳದ ಕಲಾವಿದರಿಂದ ನಡೆದ ಐದು ಪ್ರದರ್ಶನಗಳಲ್ಲೂ ಭಾಗಿಯಾಗಿದ್ದಾರೆ.
ಶ್ರೀ ಸುರೇಶ್ ಬಳ್ಳಿ ಅವರು ಕಲಾಬದುಕಿನಲ್ಲಿಯೂ ಸಾಂಸಾರಿಕವಾಗಿಯೂ ತೃಪ್ತರು. ಇವರ ಪತ್ನಿ ಶ್ರೀಮತಿ ಗೀತಾ (2001ರಲ್ಲಿ ವಿವಾಹ) ಶ್ರೀ ಸುರೇಶ್ ಬಳ್ಳಿ, ಗೀತಾ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕುಮಾರಿ ಶ್ರಾವ್ಯ. ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ. ಪುತ್ರ ಮಾ| ರಾಕೇಶ್. ಹತ್ತನೇ ತರಗತಿ ವಿದ್ಯಾರ್ಥಿ. ಮಕ್ಕಳಿಬ್ಬರಿಗೂ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಕಲಾ ವ್ಯವಸಾಯವು ಶ್ರೀ ಸುರೇಶ್ ಬಳ್ಳಿ ಅವರಿಂದ ನಿರಂತರವಾಗಿ ನಡೆಯಲಿ. ಅವರಿಗೆ ಸಕಲ ಭಾಗ್ಯಗಳನ್ನೂ ಕಲಾಮಾತೆಯು ಅನುಗ್ರಹಿಸಲಿ ಎಂಬ ಹಾರೈಕೆಗಳು.
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ