ಸಿರಿಬಾಗಿಲು- ಕಲಾ ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಚಟುವಟಿಕೆಯಲ್ಲಿ ನಿರತರಾಗಿರುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಯಕ್ಷಗಾನ ನಾಟ್ಯ ತರಗತಿಯನ್ನು ಮಂಗಳೂರು ವಿಶ್ವವಿದ್ಯಾಲಯದ ಡಾ.ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಶ್ರೀ ಶ್ರೀಪತಿ ಕಲ್ಲೂರಾಯರು ಉದ್ಘಾಟಿಸಿದರು.
ಹಲವಾರು ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಮೂಲಕ ನಿರತರಾಗಿರುವ ಪ್ರತಿಷ್ಠಾನವು, ಯಕ್ಷಗಾನ ನಾಟ್ಯ ತರಗತಿ ಆರಂಭಿಸಿರುವುದು ಸಂತಸ ವಿಚಾರ. ಈ ಹಿಂದೆ ಮಂಗಳೂರು ವಿಶ್ವವಿದ್ಯಾಲಯದಲ್ಲೂ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಸ್ಥಳೀಯ ಸಂಘ ಸಂಸ್ಥೆಗಳು ಯಕ್ಷಗಾನದ ಬೆಳವಣಿಗೆಯಲ್ಲಿ ಪ್ರದಾನ ಪಾತ್ರ ವಹಿಸುತ್ತಿದೆ.
ಹೆಚ್ಚಿನ ಪ್ರಸಿದ್ದ ಕಲಾವಿದರು ಸ್ಥಳೀಯ ಸಂಸ್ಥೆಗಳಿಂದಲೇ ಬೆಳೆದುಬಂದವರು .ನಮ್ಮನ್ನು ನಾವು ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕ್ಕೊಳ್ಳುವುದರಿಂದ ನಮ್ಮ ಸಂಸ್ಕೃತಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನವು ಇಂತಹ ಯೋಜನೆಯೊಂದಿಗೆ ವಿಶ್ವವಿದ್ಯಾಲಯ- ಯಕ್ಷ ದೇಗುಲವಾಗಲಿ ಎಂದು ಹರಸಿದರು.


ಮುಖ್ಯ ಅಥಿತಿಗಳಾದ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿಯವರು ಪಾರಂಪರ್ಯವಾಗಿ ಬಂದ ಕಲೆ ಇಂದು ಶಿಕ್ಷಣದ ಮೂಲಕ ಎಲ್ಲರನ್ನೂ ಸೆಳೆಯುವಂತಾಗಬೇಕು. ಸ್ಪಷ್ಟ ಕನ್ನಡ ಇಂದು ಯಕ್ಷಗಾನದಲ್ಲಿದೆ. ಗಡಿನಾಡು ಕಾಸರಗೋಡಿನಲ್ಲಿ ಸಿರಿಬಾಗಿಲು ಪ್ರತಿಷ್ಠಾನದಂತಹ ಹಲವು ಸಂಸ್ಥೆಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ವಲಯದ ಅಧಿಕಾರಿಗಳಾದ ಶ್ರೀ ಮುಖೇಶ್ ರವರು, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಯಸ್.ಯನ್.ರಾಮ ಶೆಟ್ಟಿ, ಶ್ರೀ ಜಯರಾಮ ರೈ ಸಿರಿಬಾಗಿಲು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿ, ಪ್ರಾಧ್ಯಾಪಕ ಶ್ರೀ ರಾಜಾರಾಮ ರಾವ್ ಮಿಯಪದವು ನಿರೂಪಿಸಿದರು. ಶ್ರೀ ಜಗದೀಶ್ ಕೂಡ್ಲು ಧನ್ಯವಾದವಿತ್ತರು.
ಕಟೀಲು ಮೇಳದ ಅನುಭವಿ ಪ್ರಸಿದ್ದ ಕಲಾವಿದರಾದ ಶ್ರೀ ಲಕ್ಷ್ಮಣ ಕುಮಾರ್ ಮರಕಡ ಇವರು ಶಿಕ್ಷಕರಾಗಿರುತ್ತಾರೆ. ಪ್ರತಿಷ್ಠಾನದ ವತಿಯಿಂದ ಶ್ರೀಯುತರಿಗೆ ಗೌರವಿಸಲಾಯಿತು.
ಬಳಿಕ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳಾದ ಶ್ರೀ ಮಂಜುನಾಥ ಸ್ವಸಹಾಯ ಸಂಘದ ಹಾಗು ನೇತ್ರಾವತಿ ಸ್ವಸಹಾಯ ಸಂಘಗಳ ದಶಮಾನೋತ್ಸವ ಕಾರ್ಯಕ್ರಮಗಳು ನಡೆದವು.