ತೆಂಕುತಿಟ್ಟಿನ ಪುಂಡುವೇಷಧಾರಿ ಶ್ರೀ ವೆಂಕಟೇಶ ಆಚಾರ್ಯ ಕಲ್ಲುಗುಂಡಿ ಅವರು ಕಟೀಲು ಮೇಳದ ಕಲಾವಿದ. ಇವರು ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು ಮೂವತ್ತು ವರ್ಷಗಳ ಅನುಭವಿ. ಪುಂಡು ವೇಷಗಳ ಜತೆ ಕಿರೀಟ ವೇಷಗಳನ್ನೂ ಮಾಡಬಲ್ಲರು. ಇವರ ನಾಟ್ಯ ಮತ್ತು ಗಿರಕಿ ಹಾರುವ ರೀತಿಯು ಬಲು ಚಂದ. ಚಂಡ ಮುಂಡರು, ಚಂಡ ಪ್ರಚಂಡರು, ಹುಂಡ ಪುಂಡರು, ಲಕ್ಷ್ಮಣ, ಅಭಿಮನ್ಯು, ಷಣ್ಮುಖ, ಸಿತಕೇತ, ಪ್ರಹ್ಲಾದ, ಶ್ರೀಕೃಷ್ಣ, ಬಬ್ರುವಾಹನ, ಹನುಮಂತ ಮೊದಲಾದ ಪಾತ್ರಗಳಲ್ಲಿ ಇವರ ನಿರ್ವಹಣೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಶ್ರೀ ವೆಂಕಟೇಶ ಆಚಾರ್ಯರು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವರ ದೊಡ್ಡಪ್ಪ ಶ್ರೀ ಕೃಷ್ಣಪ್ಪ ಆಚಾರ್ಯ ಮತ್ತು ಅಣ್ಣ ಶ್ರೀ ಶಿವಪ್ಪ ಆಚಾರ್ಯರೇ (ದೊಡ್ಡಪ್ಪನ ಮಗ ಅಣ್ಣ) ಕಾರಣರು ಮತ್ತು ಪ್ರೇರಕರು. ಕಲ್ಲುಗುಂಡಿಯವರಾದರೂ ಪ್ರಸ್ತುತ ಇವರು ಬಂಟ್ವಾಳ ತಾಲೂಕಿನ ಮಿತ್ತೂರು ಸಮೀಪ ಸ್ವಂತ ಮನೆಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಯಕ್ಷಗಾನ ಕಲಾವಿದನಾಗಿ ಮೇಳದ ವ್ಯವಸಾಯದ ಜತೆಗೆ ತಮ್ಮ ಕುಲವೃತ್ತಿಯನ್ನೂ ಮಾಡುತ್ತಿದ್ದಾರೆ. (ಕಬ್ಬಿಣದ ಕೆಲಸ)
ಶ್ರೀ ವೆಂಕಟೇಶ ಆಚಾರ್ಯರ ಹುಟ್ಟೂರು ಸುಳ್ಯ ತಾಲೂಕಿನ ಸಂಪಾಜೆ ಸಮೀಪದ ಕಲ್ಲುಗುಂಡಿ. ಶ್ರೀ ಲಿಂಗಪ್ಪ ಆಚಾರ್ಯ ಮತ್ತು ಶ್ರೀಮತಿ ಭವಾನಿ ದಂಪತಿಗಳ ಪುತ್ರನಾಗಿ ಜನನ. ಶ್ರೀ ಲಿಂಗಪ್ಪ ಆಚಾರ್ಯರು ಕುಲವೃತ್ತಿಯನ್ನು ತಿಳಿದವರಲ್ಲ. ಬದುಕಿಗಾಗಿ ಕೂಲಿ ಕೆಲಸವನ್ನು ಮಾಡುತ್ತಿದ್ದರು. ಶ್ರೀ ವೆಂಕಟೇಶ ಆಚಾರ್ಯರು ಓದಿದ್ದು 4ನೇ ತರಗತಿ ವರೆಗೆ. ಕಲ್ಲುಗುಂಡಿ ಶಾಲೆಯಲ್ಲಿ. ಬಡತನದ ಕಾರಣದಿಂದ ಹೆಚ್ಚಿನ ಕಲಿಕೆಯು ಸಾಧ್ಯವಾಗಿರಲಿಲ್ಲ. 4ನೇ ತರಗತಿಯ ವರೆಗೆ ಓದಿದ ಬಳಿಕ ತಮ್ಮ ದೊಡ್ಡಪ್ಪ ಶ್ರೀ ಕೃಷ್ಣಪ್ಪ ಆಚಾರ್ಯರಿಂದ ಕುಲವೃತ್ತಿಯ ತರಬೇತಿಯನ್ನು ಹೊಂದಿದರು. (ಕಬ್ಬಿಣದ ಕೆಲಸ) ಅವರು ಯಕ್ಷಗಾನಾಸಕ್ತರಾಗಿದ್ದರು.
ಅಣ್ಣ ಶ್ರೀ ಶಿವಪ್ಪ ಆಚಾರ್ಯರು ಉತ್ತಮ ಹವ್ಯಾಸಿ ವೇಷಧಾರಿಯಾಗಿದ್ದರು. ಮೂರು ವರ್ಷಗಳ ಕಾಲ ದೊಡ್ಡಪ್ಪ ಮತ್ತು ಅಣ್ಣನ ಜತೆ ಕುಲವೃತ್ತಿಯಲ್ಲಿ ತೊಡಗಿಸಿಕೊಂಡರು. ದೊಡ್ಡಪ್ಪ ಮತ್ತು ಅಣ್ಣನ ಒಡನಾಟವೇ ಶ್ರೀ ವೆಂಕಟೇಶ ಆಚಾರ್ಯರಿಗೆ ಯಕ್ಷಗಾನಾಸಕ್ತಿ ಹುಟ್ಟಲು ಕಾರಣವಾಗಿತ್ತು. ಮೇಳಕ್ಕೆ ಸೇರಲು ಸಲಹೆ ನೀಡಿದವರೂ ಇವರೇ. ಶ್ರೀ ಕೃಷ್ಣಪ್ಪ ಆಚಾರ್ಯರು (ದೊಡ್ಡಪ್ಪ) ತಮ್ಮ ಆತ್ಮೀಯರಾದ ಕೇದಗಡಿ ಗುಡ್ಡಪ್ಪ ಗೌಡರಿಗೆ ಈ ವಿಚಾರ ತಿಳಿಸಿದ್ದರು. ಸೇವೆಯಾಟದ ದಿನದಂದು ಸಂಪಾಜೆ ಶೀನಪ್ಪ ರೈಗಳ ಜತೆ ಕಟೀಲಿಗೆ ಬರಲು ಅವರು ಸೂಚಿಸಿದ್ದರು.

ಸಂಪಾಜೆಯವರೇ ಆದ ಖ್ಯಾತ ಕಲಾವಿದ ಶ್ರೀ ಶೀನಪ್ಪ ರೈಗಳ ಜತೆ ಮೇಳ ಹೊರಡುವ ದಿನದಂದು ವೆಂಕಟೇಶ ಆಚಾರ್ಯರು ಕಟೀಲಿಗೆ ತೆರಳಿದ್ದರು. 1986-87ರ ಸಾಲಿನಲ್ಲಿ ಕಟೀಲು ಮೂರನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ ನಡೆಸಿದ್ದರು. ಕೋಡಂಗಿ, ವನಪಾಲಕರು, ಕಿರಾತ ಪಡೆ ಮೊದಲಾದ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ನಾಟ್ಯ ಕಲಿತು ಕಲಾವಿದನಾಗಲು ನಿರ್ಧಾರ. 1987ರ ಜೂನ್ ತಿಂಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರ ಸೇರಿ ಶ್ರೀ ಕೆ.ಗೋವಿಂದ ಭಟ್ ಮತ್ತು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ.
ಕೇಂದ್ರದಲ್ಲಿ ಕೆದಿಲ ಜಯರಾಮ ಭಟ್, ದಿವಾಕರ ದಾಸ್, ಪದ್ಮನಾಭ ಉಪಾಧ್ಯಾಯ, ಜಗದಾಭಿರಾಮ ಪಡುಬಿದ್ರಿ, ಸುರೇಶ್ ಹೆಗ್ಡೆ, ದಿನೇಶ ಆಚಾರ್ಯ ಮೊದಲಾದವರು ಸಹಪಾಠಿಗಳಾಗಿದ್ದರು. ಆಗ ನೆಡ್ಲೆ ಶ್ರೀ ನರಸಿಂಹ ಭಟ್ ಅವರು ತರಬೇತಿ ಕೇಂದ್ರದ ಹಿಮ್ಮೇಳ ಗುರುಗಳಾಗಿದ್ದರು. ತರಬೇತಿ ಕೇಂದ್ರದ ಪ್ರದರ್ಶನ. ಬಬ್ರುವಾಹನ ಕಾಳಗ ಪ್ರಸಂಗದಲ್ಲಿ ವೃಷಕೇತ ಮತ್ತು ಗಿರಿಜಾ ಕಲ್ಯಾಣ ಪ್ರಸಂಗದಲ್ಲಿ ಷಣ್ಮುಖನಾಗಿ ಅಭಿನಯಿಸಲು ಅವಕಾಶವಾಗಿತ್ತು.
ಶ್ರೀ ವೆಂಕಟೇಶ ಆಚಾರ್ಯರ ಮೊದಲ ತಿರುಗಾಟ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ. 1987-88ರಲ್ಲಿ. ಕಟೀಲು ಮೂರನೇ ಮೇಳದಲ್ಲಿ. ಬಾಲಗೋಪಾಲರಾಗಿ ರಂಗಪ್ರವೇಶ. ಎರಡು ವರ್ಷಗಳ ಪೀಠಿಕಾ ಸ್ತ್ರೀವೇಷ ಮತ್ತು ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ಮಾಡಿದ್ದರು. ಭಾಗವತ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ನಿರ್ದೇಶನ ಮತ್ತು ಖ್ಯಾತ ಕಲಾವಿದರ ಒಡನಾಟವು ದೊರೆತಿತ್ತು. ಬಾಲಗೋಪಾಲ ಪಾತ್ರದಿಂದ ತೊಡಗಿ ಹಂತ ಹಂತವಾಗಿ ಬೆಳೆಯುತ್ತಾ ಸಾಗಿದ ಕಲಾವಿದರಿವರು.
ಶ್ರೀ ಕೇದಗಡಿ ಗುಡ್ಡಪ್ಪ ಗೌಡ ಮತ್ತು ಗೇರುಕಟ್ಟೆ ಗಂಗಯ್ಯ ಶೆಟ್ಟರ ಹಿರಣ್ಯಕಶ್ಯಪ ಪಾತ್ರಕ್ಕೆ ಪ್ರಹ್ಲಾದನಾಗಿ ಅಭಿನಯಿಸುವ ಅವಕಾಶವೂ ಸಿಕ್ಕಿತ್ತು. ಷಣ್ಮುಖ, ಲಕ್ಶ್ಮಣ, ಸಿತಕೇತ, ಅಭಿಮನ್ಯು, ಬಾಲಕೃಷ್ಣ, ಬಾಲಹನುಮ ಮೊದಲಾದ ಪಾತ್ರಗಳನ್ನು ಮಾಡುತ್ತಾ ಬೆಳೆಯಲು ಅವಕಾಶವಾಗಿತ್ತು. ಕೆಲವು ವರ್ಷಗಳ ಬಳಿಕ ತಿರುಗಾಟವನ್ನು ನಿಲ್ಲಿಸಿ ಮೂರು ವರ್ಷ ಮನೆಯಲ್ಲಿದ್ದು ತಮ್ಮ ಕುಲವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಒಂದು ವರ್ಷ ಕಟೀಲು ಮೇಳದಲ್ಲಿ ವ್ಯವಸಾಯ. ಬಳಿಕ 4 ವರ್ಷಗಳ ಕಾಲ ಹೊಸನಗರ ಮೇಳದಲ್ಲಿ ತಿರುಗಾಟ.

ಬಳಿಕ ಕಟೀಲು 2ನೇ ಮೇಳದಲ್ಲಿ ಬಲಿಪ ಪ್ರಸಾದ ಭಟ್ಟರ ಭಾಗವತಿಕೆಯಡಿ 2 ವರ್ಷ ವ್ಯವಸಾಯ. ಬಳಿಕ ಕಟೀಲು ಆರನೇ ಮೇಳದಲ್ಲಿ ಎಂಟು ವರ್ಷ ವ್ಯವಸಾಯ.(ಪದ್ಯಾಣ ಗೋವಿಂದ ಭಟ್ ಮತ್ತು ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಭಾಗವತಿಕೆಯಡಿ) ಕಳೆದ ವರ್ಷ ವ್ಯವಸಾಯ ಮಾಡಿದ್ದು ಅಂಡಾಲ ಶ್ರೀ ದೇವಿಪ್ರಸಾದ ಶೆಟ್ರ ಭಾಗವತಿಕೆಯಡಿ ಒಂದನೇ ಮೇಳದಲ್ಲಿ. “ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಗೆ, ಕೇದಗಡಿ ಗುಡ್ಡಪ್ಪ ಗೌಡ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಮೊದಲಾದ ಹಿರಿಯರ ಜತೆ ಸಹಕಲಾವಿದನಾಗಿ ಅಭಿನಯಿಸಿದ್ದು, ಗುಂಡಿಮಜಲು ಶ್ರೀ ಗೋಪಾಲ ಭಟ್ಟರ ಜತೆ ಚಂಡಮುಂಡರು ಮೊದಲಾದ ಜತೆಪಾತ್ರಗಳಲ್ಲಿ ಕಾಣಿಸಿಕೊಂಡದ್ದು ನನ್ನ ಭಾಗ್ಯ. ಅದು ಮರೆಯಲಾಗದ ಅನುಭವ” ಎಂಬುದು ವೆಂಕಟೇಶ ಆಚಾರ್ಯರ ಮನದಾಳದ ಮಾತುಗಳು.
ಕಟೀಲು ಮೂರನೇ ಮೇಳದಲ್ಲಿರುವಾಗ ಶ್ರೀ ವಿನೋದ್ ರೈ ಸೊರಕೆ ಇವರ ನಿರ್ದೇಶನವೂ ಸಿಕ್ಕಿತ್ತು. ಯಕ್ಷಗಾನ ನಾಟ್ಯದ ಬಗೆಗೆ ಮತ್ತು ರಂಗದಲ್ಲಿ ಪಾತ್ರ ನಿರ್ವಹಣೆಯ ಬಗೆಗೆ ಅವರಿಂದ ಸಲಹೆಗಳನ್ನು ಪಡೆದಿದ್ದರು. ಹನುಮಂತ, ಲಕ್ಷ್ಮಣ, ಅಭಿಮನ್ಯು, ಜಯಂತ, ಸಿತಕೇತ, ಶ್ರೀಕೃಷ್ಣ, ಷಣ್ಮುಖ, ಬಬ್ರುವಾಹನ ಮೊದಲಾದುವು ವೆಂಕಟೇಶ ಆಚಾರ್ಯರ ಪ್ರೀತಿಯ ಪಾತ್ರಗಳು. “ವೃತ್ತಿ ಜೀವನದುದ್ದಕ್ಕೂ ಸಹ ಕಲಾವಿದರ ಸಹಕಾರವು ದೊರಕಿದೆ. ಅನೇಕ ಹಿರಿಯ ಕಲಾವಿದರ ಜತೆಗೆ ವ್ಯವಸಾಯ ಮಾಡುವ ಭಾಗ್ಯವು ಸಿಕ್ಕಿದೆ” ಎನ್ನುವ ವೆಂಕಟೇಶ ಆಚಾರ್ಯರು ಕಲಾವಿದನಾಗಿಯೂ, ಸಾಂಸಾರಿಕವಾಗಿಯೂ ತೃಪ್ತರು.
ಇವರ ಪತ್ನಿ ಶ್ರೀಮತಿ ಸುಧಾ. ಇವರು ಗೃಹಣಿ. (2004ರಲ್ಲಿ ವಿವಾಹ) ಶ್ರೀ ವೆಂಕಟೇಶ್ ಆಚಾರ್ಯ, ಸುಧಾ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಮಾ| ಪುನೀತ್ ಆಚಾರ್ಯ. ಪಿಯುಸಿ ವಿದ್ಯಾರ್ಜನೆ ಮಾಡಿ ಪ್ರಸ್ತುತ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ನಲ್ಲಿ ತರಬೇತಿಯನ್ನು ಪಡೆಯುತ್ತಾ ದುಡಿಯುತ್ತಿದ್ದಾರೆ. ಕಿರಿಯ ಪುತ್ರ ಮಾ| ಪ್ರಣೀತ್ ಆಚಾರ್ಯ. ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿ. ಆರನೇ ತರಗತಿಯಲ್ಲಿ ಓದುತ್ತಿದ್ದಾನೆ.
ಮಕ್ಕಳಿಬ್ಬರಿಗೂ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ವೆಂಕಟೇಶ ಆಚಾರ್ಯರು ಮೇಳದ ತಿರುಗಾಟದ ಜತೆಗೆ ಮಿತ್ತೂರು ಎಂಬಲ್ಲಿ ತಮ್ಮ ಕುಲವೃತ್ತಿಯನ್ನೂ ಮಾಡುತ್ತಿದ್ದಾರೆ. (ಕಬ್ಬಿಣದ ಕೆಲಸ) ಮಿತ್ತೂರು ಸಮೀಪದ ಸ್ಥಳದಲ್ಲಿ ಹೊಸ ಮನೆಯನ್ನೂ ನಿರ್ಮಿಸಿದ್ದಾರೆ. ಗೃಹಪ್ರವೇಶದ ಸುದಿನದಂದು ಕಟೀಲು ಮೇಳದ ಬಯಲಾಟವನ್ನು ಸೇವಾರೂಪವಾಗಿ ನಡೆಸಿ ಕೃತಾರ್ಥರಾಗಿದ್ದಾರೆ. ಕಲ್ಲುಗುಂಡಿ ಶ್ರೀ ವೆಂಕಟೇಶ ಆಚಾರ್ಯರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ಶ್ರೀ ವೆಂಕಟೇಶ ಆಚಾರ್ಯ, ಮೊಬೈಲ್: 9611213898

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ