Friday, September 20, 2024
Homeಯಕ್ಷಗಾನಅನುಭವೀ ಕಲಾವಿದ - ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ 

ಅನುಭವೀ ಕಲಾವಿದ – ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ 

ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ ಅವರು ಕಟೀಲು ಮೇಳದ ಅನುಭವೀ ಕಲಾವಿದರಲ್ಲೊಬ್ಬರು. ಕಳೆದ ಹನ್ನೆರಡು ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶಾಲಾ ಬಾಲಕನಾಗಿದ್ದಾಗಲೇ ನಾಟ್ಯ ಕಲಿತು ವೇಷ ಮಾಡಲು ತೊಡಗಿದ್ದ ಇವರು ಯಕ್ಷಗಾನ ಕ್ಷೇತ್ರದಲ್ಲಿ ಅನುಭವೀ ಕಲಾವಿದರು. ಪ್ರಸ್ತುತ ಕಿರೀಟ ವೇಷ ಮತ್ತು ನಾಟಕೀಯ ವೇಷಗಳನ್ನು ಮಾಡುತ್ತಾ ಕಲಾಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಶ್ರೀ ಗಣೇಶ್ ಮೂಲ್ಯ ಅವರ ಹುಟ್ಟೂರು ಮಂಗಳೂರು ತಾಲೂಕಿನ ಮೆನ್ನಬೆಟ್ಟು ಗ್ರಾಮದ ಕೊಡೆತ್ತೂರು. ಸುಮಾರು 500 ವರ್ಷಗಳ ಇತಿಹಾಸವುಳ್ಳ ಇವರ ಮನೆ ಚಂದ್ರಮಂಡಲ ಮನೆ ಎಂದೇ ಕರೆಸಿಕೊಂಡಿದೆ. 1967 ನೇ ಇಸವಿ ಜುಲೈ 7ರಂದು ಶ್ರೀ ಕೋಟಿ ಮೂಲ್ಯ ಮತ್ತು ಶ್ರೀಮತಿ ಕಮಲ ದಂಪತಿಗಳ ಮಗನಾಗಿ ಜನನ. ( 7 ಮಂದಿ ಮಕ್ಕಳಲ್ಲಿ ಹಿರಿಯರು) ಶ್ರೀ ಗಣೇಶ್ ಅವರ ತಮ್ಮಂದಿರಲ್ಲಿ ಶ್ರೀ ಧನಂಜಯ ಕಿನ್ನಿಗೋಳಿ ಅವರು ಹಿಮ್ಮೇಳ ಕಲಿತು ಮದ್ದಳೆ ನುಡಿಸುತ್ತಾರೆ. ಇವರು ಬಹರೈನ್ ನಲ್ಲಿ ಉದ್ಯೋಗಿ. ಶ್ರೀ ಶಂಭುಕುಮಾರ್ ಕಟೀಲು ಮೇಳದ ಕಲಾವಿದರಾಗಿದ್ದರು. ಶ್ರೀ ವಿಕ್ರಮ ಕೃಷಿಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಶ್ರೀ ಗಣೇಶ್ ಚಂದ್ರಮಂಡಲ ಅವರು ಓದಿದ್ದು ಪಿಯುಸಿ ವರೆಗೆ. ಕಿನ್ನಿಗೋಳಿ ಸಂತ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವರೆಗೆ. ಬಳಿಕ ಹೈಸ್ಕೂಲ್ ಮತ್ತು ಪಿಯುಸಿ ಓದಿದ್ದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ವಿದ್ಯಾಸಂಸ್ಥೆಯಲ್ಲಿ. ಎಳವೆಯಲ್ಲೇ ಇವರು ಯಕ್ಷಗಾನ ಕಲಾಸಕ್ತರಾಗಿದ್ದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ನೋಡಿದ ಪ್ರದರ್ಶನಗಳನ್ನೂ ವೇಷಗಳನ್ನೂ ಈಗಲೂ ನೆನಪಿಸಿ ವರ್ಣಿಸುತ್ತಾರೆ.

ಕದ್ರಿ ವಿಷ್ಣು, ಬಣ್ಣದ ಕುಟ್ಯಪ್ಪು, ಪಡ್ರೆ ಚಂದು, ಕೇದಗಡಿ ಗುಡ್ಡಪ್ಪ ಗೌಡ, ಅರುವ ನಾರಾಯಣ ,ಶೆಟ್ಟಿ, ಸಂಪಾಜೆ ಶೀನಪ್ಪ ರೈ ಮೊದಲಾದವರು ಪಾತ್ರಗಳನ್ನು ನಿರ್ವಹಿಸುವ ರೀತಿಯು ಇವರನ್ನು ಆಕರ್ಷಿಸಿತ್ತು. ಅರುವ ಕೊರಗಪ್ಪ ರೈಗಳು ತುಳು ಪ್ರಸಂಗಗಳಲ್ಲಿ ಖಳನಾಯಕನಾಗಿ ಅಭಿನಯಿಸುವ ರೀತಿಗೆ ಮನಸೋತಿದ್ದರು. ಮಂಜೇಶ್ವರ ಜನಾರ್ದನ ಜೋಗಿ ಅವರ ತುಳು ಪ್ರಸಂಗಗಳಲ್ಲಿ ಕೋಟಿ, ದೇವಪೂಂಜ ಮೊದಲಾದ ಪಾತ್ರಗಳನ್ನು ನೋಡಿ ಸಂತೋಷಗೊಂಡಿದ್ದರು. ತಾನೂ ಕಲಾವಿದನಾಗಬೇಕೆಂಬ ಬಯಕೆಯೂ ಚಿಗುರೊಡೆದಿತ್ತು. ಹಿರಿಯ ಕಲಾವಿದರ ವೇಷಗಳನ್ನು ನೋಡಿಯೇ ಕುಣಿಯಲು ಅಭ್ಯಾಸ ಮಾಡಿದ್ದರು.

ಇವರ ವೇಷ ಮಾಡುವ ಆಸೆಗೆ ವೇದಿಕೆಯಾಗಿ ಒದಗಿದ್ದು ಕಿನ್ನಿಗೋಳಿಯ ಸರ್ವೋದಯ ಯುವಕ ಸಂಘದ ಪ್ರದರ್ಶನ. ಮದವೂರ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಗಣಪತಿಯ ಗಣಗಳಲ್ಲಿ ಒಬ್ಬನಾಗಿ ರಂಗಪ್ರವೇಶ ಮಾಡಿದ್ದರು. ಬಳಿಕ ಕೊಡೆತ್ತೂರು ದೇವಸ್ಯ ಮಠದ ಶ್ರೀ ವೇದವ್ಯಾಸ ಉಡುಪರು ನಾಟ್ಯ ಕಲಿಯಲು ಸಲಹೆ ನೀಡಿದ್ದರು. ಕಟೀಲು ಶಾಲಾ ಅಧ್ಯಾಪಕ, ವಿದ್ವಾಂಸ, ಕಲಾವಿದ, ತಾಳಮದ್ದಳೆ ಅರ್ಥಧಾರಿ ಕೊರ್ಗಿ ಶ್ರೀ ವೆಂಕಟೇಶ ಉಪಾಧ್ಯಾಯರಿಂದ ನಾಟ್ಯ ಕಲಿಕೆ. ಕಟೀಲು ಶಾಲಾ ಪ್ರದರ್ಶನ, ಸುಧನ್ವ ಮೋಕ್ಷ ಪ್ರಸಂಗದಲ್ಲಿ ಸುಧನ್ವನಾಗಿ ವೇಷ ಮಾಡುವ ಅವಕಾಶ ಸಿಕ್ಕಿತ್ತು. ಬಳಿಕ ಶಾಲಾ ಪ್ರದರ್ಶನ, ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲೂ ವೇಷ ಮಾಡುತ್ತಿದ್ದರು.

ಎಸ್ಸೆಸ್ಸೆಲ್ಸಿ ಓದುತ್ತಿರುವಾಗ ಖ್ಯಾತ ಕಲಾವಿದ ಕಟೀಲು ಶ್ರೀನಿವಾಸ ರಾಯರ (ಕಟೀಲು ಶೀನಯ್ಯ) ನಿರ್ದೇಶನ, ಸಹಕಾರದಿಂದ ಅತಿಕಾಯನಾಗಿ ಅಭಿನಯಿಸಿದರು. ಅವರು ಕೆಲವು ಪ್ರಸಂಗಗಳ ನಡೆಗಳನ್ನೂ ಗಣೇಶ ಅವರಿಗೆ ಹೇಳಿಕೊಟ್ಟಿದ್ದರು. ಶಾಲಾ ರಜಾ ದಿನಗಳಲ್ಲಿ ಅವರ ಜತೆ ತೆರಳಿ ಸುಂಕದಕಟ್ಟೆ ಮೇಳದಲ್ಲೂ ವೇಷ ಮಾಡುತ್ತಾ ಬೆಳೆದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿದ್ದಾಗ ಶ್ರೀ ಕೊರ್ಗಿ ಅವರ ನಿರ್ದೇಶನದಲ್ಲಿ ಅರುಣಾಸುರನಾಗಿಯೂ ಅಭಿನಯಿಸಿದ್ದರು. ಮೇಳಕ್ಕೆ ಸೇರುವ ಮೊದಲೇ ಹಿರಿಯರ ನಿರ್ದೇಶನದಲ್ಲಿ ರುಕ್ಮಾಂಗದ, ಇಂದ್ರಜಿತು, ಶಿಶುಪಾಲ ಮೊದಲಾದ ಪಾತ್ರಗಳನ್ನೂ ಮಾಡುವ ಅವಕಾಶವಾಗಿತ್ತು.

ಶ್ರೀ ವಿಜಯ ಶೆಟ್ಟಿ ಮುಂಡ್ಕೂರು ಅವರ ನೇತೃತ್ವದ ತಲಕಳ ಟೆಂಟ್ ಮೇಳದಲ್ಲೂ ವೇಷ ಮಾಡಿದರು. ಮೇಳದ ತಿರುಗಾಟ ನಡೆಸುವ ಆಸೆ, ಅವಕಾಶಗಳಿದ್ದರೂ ಅದಕ್ಕೆ ಅನುಕೂಲವಾದ ವಾತಾವರಣವಿರಲಿಲ್ಲ. ತಾನು ಬಹುವಾಗಿ ಪ್ರೀತಿಸಿದ ಯಕ್ಷಗಾನ ಕಲೆಯಿಂದ ದೂರವಾಗಿ ಬದುಕುವ ಪರಿಸ್ಥಿತಿಯು ನಿರ್ಮಾಣವಾಗಿತ್ತು. ಮನೆಯಲ್ಲಿ ಬಡತನ. ಮನೆಯ ಹಿರಿಮಗನಾಗಿ ಹೊಣೆಗಾರಿಕೆಯೂ ಇತ್ತು. ಜೀವನೋಪಾಯಕ್ಕಾಗಿ ಉದ್ಯೋಗವನ್ನರಸಿ ಮುಂಬಯಿಗೆ ತೆರಳಿದರು. 

ಶ್ರೀ ಗಣೇಶ್ ಚಂದ್ರಮಂಡಲ ಅವರು 1998ರಿಂದ 2008ರ ವರೆಗೆ ಮುಂಬಯಿಯ ಹಲವೆಡೆ ಹೋಟೆಲ್ ಕ್ಯಾಶಿಯರ್ ಆಗಿ ದುಡಿದಿದ್ದರು. ಇವರ ಯಕ್ಷಗಾನ ಕಲಾಸಕ್ತಿಗೆ, ಕಲಾಸೇವೆಗೆ ಮುಂಬಯಿಯಲ್ಲೂ ವೇದಿಕೆ ದೊರೆತಿತ್ತು. ಮುಂಬಯಿ ಬಿಲ್ಲವ ಸಂಘದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಖಾಯಂ ಕಲಾವಿದನಾಗಿ ವೇಷ ಮಾಡುವ ಅವಕಾಶವು ಸಿಕ್ಕಿತ್ತು. ಅಸಾಲ್ಪದ ಗೀತಾಂಬಿಕಾ ಯಕ್ಷಗಾನ ಮಂಡಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲೂ ಭಾಗವಹಿಸಿದರು. ಇಲ್ಲಿ ಅನೇಕ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ವೇಷ ಮಾಡುತ್ತಾ ಸಾಗಿದರು.

ಊರಿನಿಂದ ಮೇಳಗಳು ಮುಂಬಯಿಗೆ ಬಂದಾಗ ಅವರ ಜತೆಯೂ ವೇಷ ಮಾಡಲು ಅವಕಾಶವಾಗಿತ್ತು. ಮುಂಬಯಿ ಬಿಲ್ಲವ ಸಂಘದ ಶ್ರೀ ಜಯ ಪಿ.ಸುವರ್ಣ ಮತ್ತು ಆಡಳಿತ ಮಂಡಳಿಯವರು ಶ್ರೀ ಗಣೇಶ್ ಅವರಿಗೆ ಸಹಕಾರ ನೀಡಿ ಪ್ರೋತ್ಸಾಹಿಸಿದ್ದರು. ಶ್ರೀ ಚಂದ್ರಹಾಸ ಅಮೀನ್, ಮಾಧವ ಅಮೀನ್, ಸಿ.ಟಿ ಸಾಲ್ಯಾನ್, ಕೂಸಪ್ಪನವರು, ಆನಂದ ಶೆಟ್ಟಿ ಐಕಳ, ಮನೋಜ್ ಕುಮಾರ್ ಅಸಾಲ್ಪ, ಶ್ರೀ ಗಣೇಶ್ ಶೆಟ್ಟಿ ಕಟೀಲು, ಪದ್ಮನಾಭ ಕಟೀಲು, ಪ್ರಕಾಶ್ ಪಣಿಯೂರು, ವಾಸು ಮಾರ್ನಾಡ್, ರಾಮಚಂದ್ರ, ನಾಗೇಶ್ ಪೊಳಲಿ, ಕಟೀಲು ಸದಾನಂದ, ಸಂತೋಷ್ ಕುಮಾರ್ ಮೊದಲಾದವರ ಸಹಕಾರವು ಗಣೇಶರಿಗೆ ದೊರೆತಿತ್ತು. ಅಲ್ಲಿನ ಸರ್ವಕಲಾವಿದರೂ ಸಹಕರಿಸಿದ್ದರು.

ಯಕ್ಷಗಾನ ವೇಷ ಮಾಡಲು ಅವಕಾಶವಾಗಿದ್ದರೂ, ವ್ಯವಹಾರದಲ್ಲಿ ಗಣೇಶ್ ಅವರು ಸೋತುಹೋಗಿದ್ದರು. ವ್ಯವಹಾರದಲ್ಲಿ ಸೋತು ಕೈಸುಟ್ಟುಕೊಳ್ಳುವಂತಾಗಿತ್ತು. ಆದರೂ ಮುಂಬಯಿಯಲ್ಲಿ ನೆಲೆಸಿದ್ದ ಊರ ಹಲವು ಮಹನೀಯರು ಇವರಿಗೆ ಸಹಾಯವನ್ನಿತ್ತು ಆಧರಿಸಿದ್ದರು. 2008ನೇ ಇಸವಿ ಮುಂಬಯಿ ನಗರಕ್ಕೆ ವಿದಾಯ ಹೇಳಿ ಊರಿಗೆ ಮರಳಿದ್ದರು. ಊರಿಗೆ ಬಂದವರೇ ಕಟೀಲು ಮಾತೆಗೆ ನಮಿಸಿ ಮಾಲೆ ಹಾಕಿ ವ್ರತಧಾರಿಯಾಗಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿ ಬಂದಿದ್ದರು. ಬಳಿಕ ಮೇಳದ ತಿರುಗಾಟದತ್ತ ಗಮನಹರಿಸಿದರು. 

2008ರಲ್ಲಿ ಗಣೇಶ ಚಂದ್ರಮಂಡಲ ಅವರು ಇಂದ್ರ ಜೈನ್ ಅವರ ಸಂಚಾಲಕತ್ವದ ಬಪ್ಪನಾಡು ಮೇಳಕ್ಕೆ ಸೇರಿದರು. ಅಲ್ಲಿ ಮೂರು ವರ್ಷಗಳ ಕಾಲ ತುಳು ಮತ್ತು ಪುರಾಣ ಪ್ರಸಂಗಗಳಲ್ಲಿ ಕಾಣಿಸಿಕೊಂಡರು. ಸದ್ರಿ ಮೇಳದಲ್ಲಿ ಮೂರು ವರ್ಷ ವ್ಯವಸಾಯ. 2011ರಲ್ಲಿ ಮುಂಡಾಜೆ ಸದಾಶಿವ ಶೆಟ್ಟರ ಕೇಳಿಕೆಯಂತೆ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಅಪ್ಪಣೆಯಂತೆ ಕಟೀಲು ಮೇಳಕ್ಕೆ ಸೇರಿ ಕಳೆದ ಹನ್ನೆರಡು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಕಟೀಲು ಮೂರನೆಯ ಮೇಳದಲ್ಲಿ 2 ವರ್ಷ, ನಾಲ್ಕನೆಯ ಮೇಳದಲ್ಲಿ 7 ವರ್ಷ, 6ನೇ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಕಳೆದ ವರ್ಷ 2ನೇ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ಅನೇಕ ಹಿರಿಯ ಕಿರಿಯ ಕಲಾವಿದರ ಒಡನಾಟವೂ ಸಹಕಾರವೂ ಸಿಕ್ಕಿತ್ತು.

ಇವರು ಕೃಷಿಯಲ್ಲೂ ಆಸಕ್ತರು. ಮಳೆಗಾಲದಲ್ಲಿ ಭತ್ತದ ಕೃಷಿ, ಜತೆಗೆ ಸ್ವಂತ ತ್ರಿಚಕ್ರ ವಾಹನವನ್ನೂ (ರಿಕ್ಷಾ) ನಡೆಸುತ್ತಿದ್ದಾರೆ. ಶ್ರೀ ಗಣೇಶ್ ಯಕ್ಷಗಾನ ಕಲಾವಿದನಾಗಿ ಐದು ಬಾರಿ ವಿದೇಶಯಾತ್ರೆಯನ್ನು ಕೈಗೊಂಡಿದ್ದಾರೆ. ಮೊಟ್ಟಮೊದಲು 2000ನೇ ಇಸವಿಯಲ್ಲಿ ಬಹರೈನ್ ಕನ್ನಡ ಸಂಘದವರು ಆಯೋಜಿಸಿದ ಪ್ರದರ್ಶನದಲ್ಲಿ. ಆ ಬಳಿಕ 2002ನೇ ಇಸವಿಯಲ್ಲಿ ಬಹರೈನ್ ನಲ್ಲಿ ನಡೆದ ಪ್ರದರ್ಶನ, 2006ರಲ್ಲಿ ಬಹರೈನ್ ಬಿಲ್ಲವ ಸಂಘದವರು ಆಯೋಜಿಸಿದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. 2009ರಲ್ಲಿ ಬಹರೈನ್ ನಲ್ಲಿ ತಾನೇ ನಿರ್ದೇಶಿಸಿದ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಮತ್ತೊಮ್ಮೆ ಬಹರೈನ್ ನಲ್ಲಿ ಯಕ್ಷ ತುಳುವರ ಕೂಟದವರು ಆಯೋಜಿಸಿದ ಕಾಡಮಲ್ಲಿಗೆ ಪ್ರಸಂಗದಲ್ಲಿ ಶ್ರೀ ಪಟ್ಲ ಸತೀಶ್ ಶೆಟ್ಟರ ತಂಡದ ಸದಸ್ಯನಾಗಿ ಭಾಗಿಯಾದರು.

2009ರಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಯಕ್ಷೋತ್ಸವದಲ್ಲಿ ಕಿರೀಟ ವೇಷಗಾರಿಕೆಯಲ್ಲಿ ಪ್ರಥಮ ಬಹುಮಾನ ಅಲ್ಲದೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದಾರೆ. 2014ರಲ್ಲಿ ಮುಂಬಯಿ ಬಿಲ್ಲವರ ಅಸೋಸಿಯೇಷನ್ ಸಂಯೋಜನೆಯ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಜಯ ಪಿ.ಸುವರ್ಣ ಅವರ ಮಾತೃಶ್ರೀಯವರ ಸ್ಮರಣಾರ್ಥ ನೀಡುವ ‘ಯಕ್ಷ ಕಲಾ ಪ್ರಶಸ್ತಿ’ ಯನ್ನು ಶ್ರೀ ಗಣೇಶ್ ಚಂದ್ರಮಂಡಲ ಅವರಿಗೆ ನೀಡಿ ಗೌರವಿಸಲಾಗಿತ್ತು. 

ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ ಅವರು ಕಟೀಲು ಶ್ರೀನಿವಾಸ್ ರಾವ್ ವೇದಿಕೆಯ ‘ಯಕ್ಷಜ್ಯೋತಿ’ ಸಂಸ್ಥೆಯಲ್ಲೂ ಸಕ್ರಿಯರು. ಕಟೀಲು ಶ್ರೀನಿವಾಸ ರಾಯರ ಪುತ್ರ ಶ್ರೀ ದೇವಿಪ್ರಸಾದ ಉಲ್ಲಂಜೆ ಅವರ ನೇತೃತ್ವದ ಸಂಸ್ಥೆಯಿದು. ಕಳೆದ ಎರಡು ವರ್ಷಗಳಿಂದ ಈ ಸಂಸ್ಥೆಯು ಕಲಾ ಚಟಿವಟಿಕೆಯಲ್ಲಿ ನಿರತವಾಗಿದೆ. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಮಕ್ಕಳು ನಿರಂತರ ಚಟುವಟಿಕೆಯಿಂದ ಕ್ರಿಯಾಶೀಲರಾಗಿರಲು ವಿವಿಧ ಕಲಾ ಕಾರ್ಯಕ್ರಮಗಳನ್ನು ನಡೆಸಿದೆ. ಸರಕಾರದ ನಿಯಮಕ್ಕೆ ಭಂಗ ಬಾರದಂತೆ ಕಲಾ ಚಟುವಟಿಕೆಯು ಸಾಗಿತ್ತು.

ಈ ವರೆಗೆ ಒಟ್ಟು ಹದಿನೆಂಟು ತಾಳಮದ್ದಲೆಗಳನ್ನು ನಡೆಸಲಾಗಿ ಪರಿಸರದ ಮಕ್ಕಳು ಕ್ರಿಯಾಶೀಲರಾಗಲು ಕಾರಣರಾದರು. ಇದಕ್ಕೆ ಭಾಗವತರಾಗಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟರು ಸಹಕರಿಸಿದ್ದರು. ಮುಂದೆ ಕಟೀಲು ಶ್ರೀನಿವಾಸ ರಾವ್ ಸಂಸ್ಮರಣಾ ಪ್ರಶಸ್ತಿಯನ್ನು ಸಾಧಕರಿಗೆ ನೀಡುವ ಯೋಜನೆಯೂ ಈ ಸಂಸ್ಥೆಗಿದೆ. ಹೀಗೆ ಸಂಘಟನೆಯಲ್ಲೂ ತೊಡಗಿಸಿಕೊಂಡಿರುವ ಶ್ರೀ ಗಣೇಶ್ ಅವರು ಕಲಾವಿದನಾಗಿಯೂ ಸಾಂಸಾರಿಕವಾಗಿಯೂ ತೃಪ್ತರು.

ಇವರ ಪತ್ನಿ ಶ್ರೀಮತಿ ಭಾನುಮತಿ. (2002ರಲ್ಲಿ ವಿವಾಹ) ಗಣೇಶ್ ಚಂದ್ರಮಂಡಲ, ಭಾನುಮತಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕುಮಾರಿ ಸೃಷ್ಟಿ. ಕಟೀಲು ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣ ಪೂರೈಸಿ ಪ್ರಸ್ತುತ ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಬಿ.ಸಿ.ಎ  ಶಿಕ್ಷಣವನ್ನು  ಪಡೆಯುತ್ತಿದ್ದಾರೆ. ರಾಜೇಶ್ ಕಟೀಲು ಅವರಿಂದ ನಾಟ್ಯ ಕಲಿತು ವೇಷ ಮಾಡುತ್ತಾರೆ. ಶ್ರೀ ದುರ್ಗಾ ಮಕ್ಕಳ ಮೇಳದ ಕಲಾವಿದೆ. ಈಗ ಭಾಗವತಿಕೆಯನ್ನೂ ಅಭ್ಯಾಸ ಮಾಡುತ್ತಿದ್ದಾಳೆ. ಪುತ್ರ ಮಾ| ಸೃಜನ್. ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿ. ರಾಜೇಶ್ ಅವರಿಂದ ನಾಟ್ಯ ಕಲಿತು ವೇಷ ಮಾಡುತ್ತಿದ್ದಾನೆ. ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಕಲಾವಿದ. ಯಕ್ಷಗಾನ ಹಿಮ್ಮೇಳವನ್ನು ಕಲಿಯುತ್ತಿದ್ದಾನೆ. (ಚೆಂಡೆ, ಮದ್ದಳೆ)

ಕುಮಾರಿ ಸೃಷ್ಟಿ ಮತ್ತು ಮಾಸ್ಟರ್ ಸೃಜನ್ ಅವರು ವಿದ್ವಾಂಸ, ತಾಳಮದ್ದಳೆಯ ಹಿರಿಯ ಅರ್ಥಧಾರಿ ಸರ್ಪಂಗಳ ಶ್ರೀ ಈಶ್ವರ ಭಟ್ ಅವರಿಂದ ಅರ್ಥಗಾರಿಕೆಯನ್ನೂ ಅಭ್ಯಾಸ ಮಾಡುತ್ತಿದ್ದಾರೆ. ಕಿನ್ನಿಗೋಳಿ ಅನುಗ್ರಹ ಯೋಗ ಕೇಂದ್ರದ ಶ್ರೀಮತಿ ಕಾಂಚನಾ ಗಣೇಶ್ ಅವರಿಂದ ಯೋಗ ತರಬೇತಿಯನ್ನೂ ಪಡೆಯುತ್ತಿದ್ದಾರೆ. ಮಕ್ಕಳಿಗೆ ಯಕ್ಷಗಾನ ಕಲಿಯಲು ಕಟೀಲು ಶಾಲೆಯ ದೈಹಿಕ ಶಿಕ್ಷಕ ಕೃಷ್ಣ ಕುಲಾಲ್ ಅವರ ಪ್ರೋತ್ಸಾಹವೂ ಇದೆ. ಇವರು ಶ್ರೀ ಗಣೇಶ್ ಚಂದ್ರಮಂಡಲ ಅವರ ಬಂಧುಗಳು. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಗಣೇಶ್ ಮೂಲ್ಯ ಚಂದ್ರಮಂಡಲ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments