Saturday, January 18, 2025
Homeಯಕ್ಷಗಾನಹಿರಿಯ, ಅನುಭವಿ, ನಿವೃತ್ತ ಕಲಾವಿದ - ಕೂಟೇಲು ಶ್ರೀ ಬಾಲಕೃಷ್ಣ ಭಟ್

ಹಿರಿಯ, ಅನುಭವಿ, ನಿವೃತ್ತ ಕಲಾವಿದ – ಕೂಟೇಲು ಶ್ರೀ ಬಾಲಕೃಷ್ಣ ಭಟ್

ಕೂಟೇಲು ಶ್ರೀ ಬಾಲಕೃಷ್ಣ ಭಟ್ಟರು ತೆಂಕುತಿಟ್ಟಿನ ಹಿರಿಯ ಅನುಭವಿ ಕಲಾವಿದರು. 1999ರಲ್ಲಿ ಮೇಳದ ವ್ಯವಸಾಯವನ್ನು ನಿಲ್ಲಿಸಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. ಸ್ತ್ರೀ ಪಾತ್ರ ಮತ್ತು ಪುಂಡುವೇಷಧಾರಿಯಾಗಿ ಇವರು ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡಿರುತ್ತಾರೆ. ಮಾತುಗಾರಿಕೆಗೆ ಸಂಬಂಧಿಸಿದ ಸಾತ್ವಿಕ ಪಾತ್ರಗಳಲ್ಲಿ ಇವರು ಹೆಚ್ಚಾಗಿ ಕಾಣಿಸಿಕೊಂಡವರು.

ಆದಿಸುಬ್ರಹ್ಮಣ್ಯ, ಕೂಡ್ಲು, ಉಪ್ಪಳ ಶ್ರೀ ಭಗವತೀ ಮೇಳ, ಸುಂಕದಕಟ್ಟೆ ಮತ್ತು ಕಟೀಲು ಮೇಳಗಳಲ್ಲಿ ವ್ಯವಸಾಯ ಮಾಡಿ ನಿವೃತ್ತರಾದವರು. ಯಕ್ಷಗಾನ ಕ್ಷೇತ್ರದಲ್ಲಿ ಇವರು ಸುಮಾರು ಮೂವತ್ತೆರಡು ವರ್ಷಗಳ ಅನುಭವಿ. ಮೇಳದಲ್ಲಿ ಇದ್ದುಕೊಂಡೇ ಕಲಿತು ಹಂತಹಂತವಾಗಿ ಬೆಳೆದು ಕಾಣಿಸಿಕೊಂಡ ಕಲಾವಿದರಿವರು. ಕೋಡಂಗಿಯಿಂದ ತೊಡಗಿ ಎಲ್ಲಾ ವೇಷಗಳನ್ನೂ ನಿರ್ವಹಿಸಿದ ಅನುಭವಿ ಕಲಾವಿದರಿವರು.

ಶ್ರೀಯುತರ ಕುರಿತಾಗಿ ಲೇಖನವನ್ನು ಬರೆಯಲು ಸಂತೋಷವಾಗುತ್ತದೆ. ಇವರ ಬಗ್ಗೆ ಬರೆಯಲು ಸೂಚನೆ ನೀಡಿದವರು ದಿವಾಣ ಶ್ರೀ ಶಿವಶಂಕರ ಭಟ್ಟರು. ಕೂಟೇಲು ಶ್ರೀ ಬಾಲಕೃಷ್ಣ ಭಟ್ಟರ ಮನೆಗೆ ನನ್ನನ್ನು ಕರೆದುಕೊಂಡು ಹೋಗಿ ಬರೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. 

ಹಿರಿಯ ಅನುಭವಿ ಕಲಾವಿದ  ಶ್ರೀ ಬಾಲಕೃಷ್ಣ ಭಟ್ಟರ ಹುಟ್ಟೂರು ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಕೂಟೇಲು ಎಂಬಲ್ಲಿ. 1951ನೇ ಇಸವಿ ನವೆಂಬರ್ 4ರಂದು ಕೂಟೇಲು ನಾರಾಯಣ ಭಟ್ ಮತ್ತು ಶ್ರೀಮತಿ ಕಲಾವತಿ ಅಮ್ಮ ದಂಪತಿಗಳಿಗೆ ಪುತ್ರನಾಗಿ ಜನನ. ಕೂಟೇಲು ನಾರಾಯಣ ಭಟ್ಟರು, ಪಕಳಕುಂಜ ಶ್ರೀ ನಾರಾಯಣ ಭಟ್ಟರು (ಪಕಳಕುಂಜ ಶ್ಯಾಮ ಭಟ್ಟರ ತಂದೆ) ನಡೆಸುತ್ತಿದ್ದ ಯಕ್ಷಗಾನ ನಾಟಕ ತಂಡದಲ್ಲಿ ವೇಷ ಮಾಡುತ್ತಿದ್ದರು.

ಶ್ರೀ ಬಾಲಕೃಷ್ಣ ಭಟ್ಟರು ಓದಿದ್ದು ಎಂಟನೇ ತರಗತಿ ವರೆಗೆ. ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 8ನೇ ತರಗತಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ. ಯಕ್ಷಗಾನಾಸಕ್ತಿಯಿಂದಾಗಿ ಶಾಲಾ ಕಲಿಕೆಯನ್ನು ನ್ಲಿಲಿಸಿದ್ದರು. ಎಳವೆಯಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಬಳಿಕ ಹಗಲು ಅಡಿಕೆ ಮರದ ಸೋಗೆ, ಹಾಳೆ, ತೆಂಗಿನ ಮರದ ಗರಿ, ಮರದ ರೆಂಬೆ ಸೊಪ್ಪುಗಳಿಂದ ವೇಷ – ಭೂಷಣಗಳನ್ನು ಮಾಡಿ ಕಟ್ಟಿಕೊಂಡು ಕುಣಿಯುತ್ತಿದ್ದರು.

ಧರ್ಮತಡ್ಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಶಾಲಾ ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ದಾಸನಡ್ಕ ಶ್ರೀ ರಾಮ ಕುಲಾಲ್ ಮತ್ತು ಪೊಳಲಿ ಶ್ರೀ ಲೋಕಯ್ಯರಿಂದ ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿ ಮತ್ತು ಅರ್ಥಗಾರಿಕೆ ತರಬೇತಿ. ರತ್ನಾವತಿ ಕಲ್ಯಾಣ ಪ್ರಸಂಗದಲ್ಲಿ ಶಬರ ಪಡೆ, ಮತ್ತು ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ಷಣ್ಮುಖನಾಗಿ ಶ್ರೀ ಬಾಲಕೃಷ್ಣ ಭಟ್ಟರು ರಂಗವೇರಿದ್ದರು. 8ನೇ ತರಗತಿ ಓದಿನ ಬಳಿಕ ಒಂದು ವರ್ಷ ಮನೆಯಲ್ಲಿ ಉಳಿದು ತಂದೆಯವರಿಗೆ ಕೃಷಿ ಕಾರ್ಯದಲ್ಲಿ ಸಹಕರಿಸಿದ್ದರು.

ಮುಂದಿನ ವರ್ಷ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಶ್ರೀ ಆದಿ ಸುಬ್ರಹ್ಮಣ್ಯ ಮೇಳಕ್ಕೆ. ಕೋಡಂಗಿಯಿಂದ  ಬಾಲಗೋಪಾಲ, ಮುಖ್ಯ ಸ್ತ್ರೀವೇಷ ಮತ್ತು ಪ್ರಸಂಗಗಳಲ್ಲಿ ಸಣ್ಣಪುಟ್ಟ ಪಾತ್ರಗಳ ನಿರ್ವಹಣೆ. ಮೂರು ವರ್ಷ ಸುಬ್ರಹ್ಮಣ್ಯ ಮೇಳದ ತಿರುಗಾಟ. ಬಳಿಕ ಒಂದು ವರ್ಷ ಮನೆಯಲ್ಲಿದ್ದು ಕೃಷಿಕಾರ್ಯ ನಡೆಸಿದ್ದರು. ಬಳಿಕ ಹದಿಮೂರು ವರ್ಷ ಕುಂಬಳೆ ಶ್ರೀ ಸೇಸಪ್ಪ ಅವರ ಉಪ್ಪಳ ಶ್ರೀ ಭಗವತೀ ಮೇಳದಲ್ಲಿ ವ್ಯವಸಾಯ. ಸ್ತ್ರೀವೇಷ ಮತ್ತು ಪುಂಡುವೇಷಗಳ ನಿರ್ವಹಣೆ. ಪ್ರಹ್ಲಾದ, ರಾಮ, ಅಯ್ಯಪ್ಪ, ಲಕ್ಷ್ಮಣ, ಮೋಹಿನಿ, ಶರ್ಮಿಷ್ಠೆ ಮೊದಲಾದ ವೇಷಗಳನ್ನು ಮಾಡಲು ಅವಕಾಶವಾಗಿತ್ತು.

ಶ್ರೀದೇವಿಯ ಪಾತ್ರದಲ್ಲಿ ಕೂಟೇಲು ಬಾಲಕೃಷ್ಣ ಭಟ್

ಮುದುಕುಂಜ ಶ್ರೀ ವಾಸುದೇವ ಪ್ರಭುಗಳು ಕಯಾದು ಪಾತ್ರ ಮಾಡುತ್ತಿದ್ದಾಗ ಇವರು ಪ್ರಹ್ಲಾದನಾಗಿ ಅಭಿನಯಿಸಿದ್ದರು. ಭಸ್ಮಾಸುರ ಮೋಹಿನಿ – ಶಬರಿಮಲೆ ಅಯ್ಯಪ್ಪ ಪ್ರಸಂಗದಲ್ಲಿ ಮೋಹಿನಿ ಪಾತ್ರವನ್ನು ನಿರ್ವಹಿಸಿ ಅಯ್ಯಪ್ಪನಾಗಿ ಅಭಿನಯಿಸಿದ್ದರು. ಆಗ ಮದಂಗಲ್ಲು ಶ್ರೀ ಆನಂದ ಭಟ್ಟರು ಭಸ್ಮಾಸುರನಾಗಿ ಅಭಿನಯಿಸುತ್ತಿದ್ದರು. ಅವರ ನಿರ್ದೇಶನವೂ ಬಾಲಕೃಷ್ಣ ಭಟ್ಟರಿಗೆ ಸಿಕ್ಕಿತ್ತು. ಬಳಿಕ ಬಬ್ರುವಾಹನ, ವಿಷ್ಣು, ಗುಣಸುಂದರಿ ಮೊದಲಾದ ವೇಷಗಳನ್ನು ಮಾಡಲು ಅವಕಾಶವಾಗಿತ್ತು. ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ಶ್ರೀಕೃಷ್ಣ ಹಾಗೂ ಸುಭದ್ರೆ ಈ ಎರಡೂ ಪಾತ್ರಗಳನ್ನೂ ನಿರ್ವಹಿಸಲು ಅವಕಾಶವಾಗಿತ್ತು.

ಮುಂದಿನ ದಿನಗಳಲ್ಲಿ ದಾಕ್ಷಾಯಿಣಿ, ಧರ್ಮರಾಯ, ಸತ್ರಾಜಿತ, ಪಾರಿಜಾತ ಪ್ರಸಂಗದ ಸತ್ಯಭಾಮೆ ಮೊದಲಾದ ವೇಷಗಳಲ್ಲಿ ಕಾಣಿಸಿಕೊಂಡಿದ್ದರು. ಉಪ್ಪಳ ಮೇಳದಲ್ಲಿ ಕೆಲವು ಬಾರಿ ಶ್ರೀ ದೇವಿ ಮಹಾತ್ಮೆ ಪ್ರಸಂಗದ ಶ್ರೀದೇವಿಯ ಪಾತ್ರವನ್ನು ಮಾಡುವ ಭಾಗ್ಯವೂ ಸಿಕ್ಕಿತ್ತು. ಆಗ ಬಣ್ಣದ ಕುಟ್ಯಪ್ಪು ಅವರು ಮಹಿಷಾಸುರನ ಪಾತ್ರವನ್ನು ನಿರ್ವಹಿಸಿದ್ದರು( ಅತಿಥಿ ಕಲಾವಿದ).

ಆದಿಸುಬ್ರಹ್ಮಣ್ಯ ಮೇಳದಲ್ಲಿ ಶ್ರೀ ಶೀನಪ್ಪ ಭಂಡಾರಿ, ಕಾಂಚನ ಸಂಜೀವ ರೈ, ಪೂಂಜಾಲಕಟ್ಟೆ ಧರ್ಣಪ್ಪ ಶೆಟ್ಟಿ, ಕಳಿಯೂರು ನಾರಾಯಣಾಚಾರ್ಯ, ಕುತ್ಯಾಳ ಬಾಬು ರೈ, ಬೆಳಾಲು ಈಶ್ವರಪ್ಪ ಆಚಾರ್ಯ, ಸಾಣೂರು ಭುಜಂಗ, ಗುಬ್ಯ ರಾಮಯ್ಯ ರೈ, ಪುತ್ರಕಳ ತಿಮ್ಮಪ್ಪ ಶೆಟ್ಟಿ ಸಹಕಲಾವಿದರಾಗಿದ್ದರು. ಉಪ್ಪಳ ಮೇಳದಲ್ಲಿ ಕುಂಬಳೆ ಶೇಷಪ್ಪ, ಮದಂಗಲ್ಲು ಶ್ರೀ ಆನಂದ ಭಟ್, ಮುದುಕುಂಜ ವಾಸುದೇವ ಪ್ರಭು, ದಾಸನಡ್ಕ ರಾಮ ಕುಲಾಲ್, ಮುಂಗಿಲ ಕೃಷ್ಣ ಭಟ್, ಕೂಡ್ಲು ನಾರಾಯಣ ಬಲ್ಯಾಯ, ಮಧೂರು ವಿಷ್ಣು ಭಟ್, ಬಾಲಚಂದ್ರ ಕಲ್ಲೂರಾಯ, ತಿಂಬರ ತ್ಯಾಂಪಣ್ಣ ಶೆಟ್ಟಿ, ದಿವಾಣ ಶಿವಶಂಕರ ಭಟ್, ವಾಸು ಮಣಿಯಾಣಿ, ಸುಂದರ ಗಟ್ಟಿ, ಮಧೂರು ರಾಧಾಕೃಷ್ಣ ನಾವಡ, ಸುಬ್ರಾಯ ಹೊಳ್ಳ, ಉದಯ ನಾವಡ, ಕುಂಬಳೆ ಗೋಪಾಲ, ಪಟ್ಟಾಜೆ ಶ್ಯಾಮ ಭಟ್, ಗೋಪಾಲ ನಾಯಕ್, ಗುಂಪೆ ಕೃಷ್ಣ ಭಟ್ (ಹಾಸ್ಯಗಾರರು) ಜೋಡುಕಲ್ಲು ರಾಮ, ಚೆನ್ನಪ್ಪ ಗೌಡ ಮೊದಲಾದವರ ಒಡನಾಟವು ದೊರಕಿತ್ತು.

ಉಪ್ಪಳ ಮೇಳದ ವ್ಯವಸಾಯ 13 ವರ್ಷ. ಬಳಿಕ ಒಂದು ವರ್ಷ ಕುಬಣೂರು ಶ್ರೀಧರ ರಾಯರ ಸಂಚಾಲಕತ್ವದ ಕೂಡ್ಲು ಮೇಳದಲ್ಲಿ. ಇಲ್ಲಿ ಮಾಯಿಪ್ಪಾಡಿ ಕುಂಞಿರಾಮ, ಕುದ್ರೆಕೋಡ್ಲು ರಾಮ ಭಟ್ಟ, ಮಳಿ ಶ್ಯಾಮ ಭಟ್, ಅಡ್ಯನಡ್ಕ ಕೃಷ್ಣ ಭಂಡಾರಿ, ಕಾಟುಕುಕ್ಕೆ ರಾಮಚಂದ್ರ ಭಟ್ ಮೊದಲಾದವರ ಒಡನಾಟ ಸಿಕ್ಕಿತ್ತು. ಬಳಿಕ ಒಂದು ವರ್ಷ ಮನೆಯಲ್ಲಿ ಕೃಷಿ ಕಾರ್ಯ ನೋಡಿ ಮತ್ತೆ ಸುಂಕದಕಟ್ಟೆ ಮೇಳದಲ್ಲಿ 7 ವರ್ಷ ವ್ಯವಸಾಯ ಮಾಡಿದ್ದರು. ಇಲ್ಲಿ ಪುರಾಣ ಅಲ್ಲದೆ ತುಳು ಪ್ರಸಂಗಗಳ ಅನುಭವವನ್ನೂ ಪಡೆದುಕೊಂಡರು. ಇಲ್ಲಿಯೂ ಸ್ತ್ರೀ ವೇಷ ಮತ್ತು ಪುರುಷ ಪಾತ್ರಗಳನ್ನು ನಿರ್ವಹಿಸಿದ್ದರು. ತುಳುನಾಡ ಸಿರಿ ಪ್ರಸಂಗದ ದಾರು, ಕೋಟಿ ಚೆನ್ನಯ ಪ್ರಸಂಗದ ಚೆನ್ನಯ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಈ ಮೇಳದಲ್ಲಿ ಪುತ್ತಿಗೆ ತಿಮ್ಮಪ್ಪ ರೈ, ಪದ್ಯಾಣ ಶಂಕರನಾರಾಯಣ ಭಟ್, ಕುದ್ರೆಕೋಡ್ಲು ರಾಮ ಭಟ್, ಅಣ್ಣಿ ಗೌಡ, ತ್ರಿವಿಕ್ರಮ ಶೆಣೈ, ಬೇತ ಕುಂಞ ಕುಲಾಲ್, ಕಟೀಲು ಶ್ರೀನಿವಾಸ ರಾವ್, ಮುಳಿಯಾಲ ಭೀಮ ಭಟ್, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಅಪ್ಪಯ್ಯ ಮಣಿಯಾಣಿ, ಉಜಿರೆ ಗೋಪಾಲಕೃಷ್ಣ ಭಟ್, ಮುತ್ತಣ್ಣ ರೈ, ಹಳುವಳ್ಳಿ ಗಣೇಶ್ ಭಟ್, ಚಂದ್ರಶೇಖರ ಹೆಗ್ಡೆ, ವಿಷ್ಣು ಶರ್ಮ, ಉಡುಪಿ ಆನಂದ, ಉಮಾಮಹೇಶ್ವರ ಶರ್ಮ, ರತ್ನಾಕರ ಹೆಗ್ಡೆ ಮೊದಲಾದವರು ಸಹಕಲಾವಿದರಾಗಿದ್ದರು.

ಬಳಿಕ ಎಂಟು ವರ್ಷಗಳ ಕಾಲ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ. 4ನೇ ಮೇಳದಲ್ಲಿ ವ್ಯವಸಾಯ. ಕುಬಣೂರು ಶ್ರೀಧರ ರಾವ್, ಮೋಹನ ಶೆಟ್ಟಿಗಾರ್, ಸಂಪಾಜೆ ಶೀನಪ್ಪ ರೈ, ಮಂಜೇಶ್ವರ ಜನಾರ್ದನ ಜೋಗಿ, ತೊಡಿಕಾನ ವಿಶ್ವನಾಥ ಗೌಡ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ್, ಸಂಜೀವ ಚೌಟ ಉದ್ಯಾವರ, ಕಾವು ಗಿರೀಶ, ಕೇಶವ ಶೆಟ್ಟಿಗಾರ, ವಿಷ್ಣು ಶರ್ಮ, ಉಮಾಮಹೇಶ್ವರ ಮೊದಲಾದವರು ಸಹಕಲಾವಿದರಾಗಿದ್ದರು.

ಇಲ್ಲಿ ಸ್ತ್ರೀ ಪಾತ್ರ ಮತ್ತು ಪುರುಷ ಪಾತ್ರಗಳನ್ನು ನಿರ್ವಹಿಸಿ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಇವರು ತೆರೆದು ಕಾಣಿಸುವವರಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವ ಇವರದು. ಯಾವುದೇ ಪ್ರಚಾರವನ್ನು ಬಯಸದೆ ಕಲಾ ವ್ಯವಸಾಯವನ್ನು ಮಾಡಿದ್ದರು. ಮಳೆಗಾಲದ ಪ್ರದರ್ಶನಗಳಲ್ಲಿ ಇವರಿಗೆ ಬೆಳ್ಳಾರೆ ಶ್ರೀ ಮಂಜುನಾಥ ಭಟ್ ಮತ್ತು ರೆಂಜಾಳ ಶ್ರೀ ರಾಮಕೃಷ್ಣ ರಾಯರ ಒಡನಾಟವೂ ಸಿಕ್ಕಿತ್ತು.

ಇವರ ಕಲಾ ಸೇವೆಯನ್ನು ಗುರುತಿಸಿದ ಕೇರಳದ ತಪಸ್ಯ ಕಲಾ ವೇದಿಕೆಯ ಕಾಸರಗೋಡು ಘಟಕವು ಇವರನ್ನು ಸನ್ಮಾನಿಸಿ ಗೌರವಿಸಿತ್ತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕುಂಬಳೆ ಘಟಕವೂ ಇವರನ್ನು ಗೌರವಿಸಿತ್ತು. ದುಬೈ ಯಕ್ಷಗಾನ ಅಭ್ಯಾಸ ತರಗತಿ ತಂಡವು ಶ್ರೀ ವಾಸು ಬಾಯಾರು ಅವರ ನೇತೃತ್ವದಲ್ಲಿ ಇವರಿಗೆ ಯಕ್ಷ ರಕ್ಷಾ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮನೆಯ ಹೊಣೆಯನ್ನು ನಿರ್ವಹಿಸುವ ಅನಿವಾರ್ಯತೆಯಿಂದ 1999ರಲ್ಲಿ ಮೇಳದ ವ್ಯವಸಾಯಕ್ಕೆ  ಕೂಟೇಲು ಬಾಲಕೃಷ್ಣ ಭಟ್ಟರು ವಿದಾಯ ಹೇಳಿದ್ದರು.

ಎರಡು ವರ್ಷಗಳ ಹಿಂದೆ ಶ್ರೀಯುತರ ಪತ್ನಿ ಶ್ರೀಮತಿ ರಾಧಾ ಭಟ್ ಅವರು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಪ್ರಸ್ತುತ ಕೂಟೇಲು ಶ್ರೀ ಬಾಲಕೃಷ್ಣ ಭಟ್ಟರು ಅವರ ತಮ್ಮ ಶ್ರೀನಿವಾಸ ಭಟ್ಟರ ಮಕ್ಕಳಾದ ಶ್ರೀ ರಂಜಿತ್ ಕೂಟೇಲು ಮತ್ತು ಶ್ರೀ ಅಜಿತ್ ಕೂಟೇಲು ಅವರ ಆಶ್ರಯದಲ್ಲಿ ಜೀವಿಸುತ್ತಿದ್ದಾರೆ. ಶ್ರೀ ರಂಜಿತ್ ಮತ್ತು ಶ್ರೀ ಅಜಿತ್ ಅವರು ದೊಡ್ಡಪ್ಪನನ್ನು ಪ್ರೀತಿ, ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ. ಇದು ಕಲಾಭಿಮಾನಿಗಳಾದ ನಮಗೆಲ್ಲಾ ಸಂತೋಷದ ವಿಚಾರ.

ದೇವರು ಮೆಚ್ಚುವ ಕೆಲಸವನ್ನು ಕೂಟೇಲು ಶ್ರೀ ಬಾಲಕೃಷ್ಣರ ತಮ್ಮನ ಮಕ್ಕಳಾದ ಶ್ರೀ ರಂಜಿತ್ ಮತ್ತು ಶ್ರೀ ಅಜಿತ್ ಅವರು ಮಾಡುತ್ತಿದ್ದಾರೆ. ಅವರಿಗೆ ಶ್ರೀ ದೇವರ ಅನುಗ್ರಹವಿರಲಿ. ಶ್ರೀ ಬಾಲಕೃಷ್ಣ ಭಟ್ ಕೂಟೇಲು ಅವರಿಗೆ ಆರೋಗ್ಯವೇ ಮೊದಲಾದ ಭಾಗ್ಯಗಳನ್ನು ಶ್ರೀ ದೇವರು ಅನುಗ್ರಹಿಸಲಿ. ವಿಶ್ರಾಂತ ಜೀವನವು ಸುಖ ಸಂತೋಷಗಳಿಂದ ಕೂಡಿರಲಿ ಎಂಬ ಹಾರೈಕೆಗಳು. 

ವಿಳಾಸ: ಶ್ರೀ ಕೂಟೇಲು ಬಾಲಕೃಷ್ಣ ಭಟ್, ವಿಕಾಸನಗರ,ಅಂಚೆ ಕಟ್ಟತ್ತಡ್ಕ, ವಯಾ ಕುಂಬಳೆ, ಎಡನಾಡು ಗ್ರಾಮ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments