Thursday, November 21, 2024
Homeಯಕ್ಷಗಾನಬಡಗಿನ ಯುವ, ಅನುಭವೀ ಹಾಸ್ಯಗಾರ - ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ 

ಬಡಗಿನ ಯುವ, ಅನುಭವೀ ಹಾಸ್ಯಗಾರ – ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ 

ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ ಅವರು ಬಡಗುತಿಟ್ಟಿನ ಯುವ, ಅನುಭವೀ ಕಲಾವಿದರು ಹಾಸ್ಯಗಾರರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕಲಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಯಕ್ಷಗಾನ ಕಲೆಯಲ್ಲಿ ವೃತ್ತಿಕಲಾವಿದನಾಗಿ ಕಳೆದ ಮೂವತ್ತು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಬಾಲಗೋಪಾಲನಾಗಿ ವೃತ್ತಿ ಜೀವನವನ್ನು ಆರಂಭಿಸಿದ ಇವರಿಗೆ ಮೊಟ್ಟಮೊದಲು ಹಾಸ್ಯಗಾರ ಹೊಳೆಮಗ್ಗಿ ನಾಗಪ್ಪ ಮೊಗವೀರ ಅವರ ಪಾತ್ರಗಳನ್ನು ನೋಡಿ ಆ ಕುರಿತಾಗಿ ಆಸಕ್ತಿ ಹುಟ್ಟಿಕೊಂಡಿತ್ತು. ಬಳಿಕ ಚಂದ್ರ ಶೆಟ್ಟಿ ಬೆದ್ರಳ್ಳಿ ಅವರ ಪಾತ್ರಗಳನ್ನು ನೋಡಿಯೂ ಆ ಬಗೆಗೆ ಒಲವು ಮೂಡಲು ಕಾರಣವಾಯಿತು.

ಪೆರ್ಡೂರು ಮೇಳದಲ್ಲಿ ಮೂರೂರು ರಮೇಶ ಭಂಡಾರಿಯವರ ವೇಷಗಳನ್ನು ನೋಡಿದ ಮೇಲೆ ತಾನೂ ಹಾಸ್ಯಗಾರನಾಗಬೇಕೆಂಬ ಆಸೆಯು ಹುಟ್ಟಿಕೊಂಡಿತ್ತು. ಶ್ರೀ ರವೀಂದ್ರ ದೇವಾಡಿಗರು ಯಕ್ಷಗಾನ ನಾಟ್ಯ ಕಲಿತು ಮೇಳಕ್ಕೆ ಸೇರಿದವರಲ್ಲ. ಮೇಳಕ್ಕೆ ಸೇರಿದ ಮೇಲೆ ನಾಟ್ಯ, ಮಾತುಗಾರಿಕೆಗಳನ್ನು ಅಭ್ಯಸಿಸಿ ಕಲಾವಿದನಾಗಿ ಕಾಣಿಸಿಕೊಂಡವರು. ಇವರು ಪ್ರಸ್ತುತ ಶ್ರೀ ವೈ. ಕರುಣಾಕರ ಶೆಟ್ಟಿ ಅವರ ಸಂಚಾಲಕತ್ವದ ಪೆರ್ಡೂರು ಮೇಳದ ಪ್ರಧಾನ ಹಾಸ್ಯಗಾರರು. 

ಬಡಗು ತಿಟ್ಟಿನ ಹಾಸ್ಯಗಾರರಾದ  ರವೀಂದ್ರ ದೇವಾಡಿಗರ ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ. 1983ನೇ ಇಸವಿ ಏಪ್ರಿಲ್ 24ರಂದು ಶ್ರೀ ಬೇಡು ದೇವಾಡಿಗ ಮತ್ತು ಶ್ರೀಮತಿ ನೀಲು ದೇವಾಡಿಗ ದಂಪತಿಗಳ ಪುತ್ರನಾಗಿ ಜನನ. ಶ್ರೀ ರವೀಂದ್ರ ದೇವಾಡಿಗರ ತಾಯಿ ಶ್ರೀಮತಿ ನೀಲು ದೇವಾಡಿಗರ ತಂದೆ ಶ್ರೀ ತಿಮ್ಮ ದೇವಾಡಿಗರು ವೃತ್ತಿ ಕಲಾವಿದರು. ಇವರು ಆರ್ಗೋಡು ಗೋವಿಂದರಾಯ ಶೆಣೈ (ಆರ್ಗೋಡು ಮೋಹನದಾಸ ಶೆಣೈ ಅವರ ತಂದೆ) ಮತ್ತು ಆರ್ಗೋಡು ಸರಸಿಂಹರಾಯ ಶೆಣೈ ಅವರ ಸಮಕಾಲೀನರು. ತಾಯಿಯ ಕಡೆಯಿಂದ ಯಕ್ಷಗಾನವು ರಕ್ತಗತವಾಗಿಯೇ ರವೀಂದ್ರ ದೇವಾಡಿಗರಿಗೆ ಸಿಕ್ಕ ಬಳುವಳಿ.

ರವೀಂದ್ರ ದೇವಾಡಿಗರು ಓದಿದ್ದು 4ನೇ ತರಗತಿ ವರೆಗೆ. ಕಮಲಶಿಲೆ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಎಳವೆಯಲ್ಲೇ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯಿಂದಲೇ ಶಾಲಾ ಕಲಿಕೆಯನ್ನು ನಿಲ್ಲಿಸಿದ್ದರು. ಶ್ರೀ ರಾಮ ದೇವಾಡಿಗ ಕಮಲಶಿಲೆ (ರವೀಂದ್ರರ ಬಂಧುಗಳು) ಮತ್ತು ಶ್ರೀ ರಾಮ ದೇವಾಡಿಗ ಕೊಟ್ಟಾಡಿ ಅವರು ಆಗ ಕಮಲಶಿಲೆ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು. ಇವರಿಬ್ಬರೂ ಉತ್ತಮ ಕಲಾವಿದರಾಗಿದ್ದರು. ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿಯದ ಶ್ರೀ ರವೀಂದ್ರ ದೇವಾಡಿಗರು ಶ್ರೀರಾಮ ದೇವಾಡಿಗದ್ವಯರ ಒತ್ತಾಯದಂತೆ ಕಮಲಶಿಲೆ ಮೇಳಕ್ಕೆ ಸೇರಿಕೊಂಡರು.

ಆಗ ಸಿದ್ಧಾಪುರ ಜನ್ಸಾಲೆ ಶ್ರೀ ನಾರಾಯಣ ಶೆಟ್ರು ಕಮಲಶಿಲೆ ಮೇಳದ ಸಂಚಾಲಕರಾಗಿದ್ದರು. ಬಾಲಗೋಪಾಲನಾಗಿ ರಂಗಪ್ರವೇಶ. ಖ್ಯಾತ ಕಲಾವಿದ ವಿಶ್ವನಾಥ ಆಚಾರ್ಯ ತೊಂಬಟ್ಟು ಮತ್ತು ಶ್ರೀ ರವೀಂದ್ರ ದೇವಾಡಿಗರು ಒಟ್ಟಿಗೇ ಗೆಜ್ಜೆ ಕಟ್ಟಿ ರಂಗಪ್ರವೇಶ ಮಾಡಿದವರು. ಮೇಳದಲ್ಲಿ ಶ್ರೀ ರಾಮ ದೇವಾಡಿಗ ಕೊಟ್ಟಾಡಿ ಅವರನ್ನು ನಾಟ್ಯಾಭ್ಯಾಸ. ಬಳಿಕ ಪೀಠಿಕಾ ಸ್ತ್ರೀವೇಷ ಮತ್ತು ಪ್ರಸಂಗಗಳಲ್ಲಿ  ತನ್ನ ಪಾಲಿಗೆ ಬಂದ ಸಣ್ಣಪುಟ್ಟ ಪಾತ್ರಗಳ ನಿರ್ವಹಣೆ.

ಮೇಳದಲ್ಲಿ ಹಾಸ್ಯಗಾರರಾಗಿದ್ದ ಹೊಳೆಮಗ್ಗಿ ನಾಗಪ್ಪ ಮೊಗವೀರ ಅವರ ಪಾತ್ರಗಳನ್ನು ನೋಡಿ ಹಾಸ್ಯದ ಬಗ್ಗೆ ಆಸಕ್ತಿ ಉಂಟಾಗಿತ್ತು. ಬಳಿಕ ಹಾಸ್ಯಗಾರ ಚಂದ್ರ ಶೆಟ್ಟಿ ಬೆದ್ರಳ್ಳಿ ಅವರ ಹಾಸ್ಯ ನೋಡಿಯೂ ಹಾಸ್ಯದ ಬಗೆಗೆ ಒಲವು ಹೆಚ್ಚಾಗಿತ್ತು. ಅವರು ಅವಕಾಶವನ್ನು ನೀಡಿ ರಂಗಕ್ಕೆ ಕರೆದೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಕಟ್ಟಿಗೆ ಮಾರುವವನ ವೇಷದಲ್ಲಿ ಅಭಿನಯಿಸಿ ಕಾಣಿಸಿಕೊಂಡಿದ್ದರು. ಇವರ ಅಭಿನಯವನ್ನು ನೋಡಿದ ಎಲ್ಲರೂ ಮೆಚ್ಚಿಕೊಂಡಿದ್ದರು. ಶ್ರೀ ರವೀಂದ್ರ ದೇವಾಡಿಗರ ಒಳಗಿರುವ ಹಾಸ್ಯಗಾರನನ್ನು ಅಂದೇ ಎಲ್ಲರೂ ಗುರುತಿಸಿದ್ದರು. 

ಶ್ರೀ ರವೀಂದ್ರ ದೇವಾಡಿಗರು ಕಮಲಶಿಲೆ ಮೇಳದಲ್ಲಿ ನಾಲ್ಕು ವರ್ಷ ತಿರುಗಾಟ ನಡೆಸಿ ಬಳಿಕ ಪೆರ್ಡೂರು ಮೇಳವನ್ನು ಸೇರಿಕೊಂಡರು. ಸೇರಿದ್ದು ಬಾಲಗೋಪಾಲನಾಗಿ. ಅಲ್ಲಿ ಮುಖ್ಯಪ್ರಾಣ ಕಿನ್ನಿಗೋಳಿ ಪ್ರಧಾನ ಹಾಸ್ಯಗಾರರಾಗಿದ್ದರು. ಮೂರೂರು ಶ್ರೀ ರಮೇಶ್ ಭಂಡಾರಿಯವರೂ ಹಾಸ್ಯಗಾರರಾಗಿದ್ದರು. ಪೆರ್ಡೂರು ಮೇಳದಲ್ಲಿ ಅವರ ವೇಷಗಳನ್ನು ನೋಡಿದ ಮೇಲೆ ತಾನೂ ಹಾಸ್ಯಗಾರನಾಗಬೇಕೆಂಬ ಆಸೆಯುಂಟಾಗಿತ್ತು. ರವೀಂದ್ರ ದೇವಾಡಿಗರು ತಮ್ಮ ವೇಷ ಮುಗಿದ ಮೇಲೆ ಬೆಳಗಿನ ವರೆಗೂ ಆಟ ನೋಡುತ್ತಿದ್ದರು. ಹಿರಿಯ ಹಾಸ್ಯಗಾರರ ವೇಷಗಳನ್ನು ನೋಡಿಯೇ ರವೀಂದ್ರ ದೇವಾಡಿಗರು ಕಲಿತಿದ್ದರು.

ಮುಂದಿನ ತಿರುಗಾಟಗಳಲ್ಲಿ ಹಳ್ಳಾಡಿ ಜಯರಾಮ ಶೆಟ್ಟಿ, ಕಟೀಲು ಸೀತಾರಾಮ ಕುಮಾರ್ ಅವರ ಒಡನಾಟವೂ ದೊರಕಿತ್ತು. ಹಿರಿಯ ಅನುಭವಿ ಹಾಸ್ಯಗಾರರ ಒಡನಾಟವು ಕಲಿಕೆಗೆ ಅನುಕೂಲವಾಗಿತ್ತು. ಭಾಗವತರಾದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರರ ನಿರ್ದೇಶನವೂ ಕಲಿಕೆಗೆ ಅವಕಾಶವಾಗಿತ್ತು. ಬಳಿಕ ಚಪ್ಪರಮನೆ ಶ್ರೀಧರ ಹೆಗಡೆ ಅವರ ಒಡನಾಟವೂ ಸಿಕ್ಕಿತ್ತು. ಪೆರ್ಡೂರು ಮೇಳದಲ್ಲಿ ಎರಡು ವರ್ಷಗಳ ತಿರುಗಾಟದ ಬಳಿಕ ಅಮೃತೇಶ್ವರೀ ಮೇಳಕ್ಕೆ. ಒತ್ತು ಹಾಸ್ಯಗಾರನಾಗಿ. ಆಗ ಸದ್ರಿ ಮೇಳದಲ್ಲಿ ಮಡಾಮಕ್ಕಿ ಜಯರಾಮ ಶೆಟ್ರು ಮುಖ್ಯ ಹಾಸ್ಯಗಾರರಾಗಿದ್ದರು. ಮೂರು ತಿಂಗಳ ತಿರುಗಾಟದ ಬಳಿಕ ಪ್ರಧಾನ ಹಾಸ್ಯಗಾರನ ಸ್ಥಾನವು ದೊರೆತಿತ್ತು. ಮುಂದಿನ ವರ್ಷ ಮರಳಿ ಪೆರ್ಡೂರು ಮೇಳಕ್ಕೆ ಮೂರನೆಯ ಹಾಸ್ಯಗಾರನಾಗಿ ಸೇರ್ಪಡೆ. 

ಫೋಟೋ ಕೃಪೆ: ಪ್ರವೀಣ್ ಪೆರ್ಡೂರು 

ಪೆರ್ಡೂರು ಮೇಳದಲ್ಲಿ ಮತ್ತೆ ಹಳ್ಳಾಡಿ ಜಯರಾಮ ಶೆಟ್ಟಿ ಮತ್ತು ಮೂರೂರು ರಮೇಶ್ ಭಂಡಾರಿಯವರ ಜತೆ ತಿರುಗಾಟ. ಬಳಿಕ ಕ್ಯಾದಗಿ ಮಹಾಬಲ ಭಟ್ ಅವರು ಹಾಸ್ಯಗಾರರಾದಾಗ ಅವರ ಜತೆ ಒತ್ತು ಹಾಸ್ಯಗಾರರಾಗಿ ವ್ಯವಸಾಯ. ಆ ವರ್ಷ ಕ್ಯಾದಗಿ-ದೇವಾಡಿಗ ಜೋಡಿಯು ರಂಜಿಸಿ ಪ್ರೇಕ್ಷಕರ ಮನಸೂರೆಗೊಂಡಿತ್ತು. ಬಳಿಕ ದೇವಾಡಿಗರು ಪೆರ್ಡೂರು ಮೇಳದ ಪ್ರಧಾನ ಹಾಸ್ಯಗಾರರಾದ ವರ್ಷ ‘ಕ್ಷಮಯಾ ಧರಿತ್ರಿ” ಪ್ರಸಂಗವು ರಂಜಿಸಿತ್ತು. ಮರು ವರ್ಷ ಪೆರ್ಡೂರು ಮೇಳಕ್ಕೆ ಮೂರೂರು ರಮೇಶ್ ಭಂಡಾರಿಯವರು ಪ್ರಧಾನ ಹಾಸ್ಯಗಾರರಾದಾಗ ರವೀಂದ್ರ ದೇವಾಡಿಗರು ಒತ್ತು ಹಾಸ್ಯಗಾರರಾಗಿದ್ದರು.

ಕಳೆದ ವರ್ಷದಿಂದ ಮತ್ತೆ ಶ್ರೀ ರವೀಂದ್ರ ದೇವಾಡಿಗರು ಪೆರ್ಡೂರು ಮೇಳದ ಪ್ರಧಾನ ಹಾಸ್ಯಗಾರರಾಗಿದ್ದಾರೆ. ಶಿವರಂಜಿನಿ ಪ್ರಸಂಗದ ‘ಗುಬ್ಬಿ ಗಣಪ’ ಎಂಬುದು ಸಣ್ಣ ಪಾತ್ರವಾದರೂ ಕಲಾಭಿಮಾನಿಗಳು ಈ ಪಾತ್ರದಲ್ಲಿ ದೇವಾಡಿಗರನ್ನು ಗುರುತಿಸಿದ್ದರು. ಬಳಿಕ ಗೋಕುಲಾಷ್ಟಮಿ ಪ್ರಸಂಗದ ‘ಬ್ರಹ್ಮಾಂಡ ಬಾಬಣ್ಣ’ ಪಾತ್ರವು ಇವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ಪಾಪಣ್ಣ, ಚಂದ್ರಾವಳಿ ವಿಲಾಸದ ಅತ್ತೆ, ಭೀಷ್ಮ ಪ್ರತಿಜ್ಞೆಯ ಕಂಧರ, ಕೀಚಕ ವಧೆಯ ವಿಜಯ, ಕನಕಾಂಗಿ ಕಲ್ಯಾಣದ ಬಲರಾಮನ  ದೂತ,ಚಂದ್ರಹಾಸ ಪ್ರಸಂಗದ ಕಪ್ಪ ದೂತ ಮತ್ತು ಮದುವೆ ಪುರೋಹಿತ, ದಾರುಕ ಅಲ್ಲದೆ ಅನೇಕ ಕಾಲ್ಪನಿಕ ಪ್ರಸಂಗಗಳ ಪಾತ್ರಗಳಲ್ಲಿ ಶ್ರೀ ರವೀಂದ್ರ ದೇವಾಡಿಗರು ರಂಜಿಸಿದ್ದಾರೆ.

ಮುಂಬೈ, ಹೈದರಾಬಾದ್, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗಿಯಾಗಿರುತ್ತಾರೆ. ಕೋಟೇಶ್ವರ ಯಕ್ಷೋತ್ಸವ ಪ್ರಶಸ್ತಿ ಮತ್ತು ಶಿರೂರು ಯಕ್ಷ ಋಕ್ಷ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಅನೇಕ ಸಂಘ ಸಂಸ್ಥೆಗಳೂ ಅವರನ್ನು ಗುರುತಿಸಿ ಗೌರವಿಸಿವೆ. ಮುಂಬಯಿ, ತಲ್ಲೂರು ಮತ್ತು ಕೋಟೇಶ್ವರ ದೇವಾಡಿಗ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. ಮೆಳೆಗಾಲದಲ್ಲಿ ಶ್ರೀ ರವೀಂದ್ರ ದೇವಾಡಿಗರು ಬಡಗಿನ ಹೆಚ್ಚಿನ ಎಲ್ಲಾ ತಂಡಗಳ ಪ್ರದರ್ಶನಗಳಲ್ಲೂ ಭಾಗವಹಿಸುತ್ತಾರೆ.

ಶ್ರೀ ರವೀಂದ್ರ ದೇವಾಡಿಗರ ಪತ್ನಿ ಶ್ರೀಮತಿ ಗೀತಾ ದೇವಾಡಿಗ. ಇವರು ಗೃಹಣಿ. ರವೀಂದ್ರ ದೇವಾಡಿಗ, ಗೀತಾ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕುಮಾರಿ ಪೃಥ್ವಿ. 10ನೇ ತರಗತಿಯ ವಿದ್ಯಾರ್ಥಿನಿ. ಪುತ್ರ ಮಾ| ಪ್ರೀತೇಶ್ 8ನೇ ತರಗತಿ ವಿದ್ಯಾರ್ಥಿ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ರವೀಂದ್ರ ದೇವಾಡಿಗರಿಂದ ಕಲಾ ಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು. 

ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ, ಮೊಬೈಲ್: 8867565269

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments