Saturday, January 18, 2025
Homeಯಕ್ಷಗಾನಅನುಭವೀ ಕಲಾವಿದ, ಯಕ್ಷಗಾನ ಗುರು - ದಿವಾಣ ಶ್ರೀ ಶಿವಶಂಕರ ಭಟ್ 

ಅನುಭವೀ ಕಲಾವಿದ, ಯಕ್ಷಗಾನ ಗುರು – ದಿವಾಣ ಶ್ರೀ ಶಿವಶಂಕರ ಭಟ್ 

ಶ್ರೀ ದಿವಾಣ  ಶಿವಶಂಕರ ಭಟ್ಟರು ಯಕ್ಷಗಾನ ಕಲಾವಿದನಾಗಿ, ಕಲಿಕಾಸಕ್ತರಿಗೆ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಹೇಳಿಕೊಟ್ಟ ಗುರುವಾಗಿ ಎಲ್ಲರಿಗೂ ಪರಿಚಿತರು. ಇವರು ತೆಂಕುತಿಟ್ಟಿನ ಅನುಭವೀ ಹಿರಿಯ ಕಲಾವಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದ ಗುರುವಾಗಿ, ಹಲವಾರು ಕಡೆಗಳಲ್ಲಿ ಯಕ್ಷಗಾನ ತರಬೇತಿಯನ್ನು ನೀಡಿ, ಶಿಷ್ಯಂದಿರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಲ್ಲಿ ಇರಿಸಿದ ಗುರುಗಳೂ ಹೌದು. ಕಲಾಕ್ಷೇತ್ರದಲ್ಲಿ ಇವರು ನಲುವತ್ತೆರಡು ವರುಷಗಳ ಅನುಭವಿ.

ದಿವಾಣ ಮನೆತನದಿಂದ ಯಕ್ಷಗಾನಕ್ಕೆ ಅನುಪಮವಾದ ಕೊಡುಗೆಗಳಿವೆ. ಖ್ಯಾತ ಮದ್ದಳೆಗಾರರಾದ ಲಯಬ್ರಹ್ಮ ದಿವಾಣ ಭೀಮ ಭಟ್ಟರು, ದಿವಾಣ ಶಂಕರ ಭಟ್ಟರು ಇವರಲ್ಲಿ ಪ್ರಮುಖರು. ಅದೇ ಮನೆತನದಲ್ಲಿ ಜನಿಸಿದ ಶಿವಶಂಕರ ಭಟ್ಟರು ಹಂತಹಂತವಾಗಿ ಬೆಳೆಯುತ್ತಾ ಯಕ್ಷಗಾನ ಕ್ಷೇತ್ರದಲ್ಲಿ ಸಾಗಿಬಂದವರು. ಪ್ರಸ್ತುತ ಇವರು ಪಾವಂಜೆ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. 

ದಿವಾಣ ಶಿವಶಂಕರ  ಹುಟ್ಟೂರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಎಡನಾಡು ಗ್ರಾಮದ ನೂಚನಗುಳಿ. ಶ್ರೀ ಗಣಪತಿ ದಿವಾಣ ಮತ್ತು ಮತ್ತು ಶ್ರೀಮತಿ ಶಾರದಾ ದಂಪತಿಗಳ ಪುತ್ರನಾಗಿ 1964ನೇ ಇಸವಿ ಮೇ 31ರಂದು ಜನನ. ಶಿವಶಂಕರ ಭಟ್ಟರ ಅಜ್ಜ ಶ್ರೀ ಭೀಮ ಭಟ್ ಅವರು ದಿವಾಣದಿಂದ ಬಂದು ಇಲ್ಲಿ ನೆಲೆಸಿದವರು. ಆಗ ಶಿವಶಂಕರ ಭಟ್ಟರ ತಂದೆ ಗಣಪತಿ ದಿವಾಣರಿಗೆ 13 ವರ್ಷ ಪ್ರಾಯ. ಅಜ್ಜ ದಿವಾಣ ಭೀಮ ಭಟ್ಟರು ತಾಳಮದ್ದಳೆ ಅರ್ಥಧಾರಿ. ದೊಡ್ಡಜ್ಜ ದಿವಾಣ ಕೃಷ್ಣ ಭಟ್ಟರು ಭಾಗವತರಾಗಿದ್ದರು. ಇವರು ಖ್ಯಾತ ಮದ್ದಳೆಗಾರರಾಗಿ ಹೆಸರುಗಳಿಸಿದ ದಿವಾಣ ಭೀಮ ಭಟ್ಟರಿಗೆ ಗುರುಗಳಾಗಿದ್ದರು.

ಶಿವಶಂಕರ ಭಟ್ಟರ ತಂದೆ ಗಣಪತಿ ದಿವಾಣ ಅವರು ಯಕ್ಷಗಾನ ವೇಷಧಾರಿ ಮತ್ತು ಉತ್ತಮ ಬರಹಗಾರರಾಗಿದ್ದರು. ಸೂರಂಬೈಲು ಅಂಚೆಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡಿದವರು. ದಿವಾಣ ಶಿವಶಂಕರ ಭಟ್ಟರು ಓದಿದ್ದು ಹತ್ತನೇ ತರಗತಿ ವರೆಗೆ. ಸೂರಂಬೈಲು ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕುಂಬಳೆ ಸರಕಾರೀ ಪ್ರೌಢಶಾಲೆಯಲ್ಲಿ. ಹೊಸಹಿತ್ತಿಲು ಮನೆಯವರು ಇವರ ಬಂಧುಗಳು. (ಅಪ್ಪನ ಸೋದರತ್ತೆಯ ಮನೆ) ಇವರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿಯೇ ಬಂದಿತ್ತು.

ಎಳವೆಯಲ್ಲೇ ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂದು ಬಯಸಿದವರು. ಮಾಣಂಗಾಯಿ ಕೃಷ್ಣ ಭಟ್ಟರ ಕಂಸ, ಕಾರ್ತವೀರ್ಯ, ರಾಮದಾಸ ಸಾಮಗರ ರುಕ್ಮಾಂಗದ, ಹೊಸಹಿತ್ತಿಲು ಮಹಾಲಿಂಗ ಭಟ್ಟರ ಧರ್ಮಾಂಗದ, ಪುತ್ತೂರು ನಾರಾಯಣ ಹೆಗ್ಡೆಯವರ ವಾಲಿ, ಶೇಣಿಯವರ ಶುಕ್ರಾಚಾರ್ಯ, ಮಹಮ್ಮದ್ ಬಿನ್ ತುಘಲಕ್, ಬಪ್ಪಬ್ಯಾರಿ, ರಾವಣ, ಕೆ.ಗೋವಿಂದ ಭಟ್ಟರ ದೂರ್ವಾಸ, ಕೌಶಿಕ, ಜಾಂಬವ, ಕೌರವ, ಪ್ರಕಾಶ್ ಚಂದ್ರ ಬಾಯಾರು ಅವರ ಕಚ ಮೊದಲಾದ ಪಾತ್ರಗಳು ಇವರ ಮನಸ್ಸನ್ನು ಸೂರೆಗೊಂಡಿತ್ತು. ಆದರೂ ನಾಟ್ಯ ಕಲಿಕೆಗೆ ಅವಕಾಶವಿಲ್ಲದ ಕಾರಣ ಎಸ್ಸೆಸ್ಸೆಲ್ಸಿ  ಆದ ನಂತರ ಬೆಂಗಳೂರಿಗೆ ತೆರಳಿ ಕಂಗಣ್ಣಾರು ಶಂಕರನಾರಾಯಣ ಭಟ್ಟರ ಜತೆ 1 ವರ್ಷ ಕೆಲಸ ಮಾಡಿದ್ದರು.

ಆದರೆ ಯಕ್ಷಗಾನ ಕಲೆಯು ಇವರನ್ನು ಕೈಬೀಸಿ ಊರಿಗೆ ಕರೆದಿತ್ತು. ಮರಳಿ ಊರಿಗೆ ಬಂದು ಯಕ್ಷಗಾನ ಪ್ರದರ್ಶನಗಳನ್ನು ನೋಡಲು ಆರಂಭಿಸಿದರು. ಆಗ ಊರಲ್ಲಿ ಖ್ಯಾತ ಯಕ್ಷಗಾನ ಸಂಘಟಕ ಶ್ರೀ ವೈ.ಡಿ ನಾಯಕ್ ರ ನೇತೃತ್ವದಲ್ಲಿ ಅಲ್ಲಲ್ಲಿ ತಾಳಮದ್ದಳೆ ನಡೆಯುತ್ತಿತ್ತು. 1980ನೇ ಇಸವಿ. ಪತ್ತನಾಜೆಯ ಮುನ್ನಾದಿನ ನಾಯ್ಕಾಪು ಎಂಬಲ್ಲಿ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘದ ತಾಳಮದ್ದಳೆಗೆ ತೆರಳಿದ್ದರು. ಕಚದೇವಯಾನಿ ಪ್ರಸಂಗದಲ್ಲಿ ದೇವೇಂದ್ರನ ಬಲ (ಅಗ್ನಿ) ಪಾತ್ರದಲ್ಲಿ ಅರ್ಥ ಹೇಳಲು ಇವರಿಗೆ ಸಂಘಟಕರು ಸೂಚಿಸಿದ್ದರು. ತಾಳಮದ್ದಳೆಯಾದರೂ ಪದ್ಯಕ್ಕೆ ಕುಣಿದು ಅರ್ಥ ಹೇಳಲು ಭಾಗವತರೂ, ಮದ್ದಳೆಗಾರರೂ ಇವರಿಗೆ ಸೂಚಿಸಿದರು. ಇವರು ಕುಣಿದು ಆಮೇಲೆ ಅರ್ಥ ಹೇಳಿದರು. ಇದನ್ನು ನೋಡಿದ ಭಾಗವತ ಶೇಡಿಗುಮ್ಮೆ ಕೃಷ್ಣ ಭಟ್ಟರೂ ವೈ.ಡಿ ನಾಯಕ್ ಅವರೂ ಧರ್ಮಸ್ಥಳ ಕೇಂದ್ರದಲ್ಲಿ ಕೆ.ಗೋವಿಂದ ಭಟ್ಟರಿಂದ ಶಾಸ್ತ್ರೀಯವಾಗಿ ನಾಟ್ಯ ಕಲಿಯಲು ಸಲಹೆ ನೀಡಿದರು.

ಪತ್ತನಾಜೆಯ ದಿನ ಮೇಳಕ್ಕೆ ರಜೆಯಾದುದರಿಂದ ಅಂದು ಮಂಗಳೂರು ಪುರಭವನದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶಶಿಪ್ರಭಾ- ಕುಶಲವ ಕಾಳಗ ಆಟವಿತ್ತು. ಅಲ್ಲಿಗೆ ವೈ.ಡಿ ನಾಯಕ್ ಅವರ ಜತೆ ತೆರಳಿದ್ದರು. ಅಲ್ಲಿಗೆ ಕಲಾವಿದರಾಗಿ ಬಂದಿದ್ದ ನೆಡ್ಲೆ ನರಸಿಂಹ ಭಟ್ಟ ಮತ್ತು ಕೆ.ಗೋವಿಂದ ಭಟ್ಟರೊಡನೆ ಮಾತನಾಡಿ ಅವರೊಂದಿಗೇ ಧರ್ಮಸ್ಥಳಕ್ಕೆ ಹೋಗಿದ್ದರು. ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಕೆ.ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸ. ಕೇಂದ್ರದಲ್ಲಿ ಕಬ್ಬಿನಾಲೆ ವಸಂತ ಭಾರಧ್ವಾಜ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಕೋಳ್ಯೂರು ಗೋಪಾಲಕೃಷ್ಣ ಭಟ್, ಕೇಶವ ಕೊಕ್ಕಡ, ರಾಜೀವ ಬ್ರಹ್ಮರಕೂಟ್ಲು, ಲಕ್ಷ್ಮೀನಾರಾಯಣ ಕಲ್ಚಾರ್, ಶ್ರೀಹರಿ ತಲೆಂಗಳ, ದೇಲಂಪಾಡಿ ಬಾಲಕೃಷ್ಣ, ಬಾಲಕೃಷ್ಣ ಪೈ ಬಳ್ಳಂಬೆಟ್ಟು, ಗೇರುಕಟ್ಟೆ ದಾಸಪ್ಪ ಗೌಡ, ಪದ್ಮನಾಭ ಶೆಟ್ಟಿ, ಪೆಲತ್ತಡ್ಕ ಪಾಂಡುರಂಗ ಭಟ್ ಇವರ ಸಹಪಾಠಿಗಳಾಗಿದ್ದರು.

ತರಬೇತಿ ಕೇಂದ್ರದಲ್ಲಿ ಒಟ್ಟು  ನಾಲ್ಕು ಪ್ರದರ್ಶನಗಳು ನಡೆದಿತ್ತು. ಮಾಧ್ಯಮ ವ್ಯಾಯೋಗ ಪ್ರಸಂಗದಲ್ಲಿ ಭೀಮನಾಗಿ ದಿವಾಣ ಶಿವಶಂಕರ ಭಟ್ಟರು ರಂಗಪ್ರವೇಶ ಮಾಡಿದ್ದರು. ಅಂದು ಕಬ್ಬಿನಾಲೆ ಅವರು ಹಿಡಿಂಬೆಯ ಪಾತ್ರ ಮಾಡಿದ್ದರು. ಬಳಿಕ ದಕ್ಷಯಜ್ಞ ಪ್ರಸಂಗದಲ್ಲಿ ಈಶ್ವರನಾಗಿ, ಕಾರ್ತವೀರ್ಯಾರ್ಜುನ ಪ್ರಸಂಗದಲ್ಲಿ ಕಾರ್ತವೀರ್ಯ, ಕೃಷ್ಣಾರ್ಜುನ ಪ್ರಸಂಗದಲ್ಲಿ ಗಯನ ಪಾತ್ರಗಳನ್ನು ಮಾಡಿದ್ದರು. ಭೀಷ್ಮಾರ್ಜುನ ಪ್ರಸಂಗ ತಾಳಮದ್ದಳೆಯಲ್ಲಿ ಕೌರವನಾಗಿ ಅರ್ಥ ಹೇಳಿದ್ದರು. 

ದಿವಾಣ ಶಿವಶಂಕರ ಭಟ್ಟರ ಮೊದಲ ತಿರುಗಾಟ 1980ರಲ್ಲಿ. ನೆಡ್ಲೆ ನರಸಿಂಹ ಭಟ್ಟರ ಹೇಳಿಕೆಯಂತೆ ಕಟೀಲು ಮೇಳಕ್ಕೆ. ಬಳಿಕ ಕುಬಣೂರು ಶ್ರೀಧರ ರಾಯರ ಕೂಡ್ಲು ಮೇಳದಲ್ಲಿ 1 ವರ್ಷ. ಇಲ್ಲಿ ಕಾವೂರು ಕೇಶವರ ಒಡನಾಟವಿತ್ತು. ಬಳಿಕ ಪಟ್ಲಗುತ್ತು ಮಹಾಬಲ ಶೆಟ್ಟರ ಮಲ್ಲ ಮೇಳದಲ್ಲಿ 3 ವರ್ಷ. ಈ ಮೇಳದಲ್ಲಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಮತ್ತು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಒಡನಾಟವಿತ್ತು. ಬಳಿಕ ಪುತ್ತೂರು ಶ್ರೀಧರ ಭಂಡಾರಿಗಳ ಪುತ್ತೂರು ಮೇಳ, ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಆದಿ ಸುಬ್ರಹ್ಮಣ್ಯ ಮೇಳ, ಅಡ್ಯಾರು ಶಂಕರ ಆಳ್ವರ ಬಪ್ಪನಾಡು ಮೇಳದಲ್ಲೂ ವ್ಯವಸಾಯ ನಡೆಸಿದ್ದರು. ಬಳಿಕ ಕಟೀಲು ಮೇಳದಲ್ಲಿ ತಿರುಗಾಟ.

1994ರಿಂದ ಯಕ್ಷಗಾನ ತಿರುಗಾಟದಿಂದ ಅನಿವಾರ್ಯವಾಗಿ ದೂರ ಉಳಿಯಬೇಕಾಯಿತು. ಬಳಿಕ ಕೆಲಸಮಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಶ್ರೀ ದಿವಾಣ ಶಿವಶಂಕರ ಭಟ್ಟರನ್ನು ಮತ್ತೆ ಮೇಳದ ತಿರುಗಾಟ ನಡೆಸುವಂತೆ ಸೂಚನೆ ನೀಡಿದವರು ಗುರುಗಳಾದ ಕೆ. ಗೋವಿಂದ ಭಟ್ಟರು. 1999ರಲ್ಲಿ ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆ. ಮರುವರ್ಷ 2000ನೇ ಇಸವಿಯಲ್ಲಿ ಖಾವಂದರ ಹೇಳಿಕೆಯಂತೆ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ಗುರುವಾಗಿ ನಿಯುಕ್ತರಾದರು. 2007ರ ವೆರೆಗೆ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದ್ದರು. 2008ರ ವರೆಗೆ ಧರ್ಮಸ್ಥಳ ಕಲಿಕಾ ಕೇಂದ್ರದಲ್ಲಿ ಗುರುವಾಗಿ ಅಭ್ಯಾಸಿಗಳಿಗೆ ತರಬೇತಿ ನೀಡಿದ್ದರು.

ಧರ್ಮಸ್ಥಳ ಮೇಳದ ತಿರುಗಾಟದ ಬಳಿಕ ಎಡನೀರು, ಹೊಸನಗರ, ಕಟೀಲು ಮೇಳಗಳಲ್ಲಿ ಒಂದೊಂದು ವರ್ಷ ತಿರುಗಾಟ ನಡೆಸಿದ್ದರು. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಕುಂಬಳೆಯ ದರ್ಬಾರ್ ಕಟ್ಟೆಯಲ್ಲಿರುವ ದೇವಸ್ಥಾನದಲ್ಲಿ ಹನ್ನೊಂದು ತಿಂಗಳ ಕಾಲ ಅರ್ಚಕರಾಗಿಯೂ ಕೆಲಸ ಮಾಡಿದ್ದರು. ದಿವಾಣ ಶಿವಶಂಕರ ಭಟ್ಟರು ಕಳೆದ 2 ವರ್ಷಗಳಿಂದ ಪಾವಂಜೆ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. 

ಶ್ರೀ ದಿವಾಣ ಶಿವಶಂಕರ ಭಟ್ಟರು ಬಡಗಿನ ನಾಟ್ಯವನ್ನೂ ಕಲಿತಿದ್ದರು. 1984ರಲ್ಲಿ ಮಳೆಗಾಲ ಉಡುಪಿಯ ಯಕ್ಷಗಾನ ಕಲಿಕಾ ಕೇಂದ್ರ ಸೇರಿ ಕೋಟ ಮಹಾಬಲ ಕಾರಂತ, ನೀಲಾವರ ಲಕ್ಷ್ಮೀನಾರಾಯಣ ರಾವ್, ಚೇರ್ಕಾಡಿ ಮಂಜುನಾಥ ಪ್ರಭು, ವಿದ್ವಾನ್ ಗಣಪತಿ ಭಟ್, ಬನ್ನಂಜೆ ಸಂಜೀವ ಸುವರ್ಣರಿಂದ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನು ಅಭ್ಯಾಸ ಮಾಡಿದ್ದರು.

ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಗುರುವಾಗಿ ಅಲ್ಲದೆ ಇನ್ನೂ ಹಲವಾರು ಕಡೆಗಳಲ್ಲಿ ಕಲಿಕಾಸಕ್ತರಿಗೆ ಇವರು ತರಬೇತಿ ನೀಡಿದ್ದರು. ಬೆದ್ರಡ್ಕ ಶ್ರೀರಾಮ ಯಕ್ಷ ಕಲಾ ಸಂಘ, ಕೋಳ್ಯೂರು ಶಂಕರನಾರಾಯಣ ದೇವಸ್ಥಾನ, ಪುತ್ತೂರು ಬೊಳುವಾರು ಶ್ರೀ ಮಲರಾಯ, ದುರ್ಗಾಪರಮೇಶ್ವರೀ ಯಕ್ಷಗಾನ ಸಂಘ, ಪಾರ್ತಿಸುಬ್ಬ ಯಕ್ಷಗಾನ ಸಂಘ ಶೇಡಿಕಾವು, ಕುಂಬಳೆ, ಸೂರಂಬೈಲು ಸರಕಾರೀ ಹಿರಿಯ ಪ್ರಾಥಮಿಕ ಶಾಲೆ, ಕುಂಬಳೆ ಸರಕಾರೀ ಹೈಸ್ಕೂಲ್, ಮುಜುಂಗಾವು ಪಾರ್ಥಸಾರಥಿ ದೇವಸ್ಥಾನ, ಬದಿಯಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ, ಬೆಳ್ತಂಗಡಿಯ ಕೊಯ್ಯೂರು ದೇವಸ್ಥಾನ, ಮತ್ತು ಆದೂರು ಪೇರಾಲ್ ಶಾಲೆ ಮೊದಲಾದ ಕಡೆ ತರಬೇತಿ ನೀಡಿದ್ದರು. ಎರಡು ವರ್ಷಗಳ ಕಾಲ ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕ ಚಣಿಲ ಶ್ರೀ ಸಿ.ಎಚ್ ಸುಬ್ರಹ್ಮಣ್ಯ ಭಟ್ ಇವರ ನೇತೃತ್ವದ ‘ಯಕ್ಷಸಿಂಧೂರ’ ವಿಟ್ಲ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಕಳೆದ ಹದಿಮೂರು ವರ್ಷಗಳಿಂದ ಸರಕಾರೀ ಕಾಲೇಜು ಕಾಸರಗೋಡು ಇಲ್ಲಿ ಪ್ರಾಧ್ಯಾಪಕರಾದ ಶ್ರೀ ಪ್ರೊ| ಡಾ.ರತ್ನಾಕರ ಮಲ್ಲಮೂಲೆ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. 

ಕೇರಳ ರಾಜ್ಯದ ತೃಶೂರ್ ಜಿಲ್ಲೆಯ ಇರಿಂಜಾಲಕುಡ ತಾಲೂಕಿನ ಶ್ರೀಕೃಷ್ಣ ಶಾಲೆಯ ವಿದ್ಯಾರ್ಥಿಗಳಿಗೆ ನಾಟ್ಯ ಹೇಳಿಕೊಟ್ಟಿದ್ದರು. ಇವರಿಂದ ನಾಟ್ಯ ಕಲಿತ ಮಲೆಯಾಳೀ ವಿದ್ಯಾರ್ಥಿಗಳು ಶಾಲಾ ಕಲೋತ್ಸವದ ಯಕ್ಷಗಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಮೈಸೂರು ಕರಾವಳೀ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ನೀಡಿ ಪ್ರದರ್ಶನ ನೀಡಲು ಕಾರಣರಾಗಿದ್ದರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಸಂಸ್ಕೃತ ಶಾಲೆಯ ಮಕ್ಕಳಿಗೆ ತರಬೇತಿ ನೀಡಿ, ಅವರಿಂದ ಎರಡು ಪ್ರದರ್ಶನ ನಡೆಸಿದ್ದರು. 

ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳ ಆಶೀರ್ವಾದ, ಶ್ರೀ ಹರ್ಷೇ೦ದ್ರ ಕುಮಾರರ ಪ್ರೋತ್ಸಾಹವನ್ನು ಸದಾ ದಿವಾಣ ಶಿವಶಂಕರ ಭಟ್ಟರು ನೆನಪಿಸಿಕೊಂಡು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಕಟೀಲು ಮೇಳದ ತಿರುಗಾಟ ಮತ್ತು ಉಳಿದ ಸಂದರ್ಭಗಳಲ್ಲೂ ಶ್ರೀ ಕ್ಷೇತ್ರ ಕಟೀಲಿನ ಶ್ರೀ ಆಸ್ರಣ್ಣ ಬಂಧುಗಳ ಸಹಕಾರ ಪ್ರೋತ್ಸಾಹ ಇವರಿಗೆ ದೊರೆತಿತ್ತು. ಮುಂಬೈಯಲ್ಲಿ ವಿಜಯಕುಮಾರ್ ಶೆಟ್ಟಿ ತೋನ್ಸೆ, ಶ್ರೀ ಪ್ರಕಾಶ್ ಭಂಡಾರಿ ನೇತೃತ್ವದ ಚಿಣ್ಣರ ಬಿಂಬ ತಂಡದ ಮಕ್ಕಳಿಗಾಗಿ ಯಕ್ಷಗಾನ ಶಿಬಿರವನ್ನೂ ದಿವಾಣ ಶಿವಶಂಕರ ಭಟ್ಟರು ನಡೆಸಿಕೊಟ್ಟಿರುತ್ತಾರೆ. ನಿಡ್ಲೆ ಗೋವಿಂದ ಭಟ್ಟರ ನೇತೃತ್ವದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಆರಂಭದಿಂದ ತೊಡಗಿ ಮೂರು ವರ್ಷಗಳ ಕಾಲ ಸದ್ರಿ ತಂಡದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಮುಳಿಯಾಲ ಭೀಮ ಭಟ್ಟರ ಮತ್ತು ಕುಬಣೂರು ಶ್ರೀಧರ ರಾಯರ ತಂಡಗಳಲ್ಲೂ ಕಲಾವಿದನಾಗಿ ಭಾಗವಹಿಸಿರುತ್ತಾರೆ.

ದಿವಾಣ ಶಿವಶಂಕರ ಭಟ್ಟರ ಅನೇಕ ಶಿಷ್ಯಂದಿರು ಇಂದು ಅನೇಕ ಮೇಳಗಳಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀಯುತರನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. 2012ರಲ್ಲಿ ಕುರಿಯ ವಿಠಲ ಶಾಸ್ತ್ರಿಗಳ ಜನ್ಮ ಶತಾಬ್ಧಿ ಯಕ್ಷೋತ್ಸವದ ಸಂದರ್ಭ ಧರ್ಮಸ್ಥಳದ ಖಾವಂದರ ಉಪಸ್ಥಿತಿಯಲ್ಲಿ ‘ಕಲಾಶಿಕ್ಷಣ ಗೌರವ’ ಪ್ರಶಸ್ತಿಯು ದೊರೆತಿದೆ. ಕರ್ನಾಟಕ ಜಾನಪದ ಪರಿಷತ್ತು- ಕೇರಳ ಗಡಿನಾಡು ಘಟಕ ಕಾಸರಗೋಡು ಇವರ ಜಾನಪದ ಸಂಧ್ಯಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರ ಉಪಸ್ಥಿತಿಯಲ್ಲಿ ಸನ್ಮಾನದ ಗೌರವವು ದೊರೆತಿದೆ. (2012) ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಧ್ರುವ ಪಟ್ಲ ಸಂಭ್ರಮ -2017ರಲ್ಲಿ ‘ಯಕ್ಷಧ್ರುವ ಕಲಾಗೌರವ’ ಪ್ರಶಸ್ತಿಯೂ ದೊರೆತಿದೆ. ಒಂದು ಲಕ್ಷ ರೂ. ಗೌರವ ಧನದೊಂದಿಗೆ  ಯಕ್ಷಧ್ರುವ ಪಟ್ಲ ಫೌಂಡೇಶನಿನ ಕುಂಬಳೆ ಘಟಕದ ಸನ್ಮಾನ, ಮಂಗಳೂರಿನ ಕೇಂದ್ರ ಮಹಿಳಾ ಘಟಕದಿಂದಲೂ ಸನ್ಮಾನವನ್ನು ಸ್ವೀಕರಿಸಿದ್ದಾರೆ.

ತಾನು ಕಲಾಸೇವೆಯನ್ನು ಮಾಡುತ್ತಾ ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಟ್ಟವರು ಶ್ರೀ ದಿವಾಣ ಶಿವಶಂಕರ ಭಟ್ಟರು. ಪ್ರಸ್ತುತ ತೆಂಕಿನ ಎಲ್ಲಾ ಮೇಳಗಳಲ್ಲೂ ಇವರಿಂದ ನಾಟ್ಯ ಕಲಿತವರು ಕಲಾವಿದರಾಗಿ ವ್ಯವಸಾಯ ಮಾಡುತ್ತಿದ್ದಾರೆ. ಇದು ಅವರು ಅತ್ಯಂತ ಸಂತೋಷ ಪಡಬೇಕಾದ ವಿಚಾರವು. ಯಕ್ಷಗಾನಕ್ಕೆ ಶ್ರೀಯುತರ ಕೊಡುಗೆಯಿದು.

ದಿವಾಣ ಶಿವಶಂಕರ ಭಟ್ಟರ ಪತ್ನಿ ಶ್ರೀಮತಿ ರೋಹಿಣಿ ದಿವಾಣ . ಇವರು ಗೃಹಣಿ. ಇವರ ತಂದೆ ಅರಂಬೂರು ಶ್ರೀ ಗೋವಿಂದ ಭಟ್ಟರು ಮದ್ದಳೆಗಾರರು. ಇವರು ಗೋಪಾಲಕೃಷ್ಣ ಕುರುಪ್ ಅವರ ಶಿಷ್ಯ. ರೋಹಿಣೀ ಶಿವಶಂಕರ್ ದಿವಾಣ ಅವರು ಸಂಗೀತ ಜೂನಿಯರ್ ಕಲಿತಿರುತ್ತಾರೆ. ದಿವಾಣ ಶಿವಶಂಕರ್ ಭಟ್, ರೋಹಿಣಿ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯಪುತ್ರ ಶ್ರೀ ಗಣೇಶ ದಿವಾಣ ಪ್ರಜ್ಞಾ ವಿಶೇಷ ಚೇತನರ ವಸತಿ ಶಾಲೆ ಪುತ್ತೂರು ಇಲ್ಲಿಯ ವಿದ್ಯಾರ್ಥಿ. ಕಿರಿಯ ಪುತ್ರ ಶ್ರೀ ಸ್ಕಂದ. ಶೃಂಗೇರಿಯ ಸಂಸ್ಕೃತ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ದ್ವಿತೀಯ ಎಂ.ಎ  ಸಂಸ್ಕೃತ ದರ್ಶನ ಶಾಸ್ತ್ರ ಅಧ್ಯಯನ ಮಾಡುತ್ತಿದ್ದಾರೆ.  ಮಕ್ಕಳಿಬ್ಬರಿಗೂ ಉಜ್ವಲವಾದ ಭವಿಷ್ಯವು ದೊರಕಲಿ. ದಿವಾಣ ಶಿವಶಂಕರ ಭಟ್ಟರಿಂದ ಇನ್ನೂ ಹೆಚ್ಚಿನ ಕಲಾಸೇವೆಯು ನಡೆಯಲಿ. ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ ಎಂಬ ಹಾರೈಕೆಗಳು.

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಫೋಟೋಗಳು: ಕಿರಣ್ ವಿಟ್ಲ, ಜಿ.ಪಿ ಭಟ್ (ದಿವಾಣ ಶಿವಶಂಕರ ಭಟ್ ಸಂಗ್ರಹ)

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments