ಹಿಂದಿನ ಕಾಲದಲ್ಲಿ ಮೇಳದ ತಿರುಗಾಟ ಅಷ್ಟು ಸುಲಭವಿರಲಿಲ್ಲ. ಆ ಕಾಲಕ್ಕೆ ಹೋಲಿಸಿದರೆ ಇಂದು ತಿರುಗಾಟ ನಡೆಸುವುದು ಅಷ್ಟು ಕಷ್ಟವಲ್ಲ. 1980-90 ರ ದಶಕದ ವರೆಗೂ ಹೆಚ್ಚಿನ ಕಲಾವಿದರೂ ಮನೆಯವರಿಂದ ದೂರವಾಗಿ ಮೇಳದಲ್ಲಿದ್ದುಕೊಂಡೇ ಕಲಾಸೇವೆ ನಡೆಸುತ್ತಿದ್ದರು. ದಿನಾ ಮನೆಗೆ ಬಂದು ಮತ್ತೆ ಪ್ರದರ್ಶನಗಳಿಗೆ ತೆರಳಲು ಅನುಕೂಲತೆಗಳೂ ಇರಲಿಲ್ಲ. ಮನೆಯಿಂದ ದೂರವಾದರೂ ಮೇಳದಲ್ಲಿ ಒಂದು ಕೌಟುಂಬಿಕ ವಾತಾವರಣವು ಕಲಾವಿದರಿಗೆ ಸಿಗುತ್ತಿತ್ತು. ಕಲಿಕೆಗೆ ಸಮಯವೂ, ಅವಕಾಶಗಳೂ ಸಿಗುತ್ತಿತ್ತು. ಪ್ರದರ್ಶನಗಳನ್ನು ನೋಡುತ್ತಾ, ಹಿರಿಯ ಕಲಾವಿದರಿಂದ ಕೇಳಿ ತಿಳಿಯುತ್ತಾ ಕಿರಿಯ ಕಲಾವಿದರು ಬೆಳೆಯುತ್ತಿದ್ದರು.
ಹೀಗೆ ಮೇಳದಲ್ಲಿದ್ದುಕೊಂಡೇ ಕಲಿತು ಅನೇಕರು ಕಲಾವಿದರಾಗಿ ಕಾಣಿಸಿಕೊಂಡರು ಈ ತೆರನಾಗಿ ಬೆಳೆದು ಕಾಣಿಸಿಕೊಂಡ ಕಲಾವಿದರಲ್ಲಿ ವೇಣೂರು ಶ್ರೀ ಸದಾಶಿವ ಆಚಾರ್ಯರೂ ಒಬ್ಬರು. ಹಂತ ಹಂತವಾಗಿ ಬೆಳೆದು ಸಾಗಿಬಂದ ಕಲಾವಿದರಿವರು. ಕಷ್ಟಪಟ್ಟು ಸದಾ ಅಧ್ಯಯನಶೀಲರಾಗಿ ಕಲಾಸೇವೆಯನ್ನು ಮಾಡುತ್ತಾ ಬಂದ ಅನುಭವೀ ಕಲಾವಿದರಿವರು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪಾತ್ರಗಳನ್ನು ನಿರ್ವಹಿಸಿ ಅನುಭವವನ್ನು ಗಳಿಸಿಕೊಂಡಿದ್ದಾರೆ. ಪ್ರಸ್ತುತ ಪುಂಡುವೇಷ ಮತ್ತು ಕಿರೀಟವೇಷಗಳನ್ನು ಮಾಡುತ್ತಿದ್ದಾರೆ.
ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡುವ ಸಾಮರ್ಥ್ಯ ವೇಣೂರು ಸದಾಶಿವ ಆಚಾರ್ಯರಿಗಿದ್ದು, ತಂಡಕ್ಕೆ ಇವರೊಬ್ಬ ಅನಿವಾರ್ಯ ಕಲಾವಿದ. ವೇಷ ಹಂಚುವಿಕೆಯಲ್ಲಿ ಭಾಗವತರಿಗೆ ಆಪದ್ಬಾಂಧವರಾಗಿ ಒದಗಬಲ್ಲರು. ಭಾಗವತರ ಹೊಣೆಯೆಂಬ ಭಾರವನ್ನು ಇವರು ಹಗುರಗೊಳಿಸಬಲ್ಲರು. ಪ್ರದರ್ಶನ ಯಶಸ್ಸಿಗೆ ಕಾರಣರಾಗಬಲ್ಲರು. ಮೃದು ಮನಸ್ಸಿನ, ಸಾತ್ವಿಕ ಸ್ವಭಾವದ ಹಿರಿಯ ಕಲಾವಿದರಾದ ಇವರು ಯಕ್ಷಗಾನ ಕ್ಷೇತ್ರದಲ್ಲಿ ನಲುವತ್ತೊಂದು ವರ್ಷಗಳ ಅನುಭವಿ. ಪ್ರಸ್ತುತ ಇವರು ಶ್ರೀ ಕಿಶನ್ ಕುಮಾರ್ ಹೆಗ್ಡೆ ಅವರ ಸಂಚಾಲಕತ್ವದ ಹಿರಿಯಡಕ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಶ್ರೀ ಸದಾಶಿವ ಆಚಾರ್ಯರ ಹುಟ್ಟೂರು ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಕೋಡ್ಲೆ ಎಂಬಲ್ಲಿ. 1968ನೇ ಇಸವಿ ಜೂನ್ 5ರಂದು ಶ್ರೀ ಕಿಟ್ಟಣ್ಣ ಆಚಾರ್ಯ ಮತ್ತು ಶ್ರೀಮತಿ ರೇವತಿ ದಂಪತಿಗಳ ಮಗನಾಗಿ ಜನನ. ಶ್ರೀ ಕಿಟ್ಟಣ್ಣ ಆಚಾರ್ಯರು ತಮ್ಮ ಕುಲಕಸುಬನ್ನು ಮಾಡುವುದರ ಜತೆಗೆ ಕಲಾಸಕ್ತರೂ ಆಗಿದ್ದರು. ವೇಣೂರು ಸದಾಶಿವ ಆಚಾರ್ಯರು ಓದಿದ್ದು 5ನೇ ತರಗತಿ ವರೆಗೆ. ಬಜಿರೆ ಮುದ್ದಾಡಿ ಶಾಲೆಯಲ್ಲಿ. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ವೇಣೂರು ಪರಿಸರದಲ್ಲಿ ನಡೆಯುತ್ತಿದ್ದ ವಿವಿಧ ಮೇಳಗಳ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ಮನೆಯಲ್ಲಿ ಬಡತನವಿದ್ದುದರಿಂದ ಹೆಚ್ಚಿನ ವಿದ್ಯಾರ್ಜನೆಗೆ ಅವಕಾಶವಿರಲಿಲ್ಲ. ಆದರೂ ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆಯು ಚಿಗುರೊಡೆದಿತ್ತು.
ಶಾಲೆ ಬಿಟ್ಟ ಮೇಲೆ 1 ವರ್ಷ ನಿನ್ನಾರು ಶ್ಯಾಮರಾಯ ಆಚಾರ್ಯರ ಜತೆ ತಮ್ಮ ಕುಲವೃತ್ತಿಯನ್ನು ಕಲಿತು ತೊಡಗಿಸಿಕೊಂಡಿದ್ದರು. ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ ಈ ವೃತ್ತಿಯನ್ನು ಬಿಟ್ಟಿದ್ದರು. ಖ್ಯಾತ ಹಾಸ್ಯ ಕಲಾವಿದ ವೇಣೂರು ಸುಂದರ ಆಚಾರ್ಯರು ಆಗ ಸುರತ್ಕಲ್ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು. ಅವರ ಜತೆ ಮೇಳಕ್ಕೆ ತೆರಳಿದ ಸದಾಶಿವ ಆಚಾರ್ಯರು ಹಾರ್ಮೋನಿಯಂ ಬಾರಿಸುವುದು ಮೊದಲಾದ ಕೆಲಸಗಳನ್ನು ಮಾಡುತ್ತಿದ್ದರು. ಅದೇ ವರ್ಷ ಯಕ್ಷಗಾನ ನಾಟ್ಯ ಕಲಿಯುವ ಮನ ಮಾಡಿದ್ದರು. ಶ್ರೀ ಸದಾಶಿವ ಆಚಾರ್ಯರು ಯಕ್ಷಗಾನ ಹೆಜ್ಜೆಗಾರಿಕೆ ಕಲಿತದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ. ತರಬೇತಿ ಕೇಂದ್ರವು ಭರ್ತಿಯಾಗಿದ್ದರೂ ಖಾವಂದರು ಇವರ ಕಲಿಕೆಗೆ ಅವಕಾಶ ನೀಡಿದ್ದರು.
ಕೆ.ಗೋವಿಂದ ಭಟ್ ಮತ್ತು ದಿವಾಣ ಶಿವಶಂಕರ ಭಟ್ಟರಿಂದ ನರ್ತನ ಕಲೆಯನ್ನು ಅಭ್ಯಸಿಸಿದರು. ತರಬೇತಿ ಕೇಂದ್ರದಲ್ಲಿ ವೇಣೂರು ಭಾಸ್ಕರ, ಚಿದಂಬರ ಬಾಬು, ಪಂಜಾಜೆ ಶ್ರೀಧರ ಮೊದಲಾದವರು ಇವರ ಸಹಪಾಠಿಗಳು. ತರಬೇತಿ ಕೇಂದ್ರದ ಪ್ರದರ್ಶನ, ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ಈಶ್ವರನ ಪಾತ್ರ ಧರಿಸಿ ರಂಗವೇರಿದ್ದರು. ಅದೇ ವರ್ಷ ವೇಣೂರು ಸುಂದರ ಆಚಾರ್ಯರ ಜತೆ ಸುರತ್ಕಲ್ ಮೇಳಕ್ಕೆ. (1981) ಬಾಲಗೋಪಾಲನಾಗಿ ಅಭಿನಯ. ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ಮಾಡುತ್ತಾ ಸಾಗಿದರು. ಸುರತ್ಕಲ್ ಮೇಳವು ಆಗ ಖ್ಯಾತ ಕಲಾವಿದರಿದ್ದ ತಂಡವಾಗಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಶೇಣಿ, ತೆಕ್ಕಟ್ಟೆ ಮೊದಲಾದವರೊಂದಿಗೂ ತಿರುಗಾಟ ಮಾಡುವ ಭಾಗ್ಯವು ಒದಗಿತ್ತು. ಅಗರಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ಕಡಬ ನಾರಾಯಣ ಆಚಾರ್ಯ, ವೇಣೂರು ಸುಂದರ ಆಚಾರ್ಯ, ಶಿವರಾಮ ಜೋಗಿ, ಎಂ.ಕೆ ರಮೇಶ ಆಚಾರ್ಯ, ಪ್ರಕಾಶ್ ಚಂದ್ರ ಬಾಯಾರು ಮೊದಲಾದ ಹಿರಿಯ ಕಲಾವಿದರ ಒಡನಾಟವೂ ಸಹಕಾರವೂ ದೊರೆತದ್ದು ಕಲಾವಿದನಾಗಿ ಬೆಳೆಯಲು ಅನುಕೂಲವಾಗಿತ್ತು. ಹದಿಮೂರು ವರ್ಷಗಳ ಕಾಲ ಸುರತ್ಕಲ್ ಮೇಳದಲ್ಲಿ ವ್ಯವಸಾಯ. ಈ ಸಂದರ್ಭದಲ್ಲಿ ಸದಾಶಿವ ಆಚಾರ್ಯರು ವೇಷಧಾರಿಯಾಗಿ ಪುಂಡುವೇಷಗಳಲ್ಲಿ ಕಾಣಿಸಿಕೊಂಡಿದ್ದರು.
ಸುರತ್ಕಲ್ ಮೇಳದ ಬಳಿಕ ಕಿಶನ್ ಕುಮಾರ್ ಹೆಗ್ಡೆ ಅವರ ಸಂಚಾಲಕತ್ವದ ಮಂಗಳಾದೇವಿ ಮೇಳದಲ್ಲಿ ಹದಿನಾಲ್ಕು ವರ್ಷಗಳ ವ್ಯವಸಾಯ. ಈ ಸಂದರ್ಭದಲ್ಲಿ ಬಂಗಾರ್ದ ಗೆಜ್ಜೆ ತುಳು ಪ್ರಸಂಗದಲ್ಲಿ ಇವರೂ ವೇಣೂರು ಭಾಸ್ಕರ ಆಚಾರ್ಯರೂ ಜತೆ ವೇಷಗಳಲ್ಲಿ ಕಾಣಿಸಿಕೊಂಡು ರಂಜಿಸಿದ್ದರು. ಇಲ್ಲಿಯೂ ಅನೇಕ ಅನುಭವೀ ಕಲಾವಿದರ ಒಡನಾಟವು ಸಿಕ್ಕಿತ್ತು. ಕಳೆದ ಹದಿಮೂರು ವರ್ಷಗಳಿಂದ ವೇಣೂರು ಸದಾಶಿವ ಆಚಾರ್ಯರು ಕಿಶನ್ ಕುಮಾರ್ ಹೆಗ್ಡೆ ಅವರ ಹಿರಿಯಡಕ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಹಿರಿಯಡಕ ಕ್ಷೇತ್ರ ಮಹಾತ್ಮೆಯ ವೀರಭದ್ರ ದೇವರ ವೇಷವು ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ವೀರಭದ್ರನು ಹಿರಿಯಡಕ ಕ್ಷೇತ್ರದಲ್ಲಿ ನೆಲೆಸಿದ ದೇವನೂ ಹೌದು. (ವೀರಭದ್ರೇಶ್ವರ) ಪುಂಡು ವೇಷಕ್ಕೆ ಸಂಬಂಧಿಸಿದ ಹೆಚ್ಚಿನ ಪಾತ್ರಗಳನ್ನೂ ನಿರ್ವಹಿಸಿ ಸದಾಶಿವ ಆಚಾರ್ಯರು ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಕಿರೀಟ ವೇಷಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಕಳೆದ ಇಪ್ಪತ್ತೈದು ವರ್ಷಗಳಿಂದ ವೇಣೂರು ಸದಾಶಿವ ಆಚಾರ್ಯರು ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಂಚಾರೀ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಪುರಾಣ ಪ್ರಸಂಗಗಳ ಅನುಭವಕ್ಕೆ ಇದು ಅನುಕೂಲವಾಗಿತ್ತು. ಪ್ರಸ್ತುತ ಈ ತಂಡವನ್ನು ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರು ಮುನ್ನಡೆಸುತ್ತಿದ್ದಾರೆ. ಇವರ ಜತೆಗೂ ತಂಡದಲ್ಲಿದ್ದು ಸದಾಶಿವ ಆಚಾರ್ಯರು ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ.
ಶ್ರೀಮತಿ ವಿದ್ಯಾ ಕೋಳ್ಯೂರು ಅವರ ನೇತೃತ್ವದ “ಯಕ್ಷ ಮಂಜೂಷ” ತಂಡದ ಸದಸ್ಯನಾಗಿ ಮೂರು ವರ್ಷ ಉತ್ತರ ಭಾರತದ ವಿವಿದೆಡೆ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಖ್ಯಾತ ಹಿರಿಯ ಕಲಾವಿದ, ಸಂಘಟಕ ಶ್ರೀ ಡಿ. ಮನೋಹರ್ ಕುಮಾರ್ ಅವರ ಜತೆ ವಿದೇಶ ಪ್ರವಾಸ ಕೈಗೊಂಡು ಮಸ್ಕತ್ ನಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗಿಯಾಗಿದ್ದಾರೆ.
ವೇಣೂರು ಶ್ರೀ ಸದಾಶಿವ ಆಚಾರ್ಯರು ವೃತ್ತಿಕಲಾವಿದನಾಗಿಯೂ ಸಂಸಾರಿಕವಾಗಿಯೂ ತೃಪ್ತ ಜೀವನವನ್ನು ನಡೆಸುತ್ತಿದ್ದಾರೆ. ಇವರ ಪತ್ನಿ ಶ್ರೀಮತಿ ಶೋಭಾ. ಇವರು ಗೃಹಣಿ. ಸದಾಶಿವ ಆಚಾರ್ಯ, ಶೋಭಾ ದಂಪತಿಗಳಿಗೆ ಮೂವರು ಪುತ್ರರು. ಹಿರಿಯ ಪುತ್ರ ರವಿಚಂದ್ರ ಶಿಲ್ಪಕಲೆಯ ಅಭ್ಯಾಸಿ. ದ್ವಿತೀಯ ಪುತ್ರ ರವಿಕಿರಣ್ 9ನೇ ತರಗತಿಯ ವಿದ್ಯಾರ್ಥಿ. ತೃತೀಯ ಪುತ್ರ ರವಿಕೀರ್ತನ್ 1ನೇ ಕ್ಲಾಸಿನ ವಿದ್ಯಾರ್ಥಿ. ಇವರಿಗೆ ಉತ್ತಮವಾದ ಭವಿಷ್ಯವು ದೊರೆಯಲಿ. ಸದಾಶಿವ ಆಚಾರ್ಯರಿಗೆ ಇನ್ನಷ್ಟು ಕಲಾಸೇವೆ ಮಾಡುವ ಭಾಗ್ಯವನ್ನು ಕಲಾಮಾತೆಯು ನೀಡಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು.
ಶ್ರೀ ವೇಣೂರು ಸದಾಶಿವ ಆಚಾರ್ಯ, ಮೊಬೈಲ್: 9448930717
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions