Saturday, November 23, 2024
Homeಯಕ್ಷಗಾನಬಡಗುತಿಟ್ಟಿನ ಅನುಭವಿ ಕಲಾವಿದ - ಶ್ರೀ ನರಸಿಂಹ ಮಹಾಬಲೇಶ್ವರ ಗಾಂವ್ಕರ್ 

ಬಡಗುತಿಟ್ಟಿನ ಅನುಭವಿ ಕಲಾವಿದ – ಶ್ರೀ ನರಸಿಂಹ ಮಹಾಬಲೇಶ್ವರ ಗಾಂವ್ಕರ್ 

ಶ್ರೀ ನರಸಿಂಹ ಮಹಾಬಲೇಶ್ವರ ಗಾಂವ್ಕರ್ ಅವರು ಬಡಗು ತಿಟ್ಟಿನ ಅನುಭವೀ ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಇವರು ಸುಮಾರು ಇಪ್ಪತ್ತಾರು ವರ್ಷಗಳ ಅನುಭವಿ. ಪುಂಡುವೇಷ ಮತ್ತು ಕಿರೀಟವೇಷಗಳನ್ನು ನಿರ್ವಹಿಸಬಲ್ಲ, ನಿರ್ವಹಿಸಿದ ಕಲಾವಿದರಿವರು. ಎಲ್ಲಾ ರೀತಿಯ ಪಾತ್ರಗಳನ್ನೂ ಶ್ರೀ ನರಸಿಂಹ ಗಾಂವ್ಕರ್ ಅವರು ಮಾಡಬಲ್ಲರು. ಆಲ್ ರೌಂಡರ್ ಕಲಾವಿದರಾದ ಕಾರಣ ಇವರು ತಂಡದ ಮತ್ತು ಭಾಗವತನ ಹೊಣೆಯನ್ನು ಹಗುರ ಮಾಡಬಲ್ಲರು. ಕಳೆದ ಹದಿನೆಂಟು ವರ್ಷಗಳಿಂದ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡಿದ್ದ ಇವರು ಈ ವರ್ಷದಿಂದ (2022-23) ಪೆರ್ಡೂರು ಮೇಳದಲ್ಲಿ ತಿರುಗಾಟ ನಡೆಸಲಿದ್ದಾರೆ. 

ಶ್ರೀ ನರಸಿಂಹ ಮಹಾಬಲೇಶ್ವರ ಗಾಂವ್ಕರ್ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿಮ್ನಳ್ಳಿ ಗ್ರಾಮದ ಬಿದಿರೆಮನೆ. 1979ನೇ ಇಸವಿ ಜೂನ್ 20ರಂದು ಶ್ರೀ ಮಹಾಬಲೇಶ್ವರ ಗಾಂವ್ಕರ್ ಮತ್ತು ಶ್ರೀಮತಿ ಹೇಮಾವತಿ ದಂಪತಿಗಳ ಪುತ್ರನಾಗಿ ಜನನ. ಮಹಾಬಲೇಶ್ವರ ಗಾಂವ್ಕರ್ ಹೇಮಾವತಿ ದಂಪತಿಗಳ ಆರು ಮಂದಿ ಮಕ್ಕಳಲ್ಲಿ ಇವರು ಕೊನೆಯವರು. (ನಾಲ್ಕು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ).

ಶ್ರೀ ನರಸಿಂಹ ಗಾಂವ್ಕರ್ ಅವರ ತಂದೆ ಶ್ರೀ ಮಹಾಬಲೇಶ್ವರ ಗಾಂವ್ಕರ್ ಅವರು  ಉತ್ತಮ ಕಲಾವಿದರು. ಅಣ್ಣ ಶ್ರೀ ಭಾಸ್ಕರ ಗಾಂವ್ಕರ್ ಶಿಕ್ಷಕರು. ಇವರು ವೃತ್ತಿ ಕಲಾವಿದರಾಗಿ ತಿರುಗಾಟ ನಡೆಸಿದ್ದು ಪ್ರಸ್ತುತ ಹವ್ಯಾಸೀ ಕಲಾವಿದರಾಗಿ ವೇಷ ಮಾಡುತ್ತಿದ್ದಾರೆ. ನರಸಿಂಹ ಗಾಂವ್ಕರರ ದೊಡ್ಡಪ್ಪ ಶ್ರೀ ವೆಂಕಟ್ರಮಣ ಗಾಂವ್ಕರ ಹವ್ಯಾಸಿ ಕಲಾವಿದರು. ಹಾಗಾಗಿ ನರಸಿಂಹ ಗಾಂವ್ಕರ್ ಅವರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿಯೇ ಬಂದಿತ್ತು.

ಇವರು ಓದಿದ್ದು 8ನೇ ತರಗತಿಯ ವರೆಗೆ. 4ನೇ ತರಗತಿ ವರೆಗೆ ಶಿಮ್ನಳ್ಳಿ ಶಾಲೆಯಲ್ಲಿ. ಬಳಿಕ 7ನೇ ತರಗತಿ ವರೆಗೆ ಬಾರೆ ಶಾಲೆಯಲ್ಲಿ. ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ 8ನೇ ತರಗತಿಯನ್ನು ಪೂರೈಸಿದ್ದರು. ಎಳವೆಯಲ್ಲಿಯೇ ಯಕ್ಷಗಾನಾಸಕ್ತಿಯು ಇತ್ತು. ರಾತ್ರಿ ಆಟ ನೋಡಿ ಹಗಲು ಕುಣಿಯುವ ಕ್ರಮವೂ ಇತ್ತು. ತಾನೂ ಕಲಾವಿದನಾಗಿ ರಂಗವೇರಿ ಅಭಿನಯಿಸಬೇಕೆಂಬ ಆಸೆಯೂ ಹುಟ್ಟಿಕೊಂಡಿತ್ತು. ಯಕ್ಷಗಾನದ ಗೀಳಿನಿಂದಾಗಿಯೇ ಶಾಲಾ ಕಲಿಕೆಯನ್ನು ನಿಲ್ಲಿಸಿದ್ದರು.

ಆಗ ತಮ್ಮ ಊರಿನ ಕಲಾವಿದರೇ ಆದ ಶ್ರೀ ತಮ್ಮಣ್ಣ ಗಾಂವ್ಕರ ಅವರು ಸೌಕೂರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು. ಮನೆಯವರಿಗೆ ತಿಳಿಸದೆಯೇ ನರಸಿಂಹ ಗಾಂವ್ಕರರು ತಮ್ಮಣ್ಣ ಗಾಂವ್ಕರರ ಜತೆ ಸೌಕೂರು ಮೇಳ ಸೇರಿದ್ದರು. ಬಾಲಗೋಪಾಲನಾಗಿ ರಂಗಪ್ರವೇಶ. ಕಿರೀಟ ವೇಷಭೂಷಣಗಳನ್ನು ಧರಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮೇಳ ಬಿಟ್ಟು ಮನೆ ಸೇರಿದ್ದರು.

ಒಂದು ವಾರದ ಬಳಿಕ ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಜತೆ ಶಿರಸಿ ಶ್ರೀ ಮಾರಿಕಾಂಬಾ ಮೇಳಕ್ಕೆ ಸೇರಿದರು. ಕಲಾ ಕ್ಷೇತ್ರದಲ್ಲಿ ಶ್ರೀ ನರಸಿಂಹ ಗಾಂವ್ಕರ್ ಅವರದ್ದು ಕ್ಷಿಪ್ರ ಕಲಿಕೆ. ಅಧ್ಯಯನದ ಮೂಲಕ ಹಂತ ಹಂತವಾಗಿ ಬೆಳೆಯುತ್ತಾ ಸಾಗಿದ್ದರು. ಮೇರು ಕಲಾವಿದ ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ ಅವರ ನಿರ್ದೇಶನವೂ ಸಿಕ್ಕಿತ್ತು. ತಪ್ಪಿದಾಗ ಅವರು ತಿದ್ದಿ ಮುನ್ನಡೆಸುತ್ತಿದ್ದರು.

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಸಹಿತ ಅನೇಕ ಕಲಾವಿದರ ಒಡನಾಟವೂ ಕಲಿಕೆ ಅವಕಾಶವಾಗಿತ್ತು. ಶಿರಸಿ ಮೇಳದಲ್ಲಿ ಒಂದು ವರ್ಷ ತಿರುಗಾಟ. ಬಳಿಕ ಮೂರು ವರ್ಷ ಗುಂಡಬಾಳಾ ಮೇಳದಲ್ಲಿ ವ್ಯವಸಾಯ. ಶ್ರೀ ಪ್ರಭಾಕರ ಚಿಟ್ಟಾಣಿ ಅವರೇ ನರಸಿಂಹ ಗಾಂವ್ಕರರನ್ನು ಗುಂಡಬಾಳಾ ಮೇಳಕ್ಕೆ ಸೇರಿಸಿದ್ದರು. ಪೌರಾಣಿಕ ಪ್ರಸಂಗಗಳೇ ಪ್ರದರ್ಶಿಸಲ್ಪಡುತ್ತಿತ್ತು. “ಯಕ್ಷಗಾನ ಕಲಾವಿನಾಗಬೇಕೆಂಬ ಆಸೆಯುಳ್ಳವರಿಗೆ ಗುಂಡಬಾಳಾ ಮೇಳವು ಒಂದು ಕಲಿಕಾ ಕೇಂದ್ರ. ಅದೊಂದು ಪಾಠಶಾಲೆ” ಎಂಬುದು ನರಸಿಂಹ ಗಾಂವ್ಕರ್ ಅವರ ಅನುಭವದ ಮಾತು.

ಈ ಸಂದರ್ಭದಲ್ಲಿ ಪುಂಡುವೇಷ ಮತ್ತು ಕಿರೀಟ ವೇಷಗಳನ್ನೂ ಮಾಡಿ ಅನುಭವಗಳನ್ನು ಗಳಿಸಲು ಅವಕಾಶವಾಗಿತ್ತು. ಶ್ರೀ ಪ್ರಭಾಕರ ಚಿಟ್ಟಾಣಿ ಅವರ ನಿರ್ದೇಶನ ಸಹಕಾರವೂ ಸಿಕ್ಕಿತ್ತು. ಬಳಿಕ 5 ವರ್ಷಗಳ ಕಾಲ ಗೋಳಿಗರಡಿ ಮೇಳದಲ್ಲಿ ವ್ಯವಸಾಯ. ಪುರಾಣ ಪ್ರಸಂಗಗಳಲ್ಲಿ ಬರುವ ಹೆಚ್ಚಿನ ಎಲ್ಲಾ ವೇಷಗಳನ್ನು ನಿರ್ವಹಿಸಿದ ಅನುಭವ ಶ್ರೀ ನರಸಿಂಹ ಗಾಂವ್ಕರರಿಗಿದೆ. ಹಿತಮಿತವಾದ ಕುಣಿತ ಮತ್ತು ಮಾತುಗಳಿಂದ ಪಾತ್ರಗಳನ್ನು ಚಿತ್ರಿಸುತ್ತಾರೆ. ಎಲ್ಲಾ ತರದ ಪಾತ್ರಗಳನ್ನು ಮಾಡಬಲ್ಲವರಾದುದರಿಂದ ತಂಡಕ್ಕೆ ಇವರು ಅಗತ್ಯವಾಗಿ ಬೇಕಾಗುವ ಕಲಾವಿದ. ಮಳೆಗಾಲದಲ್ಲಿ ಇವರು ಬಡಗಿನ ಹೆಚ್ಚಿನ ಎಲ್ಲಾ ತಂಡದ ಪ್ರದರ್ಶನಗಳಲ್ಲೂ ಭಾಗವಹಿಸುತ್ತಿದ್ದಾರೆ. 

ಶ್ರೀ ನರಸಿಂಹ ಮಹಾಬಲೇಶ್ವರ ಗಾಂವ್ಕರ ಅವರು ಗೋಳಿಗರಡಿ ಮೇಳದ ಬಳಿಕ ಹದಿನೆಂಟು ವರ್ಷಗಳ ಕಾಲ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಶ್ರೀ ಕಿಶನ್ ಕುಮಾರ್ ಹೆಗ್ಡೆ ಅವರ ಸಂಚಾಲಕತ್ವದ ಈ ಮೇಳದಲ್ಲಿ ಹಿಮ್ಮೇಳ ಮುಮ್ಮೇಳಗಳ ಸರ್ವ ಕಲಾವಿದರ ಸಹಕಾರವು ದೊರಕಿತ್ತು. ಬಳ್ಕೂರು ಶ್ರೀ ಕೃಷ್ಣ ಯಾಜಿಗಳ ನಿರ್ದೇಶನವೂ ಸಿಕ್ಕಿತ್ತು.

ವೃತ್ತಿ ಬದುಕಿನಲ್ಲಿ ಸಹ ಕಲಾವಿದರ ಸಹಕಾರವನ್ನು ನರಸಿಂಹ ಗಾಂವ್ಕರ್ ಅವರು ಮರೆಯದೆ ನೆನಪಿಸುತ್ತಾರೆ. ಮೇಳದ ತಿರುಗಾಟದಲ್ಲಿ ಅನೇಕ ಖ್ಯಾತ ಕಲಾವಿದರ ಒಡನಾಟವು ಸಿಕ್ಕಿದ್ದು ಭಾಗ್ಯ. ಅದು ಕಲಿಯುತ್ತಾ ಬೆಳೆಯಲು ಅನುಕೂಲವಾಗಿತ್ತು ಎಂಬುದು ಇವರ ಮನದಾಳದ ಮಾತುಗಳು. ಕಳೆದ ಹದಿನೆಂಟು ವರ್ಷಗಳಿಂದ ಸಾಲಿಗ್ರಾಮ ಮೇಳದ ಕಲಾವಿದರಾಗಿದ್ದ ಇವರು ಈ ವರ್ಷದಿಂದ ಅಂದರೆ 2022-23ನೇ ಸಾಲಿನ ತಿರುಗಾಟವನ್ನು ಶ್ರೀ ವೈ. ಕರುಣಾಕರ ಶೆಟ್ರ ಸಂಚಾಲಕತ್ವದ ಪೆರ್ಡೂರು ಮೇಳದಲ್ಲಿ ನಡೆಸಲಿದ್ದಾರೆ.

ಶ್ರೀ ನರಸಿಂಹ ಮಹಾಬಲೇಶ್ವರ ಗಾಂವ್ಕರ್ ಅವರು ವೃತ್ತಿಬದುಕಿನಲ್ಲಿಯೂ ಸಾಂಸಾರಿಕವಾಗಿಯೂ ತೃಪ್ತರು. ಇವರ ಪತ್ನಿ ಶ್ರೀಮತಿ ಸೌಮ್ಯ. ಇವರು ಗೃಹಣಿ. ಶ್ರೀ ನರಸಿಂಹ ಗಾಂವ್ಕರ್ ಮತ್ತು ಶ್ರೀಮತಿ ಸೌಮ್ಯ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ಕುಮಾರಿ ಪ್ರಣಮ್ಯ. ೬ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕಿರಿಯ ಪುತ್ರಿ ಕುಮಾರಿ ಪ್ರತೀಕ್ಷಾ. ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮಕ್ಕಳಿಬ್ಬರಿಗೂ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ನರಸಿಂಹ ಗಾಂವ್ಕರ ಅವರಿಗೆ ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ. ಕಲಾ ಕ್ಷೇತ್ರದಲ್ಲಿ ವ್ಯವಸಾಯವನ್ನು ನಡೆಸಲು ಕಲಾಮಾತೆಯ ಅನುಗ್ರಹವು ಸದಾ ದೊರೆಯಲಿ ಎಂಬ ಹಾರೈಕಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments