Saturday, January 18, 2025
Homeಯಕ್ಷಗಾನ"ಕಲೆಯ ಸೌಂದರ್ಯವು ಕೆಡದಂತೆ ಕಾಪಿಡುವುದು" -  ಕಲಾವಿದರು, ಸಂಘಟಕರು, ಪ್ರೇಕ್ಷಕರಿಂದ 

“ಕಲೆಯ ಸೌಂದರ್ಯವು ಕೆಡದಂತೆ ಕಾಪಿಡುವುದು” –  ಕಲಾವಿದರು, ಸಂಘಟಕರು, ಪ್ರೇಕ್ಷಕರಿಂದ 

ಯಕ್ಷಗಾನ ಎಂಬ ಗಂಡು ಕಲೆಯ ಸೌಂದರ್ಯವು ಅನುಪಮವಾದುದು. ಹಿರಿಯ ಕಲಾವಿದರಾದ ಕುಂಬಳೆ ಸುಂದರ ರಾಯರು ಹೇಳಿದಂತೆ ಸರ್ವಾಂಗ ಸುಂದರವಾದ ಕಲೆಯಿದು. ಇದರ ಸೊಬಗನ್ನು, ಸೊಗಸನ್ನು ವರ್ಣಿಸುವುದಕ್ಕೆ ಸಹಸ್ರ ನಾಲಿಗೆಗಳುಳ್ಳ ಫಣಿಪನಿಗೂ ಅಸಾಧ್ಯ. ಹಾಗಿರುವಾಗ ನಮಗೆಲ್ಲಿ ಸಾಧ್ಯ? ಈ ಕಲೆಗೆ ಸಂಬಂಧಿಸಿದ ಪ್ರದರ್ಶನಗಳನ್ನು ನೋಡಿ, ಕೇಳಿ ಸಂತೋಷವನ್ನು ಅನುಭವಿಸುವ ನಾವೇ ಧನ್ಯರು. ಈ ಶ್ರೇಷ್ಠ ಕಲೆಯ ಸೌಂದರ್ಯವು ಕೆಡದಂತೆ ಕಾಪಿಡುವುದು ನಮ್ಮೆಲ್ಲರ ಕರ್ತವ್ಯ. ಕಲಾವಿದರೂ ಸಂಘಟಕರೂ ಕಲಾಭಿಮಾನಿಗಳೂ ಹೊಣೆಯರಿತು ತೊಡಗಿಸಿಕೊಂಡಾಗ ಇದು ಸಾಧ್ಯ. ಪರಂಪರೆ, ಹೊಸತನಗಳ ವಿಚಾರ ಬಂದಾಗ ಯಕ್ಷಗಾನ ಭೀಷ್ಮ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಮಾತುಗಳು ನೆನಪಾಗುತ್ತದೆ.

“ಸುಧಾರಣೆಯೆಂದರೆ ಬುಡವನ್ನು ಕತ್ತರಿಸದೆ, ಅಗತ್ಯವಿಲ್ಲದ ಶಾಖೆಗಳನ್ನು ಮಾತ್ರ ಕತ್ತರಿಸುವುದೆಂಬ ಕರ್ಷಕ ಬುದ್ಧಿಯಿದ್ದರೆ ಮಾತ್ರ ಕಲೆಯನ್ನು ಆಕರ್ಷಕವಾಗಿ ಉಳಿಸಿ ಬೆಳೆಸಬಹುದೆಂದು ಕಲಾವಿದರೂ ಕಲಾಭಿಮಾನಿಗಳೂ ನಂಬಿಕೆಯುಳ್ಳವರಾಗಬೇಕು”  (ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘದ ರಜತ ಮಹೋತ್ಸವ ಸ್ಮರಣ ಸಂಚಿಕೆ ‘ಸುಧಾ ಕಲಶ’ ಪುಸ್ತಕದಲ್ಲಿ) ಕಲೆಯನ್ನು ರಕ್ಷಿಸುವುದು ಕಲಾವಿದರ ಜೊತೆಗೆ ಕಲಾಭಿಮಾನಿಗಳಿಗೂ ಕರ್ತವ್ಯ ಎಂಬುದನ್ನು ಶ್ರೀ ಶೇಣಿಯವರ ಈ ಮಾತುಗಳಿಂದ ತಿಳಿಯಬಹುದು. ಯಕ್ಷಗಾನ ಪರಂಪರೆಯ ಬಗೆಗೆ ಇದಮಿತ್ಥ೦ ಎಂದು ಹೇಳಬಲ್ಲ ಡಾ. ಎಂ. ಪ್ರಭಾಕರ ಜೋಷಿ, ಡಾ. ಕೆ.ಎಂ ರಾಘವ ನಂಬಿಯಾರ್ ಮೊದಲಾದ ವಿದ್ವಾಂಸರೂ, ವಿಮರ್ಶಕರು ಮತ್ತು ಅನೇಕ ಹಿರಿಯ ಕಲಾವಿದರು ನಮ್ಮ ಜತೆಗಿರುವುದು ಸಂತೋಷದ ವಿಚಾರ. 

ಯಕ್ಷಗಾನ ಕಲೆಗೆ ಕೊರತೆಯಾಗದಂತೆ ಕಲಾವಿದರು ಹೇಗೆ ಎಚ್ಚರದಿಂದ ವ್ಯವಹರಿಸಬಹುದು? ತಾವು ಹೇಗೆ ತೊಡಗಿಸಿಕೊಂಡು ಸಾಗಬೇಕು?….. ಯಕ್ಷಗಾನದ ಹಾಡುಗಾರನಿಗೆ ಇರುವಷ್ಟು ಸ್ವಾತಂತ್ರ್ಯ ಬೇರಾವ ಹಾಡುಗಾರನಿಗೂ ಇಲ್ಲ ಎಂಬುದು ಹಿರಿಯ ಶ್ರೇಷ್ಠ ಭಾಗವತರಾದ ಕಡತೋಕಾ ಶ್ರೀ ಮಂಜುನಾಥ ಭಾಗವತರು ಹೇಳಿದ ಮಾತುಗಳು. ಯಕ್ಷಗಾನ ವೇಷಧಾರಿ, ಅರ್ಥಧಾರಿಗೆ ಇರುವಷ್ಟು ಸ್ವಾತಂತ್ರ್ಯ ಬೇರೆ ಯಾವುದೇ ಕಲಾ ಪ್ರಕಾರದ ಕಲಾವಿದನಿಗೆ ಇರಲಾರದು. ಚಲನಚಿತ್ರ ನಾಟಕಗಳಲ್ಲಿ ನಿರ್ದೇಶಕನು ಬರೆದಿರಿಸಿದ ಸಂಭಾಷಣೆಗಳನ್ನು ಹೇಳಬೇಕು. ಆದರೆ ಯಕ್ಷಗಾನ ಪಾತ್ರಧಾರಿಯು ಸಿದ್ಧಪಡಿಸಿದ ಸಂಭಾಷಣೆಗಳನ್ನು ಹೇಳುವುದಿಲ್ಲ.

ಆದರೆ ಕಲಾವಿದರು ಸ್ವಾತಂತ್ರ್ಯ ಎಂದರೇನು? ಎಂಬುದನ್ನು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ. ನಿಯಮದೊಳಗೆ ಬದುಕುವುದು ಎಂದರ್ಥವಲ್ಲವೇ? ಮನಬಂದಂತೆ ವ್ಯವಹರಿಸುವ ಹಾಗಿಲ್ಲ. ನಿಯಮದ ಆವರಣದೊಳಗೆ ಬದುಕುವುದೇ ಸ್ವಾತಂತ್ರ್ಯ. ಶ್ರೀ ಶೇಣಿಯವರು ಅದೇ ಪುಸ್ತಕದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದವರ ಹೊಣೆಗಾರಿಕೆಯನ್ನೂ ಸುಂದರವಾಗಿ ಹೇಳಿರುತ್ತಾರೆ. “ಶಾಸ್ತ್ರೀಯವಾದ ರಾಗ, ತಾಳ ಬದ್ಧತೆಯುಳ್ಳ ಹಾಡುಗಳನ್ನೇ ಆದರೂ ದೇಶ ಕಾಲಗಳ ಮರ್ಯಾದೆಯನ್ನು ಗಮನಿಸಿ ಹಾಡುವುದೇ ಪಾಂಡಿತ್ಯಕ್ಕೆ ಭೂಷಣ. ಔಚಿತ್ಯ ಬೋಧವಿಲ್ಲದಿದ್ದರೆ ವೃಥಾ ಶ್ರಮವೂ ಅಭಾಸವೂ ಆಗದಿರದು. ಯಕ್ಷಗಾನದಲ್ಲಿ ಚೆಂಡೆ ಮದ್ದಳೆಗಳಿರುವುದು ಕುಣಿತದ ನಿರ್ದೇಶನಕ್ಕಾಗಿ. ನಾಟ್ಯದ ಸ್ವಂತಿಕೆಗೆ ಈ ವಾದನವು ಪೂರಕವಾಗಿದೆಯೆಂಬ ಸತ್ಯವನ್ನು ಕಡೆಗಣಿಸಬಾರದು. ತಾಳ ವಾದ್ಯಗಳ ನಿರ್ದಿಷ್ಟ ಸೊಲ್ಲುಗಳು ಬದಲಾವಣೆಯಾದರೆ ಶೈಲಿಯೂ ವಿರೂಪಗೊಳ್ಳುವುದೆಂಬ ನೆನಪು ವಾದ್ಯದವರಿಗೆ ಇರುವಷ್ಟು ಕಾಲ ಬೆರಕೆಯ ಭಯ ದೂರವಾಗಿಯೇ ಉಳಿಯುವುದು.

ಈ ಮರ್ಮವನ್ನರಿಯದ ಭಾಗವತನು ಸಂಗೀತ ಸಾಮ್ರಾಟ ಪದವೀಧರನಾದರೂ ಯಕ್ಷಗಾನಕ್ಕೆ ಹಾಡುಗಾರನಾಗಲಾರ. ರಾಗಪ್ರಧಾನವಲ್ಲದ ತಾಳಪ್ರಧಾನಗೇಯ ಪ್ರಬಂಧಗಳನ್ನು ಹಾಡುವ ಚಾಕಚಕ್ಯತೆಯೇ ಇಲ್ಲಿ ಎದ್ದು ಕಾಣಬೇಕಾದ ಪ್ರಧಾನ ಗುಣವಾಗಿರಬೇಕು. ಈ ಪದ್ಧತಿಯೂ ಶಾಸ್ತ್ರೀಯ ಸಂಗೀತವೆಂದೇ ಅಂಗೀಕೃತವಾಗಿದೆ. ಒಂದೇ ಹಾಡಿನಲ್ಲಿ ಶೋಕ, ಕ್ರೋಧ, ಹಾಸ್ಯಾದಿಗಳನ್ನು ಬಿಂಬಿಸುವ ನುಡಿಗಟ್ಟುಗಳಿರಬಹುದಾದ ಸಂದರ್ಭಗಳಲ್ಲಿ ಹಾಡುಗಾರನು ಈ ಸಂಚಾರೀ ಭಾವಗಳಿಗೆ ತಾನೇ ಸ್ಪಂದಿಸಿ ರಾಗಮಾಲಿಕೆಯನ್ನೋ, ತಾಳಮಾಲಿಕೆಯನ್ನೋ ಮಾಡಿದರೆ ತನ್ನ ಅಜ್ಞಾನವನ್ನು ತಾನೇ ಉದ್ಘಾಟಿಸಿಕೊಂಡಂತಾಯಿತು.

ಭಾಗವತಿಕೆಯು ಸೂತ್ರಧಾರಿಕೆಯಲ್ಲದೆ ಪಾತ್ರನಿರ್ವಹಣೆಯಲ್ಲವಲ್ಲ? ರಸಭಾವ ಪ್ರಕಟಣೆ ಸೂತ್ರಧಾರಿಯ ಹೊಣೆಯಾದ್ದರಿಂದ ಸ್ಪೂರ್ತಿ ನೀಡುವ ಹಿನ್ನಲೆಯನ್ನೊದಗಿಸುವ ಕರ್ತವ್ಯ ಹಿಮ್ಮೇಳಕ್ಕಿದ್ದರೆ ಸಾಕು. ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಇರುವ ಈ ಸಾಂಪ್ರದಾಯಿಕ ಅಚ್ಚುಕಟ್ಟುತನವೇ ಯಕ್ಷಗಾನದ ತನ್ನತನ. ಸಂಗೀತ ಶಾಸ್ತ್ರದಲ್ಲಿ ಗುರುತಿಸಲ್ಪಟ್ಟ ಜನ್ಯಜನಕ ರಾಗಗಳ ಪಾಠವಿದ್ದು, ಯಕ್ಷಗಾನ ರಚನೆಗಳಲ್ಲಿ ನಮೂದಿಸಿರುವ ರಾಗಗಳನ್ನು ಶುದ್ಧವಾಗಿ ಬಳಸುವ ಅಗತ್ಯದೊಂದಿಗೆ ಇತಿಮಿತಿಯನ್ನರಿತು ಸಾಹಿತ್ಯವನ್ನು ಸ್ಪಷ್ಟ ಉಚ್ಛಾರದೊಂದಿಗೆ ನಾದತರಂಗವನ್ನು ಸೃಷ್ಟಿಸಿ ಬಯಲು ರಂಗಮಂಟಪವನ್ನು ಇಂದ್ರಲೋಕವೋ ಚಂದ್ರಲೋಕವೋ ಆಗಿಸುವ ಭಾಗವತಿಕೆಯೇ ಯಕ್ಷಗಾನದ ಉಳಿವಿಗೆ ಅಗತ್ಯವೆನ್ನಿಸುತ್ತದೆ. ಈ ರೀತಿಯ ಲಕ್ಷ್ಯ ಲಕ್ಷಣಗಳು ಜಾನಪದವೆಂಬ ಹಿಮ್ಮೇಳ ಮುಮ್ಮೇಳಗಳಲ್ಲಿ ಹುಡುಕಿದರೂ ದೊರಕಲಾರವು” ಹಿಮ್ಮೇಳದ ಸ್ವಾತಂತ್ರ್ಯದ ಮೇರೆಯನ್ನು ಶೇಣಿಯವರು ಹೀಗೆ ಸೂಚಿಸಿರುತ್ತಾರೆ.

ವೇಷಧಾರಿಗಳೂ ಗಮನಿಸಬೇಕಾದ ಅಂಶಗಳು ಅನೇಕ. ಅಗ್ಗದ ಪ್ರಚಾರಕ್ಕೆ ಹಾತೊರೆಯಬಾರದು. ಸತತ ಅಭ್ಯಾಸಿಯಾಗಿ ಸಿದ್ಧಿಯಾಗಿ ಪ್ರಸಿದ್ಧನಾಗಬೇಕು. ವೃಷ್ಟಿಯಾಗಿ ಚಿಂತಿಸದೆ ಸಮಷ್ಟಿಯಾಗಿ ಯೋಚಿಸಬೇಕು. ಸಮಗ್ರ ಪ್ರದರ್ಶನವು ರಂಜಿಸಬೇಕು ಎಂದಾದರೆ  ತಾನು ಹೇಗೆ ತೊಡಗಿಸಿಕೊಳ್ಳಬೇಕೆಂಬ ಸೂಕ್ಷ್ಮ ವಿಚಾರಗಳ ಅರಿವು ಆತನಿಗಿರಬೇಕು. ತುಂಬಾ ಹೊತ್ತು ಮಾತನಾಡಿದವರೆಲ್ಲಾ ಒಳ್ಳೆಯ ಮಾತುಗಾರರಾಗುವುದಿಲ್ಲ. ಪಾತ್ರೋಚಿತವಾಗಿ ಮಾತು ಮತ್ತು ಕುಣಿತಗಳು ಬೇಕಾದುದು. ಆತನು ಮಾತಿನ ರಚನಾ ಬಲವನ್ನು ಹೊಂದಿರಬೇಕು. ಯಾರಿಗೆ ವಿಚಾರಗಳನ್ನು ಸರಿಯಾಗಿ ಹೇಳಲಾಗುವುದಿಲ್ಲವೋ ಅವರಿಗೆ ಮಾತಿನ ಜಾಣ್ಮೆಯು ಇಲ್ಲವೆಂದು ಅರ್ಥ. ಅದುವೇ ಕಲಾವಿದನಿಗೆ ಬೇಕಾದುದು. ಕಲಾವಿದರಲ್ಲಿ ಇರಬೇಕಾದ ಮತ್ತೊಂದು ವಿಚಾರ ಸ್ವಸ್ವರೂಪ ಜ್ಞಾನ. ತಾನೆಷ್ಟು? ತನ್ನ ಸಾಮರ್ಥ್ಯವೇನು? ತನ್ನಲ್ಲಿರುವ ಕೊರತೆಯೇನು? ತಾನು ಯಾವ ಭಾಗದಲ್ಲಿ ಬಲಿಷ್ಠ? ಜತೆಗೆ ತಾನು ಯಾವ ವಿಭಾಗದಲ್ಲಿ ಹಿಂದುಳಿದಿದ್ದೇನೆ ಎಂಬುದನ್ನು ಆತ ತಿಳಿದಿರಬೇಕು. ಕೊರತೆಗಳನ್ನು ನಿವಾರಿಸುವಲ್ಲಿ ತಾನು ತೊಡಗಿಸಿಕೊಳ್ಳಬೇಕು. ಬೆಳವಣಿಗೆಯನ್ನು ಹೊಂದದೆ ಇಷ್ಟು ವರ್ಷಗಳ ತಿರುಗಾಟ ನಡೆಸಿದ್ದೇನೆ ಎಂಬ ಒಂದೇ ಆಧಾರದಲ್ಲಿ ಸ್ಥಾನವನ್ನೂ ಪ್ರತಿಫಲವನ್ನೂ ಕೇಳಬಾರದು.

ಶುದ್ಧವಾದ ಕನ್ನಡ ಭಾಷೆಯಿಂದ ಪಾತ್ರೋಚಿತವಾಗಿ ಕುಣಿತ, ಅಭಿನಯ ಮಾತುಗಳಿಂದ ಕಲಾಸೇವೆಯನ್ನು ಮಾಡುವುದು ಕಲಾವಿದರ ಕರ್ತವ್ಯ. ಪ್ರೇಕ್ಷಕರು ತಪ್ಪುಗಳನ್ನು ಸೂಚಿಸಿದರೆ ವಿನಮ್ರವಾಗಿ ಸ್ವೀಕರಿಸಬೇಕು. ಹೌದು ಎಂದಾದರೆ ತಿದ್ದಿಕೊಳ್ಳಲೂ ಬೇಕು. ಕಲಾಭಿಮಾನಿಗಳು ತಪ್ಪನ್ನು ಎತ್ತಿ ಆಡಿದರು ಎಂದು ಕೋಪಿಸಬಾರದು. ತಪ್ಪನ್ನು ಸೂಚಿಸದೆ ಇದ್ದರೆ ತಿದ್ದಿಕೊಳ್ಳಲು ಎಲ್ಲಿದೆ ಅವಕಾಶ? ಕಲಾಭಿಮಾನೀ ವಿದ್ಯಾವಂತ ಪ್ರೇಕ್ಷಕರು ಕಲಾವಿದರಿಗೆ ಒಂದು ರೀತಿಯಲ್ಲಿ ಗುರುಗಳೇ ಆಗಿರುತ್ತಾರೆ. ವಿಮರ್ಶಕರ ಮಾತಿನ ಹೊಡೆತ ಸಿಕ್ಕಾಗ ಕಲಾವಿದರು ನೋಯದೆ ಸಂತೋಷಪಡಬೇಕು. ಹೊಡೆತವು ಬಿದ್ದಾಗ ಬಂಗಾರವು ಬೇಸರಿಸುವುದಿಲ್ಲ. ಹೊಡೆತ ಬಿದ್ದಷ್ಟು ಹೊಳೆಹೊಳೆದು ಕನಕವು ಕಾಣಿಸಿಕೊಳ್ಳುವುದಿಲ್ಲವೇ? ವ್ಯಾಕರಣ ದೋಷ, ಉಚ್ಚಾರ ದೋಷ, ಪಾತ್ರದ ಸ್ವಭಾವವನ್ನು ತಿಳಿಯದೆ ರಂಗವೇರುವುದು, ಒಟ್ಟಿನಲ್ಲಿ ಪಾತ್ರಕ್ಕೆ ಸಾಕಷ್ಟು ಸಿದ್ಧವಾಗದೆ ರಂಗವೇರುವ ಸಾಹಸವನ್ನು ತೋರಬಾರದು.

ಈ ಕೊರತೆಗಳನ್ನು ನಿವಾರಿಸಿದಾಗ ಎಲ್ಲರೂ ಗುರುತಿಸುತ್ತಾರೆ. ಗೌರವಿಸುತ್ತಾರೆ. ಕಲಾವಿದರಿಗೆ ಒಂದು ವಿಚಾರದಲ್ಲಿ ಬೇಸರವಾಗಬೇಕು. ಯಾವಾಗ? ಬಂಗಾರಕ್ಕೆ ಹೊಡೆತ ಬಿದ್ದಾಗ ನೋವಾಗದು. ಆದರೆ ಗುಲಗಂಜಿಯ ಜತೆ ತೂಕಮಾಡಿದಾಗ ನೋವಾಗುವುದು. ಟೀಕೆ, ವಿಮರ್ಶೆಗಳಿಗೆ ಕಲಾವಿದರು ನೋಯಬಾರದು. ಆದರೆ ಅವಿದ್ಯಾವಂತರೊಡನೆ ಅಪ್ರಬುದ್ಧರೊಡನೆ ತೂಗಿದಾಗ ನಿಜವಾದ ಕಲಾವಿದನು ನೋವನ್ನು ಅನುಭವಿಸುತ್ತಾನೆ. ಅನುಭವಿಸಲೇ ಬೇಕು. 

ಯಕ್ಷಗಾನ ಸಂಘಟಕರೂ ಕಲಾಭಮಾನೀ ಪ್ರೇಕ್ಷಕರೂ ಕಲೆಯನ್ನು ಉಳಿಸಿ ಬೆಳೆಸಲು ಕಾರಣರಾಗುತ್ತಾರೆ. ಪ್ರೇಕ್ಷಕರನ್ನು ಕಲಾವಿದರು ಸಭಾಸದರೆಂದೇ ಸಂಭೋದಿಸುತ್ತಾರೆ. ರಂಗಪ್ರವೇಶಿಸಿ ಸಭಾವಂದನೆಯನ್ನೂ ಮಾಡುತ್ತಾರೆ. ಕಲೆಗೆ ಕೊರತೆಯಾಗದಂತೆ ಪ್ರದರ್ಶನವನ್ನು ಏರ್ಪಡಿಸುವ ಕಲೆಯು ಸಂಘಟಕರಿಗೆ ಕರಗತವಾಗಿರಬೇಕು. ಅವರೂ ಪ್ರಬುದ್ಧರಿರಬೇಕು. ಸಮಯಕ್ಕೆ ಹೊಂದಿಕೊಳ್ಳುವ ಪ್ರಸಂಗಗಳನ್ನೇ ಆಯ್ಕೆ ಮಾಡಬೇಕು. ನಾವು ಒಂದು ರಾತ್ರಿಯಲ್ಲಿ ತುಂಬಾ ಪ್ರಸಂಗಗಳನ್ನು ಆಯೋಜಿಸಿದೆವು ಎಂಬುದಕ್ಕಿಂತ ಒಂದೋ ಎರಡೋ ಪ್ರಸಂಗಗಳನ್ನು ಉತ್ತಮವಾಗಿ ಆಡಿಸಿದೆವು ಎಂದು ಅಭಿಮಾನದಿಂದ ಹೇಳಿಕೊಳ್ಳಬಹುದು.

ಉದಾಹರಣೆಗಾಗಿ, ಪಾಂಡವಾಶ್ವಮೇಧ ಎಂಬ ಪ್ರಸಂಗವು ಯಕ್ಷಗಾನದಲ್ಲಿ ಇಲ್ಲ. ಬೇರೆ ಬೇರೆ ಕವಿಗಳು ಬರೆದ ನೀಲಧ್ವಜ ಕಾಳಗ, ಪ್ರಮೀಳಾರ್ಜುನ, ಸುಧನ್ವ ಮೋಕ್ಷ, ಭಕ್ತ ಮಯೂರಧ್ವಜ, ವೀರವರ್ಮ ಕಾಳಗ ಎಂಬ ಪ್ರಸಂಗಗಳನ್ನು ಒಟ್ಟು ಸೇರಿ ನಾವು ಪಾಂಡವಾಶ್ವಮೇಧ ಎಂದು ಆಡುತ್ತಿದ್ದೇವೆ. ಬರೆದ ಕವಿಗೆ ಕೊರತೆಯಾಗದಂತೆ ಎರಡೇ ಪ್ರಸಂಗಗಳು ಸಾಲದೇ? ಅಷ್ಟೂ ವೇಷಗಳು ಆ ಪ್ರಸಂಗದೊಳಗೆ ಇವೆ. ರಾಮಾಶ್ವಮೇಧ ಎಂಬ ಪ್ರಸಂಗವು ಯಕ್ಷಗಾನದಲ್ಲಿ ಇಲ್ಲ. ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು ಬರೆದ ವೀರಮಣಿ ಕಾಳಗ ಮತ್ತು ಪಾರ್ತಿಸುಬ್ಬನ ಕುಶಲವರ ಕಾಳಗವನ್ನು ಒಟ್ಟಾಗಿ ರಾಮಾಶ್ವಮೇಧ ಎಂಬ ಹೆಸರಿನಲ್ಲಿ ಆಡುತ್ತಿದ್ದೇವೆ.

ರಾಮಾಶ್ವಮೇಧ ಕತೆಗೆ ಸಂಬಂಧಪಟ್ಟು ಬೇರೆ ಪ್ರಸಂಗಗಳೂ ಇವೆ. ಸುರಥನ ಕಾಳಗ, ಸುಬಾಹು ಕಾಳಗ ಎಂಬ ಪ್ರಸಂಗಗಳೂ ಇವೆ. ಸುಬಾಹು ಕಾಳಗದಲ್ಲಿ ದಮನನು ಶತ್ರುಘ್ನನ ಸೇನೆಯೊಂದಿಗೆ ಪರಿಪೂರ್ಣವಾಗಿ ಹೋರಾಡುವ ಕತೆಯಿದೆ. ವಿದ್ಯುನ್ಮಾಲಿ ಎಂಬ ದಾನವನು ಕುದುರೆಯನ್ನು ಅಪಹರಿಸಿ ಶತ್ರುಘ್ನನಿಂದ ಹತನಾಗುವ ಕಥೆಯಿದೆ. ಸುಬಾಹು ಎಂಬ ರಾಜನು ಹೋರಾಡಿ ಶರಣಾಗುವ ಕಥೆಯಿದೆ. ಸುದರ್ಶನೋಪಾಖ್ಯಾನ ಎಂಬ ಪ್ರಸಂಗವಿಲ್ಲ. ಸುದರ್ಶನ ವಿಜಯ ಮತ್ತು ಕಾರ್ತವೀರ್ಯಾರ್ಜುನ ಎಂಬ ಎರಡು ಪ್ರಸಂಗಗಳನ್ನು ಒಟ್ಟಾಗಿ ಈ ಹೆಸರಿನಿಂದ ನಾವು ಪ್ರದರ್ಶಿಸುತ್ತೇವೆ.

ದಶಾವತಾರ ಎಂಬ ಪ್ರಸಂಗವಿಲ್ಲ. ಬೇರೆ ಬೇರೆ ಕವಿಗಳು ಬರೆದ ಪ್ರಸಂಗಗಳನ್ನು ಸೇರಿಸಿ ನಾವು ದಶಾವತಾರ ಎಂಬ ಹೆಸರಿನಿಂದ ಆಡುತ್ತೇವೆ. ಕಡಿಮೆ ಸಂಖ್ಯೆಯ ಪ್ರಸಂಗಗಳನ್ನು ಆಯ್ಕೆ ಮಾಡಿ ಅದನ್ನು ಪರಿಪೂರ್ಣವಾಗಿ ಕವಿಗಳ ಹೆಸರನ್ನು ಉಲ್ಲೇಖಿಸಿ ಆಯೋಜಿಸುವ ಬಗ್ಗೆ ಸಂಘಟಕರು ಯೋಚಿಸಬಹುದು. ಪ್ರದರ್ಶನಕ್ಕೆ ಕಲಾವಿದರ ಆಯ್ಕೆ, ಕಲಾವಿದರನ್ನು ಮಧ್ಯವರ್ತಿಗಳಿಲ್ಲದೆ ತಾವೇ ಆಮಂತ್ರಿಸುವುದು ಇತ್ಯಾದಿ ವಿಚಾರಗಳೂ ಕಲೆಯ, ಪ್ರದರ್ಶನದ ರಂಜನೆಗೆ ಕಾರಣವಾಗುತ್ತದೆ. ಕಲ್ಯಾಣ ಪ್ರಸಂಗಗಳ ಆಯ್ಕೆಯಲ್ಲೂ ಹೀಗೆಯೇ ಯೋಚಿಸಬಹುದು.

ಪ್ರದರ್ಶಿಸದೆ ಉಳಿದ ಅನೇಕ ಉತ್ತಮವಾದ ಕಲ್ಯಾಣ ಪ್ರಸಂಗಗಳಿವೆ. ಉದಾಹರಣೆಗೆ ದುರ್ಯೋಧನನ ಪುತ್ರಿ ಲಕ್ಷಣೆಯನ್ನು ಶ್ರೀಕೃಷ್ಣನ ಪುತ್ರನಾದ ಸಾಂಬನು ವಿವಾಹವಾಗುವ ಲಕ್ಷಣಾ ಸ್ವಯಂವರ, ಶತ್ರುಘ್ನನ ಪುತ್ರ ಯೂಪಕೇತನು ವಿವಾಹವಾಗುವ ಮದನ ಸುಂದರೀ ಕಲ್ಯಾಣ ಮೊದಲಾದ ಪ್ರಸಂಗಗಳಿವೆ. ಪುಂಡುವೇಷ, ಸ್ತ್ರೀವೇಷ, ಬಣ್ಣದ ವೇಷ, ಕಿರೀಟ ವೇಷಗಳಿಗೆ ಈ ಪ್ರಸಂಗಗಳಲ್ಲಿ ಅವಕಾಶಗಳಿವೆ. ಹೀಗೆ ಪ್ರಸಂಗಗಳನ್ನು ಪ್ರದರ್ಶಿಸಿದರೆ ಪ್ರಸಂಗದೊಳಗಿರುವ ಸಂಪೂರ್ಣ ವಿಚಾರವನ್ನು ಪ್ರೇಕ್ಷಕರಿಗೆ ತಲುಪಿಸಿದಂತಾಗುತ್ತದೆ. (ಒಟ್ಟಿನಲ್ಲಿ ಇರುವ ಸಮಯಕ್ಕೆ ಹೊಂದಿಕೊಂಡು ಬೇಕಾದಷ್ಟೇ ಪ್ರಸಂಗಗಳನ್ನು ಪ್ರದರ್ಶಿಸುವುದು) ಪ್ರಸಂಗಗಳ ಆಯ್ಕೆ, ಕಲಾವಿದರ ಆಯ್ಕೆ ಮೊದಲಾದ ವಿಚಾರಗಳಲ್ಲಿ ಪ್ರೌಢ ಸಂಘಟಕರು ನಮ್ಮ ಜತೆ ಇರುವುದು ಸಂತೋಷದ ವಿಚಾರ. ಕಲಾವಿದರು, ಸಂಘಟಕರ ಜತೆ ಕಲಾಭಿಮಾನೀ ಪ್ರೇಕ್ಷಕರೂ ಯಾವುದು ಒಳಿತು, ಯಾವುದು ಕೆಡುಕು ಎಂದು ನಿರ್ಣಯಿಸುವ ಪ್ರೌಢರಾಗಿರುವುದು ನಮ್ಮೆಲ್ಲರ ಭಾಗ್ಯ.

ಕಲಾವಿದರು ಎಡವುದು ಸಹಜ. ಅದಕ್ಕೆ ಕಾರಣಗಳೂ ಇವೆ. ಅವರು ಎಡವಿದಾಗ ಎಚ್ಚರಿಸಿ ಮೇಲೆಬ್ಬಿಸುವ ಹೊಣೆ ಪ್ರೇಕ್ಷಕರಿಗಿದೆ. ಸರಿಯಾಗಿ ವಿಮರ್ಶಿಸುವ ಪ್ರೇಕ್ಷಕರೇ ಯಕ್ಷಗಾನಕ್ಕೆ ಆಸ್ತಿಯಾಗುತ್ತಾರೆ. ಕಲಾವಿದರ ಪರಿಪೂರ್ಣ ಪಾತ್ರಪ್ರಸ್ತುತಿಯನ್ನು ನೋಡಿ ಪ್ರೇಕ್ಷಕರು ಪ್ರತಿಕ್ರಿಯೆ ನೀಡುತ್ತಾರೆ. ಅವನು ಎಷ್ಟು ಹಾರಿದ ಎಂಬುದನ್ನು ಲೆಕ್ಕ ಹಾಕುವುದರ ಜತೆಗೆ ಪಾತ್ರೋಚಿತವಾಗಿ ಹಾರಿದನೇ? ಕುಣಿದನೇ? ಆಮೇಲೆ ಸರಿಯಾಗಿ ಮಾತನಾಡಿದನೇ? ಎಂಬುದನ್ನು ವಿಮರ್ಶಿಸಿ ಪ್ರೇಕ್ಷಕರು ಪ್ರತಿಕ್ರಿಯೆ ನೀಡುವುದನ್ನು ಕಂಡಾಗ ಆನಂದವಾಗುತ್ತದೆ.

ಸದಭಿರುಚಿಯುಳ್ಳ ಪ್ರೇಕ್ಷಕ ಟೀಕೆಗಾಗಿ ಟೀಕೆ ಮಾಡಲಾರ. ಟೀಕೆ ಮಾಡಲೆಂದೇ ಪ್ರದರ್ಶನಕ್ಕೆ ಬರಲಾರ. ಕಲಾವಿದರು ನಿರ್ವಹಣೆಯಲ್ಲಿ ಎಡವಿದಾಗ ಮಾತ್ರ ವಿಮರ್ಶಿಸುತ್ತಾನೆ. ಅದೂ ಸಂಸ್ಕಾರ ಉಳ್ಳವನಾಗಿ, ಮನಸ್ಸಿಗೆ ನೋವಾಗದಂತೆ ವಿಮರ್ಶಿಸುತ್ತಾನೆ. ಪ್ರೇಕ್ಷಕರಿಂದ ಟೀಕೆ, ವಿಮರ್ಶೆಗಳು ಬೇಕೇ ಬೇಕು. ಉತ್ತಮ ಕಲಾವಿದನು ಅದನ್ನು ಬಯಸಬೇಕು. ಮತ್ತು ಬಯಸುತ್ತಾನೆ. ಇಲ್ಲವಾದರೆ ತಿದ್ದಿಕೊಂಡು ಉತ್ತಮನಾಗಲು ಅವಕಾಶವಿರದು. ಯಕ್ಷಗಾನಕ್ಕೆ ಬೇಕಾದುದು ಹಿತಮಿತವಾದ ಮಾತುಗಾರಿಕೆ ಮತ್ತು ಕುಣಿತ ಎಂಬುದನ್ನು ಎಲ್ಲರೂ ಬಲ್ಲರು.

ಹಿಮ್ಮೇಳ ಮುಮ್ಮೇಳ ಕಲಾವಿದರು ಪ್ರಸಂಗವನ್ನು ರಂಜಿಸುವಲ್ಲಿ ತಂಡ ಸ್ಪೂರ್ತಿಯಿಂದ ಕೆಲಸ ಮಾಡಿದಾಗ ಪ್ರದರ್ಶನವೂ ರಂಜಿಸುತ್ತದೆ. ಕಲಾವಿದರು ಆಲಸಿಯಾಗದೆ ಅಧ್ಯಯನಶೀಲರಾಗುತ್ತಾರೆ. ಸಂಘಟಕರು ಪ್ರಸಂಗ ಮತ್ತು ಕಲಾವಿದರನ್ನು ಆಯ್ಕೆ ಮಾಡುವಲ್ಲಿ ಚತುರರಾಗಿ ವ್ಯವಹರಿಸುತ್ತಾರೆ. ಪ್ರೇಕ್ಷಕರು ಸದಭಿರುಚಿ ಉಳ್ಳವರಾಗಿ ಒಳ್ಳೆಯದನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ. ಹೀಗೆ ಕಲಾವಿದರು, ಸಂಘಟಕರು, ಪ್ರೇಕ್ಷಕರು ಇವರೊಳಗೆ ಒಂದು ಅತ್ಯುತ್ತಮ ಹೊಂದಾಣಿಕೆಯಿರಲಿ. ನಾವೆಲ್ಲರೂ ಒಂದಾಗಿ ಮುನ್ನಡೆಯೋಣ. ಯಕ್ಷಗಾನದ ಪರಂಪರೆಗೆ, ಸೌಂದರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳೋಣ. ಸಂಘಟಕರೂ ಸದಭಿರುಚಿಯ ಕಲಾಭಿಮಾನಿಗಳೇ ಕಲಾವಿದರ ಬಂಧುಗಳು. ಅವರಿಲ್ಲದೆ ಕಲಾವಿದರು ಬದುಕಲಾರರು. ನಾವೆಲ್ಲರೂ ಕಲಾಮಾತೆಯ ಸುಪುತ್ರರು. ಒಟ್ಟಾಗಿ ಮುಂದುವರಿಯೋಣ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments