ಯಕ್ಷಗಾನದಲ್ಲಿ ಪ್ರಯೋಗ, ಸುಧಾರಣೆಗಳ ಹೆಸರಿನಲ್ಲಿ ನಡೆಯುವ ‘ಕಲೆಯ ಕುಲಗೆಡಿಸುವಿಕೆ’ – ಯಾರು ಕಾರಣ ಎಂಬ ಚರ್ಚೆಗೆ ಕೊನೆಯೆಲ್ಲಿ?
ಯಕ್ಷಗಾನದಲ್ಲಿ ಪ್ರಯೋಗ, ಸುಧಾರಣೆಗಳ ಹೆಸರಿನಲ್ಲಿ ನಡೆಯುವ ‘ಕಲೆಯ ಕುಲಗೆಡಿಸುವಿಕೆ’ಗೆ ಯಾರು ಕಾರಣ ಎಂಬ ಚರ್ಚೆ ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಆಗುತ್ತಾ ಉಂಟು. ಈ ಚರ್ಚೆಗೆ ಕೊನೆಯಿಲ್ಲ.
ಬದಲಾವಣೆ, ಪ್ರಯೋಗ, ಸುಧಾರಣೆ, ಹೊಸತನ ಈ ಶಬ್ದಗಳನ್ನೆಲ್ಲಾ ಕೇಳಿ ಕೇಳಿ ಸಾಕಾಗಿದೆ. ಅದೆಲ್ಲಾ ನಾವು ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಇರುವ ಪದಗಳು. ಅವರನ್ನು ಇವರು ಹೇಳುವುದು, ಇವರನ್ನು ಅವರು ಹೇಳುವುದು. ಅವರು ಇವರ ನಡುವೆ ಕೇಳುವುದು ಯಾರನ್ನು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಹಾಗಾದರೆ ಯಕ್ಷಗಾನವನ್ನು ಕಲುಷಿತಗೊಳಿಸುತ್ತಿರುವವರು ಯಾರು? ಇದಕ್ಕೆ ಉತ್ತರ ಹುಡುಕಬೇಕಾದರೆ ವಿಚಾರಗೋಷ್ಠಿಗಳೇ ನಡೆಯಬೇಕಾಗಬಹುದು! ತಿಟ್ಟುಗಳ ಬೇಧವಿಲ್ಲದೆ ಯಕ್ಷಗಾನ ಮೂಲಸ್ವರೂಪವನ್ನು ಕಳೆದುಕೊಂಡಿದೆ. ಈಗಲೂ ಸ್ವರೂಪವನ್ನು ಕಳೆದುಕೊಳ್ಳುತ್ತಾ ಸಾಗುತ್ತಿದೆ. ಇನ್ನೂ ಕಾಲ ಸರಿದಂತೆ ಮುಂದಕ್ಕೆ ಸ್ವರೂಪ ಬದಲಾವಣೆಯಾಗುತ್ತಾ ಸಾಗಬಹುದು. ಹಾಗಾದರೆ ಈ ಬದಲಾವಣೆ ಎಂಬುದು ನಿರಂತರವಾದ ಪ್ರಕ್ರಿಯೆ.
ನಾವು ಒಂದು ವಿಷಯವನ್ನು ಗಮನಿಸಬೇಕು. ಬದಲಾವಣೆ ಎಂದರೆ ಸುಧಾರಣೆಯಲ್ಲ. ಅಥವಾ ಬದಲಾವಣೆಯೆಲ್ಲವೂ ಸುಧಾರಣೆ ಅಲ್ಲ. ಅದರಲ್ಲಿ ಬಹು ಅಂಶ ಕುಲಗೆಡಿಸುವಿಕೆ ಮತ್ತು ಕಲುಷಿತಗೊಳಿಸುವಿಕೆಯೂ ಆಗಿರಬಹುದು. ಕೆಲವಂಶ ಸುಧಾರಣೆಯೂ ಇರಬಹುದು. ಯಕ್ಷಗಾನ ಕಲೆಗೆ ಮತ್ತು ಕಲಾವಿದರಿಗೆ ಏನೂ ಇಲ್ಲದ ಕಾಲದಿಂದ ಈಗ ಎಲ್ಲವೂ ಇರುವ ಕಾಲಕ್ಕೆ ಬಂದು ಕೆಲವು ವರ್ಷಗಳಾದುವು. ಅದು ಸುಧಾರಣೆ. ಈಗ ಎಲ್ಲವೂ ಇರುವ ಕಾಲದಿಂದ ಆಗುತ್ತಿರುವುದು ಬದಲಾವಣೆ. ಈ ಬದಲಾವಣೆ ಬೇಕಾದರೂ ಅಥವಾ ಬೇಡದಿದ್ದರೂ ಆಗುತ್ತಲೇ ಇರುತ್ತದೆ. ಕಾಲದ ಪ್ರವಾಹದಂತೆ ನಿರಂತರ.
ಆಕ್ಷೇಪಿಸುವವರಿಗೆ ಉತ್ತರಿಸಲು ಅವರ ಬತ್ತಳಿಕೆಯಲ್ಲಿ ಬೇಕಾದ ಬಾಣಗಳುಂಟು. “ಕಲೆ ಎಂಬುದು ನಿಂತ ನೀರಲ್ಲ. ಅದು ಪ್ರವಾಹದಂತೆ ಹರಿಯುತ್ತಾ ಇರಬೇಕು” ಎಂದು ಹೇಳುವವರು ಹರಿಯುವ ನೀರಿಗೆ ಕಾರ್ಖಾನೆಯ ಹೊಲಸನ್ನು, ತಮ್ಮ ಮನೆಯ ಗಟಾರವನ್ನು, ತಮಗೆ ಬೇಡದ ವಸ್ತುವನ್ನು ಎಸೆಯುತ್ತಾರೆ. ಆ ಮೂಲಕ ಹರಿಯುವ ನೀರನ್ನು ಕಲುಷಿತಗೊಳಿಸಿದಂತೆ ಕಲೆಯನ್ನೂ ಕುಲಗೆಡಿಸುತ್ತಾರೆ.
ಹಾಗಾದರೆ ಈಗ ಬದಲಾವಣೆ, ಸುಧಾರಣೆಗಳ ಹೆಸರಿನಲ್ಲಿ ಆಗುತ್ತಿರುವುದಕ್ಕೆಲ್ಲಾ ಯಾರು ಕಾರಣ? ಅದೆಲ್ಲಾ ಬೇಕಾ? ಬೇಕಾದರೆ ಎಷ್ಟು ಬೇಕು? ಯಾವುದು ಬೇಕು? ಎಂಬುದಕ್ಕೆ ಉತ್ತರ ಹುಡುಕಬೇಕಿದೆ. ಇಲ್ಲದಿದ್ದರೆ ಅವುಗಳು ಪ್ರಶ್ನೆಗಳಾಗಿಯೇ ಉಳಿದೀತು.
ಕಾರಣಕರ್ತರ ಹೆಸರುಗಳ ಪಟ್ಟಿಯಲ್ಲಿ ನಮಗೆ ಟಿ.ವಿ ಚಾನೆಲ್ ಗಳ ಶೋಗಳು, ಜಾಹೀರಾತುಗಳು, ಕಲಾವಿದರು, ಸಂಘಟಕರು, ಪ್ರೇಕ್ಷಕರು ಮತ್ತು ಅಭಿಮಾನಿಗಳ ಹೆಸರುಗಳು ಕಾಣಸಿಗುತ್ತವೆ. ಪ್ರೇಕ್ಷಕರೆಲ್ಲಾ ಅಭಿಮಾನಿಗಳಲ್ಲ. ಕೆಲವು ಅಭಿಮಾನಿಗಳು ಪ್ರೇಕ್ಷಕರೇ ಅಲ್ಲ!
ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಯಕ್ಷಗಾನದಲ್ಲಿ ಏನೆಲ್ಲಾ ವೇಗದ ಬದಲಾವಣೆ ಆಗಿದೆ ಎಂದು ಯೋಚಿಸಿದಾಗ ಆಶ್ಚರ್ಯವಾಗುತ್ತಿದೆ. ಕಾಲಮಿತಿ, ಗಾನವೈಭವ, ನಾಟ್ಯವೈಭವ, ಗಾನನಾಟ್ಯ ವೈಭವ, ಏಕವ್ಯಕ್ತಿ ಪ್ರದರ್ಶನ ಮುಂತಾದ ಅನೇಕ ಬದಲಾವಣೆಗಳನ್ನು ಯಕ್ಷಗಾನ ಕಂಡಿದೆ. ಅದರಲ್ಲಿ ಒಳಿತು ಕೆಡುಕುಗಳ ಸಮ್ಮಿಶ್ರಣದ ದ್ರಾವಣವಿದೆ. ಕೆಲವೊಮ್ಮೆ ಪಾತ್ರಗಳನ್ನು ತಮಗೆ ಬೇಕಾದಂತೆ ಚಿತ್ರಿಸುವುದು. ಏಕವ್ಯಕ್ತಿ ಪ್ರದರ್ಶನಗಳಲ್ಲಿಯೂ ಯಕ್ಷಗಾನ ಪ್ರದರ್ಶನಗಳಲ್ಲಿಯೂ ಕುಂತಿ, ಕರ್ಣ, ಅಂಬೆ, ಗಾಂಧಾರಿ, ದ್ರೌಪದಿ, ಸೀತೆ ಮೊದಲಾದ ಪಾತ್ರಗಳ ಬಾಯಿಯಲ್ಲಿ ಪುರಾಣ ಕಾಲದಿಂದ ಹೊರಬಂದು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರ ವಿಚಿತ್ರ ಮಾತುಗಳನ್ನು ಹೇಳಿಸುವುದು ಹೊಸ ಪ್ರಯೋಗಗಳ ಪಟ್ಟಿಯಲ್ಲಿ ಸೇರುತ್ತದೆ.
ಹಲವಾರು ಟಿವಿ ಚಾನೆಲ್ ಗಳು ತಮ್ಮ ಡ್ಯಾನ್ಸ್ ಷೋಗಳಲ್ಲಿ ಯಕ್ಷಗಾನವನ್ನು ಬಳಸಿಕೊಂಡಿದ್ದಾರೆ. ಅಲ್ಲಿ ನೃತ್ಯಗಾರರು ಯಕ್ಷಗಾನದ ಧಿರಿಸಿನಲ್ಲಿ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪ್ರಶ್ನಿಸಿದರೆ ಅವರಲ್ಲಿಯೂ ಉತ್ತರವಿದೆ. ಟಿವಿ ಚಾನೆಲ್ ಗಳಲ್ಲಿ ಕೆಲಸ ಮಾಡುವವರಲ್ಲಿ ಯಕ್ಷಗಾನದ ಬಗ್ಗೆ ಅಲ್ಪಸ್ವಲ್ಪ ಜ್ಞಾನ ಇರುವವರೂ ಇರುತ್ತಾರೆ. “ಯಕ್ಷಗಾನವನ್ನು ವಿರೂಪಗೊಳಿಸುವಲ್ಲಿ ಕಲಾವಿದರಷ್ಟು ನಾವು ಮುಂದೆ ಹೋಗಿಲ್ಲ, ರಂಗಸ್ಥಳದಲ್ಲಿ ಕೆಲವು ಕಲಾವಿದರು ಮಾಡುವ ಅಬದ್ಧಗಳ ಮುಂದೆ ನಮ್ಮದೇನೂ ಅಲ್ಲ” ಎಂದು ಟಿವಿ ಚಾನೆಲ್ ನವರು ಹೇಳಿದರೆ ನಾವು ಅದನ್ನೂ ಕೇಳಿಸಿಕೊಳ್ಳಬೇಕಾದೀತು.
ಈ ಮಾತಿಗೆ ಉತ್ತರ ಕೊಡುವ ನೈತಿಕತೆ ನಮ್ಮಲ್ಲಿ ಉಳಿದಿದೆಯೇ? ಈಗೀಗ ಪ್ರತಿಯೊಂದು ಹೊಸ ಹೊಸ ಯಕ್ಷಗಾನ ಪ್ರಸಂಗದ ಪ್ರದರ್ಶನದಲ್ಲಿಯೂ ಒಂದೊಂದು ಸಿನಿಮಾ ಹಾಡು ಅಥವಾ ಸಿನಿಮಾ ಹಾಡಿನ ದಾಟಿಯ ಹಾಡುಗಳಿರುತ್ತವೆ. ‘ಚೀಸ್ ಬಡೀ ಹೈ ಮಸ್ತ್ ಮಸ್ತ್’ ಹಾಡಿನಿಂದ ತೊಡಗಿ ಈಚೆಗೆ ಬಿಡುಗಡೆಯಾದ ಪುಷ್ಪ ಚಿತ್ರದ ಕಾಲೆಳೆದು ಅಭಿನಯಿಸುವ ಶ್ರೀವಲ್ಲಿ ಹಾಡುಗಳೂ ರಂಗಸ್ಥಳದಲ್ಲಿ ಯಕ್ಷಗಾನದ ಪದ್ಯಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿದೆ.
ಕೇಳಿದರೆ ಕಲಾವಿದರು ನೂರೆಂಟು ಕಾರಣ ಹೇಳುತ್ತಾರೆ. ಸಂಘಟಕರ ಒತ್ತಡವೋ, ಮೇಳದ ಯಜಮಾನರ ನಿರ್ದೇಶನವೋ ಎಂಬುದು ಬೇರೆ ವಿಚಾರ. ಸಂಘಟಕರೂ, ಮೇಳದ ಯಜಮಾನರೂ ಈ ತರಹದ ಪ್ರದರ್ಶನ ಬೇಡ ಎಂದು ಕಲಾವಿದರಿಗೆ ಹೇಳಬಹುದಲ್ಲ? ಸಿನಿಮಾದಲ್ಲಿರುವಂತೆ ಜನಪ್ರಿಯತೆ, ಗಲ್ಲಾಪೆಟ್ಟಿಗೆಯ ಯಶಸ್ಸಿನ ಬೆನ್ನುಹತ್ತುವ ಅವಶ್ಯಕತೆ ಅವರಿಗಿದೆಯೇ?
– ಓರ್ವ ನೊಂದ ಪ್ರೇಕ್ಷಕ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions