2019-20ನೇ ಸಾಲಿನ ಕಟೀಲಿನ ಆರೂ ಮೇಳಗಳ ತಿರುಗಾಟದ ಆರಂಭ. ಶ್ರೀಕ್ಷೇತ್ರದಲ್ಲಿ ನಡೆದ ಸೇವೆಯಾಟಕ್ಕೆ ಹೋಗಿದ್ದೆ. ಆರೂ ಮೇಳಗಳ ‘ಶ್ರೀದೇವಿಯ ಪೂಜೆ’ ನೋಡಿ ಪ್ರಸಾದ ಸ್ವೀಕರಿಸಿ ಭೋಜನ ಮಾಡಿ ಬಂದಿದ್ದೆವು. ಬರುತ್ತಾ ದಾರಿಯುದ್ದಕ್ಕೂ ಕಳೆದ ಕೆಲವು ವರುಷಗಳಿಂದ ನಮ್ಮ ಮನೆಯ ಮಕ್ಕಳು ಕಟೀಲು ಮೇಳಗಳಲ್ಲಿ ಆಗಾಗ ವೇಷ ಮಾಡಲು ಹೋಗುತ್ತಿದ್ದುದು ನೆನಪಾಯಿತು.
ಈ ಅವಕಾಶವೂ ಸಿಕ್ಕಿದುದು ನಮ್ಮ ಭಾಗ್ಯವೆಂದು ಭಾವಿಸುತ್ತೇನೆ. ಮೊದಲಾಗಿ ಈ ಅವಕಾಶವನ್ನಿತ್ತ ಶ್ರೀ ಕಟೀಲು ಮೇಳದ ಸಂಚಾಲಕರು ಹಾಗೂ ಆಡಳಿತ ಮಂಡಳಿಗೆ ಗೌರವವನ್ನು ಸಲ್ಲಿಸುತ್ತೇವೆ. ನಮ್ಮ ಮನೆಯವರೆಲ್ಲರೂ ಯಕ್ಷಗಾನಾಸಕ್ತರು. ಪ್ರದರ್ಶನಗಳನ್ನು ನೋಡಿ ಆನಂದಿಸುತ್ತೇವೆ. ನನ್ನ ದೊಡ್ಡ ಮೊಮ್ಮಗ, ಅವನ ಮೂರು, ನಾಲ್ಕನೇ ವಯಸ್ಸಿನಲ್ಲಿ ಯಕ್ಷಗಾನ ಕ್ಯಾಸೆಟ್ ಹಾಕಿ ಕುಣಿಯುತ್ತಿದ್ದ.
ನಮ್ಮ ಮನೆಗೆ ಬಂದಿದ್ದ ಕಟೀಲು ಮೇಳದ ಹಿರಿಯ ಕಲಾವಿದ ಶ್ರೀ ವಿಷ್ಣು ಶರ್ಮರು ಅದನ್ನು ನೋಡಿ ಖುಷಿಪಟ್ಟು ಆಶೀರ್ವದಿಸಿದ್ದರು. ಅಲ್ಲದೆ ಮುಂದಿನ ಸಲ ಬರುವಾಗ ಸ್ವಲ್ಪ ಗೆಜ್ಜೆಗಳನ್ನೂ ತಂದು ಕೊಟ್ಟಿದ್ದರು. ಅಲ್ಪ ಸ್ವಲ್ಪ ಹೊಲಿಗೆ ಕೆಲಸವನ್ನು ಕಲಿತಿದ್ದ ನಾನು ಬಾಲುಮುಂಡು, ಮೇಲಿನ ಅಂಗಿಯನ್ನು ಹೊಲಿದು ರಟ್ಟಿನಿಂದ ಕಿರೀಟವನ್ನೂ ಮಾಡಿ ಅದನ್ನು ಮೊಮ್ಮಗನಿಗೆ ತೊಡಿಸಿ, ಗೆಜ್ಜೆಕಟ್ಟಿ ಅವನನ್ನು ಕುಣಿಸುತ್ತಿದ್ದೆ. ನನಗೆ ತಿಳಿದ ಪುರಾಣ ಕತೆಗಳನ್ನೂ ಹೇಳುತ್ತಿದ್ದೆ.
ಅವನಿಗೆ ಐದು ವರ್ಷ ಪ್ರಾಯವಾದಾಗ ನನಗೆ ಮತೊಬ್ಬ ಮೊಮ್ಮಗನೂ ಜನಿಸಿದ. ದೊಡ್ಡವನು ನಾಲ್ಕನೇ ತರಗತಿಯಲ್ಲಿ ಓದುತ್ತಿರುವಾಗ ಕಟೀಲು ಮೇಳದ ಕಲಾವಿದ ವೇಣೂರು ಶ್ರೀ ಅಶೋಕ ಆಚಾರ್ಯರು ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಪ್ರಾರಂಭಿಸಿದ್ದರು. ಮೊಮ್ಮಗನಿಗೆ ನಾಟ್ಯ ಹೇಳಿಕೊಟ್ಟು ಒಂದು ವರ್ಷದಲ್ಲಿ ರಂಗಪ್ರವೇಶವನ್ನೂ ಮಾಡಿಸಿದ್ದರು. ಕಿರಿಯ ಮೊಮ್ಮಗ ಎರಡನೇ ತರಗತಿಯಲ್ಲಿ ಓದುತ್ತಿರುವಾಗ ಶ್ರೀ ಶಿವಕುಮಾರ ಯಕ್ಷನಿಧಿ ಮೂಡುಬಿದಿರೆಯಲ್ಲಿ ತರಬೇತಿಯನ್ನು ಆರಂಭಿಸಿದ್ದರು. ಅಲ್ಲಿ ಮಕ್ಕಳಿಬ್ಬರೂ ತರಬೇತಿಯನ್ನು ಪಡೆಯುವುದಕ್ಕೆ ಅವಕಾಶವಾಯಿತು. ಕಿರಿಯ ಮೊಮ್ಮಗ ರಂಗಪ್ರವೇಶವನ್ನೂ ಮಾಡುವುದಕ್ಕೆ ಅನುಕೂಲವಾಗಿತ್ತು.
ಕಟೀಲು ಮೇಳದ ಹಿರಿಯ ಕಲಾವಿದರಾದ ಬೆಳ್ಳಾರೆ ಶ್ರೀ ಮಂಜುನಾಥ ಭಟ್ಟರು ಮನೆಗೆ ಬಂದಿದ್ದಾಗ ಈ ಮಕ್ಕಳ ಕುಣಿತ, ಯಕ್ಷಗಾನಾಸಕ್ತಿಯನ್ನು ಗಮನಿಸಿ, ಅದೇ ದಿನ ವೇಣೂರಿನಲ್ಲಿ ನಡೆದ ಕಟೀಲು ಮೇಳದ ಪ್ರದರ್ಶನದಲ್ಲಿ ವೇಷ ಮಾಡಿಸಿದ್ದರು. ಕಟೀಲು ಮೇಳದಲ್ಲಿ ಹೀಗೆ ದೇವೇಂದ್ರನ ಬಲ ಆಗಿ ರಂಗಪ್ರವೇಶ ಮಾಡುವ ಅವಕಾಶ ಸಿಕ್ಕಿತ್ತು. ಎರಡು ದಿನಗಳ ಬಳಿಕ ನಮ್ಮ ಮನೆ ಪಕ್ಕದಲ್ಲೇ ಕಟೀಲು ಮೇಳದ ಆಟವಿತ್ತು. ಅಂದು ಮೇಳದ ಶ್ರೀ ದೇವರು ನಮ್ಮ ಮನೆಗೇ ಚಿತ್ತೈಸಿದ್ದೂ ಒಂದು ಮಹಾ ಭಾಗ್ಯ. ಅಂದೂ ಮೊಮ್ಮಕ್ಕಳಿಬ್ಬರೂ ಕಟೀಲು ಮೇಳದಲ್ಲಿ ವೇಷ ಮಾಡುವ ಅವಕಾಶವಾಗಿತ್ತು.
ಕಟೀಲು ಮೇಳದ ಭಾಗವತರಾದ ಪುಂಡಿಕಾಯಿ ಶ್ರೀ ಗೋಪಾಲಕೃಷ್ಣ ಭಟ್ಟರೂ ಬಾಲಗೋಪಾಲರಾಗಿ ಅಭಿನಯಿಸಲು ಅವಕಾಶ ನೀಡಿದ್ದರು. ಪ್ರಸ್ತುತ ಎಲ್ಲಾ ಮೇಳಗಳಲ್ಲಿ ಅವಕಾಶವಿತ್ತು ಪ್ರೋತ್ಸಾಹಿಸುತ್ತಿದ್ದಾರೆ. ಹಿರಿಯ ಮೊಮ್ಮಗ ಶ್ರೀವತ್ಸ ಈಗ ಒಂಭತ್ತನೆಯ ತರಗತಿ. ಕಿರುಯವ ಶ್ರೇಯಸ್ ನಾಲ್ಕನೇ ತರಗತಿ ವಿದ್ಯಾರ್ಥಿ. ಬಲಿಪ ಭಾಗವತರ ಮನೆ ನಮ್ಮ ಮನೆಯ ಸಮೀಪವೇ ಇದ್ದು ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿರುವುದು ಕಲಿಕೆಗೆ ಅನುಕೂಲವಾಗುತ್ತಿದೆ.
ಮದ್ದಳೆಗಾರರಾದ ಕೊಂಕಣಾಜೆ ಚಂದ್ರಶೇಖರ ಭಟ್ಟರೂ ಮಕ್ಕಳನ್ನು ತಿದ್ದಿ ಮಾರ್ಗದರ್ಶನ ಮಾಡಿದ್ದಾರೆ. ಕಟೀಲು ಆರೂ ಮೇಳಗಳ ಹಿಮ್ಮೇಳ, ಮುಮ್ಮೇಳ ಕಲಾವಿದರೂ ಮಕ್ಕಳನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ. ವೇಷ ಮಾಡಲು ಅವಕಾಶಗಳನ್ನು ನೀಡಿದ್ದಾರೆ. ಸಹಕಲಾವಿದರು ತಮ್ಮಂದಿರಂತೆ ಪ್ರೀತಿಸಿದ್ದಾರೆ. ಮೇಕಪ್ ಮಾಡಲು, ಡ್ರೆಸ್ ಕಟ್ಟಲೂ ಕಿರಿಯ ಕಲಾವಿದರೊಂದಿಗೆ, ಕೆಲವೊಮ್ಮೆ ಹಿರಿಯ ಕಲಾವಿದರೂ ಸಹಕರಿಸಿದ್ದಾರೆ.
ಕಟೀಲು ಅಮ್ಮನವರ ಕೃಪೆ, ಕಲಾವಿದರ ಆದರ, ಸಿಬ್ಬಂದಿಗಳ ಪ್ರೀತಿ ನಮ್ಮ ಮಕ್ಕಳ ಮೇಲೆ ಸದಾ ಇರಲಿ ಎಂದು ಆಶಿಸುತ್ತೇನೆ. ಕಲಾಮಾತೆಯ ಸೇವೆಯನ್ನು ಬಹುಕಾಲ ಮಾಡುವ ಅವಕಾಶ ಸಿಗಲೆಂದು ಬೇಡಿಕೊಳ್ಳುತ್ತೇನೆ. ಈಗ ಇಬ್ಬರು ಮೊಮ್ಮಕ್ಕಳೂ ಸಬ್ಬಣಕೋಡಿ ಶ್ರೀ ರಾಮ ಭಟ್ಟರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.
ಹೀಗೆಯೇ ಅನೇಕ ಮಕ್ಕಳು ಕಟೀಲು, ಧರ್ಮಸ್ಥಳ, ಹನುಮಗಿರಿ, ಪಾವಂಜೆ ಮೊದಲಾದ ಮೇಳಗಳಲ್ಲಿ, ರಜಾದಿನಗಳಲ್ಲಿ, ಬಿಡುವಿನ ಸಮಯದಲ್ಲಿ ವೇಷ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ವಿದ್ಯಾರ್ಥಿಗಳ ಭಾಗ್ಯವೆಂದರೆ ತಪ್ಪಲ್ಲ.
ಇಂತಹಾ ಉತ್ತಮ ಅವಕಾಶಗಳನ್ನಿತ್ತ ಮೇಳಗಳ ಆಡಳಿತಕ್ಕೂ, ಕಲಾವಿದರುಗಳಿಗೂ ಕೃತಜ್ಞರಾಗಿರಬೇಕಾದುದು ನಮಗೆ ಕರ್ತವ್ಯವೂ ಹೌದು. ವೃತ್ತಿಕಲಾವಿದರೊಂದಿಗೆ ವೇಷಗಳನ್ನು ಮಾಡಿದಾಗ ರಂಗಾನುಭವ ಸಿದ್ಧಿಸುತ್ತದೆ. ಮಕ್ಕಳು ಚುರುಕಾಗುತ್ತಾರೆ. ಖಂಡಿತಾ ಕಲಾವಿದರಾಗಿ ಬೆಳೆಯುತ್ತಾರೆ ಎಂಬುದರಲ್ಲಿ ಸಂಶಯವೇ ಇಲ್ಲ.
ಲೇಖಕಿ: ಶ್ರೀಮತಿ ಜಯಲಕ್ಷ್ಮಿ ಗುದ್ರೋಡಿ ವೇಣೂರು, ಮೂಡಬಿದಿರೆ ತಾಲೂಕು
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions