ನಾಲ್ಕು ವೇದಗಳಲ್ಲಿ ಸಾಮವೇದವೂ ಒಂದು. ಸಾಮವೇದದ ಉಪವೇದವು ಗಂಧರ್ವವೇದ. ಗಾಯನ, ವಾದನ, ನರ್ತನಗಳು ಗಂಧರ್ವವೇದಕ್ಕೆ ಸಂಬಂಧಿಸಿದ ವಿಚಾರವು. ಯಕ್ಷಗಾನವೆಂಬ ಶ್ರೇಷ್ಠ ಕಲೆಯಲ್ಲಿ ಈ ಮೂರೂ ವಿಚಾರಗಳು ಒಂದಕ್ಕೊಂದು ಪೂರಕವಾಗಿರುವುದು ನಮಗೆಲ್ಲಾ ತಿಳಿದಿರುವ ವಿಚಾರವು. ಯಕ್ಷಗಾನ ಪ್ರದರ್ಶನಗಳಲ್ಲಿ ಗಾಯನ, ವಾದನ, ನರ್ತನ ಎಂಬ ಮೂರೂ ವಿಚಾರಗಳು ಇರುತ್ತವೆ. ತಾಳಮದ್ದಳೆ ಎಂಬ ಪ್ರಾಕಾರದಲ್ಲಿ ನರ್ತನವನ್ನುಳಿದು ಗಾಯನ, ವಾದನ ಎಂಬ ಎರಡು ವಿಚಾರಗಳು ಇರುತ್ತವೆ.
ವಾದನ ವಿಭಾಗದಲ್ಲಿ ಭಾಗವತರ ಕೈಯಲ್ಲಿರುವ ಜಾಗಟೆಯಲ್ಲದೆ ಚೆಂಡೆ ಮತ್ತು ಮದ್ದಳೆ ಎಂಬ ಎರಡು ವಾದ್ಯೋಪಕರಣಗಳು ಇರುತ್ತವೆ ಎಂಬುದನ್ನು ನಾವೆಲ್ಲರೂ ಬಲ್ಲವರು. ಯಕ್ಷಗಾನದಲ್ಲಿ ಭಾಗವತರ ಹಾಡಿಗೆ ಈ ವಾದ್ಯೋಪಕರಣಗಳನ್ನು ನುಡಿಸುವ ಕಲಾವಿದರನ್ನು ಮದ್ದಳೆಗಾರರೆಂದು ಕರೆಯುವುದು ರೂಢಿಯಾಗಿದೆ.
ಯಕ್ಷಗಾನದಲ್ಲಿ ಅನೇಕ ಹಿರಿಯ ಮದ್ದಳೆಗಾರರು ತಮ್ಮ ವಾದನ ಕೌಶಲವನ್ನು ತೋರಿ ಮೆರೆದಿದ್ದಾರೆ. ಉದಯೋನ್ಮುಖ ಕಲಾವಿದರು ಅನೇಕರು ಇಂದು ರಂಗದಲ್ಲಿ ತಮ್ಮ ಕಲಾಕೌಶಲ್ಯವನ್ನು ತೋರುತ್ತಿದ್ದಾರೆ. ತೆಂಕುತಿಟ್ಟಿನ ಉದಯೋನ್ಮುಖರಲ್ಲಿ ಶ್ರೀಧರ ಪಡ್ರೆ ಅವರು ಮದ್ದಳೆಗಾರರಾಗಿ ಕಲಾಭಿಮಾನಿಗಳಿಗೆಲ್ಲಾ ಪರಿಚಿತರು. ಇವರು ಪ್ರಸ್ತುತ ಕಟೀಲು ೧ನೇ ಮೇಳದಲ್ಲಿ ಕಲಾ ವ್ಯವಸಾಯವನ್ನು ಮಾಡುತ್ತಿದ್ದಾರೆ.
ಮದ್ದಳೆಗಾರ ಶ್ರೀಧರ ಅವರ ಹುಟ್ಟೂರು ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದ ಬದಿ ಎಂಬಲ್ಲಿ. 1975ನೇ ಇಸವಿ ಅಕ್ಟೋಬರ್ 25ರಂದು ಶ್ರೀ ಕುಂಞಪ್ಪ ನಾಯ್ಕ ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಪುತ್ರನಾಗಿ ಜನನ. ಕುಂಞಪ್ಪ ನಾಯ್ಕರಿಗೆ ಏಳು ಮಂದಿ ಮಕ್ಕಳು. ಶ್ರೀಧರ ಅವರು ಐದನೆಯವರು. ಶ್ರೀ ಕುಂಞಪ್ಪ ನಾಯ್ಕ ಅವರು ತೆಂಕುತಿಟ್ಟಿನ ಉತ್ತಮ ಕಿರೀಟ ವೇಷಧಾರಿಯಾಗಿದ್ದರು. ಪಡ್ರೆ ಜಟಾಧಾರೀ, ಕೂಡ್ಲು, ವೇಣೂರು ಬಳ್ಳಂಬೆಟ್ಟು ಮೇಳಗಳಲ್ಲಿ ತಿರುಗಾಟ ಮಾಡಿದ್ದರು. ಬಳಿಕ ಸುರತ್ಕಲ್ ಮೇಳದಲ್ಲಿ ತಿರುಗಾಟ ಮಾಡಿ ನಿವೃತ್ತರಾಗಿದ್ದರು. ಮದ್ದಳೆಗಾರ ಮಿಜಾರು ಶ್ರೀ ಮೋಹನ ಶೆಟ್ಟಿಗಾರರ ತಂದೆ ದಡ್ಡಿ ನಾರಾಯಣ ಶೆಟ್ಟಿಗಾರರೂ ಇವರೂ ಜತೆ ವೇಷಧಾರಿಗಳಾಗಿ ಮಿಂಚಿದವರು.
ಪಡ್ರೆ ಶ್ರೀಧರ ಅವರು ಪದವೀಧರರು. (ಬಿ.ಎ) ಓದಿದು 7ನೇ ತರಗತಿ ವರೆಗೆ ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಯಲ್ಲಿ. ಎಸ್,ಎಸ್. ಎಲ್.ಸಿ ಪೆರ್ಲ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ. ಪಿಯುಸಿ ವಿದ್ಯಾರ್ಜನೆ ಅಳಿಕೆ ಶ್ರೀ ಸತ್ಯಸಾಯಿ ಕಾಲೇಜಿನಲ್ಲಿ. ಪದವಿ ಶಿಕ್ಷಣ ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ. ತೆಂಕುತಿಟ್ಟಿನ ಇನ್ನೋರ್ವ ಮದ್ದಳೆಗಾರ ಪಡ್ರೆ ಆನಂದ ಸಂಬಂಧದಲ್ಲಿ ಪಡ್ರೆ ಶ್ರೀಧರರಿಗೆ ಅಳಿಯ. ಶಾಲೆಯಲ್ಲಿ, ಯಕ್ಷಗಾನ ಕಲಿಕೆಯಲ್ಲಿ ಸಹಪಾಠಿಗಳು. ಮೇಳದ ತಿರುಗಾಟದಲ್ಲಿ ಒಡನಾಡಿಗಳು. ಇವರಿಬ್ಬರೂ ಪಡ್ರೆದ್ವಯರೆಂದೇ ಕರೆಸಿಕೊಂಡಿದ್ದರು. ಮಾವ, ಅಳಿಯ ಎಂಬ ಬಂಧುಗಳಾದರೂ ಕಲಾಭಿಮಾನಿಗಳು ಅಣ್ಣತಮ್ಮಂದಿರೆಂದೇ ತಿಳಿದಿದ್ದರು. “ನಿಮ್ಮ ಅಣ್ಣ ಏನು ಮಾಡುತ್ತಾರೆ?” ‘ನಿಮ್ಮ ತಮ್ಮ ಎಲ್ಲಿದ್ದಾರೆ?’ ಎಂಬ ಪ್ರಶ್ನೆಗಳನ್ನು ಕಲಾಭಿಮಾನಿಗಳು ಇವರಿಬ್ಬರಲ್ಲೂ ಕೇಳಿದ್ದಿದೆ.
ಇವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ. ಪಡ್ರೆದ್ವಯರು ಬಾಲಾ ಬಾಲಕರಾಗಿದ್ದಾಗಲೇ ಪ್ರದರ್ಶನಗಳನ್ನು ನೋಡುತ್ತಿದ್ದರು. ಹಗಲು ನಿದ್ದೆ ಮಾಡದೆ ಅಣಕು ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದರು. ಅಡಿಕೆ ಹಾಳೆ, ತೆಂಗಿನ ಗರಿಗಳಿಂದ ವೇಷಭೂಷಣಗಳನ್ನು ಮಾಡುತ್ತಿದ್ದರು. ಹೊದಿಕೆ ಸೀರೆಗಳೇ ವೇಷಕ್ಕೆ ಉಡುಪುಗಳು. ಮನೆಯವರು ಬಂದು ನೋಡಿದಾಗ ಹೊದಿಕೆ, ಸೀರೆಗಳೆಲ್ಲಾ ತೂತಾಗಿರುತ್ತಿತ್ತು! ವೇಷಕ್ಕೆ ಮತ್ತು ಕರ್ಟನ್ ಗಾಗಿ ಇವರು ತೂತು ಮಾಡುತ್ತಿದ್ದರು! ನೆರೆಕರೆಯ ಮಕ್ಕಳನ್ನು ಬೆದರಿಸಿ ಒತ್ತಾಯದಿಂದ ಪ್ರೇಕ್ಷಕರ ಸಾಲಿನಲ್ಲಿ ಕೂರಿಸುತ್ತಿದ್ದರು.
ಪಡ್ರೆ ಶ್ರೀಧರರು ಎಳವೆಯಲ್ಲೇ ಹಿಮ್ಮೇಳದತ್ತ ಆಕರ್ಷಿತರಾಗಿದ್ದರು. ಕಲಿತು ಕಲಾವಿದನಾಗಬೇಕೆಂಬ ಆಸೆಯೂ ಆಗಿತ್ತು. ಇವರ ಹತ್ತಿರದಲ್ಲಿ ಬದಿ ಕೇಶವ ಭಟ್ಟರ ಮನೆ. ಅಲ್ಲಿ ತೆಂಕುತಿಟ್ಟಿನ ಖ್ಯಾತ ಮದ್ದಳೆಗಾರ ಪುಂಡಿಕಾಯಿ ಕೃಷ್ಣ ಭಟ್ಟರು ಹಿಮ್ಮೇಳ ತರಬೇತಿಯನ್ನು ನೀಡುತ್ತಿದ್ದರು. ಅವರಿಂದ ಚೆಂಡೆ ಮದ್ದಳೆ ನುಡಿಸುವುದನ್ನು ಕಲಿತರು. ಶಾಲಾ ಪ್ರದರ್ಶನದಲ್ಲಿ ಮದ್ದಳೆ ನುಡಿಸಿದ್ದರು. ಗುರುಗಳಾದ ಪುಂಡಿಕಾಯಿ ಕೃಷ್ಣ ಭಟ್ಟರು ಪ್ರೋತ್ಸಾಹ ನೀಡುತ್ತಿದ್ದರು. ಪ್ರದರ್ಶನಗಳಿಗೆ ಕರೆದೊಯ್ದು ಮದ್ದಳೆ ಬಾರಿಸಲು ಅವಕಾಶ ನೀಡುತ್ತಿದ್ದರು.
ಶ್ರೀಧರ್ ಅವರು ನಾಟ್ಯವನ್ನೂ ಬಲ್ಲವರು. ಶಾಸ್ತ್ರೀಯವಾಗಿ ಕಲಿತಿರಲಿಲ್ಲ. ಅಣ್ಣತಮ್ಮಂದಿರು ಸಬ್ಬಣಕೋಡಿ ರಾಮ ಭಟ್ಟರಿಂದ ಕಲಿತಿದ್ದರು. ಅವರು ತರಬೇತಿ ನೀಡುವಾಗ ನೋಡಿ ಮತ್ತು ಅಣ್ಣ ತಮ್ಮಂದಿರು ಮನೆಯಲ್ಲಿ ಕುಣಿಯುವಾಗ ನೋಡುತ್ತಾ ಯಕ್ಷಗಾನ ನಾಟ್ಯವನ್ನು ಕರಗತ ಮಾಡಿಕೊಂಡಿದ್ದರು. ತಂದೆ ಕುಂಞಪ್ಪ ನಾಯ್ಕರೂ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಹೇಳಿಕೊಟ್ಟಿದ್ದರು. ಭಾಗವತಿಕೆಯನ್ನು ಮಾಡುವ ಹವ್ಯಾಸವೂ ಪಡ್ರೆ ಶ್ರೀಧರ ಅವರಿಗಿದೆ. ಇವರ ಅಣ್ಣ ನಾರಾಯಣ ಅವರ ಪ್ರೋತ್ಸಾಹವೇ ಇದಕ್ಕೆ ಕಾರಣ. ಅವರು ಶಾಲೆಗೆ ಹೋದವರಲ್ಲ. ಕಣ್ಣುಗಳು ಕಾಣಿಸುತ್ತಿರಲಿಲ್ಲ. ಆದರೂ ಮನೆಯವರೊಂದಿಗೆ ಆಟ – ಕೂಟಗಳಿಗೆ ತೆರಳಿ ಕೇಳಿಯೇ ಹಾಡುಗಳು ಕಂಠಪಾಠವಾಗಿತ್ತು. ಶ್ರುತಿಬದ್ಧವಾಗಿ ತಾಳಹಾಕಿ ಹಾಡುವ ಕಲೆ ಅವರಿಗೆ ಕರಗತವಾಗಿತ್ತು. ಶಾಲಾ ಕಲೋತ್ಸವದಲ್ಲಿ ಪ್ರದರ್ಶನಕ್ಕೆ ಹಾಡಿದರು. ಆಗ ಆನಂದ ಪಡ್ರೆ ಚೆಂಡೆ ಬಾರಿಸಿದ್ದರು.
ಎಸ್.ಎಸ್.ಎಲ್.ಸಿ ಮುಗಿದ ನಂತರ ಅಳಿಕೆ ಕಾಲೇಜಿಗೆ ಸಂದರ್ಶನಕ್ಕೆಂದು ಹೋಗಿದ್ದರು. ಸಂದರ್ಶಕರು ಓದು ಅಲ್ಲದೆ ಯಾವ ಹವ್ಯಾಸ ಇದೆ ಎಂದು ಪ್ರಶ್ನಿಸಿದ್ದರು. ಯಕ್ಷಗಾನ ಹಿಮ್ಮೇಳ ಎಂದಾಗ ಅಳಿಕೆ ಕಾಲೇಜಿಗೆ ಪ್ರವೇಶ ದೊರಕಿತ್ತು. ಕಾಲೇಜು ಪ್ರದರ್ಶನಗಳಲ್ಲಿ ಮದ್ದಳೆ ಬಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇವರು ಪದವಿ ಶಿಕ್ಷಣವನ್ನು ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು. ಕಾಲೇಜಿನ ಪ್ರದರ್ಶನಕ್ಕೆ ಅಭ್ಯಾಸ ಮಾಡುತ್ತಿರುವಾಗ ಒಬ್ಬನ ಪ್ರವೇಶದ ಕ್ರಮ ಸರಿ ಇರಲಿಲ್ಲ. ಅದನ್ನು ಶ್ರೀಧರ್ ಅವರು ತಿದ್ದಿದ್ದರು. ಇದನ್ನು ಗಮನಿಸಿದ ಉಪಾನ್ಯಾಸಕ, ಕಲಾವಿದ ದಂಬೆ ಈಶ್ವರ ಶಾಸ್ತ್ರಿಗಳು ವೇಷ ಮಾಡಲು ಒತ್ತಾಯಿಸಿದ್ದರು. ಮಂಗಳೂರು ಎಸ್.ಡಿ.ಎಂ ನ ಅಂತರ ಕಾಲೇಜು ಸ್ಪರ್ಧೆಯಲ್ಲಿ ಫಿಲೋಮಿನಾ ಕಾಲೇಜಿನ ತಂಡದಲ್ಲಿ ವೇಷಧಾರಿಯಾಗಿ ಭಾಗವಹಿಸಿದ್ದರು. ತಂಡ ಗೆಲ್ಲದಿದ್ದರೂ ತಂಡದ ಶ್ರೇಷ್ಠ ಕಲಾವಿದ ಎಂಬ ಬಹುಮಾನ ಇವರಿಗೆ ಒಲಿದಿತ್ತು. ಅಲ್ಲದೆ ಕಾಲೇಜಿನಲ್ಲಿ ಲಘುಸಂಗೀತ, ಭಾವಗೀತೆ, ಭಕ್ತಿಗೀತೆ ಸ್ಪರ್ಧೆಗಳಲ್ಲಿ ಇವರಿಗೆ ಮೊದಲ ಬಹುಮಾನ ಸಿಗುತ್ತಿತ್ತು.
ಪದವಿ ಶಿಕ್ಷಣ ಪೂರೈಸಿ ಓದು ಮುಂದುವರಿಸುವ ಆಸೆ ಇದ್ದರೂ ಅನುಕೂಲವಿರಲಿಲ್ಲ. ಬಡತನವೇ ಇದಕ್ಕೆ ಕಾರಣ. ಬದುಕಿಗಾಗಿ, ಸಂಪಾದನೆಗಾಗಿ ಕೂಲಿ ಕೆಲಸವನ್ನೂ ಮಾಡಿದ್ದರು. ಭಾಗವತ ಸತ್ಯನಾರಾಯಣ ಪುಣಿಂಚತ್ತಾಯರ ಮನೆಯಲ್ಲಿ ನಡೆಯುತ್ತಿದ್ದ ನವರಾತ್ರಿಯ ಕಾರ್ಯಕ್ರಮಗಳಲ್ಲಿ ಶ್ರೀಧರ ಪಡ್ರೆ ಮತ್ತು ಆನಂದ ಪಡ್ರೆ ಅವರು ಭಾಗವಹಿಸುತ್ತಿದ್ದರು. 1996-97ರಲ್ಲಿ ಮಂಗಳಾದೇವಿ ಮೇಳ ಆರಂಭವಾದಾಗ ಪುಣಿಂಚತ್ತಾಯರ ಹೇಳಿಕೆಯಂತೆ ಮಂಗಳಾದೇವಿ ಮೇಳಕ್ಕೆ ಸೇರ್ಪಡೆ. ಶಬರಾಯರ ಮತ್ತು ಪುಣಿಂಚತ್ತಾಯರ ಸಂಪೂರ್ಣ ಸಹಕಾರ ಇವರಿಗಿತ್ತು. ಕಿಶನ್ ಹೆಗ್ಡೆಯವರೂ ಸಹಕರಿಸಿ ಪ್ರೋತ್ಸಾಹ ನೀಡಿದ್ದರು.
ಮಂಗಳಾದೇವಿ ಮೇಳದಲ್ಲಿ ಹದಿಮೂರು ತಿರುಗಾಟ. ಈ ಸಂದರ್ಭದಲ್ಲಿ ಕಾಸರಗೋಡು ವೆಂಕಟ್ರಮಣ, ಪದ್ಮನಾಭ ಉಪಾಧ್ಯಾಯ ಮದ್ದಳೆಗಾರರಾಗಿದ್ದರು. ಮುಂದಿನ ವರ್ಷಗಳಲ್ಲಿ ಪ್ರಭಾಕರ ಗೋರೆ, ಲಕ್ಷ್ಮೀಶ ಅಮ್ಮಣ್ಣಾಯ, ಪದ್ಯಾಣ ಜಯರಾಮ ಭಟ್, ಪದ್ಯಾಣ ಗಣಪತಿ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪೆರುವಡಿ ಶ್ಯಾಮ್ ಭಟ್, ರವಿಚಂದ್ರ ಕನ್ನಡಿಕಟ್ಟೆ, ವಿನಯ ಆಚಾರ್ಯ, ಕರುಣಾಕರ ಶೆಟ್ಟಿಗಾರ ಮೊದಲಾದವರ ಒಡನಾಟವೂ ದೊರೆತಿತ್ತು. ತನ್ನ ಕರ್ತವ್ಯ ಮುಗಿದ ಬಳಿಕ ನಿದ್ರಿಸದೆ ಬೆಳಗಿನ ವರೆಗೂ ಆಟ ನೋಡುತ್ತಿದ್ದರು. ಯಾವ ಪದ್ಯಕ್ಕೆ ಹೇಗೆ ಬಾರಿಸಬೇಕು ಎಂಬುದನ್ನು ಬರೆದಿರಿಸಿಕೊಳ್ಳುತ್ತಿದ್ದರು.
ಮಂಗಳಾದೇವಿ ಮೇಳದ ತಿರುಗಾಟದ ಬಳಿಕ 5 ವರ್ಷ ಎಡನೀರು ಮೇಳದಲ್ಲಿ. ಇವರ ಕಲಾ ಸೇವೆಯ ಬಗ್ಗೆ ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯ ಅವರಿಗೂ ಪದ್ಯಾಣ ಗಣಪತಿ ಭಟ್ಟರಿಗೂ ತೃಪ್ತಿಯಿತ್ತು. ಇವರಲ್ಲಿ ನೆರವಾಗಿ ಹೇಳದಿದ್ದರೂ ಆಪ್ತರಲ್ಲಿ ಹೇಳುತ್ತಿದ್ದರಂತೆ. ಬಳಿಕ ಐದು ವರ್ಷಗಳ ಕಾಲ ಸಸಿಹಿತ್ಲು ಮೇಳದಲ್ಲಿ ವ್ಯವಸಾಯ. ಈ ಸಮಯದಲ್ಲಿ ಕಣಿಯೂರು ಸೂರ್ಯನಾರಾಯಣ ಭಟ್, ಸತ್ಯನಾರಾಯಣ ಪುಣಿಂಚತ್ತಾಯ, ದಯಾನಂದ ಕೋಡಿಕಲ್, ರವೀಂದ್ರ ಶೆಟ್ಟಿ, ಚಂದ್ರಶೇಖರ ಕಕ್ಕೆಪದವು, ಶಿವಪ್ರಸಾದ ಎಡಪದವು, ದೇವಿಪ್ರಸಾದ್ ಕಟೀಲು ಮೊದಲಾದವರ ಒಡನಾಟವು ದೊರೆತಿತ್ತು.
ಶ್ರೀ ಶ್ರೀಧರ ಪಡ್ರೆ ಅವರು ಕಳೆದ ವರ್ಷದಿಂದ ಕಟೀಲು 1ನೇ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಗಾನ ವೈಭವ ಮತ್ತು ನಾಟ್ಯ ವೈಭವ ಕಾರ್ಯಕ್ರಮಗಳಲ್ಲೂ ಇವರು ಕಾಣಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ 4 ವರ್ಷ ನಿಡ್ಲೆ ಶ್ರೀ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆಯ ಸದಸ್ಯನಾಗಿ ಕೇರಳ, ಆಂಧ್ರ, ಕರ್ನಾಟಕ, ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ನಡೆದ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಎರಡು ಬಾರಿ ವಿದೇಶದ ಪ್ರದರ್ಶನಗಳಲ್ಲೂ ತಮ್ಮ ವಾದನ ಕೌಶಲವನ್ನು ಪ್ರಕಟಿಸಿದ್ದಾರೆ. ಜನಾರ್ದನ ಗುಡಿಗಾರರ ಹೇಳಿಕೆಯಂತೆ ಮಸ್ಕತ್ ನಲ್ಲೂ ಶ್ರೀ ಮೋಹನ ಎಡನೀರು ಅವರ ಹೇಳಿಕೆಯಂತೆ ಬಹರೇನ್ ನಲ್ಲಿಯೂ ಭಾಗವಹಿಸಿದ್ದಾರೆ. ಇದೀಗ ಮೂರನೇ ಬಾರಿ ವಿದೇಶಕ್ಕೆ ತೆರಳುವ ಸಿದ್ಧತೆಯಲ್ಲಿದ್ದಾರೆ. ಸೆಪ್ಟೆಂಬರ್ 9ರಂದು ಮಸ್ಕತ್ ನ ಸ್ಥಳೀಯ ಕಲಾವಿದರ ಪ್ರದರ್ಶನದಲ್ಲಿ ಇವರೂ ಭಾಗವಹಿಸಲಿದ್ದಾರೆ. ಅಮ್ಮೆನಡ್ಕ ರಾಮಪ್ರಸಾದ್ ಮತ್ತು ಶ್ರೀ ನಾಗೇಶ್ ಶೆಟ್ಟಿ ಅವರ ಹೇಳಿಕೆಯಂತೆ ಶ್ರೀ ಸತ್ಯನಾರಾಯಣ ಪುಣಿಂಚತ್ತಾಯ, ಪಡ್ರೆ ಶ್ರೀಧರ, ಸುಂದರ ಬಂಗಾಡಿ ಅವರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.
ತೆಂಕುತಿಟ್ಟಿನ ನಗುಮೊಗದ ವಿನಯವಂತ ಮದ್ದಳೆಗಾರ ಪಡ್ರೆ ಶ್ರೀಧರರ ಧರ್ಮಪತ್ನಿ ಶ್ರೀಮತಿ ಕುಸುಮ. (2007ರಲ್ಲಿ ವಿವಾಹ) ಇವರು ಸ್ನಾತಕೋತ್ತರ ಪದವೀಧರರು. (ಎಂ.ಎ ಎಕನಾಮಿಕ್ಸ್ ) ಕಾಸರಗೋಡು ತಕ್ಷಶಿಲಾ ಕಾಲೇಜಿನಲ್ಲಿ ಉಪಾನ್ಯಾಸಕಿ. ಪಡ್ರೆ ಶ್ರೀಧರ, ಕುಸುಮ ದಂಪತಿಗಳ ಪುತ್ರ ಮಾ| ಅದ್ವೈತ್ 4ನೇ ತರಗತಿಯ ವಿದ್ಯಾರ್ಥಿ. ಆತನ ಭವಿಷ್ಯವು ಉಜ್ವಲವಾಗಲಿ. ಪಡ್ರೆ ಶ್ರೀಧರ ಅವರಿಗೆ ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ವಿಳಾಸ: ಪಡ್ರೆ ಶ್ರೀಧರ, ಯಕ್ಷಗಾನ ಕಲಾವಿದ, ಬಜಕೂಡ್ಲು, ಅಂಚೆ ಪೆರ್ಲ, ಕಾಸರಗೋಡು,
ಮೊಬೈಲ್: 9446169139
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions