Saturday, January 18, 2025
Homeಯಕ್ಷಗಾನಉದಯೋನ್ಮುಖ ಅನುಭವೀ ಹಿಮ್ಮೇಳ ಕಲಾವಿದ - ಶ್ರೀ ಆನಂದ ಪಡ್ರೆ 

ಉದಯೋನ್ಮುಖ ಅನುಭವೀ ಹಿಮ್ಮೇಳ ಕಲಾವಿದ – ಶ್ರೀ ಆನಂದ ಪಡ್ರೆ 

ಯಕ್ಷಗಾನ ಕಲೆಯ ಹಿಮ್ಮೇಳ ವಿಭಾಗದಲ್ಲಿ ಭಾಗವತ ಮತ್ತು ಮದ್ದಳೆಗಾರ ಎಂಬ ಎರಡು ಶ್ರೇಷ್ಠ ಸ್ಥಾನಗಳು. ಭಾಗವತನಂತೆ ಮದ್ದಳೆಗಾರನೂ ಹೊಣೆಗಾರಿಕೆಯ ಸ್ಥಾನವನ್ನು ಹೊಂದಿ ಪ್ರಸಂಗದ ಯಶಸ್ಸಿಗೆ ಕಾರಣನಾಗುತ್ತಾನೆ. ಭಾಗವತನು ಅನನುಭವಿಯಾಗಿದ್ದರೂ ಮದ್ದಳೆಗಾರನು ಅನುಭವಿಯಾಗಿದ್ದರೆ ಪ್ರಸಂಗವನ್ನು ಮುನ್ನಡೆಸಬಲ್ಲ. ಪ್ರಸಂಗಾನುಭವಗಳನ್ನು ಈ ಸ್ಥಾನದಲ್ಲಿರುವವರು ಹೊಂದಿರಲೇಬೇಕು.

ತೆಂಕುತಿಟ್ಟಿನ ಹಿಮ್ಮೇಳದ ಚೆಂಡೆ ಮದ್ದಳೆವಾದಕರಾಗಿ ಇಂದು ಅನೇಕ ಉದಯೋನ್ಮುಖರು ಮಿಂಚುತ್ತಿದ್ದಾರೆ ಎಂಬುದು ಸಂತೋಷವನ್ನು ನೀಡುವ ವಿಚಾರ. ಇವರೆಲ್ಲರೂ ರಂಗನಡೆ, ಪ್ರಸಂಗಾನುಭವ, ವೇಷಕ್ಕೆ ಸರಿಯಾಗಿ ನುಡಿಸುವುದರಲ್ಲೂ ಪಕ್ವರಾದರೆ ಯಕ್ಷಗಾನಕ್ಕೆ ಬಹುದೊಡ್ಡ ಆಸ್ತಿಯಾಗಬಲ್ಲರು.

ಈ ಎಲ್ಲಾ ವಿಚಾರಗಳಲ್ಲೂ ನಿರಂತರ ಅಭ್ಯಾಸದಿಂದ ಪಕ್ವರಾಗುತ್ತಾ ಬೆಳೆಯುತ್ತಿರುವ ಅನುಭವೀ ಮದ್ದಳೆಗಾರರ ಸಾಲಿನಲ್ಲಿ ಗುರುತಿಸಲ್ಪಡುವವರು ಶ್ರೀ ಆನಂದ ಪಡ್ರೆ ಅವರು. ಇವರು ಪ್ರಸ್ತುತ ಸಸಿಹಿತ್ಲು ಮೇಳದ ಮದ್ದಳೆಗಾರರಾಗಿ ವ್ಯವಸಾಯ ಮಾಡುತ್ತಿದ್ದಾರೆ. 

ತೆಂಕುತಿಟ್ಟಿನ ಮದ್ದಳೆಗಾರ ಶ್ರೀ ಆನಂದ ಪಡ್ರೆ  ಅವರ ಹುಟ್ಟೂರು ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದ ಬದಿ ಎಂಬಲ್ಲಿ. 1976ನೇ ಇಸವಿ ಜನವರಿ 26ರಂದು ಶ್ರೀ ಕೃಷ್ಣ ನಾಯ್ಕ ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಪುತ್ರನಾಗಿ ಜನನ. ಮದ್ದಳೆಗಾರ ಪಡ್ರೆ ಶ್ರೀಧರ ಇವರ ಬಂಧುಗಳು. (ಸಂಬಂಧದಲ್ಲಿ ಇವರಿಗೆ ಮಾವ) ಶ್ರೀ ಆನಂದ ಪಡ್ರೆ ಇವರು ಓದಿದ್ದು ಪಿಯುಸಿ ವರೆಗೆ.

7ನೇ ತರಗತಿ ವರೆಗೆ ಸ್ವರ್ಗದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಹತ್ತನೇ ತರಗತಿ ವರೆಗೆ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ. ಪಿಯುಸಿ ವಿದ್ಯಾಭ್ಯಾಸ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಇವರಿಗೆ ಯಕ್ಷಗಾನ ಕಲಾಸಕ್ತಿ ಇತ್ತು. ಯಕ್ಷಗಾನ ಪ್ರದರ್ಶನಗಳನ್ನು ನೋಡಿ ಮನೆಗೆ ಬಂದು ಹಗಲು ನಿದ್ದೆ ಮಾಡದೆ ಮನೆಯ ಸಮೀಪ ಅಣಕು ಯಕ್ಷಗಾನದಲ್ಲಿ ಭಾಗಿಯಾಗುತ್ತಿದ್ದರು.

ಇವರೂ, ಪಡ್ರೆ ಶ್ರೀಧರ ಅವರೂ ಈ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕುಳಿತುಕೊಳ್ಳುವ ಮಣೆಯೇ ಚೆಂಡೆಯಾಗುತ್ತಿತ್ತು. ಅಡಿಕೆ ಹಾಳೆಗಳಿಂದ ಕಿರೀಟ ತಯಾರಿ, ಮಹಿಷಾಸುರ ವೇಷಕ್ಕೆ ತೆಂಗಿನ ಗರಿಯೇ ಕೋಡುಗಳಾಗಿ ಸಿದ್ಧವಾಗುತ್ತಿತ್ತು. ಹತ್ತಿರದ ಮನೆಯ ಮಕ್ಕಳನ್ನು ಒತ್ತಾಯಪೂರ್ವಕ ಎಳೆತಂದು ಪ್ರೇಕ್ಷಕರ ಸಾಲಿನಲ್ಲಿ ಕುಳಿತುಕೊಳ್ಳಲು ಆಜ್ಞೆ ಮಾಡುತ್ತಿದ್ದರು. ಹೀಗೆಯೇ ತಾನೂ ಕಲಾವಿದನಾಗಬೇಕೆಂಬ ಆಸೆಯು ಹುಟ್ಟಿಕೊಂಡಿತ್ತು.

ಶ್ರೀ ಆನಂದ ಅವರಿಗೆ ಹಿಮ್ಮೇಳ ಕಲಾವಿದನಾಗಬೇಕೆಂಬ ಆಸೆ. ಅದಕ್ಕೆ ಅವಕಾಶವೂ ತಾನಾಗಿ ಒಲಿದುಬಂದಿತ್ತು. ಮನೆ ಹತ್ತಿರದಲ್ಲಿ ಬದಿ ಕೇಶವ ಭಟ್ ಎಂಬ ಮಹನೀಯರಿದ್ದರು. ಅವರ ಮನೆಯಲ್ಲಿ ತೆಂಕುತಿಟ್ಟಿನ ಖ್ಯಾತ ಮದ್ದಳೆಗಾರ ಪುಂಡಿಕಾಯಿ ಕೃಷ್ಣ ಭಟ್ಟರು ಹಿಮ್ಮೇಳ ತರಬೇತಿ ನೀಡುತ್ತಿದ್ದರು. ಮಳೆಗಾಲದಲ್ಲಿ ಶ್ರೀ ಆನಂದ ಅವರು ಪುಂಡಿಕಾಯಿ ಕೃಷ್ಣ ಭಟ್ಟರಿಂದ ಚೆಂಡೆ ಮಾಡಲೇ ನುಡಿಸುವಿಕೆಯನ್ನು ಕಲಿತರು. 8ನೇ ಕ್ಲಾಸಿನ ವಿದ್ಯಾರ್ಥಿಯಾಗಿರುವಾಗಲೇ ಸಂಘದ ಆಟವೊಂದರಲ್ಲಿ ಚೆಂಡೆ ಬಾರಿಸುವ ಅವಕಾಶವೂ ಸಿಕ್ಕಿತ್ತು. (ದೇವಿ ಮಹಾತ್ಮ್ಯೆ ಪ್ರಸಂಗ) ಮತ್ತೆ ಪೆರ್ಲ ಶಾಲಾ ಯುವಜನೋತ್ಸವದ ಪ್ರದರ್ಶನಕ್ಕೂ ಚೆಂಡೆ ಬಾರಿಸಿದ್ದರು.

ಗುರುಗಳಾದ ಪುಂಡಿಕಾಯಿ ಕೃಷ್ಣ ಭಟ್ಟರ ಸಹಕಾರ ಮತ್ತು ನಿರ್ದೇಶನದಲ್ಲಿ ಊರ ಪರವೂರ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶವೂ ದೊರೆತಿತ್ತು. ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯಾಗಿರುವಾಗ ಕಾಲೇಜು ಡೇ ಪ್ರದರ್ಶನಗಳಲ್ಲೂ ಚೆಂಡೆ ಬಾರಿಸಿದ್ದರು. ಮಂಗಳೂರು ಎಸ್.ಡಿ.ಎಂ ಕಾಲೇಜಿನಲ್ಲಿ ನಡೆದ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜು ತಂಡದ ಮದ್ದಳೆಗಾರನಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮದ್ದಳೆಗಾರರಾದ ಕೊಂಕಣಾಜೆ ಚೆಂದ್ರಶೇಖರ ಭಟ್ ಅವರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಯಾಗಿ ವೇಷ ಮಾಡುತ್ತಿದ್ದರು.

ಈ ಸಂದರ್ಭಗಳಲ್ಲಿ ಊರ ಪರವೂರ ಪ್ರದರ್ಶನಗಳಲ್ಲಿ ಭಾಗವಹಿಸಿ ರಂಗಾನುಭವಗಳನ್ನು ಗಳಿಸಿಕೊಂಡರು. ಭಾಗವತರಾದ ತೆಂಕಬೈಲು ಶ್ರೀ ತಿರುಮಲೇಶ್ವರ ಶಾಸ್ತ್ರಿಗಳ ಸಹಕಾರ, ಮಾರ್ಗದರ್ಶನವೂ ದೊರಕಿತ್ತು. ಪಿಯುಸಿ ಶಿಕ್ಷಣದ ನಂತರ ಉಡುಪಿ ಕಲ್ಯಾಣಪುರದಲ್ಲಿ ಖಾಸಗಿ ಉದ್ಯೋಗವನ್ನು ಮಾಡಿದ್ದರು (ಒಂದೂವರೆ ವರ್ಷ) ಈ ಸಂದರ್ಭದಲ್ಲಿ  ಪರಿಸರದಲ್ಲಿ ನಡೆಯುತ್ತಿದ್ದ ಮೇಳಗಳ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನೂ ಮೇಳದ ಕಲಾವಿದನಾಗಬೇಕೆಂಬ ಬಯಕೆಯು ಹೆಚ್ಚಾಯಿತು. ಭಾಗವತ ಪೆರ್ಲ ಶ್ರೀ ಸತ್ಯನಾರಾಯಣ ಪುಣಿಂಚತ್ತಾಯ ಅವರ ಮನೆಯಲ್ಲಿ ನವರಾತ್ರಿಯ ಸಂದರ್ಭ ನಡೆಯುತ್ತಿದ್ದ ಕೂಟಗಳಲ್ಲೂ ಭಾಗವಹಿಸುವ ಅವಕಾಶವಾಗಿತ್ತು. 

ಶ್ರೀ ಆನಂದ ಪಡ್ರೆ ಅವರು ತಿರುಗಾಟ ಆರಂಭಿಸಿದ್ದು ಶ್ರೀ ಮಂಗಳಾದೇವಿ ಮೇಳದಲ್ಲಿ. ಸದ್ರಿ ಮೇಳ ಆರಂಭವಾದ ವರ್ಷ. ಭಾಗವತ ಶ್ರೀ ಸತ್ಯನಾರಾಯಣ ಪುಣಿಂಚತ್ತಾಯ ಅವರ ಹೇಳಿಕೆಯಂತೆ ಮೇಳಕ್ಕೆ ಸೇರ್ಪಡೆ. ತಿರುಗಾಟದ ಅನುಭವ ಇಲ್ಲದ ಇವರಿಗೆ ಶ್ರೀ ಪುಣಿಂಚತ್ತಾಯರೂ ಶ್ರೀ ನಾರಾಯಣ ಶಬರಾಯರೂ ಮಾರ್ಗದರ್ಶಕರಾಗಿ ಸಹಕರಿಸಿದ್ದರು. ಆಗ ಕಾಸರಗೋಡು ವೆಂಕಟ್ರಮಣ ಮತ್ತು ಶ್ರೀ ಪದ್ಮನಾಭ ಉಪಾಧ್ಯಾಯರು ಮದ್ದಳೆಗಾರರಾಗಿದ್ದರು. ಅವರ ಸಹಕಾರವೂ ದೊರೆತಿತ್ತು.

ಈ ಮೇಳದಲ್ಲಿ ಹದಿಮೂರು ವರ್ಷಗಳ ತಿರುಗಾಟ. ಈ ಸಂದರ್ಭ ಪ್ರಭಾಕರ ಗೋರೆ, ಲಕ್ಷ್ಮೀಶ ಅಮ್ಮಣ್ಣಾಯ, ಪದ್ಯಾಣ ಜಯರಾಮ ಭಟ್, ಪದ್ಯಾಣ ಗಣಪತಿ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪೆರುವೋಡಿ ಶ್ಯಾಮ್ ಭಟ್, ರವಿಚಂದ್ರ ಕನ್ನಡಿಕಟ್ಟೆ , ವಿನಯ ಆಚಾರ್ಯ ಕಡಬ, ಕರುಣಾಕರ ಶೆಟ್ಟಿಗಾರ್ ಮೊದಲಾದವರ ಒಡನಾಟವು ದೊರೆತಿತ್ತು. ಇವರ ಕಲಾ ದುಡಿಮೆ ಮುಗಿದ ಮೇಲೆ ನಿದ್ರಿಸದೆ ಬೆಳಗಿನ ವರೆಗೂ ಪ್ರದರ್ಶನ ನೋಡುತ್ತಾ ಕಲಿಯುತ್ತಿದ್ದರು. ಯಾವ ಪದ್ಯಕ್ಕೆ, ಯಾವ ಸಂದರ್ಭಕ್ಕೆ ಹೇಗೆ ಚೆಂಡೆ ಬಾರಿಸಬೇಕು ಎಂದು ಆಟ ನೋಡುತ್ತಾ ಗಮನಿಸುತ್ತಿದ್ದರು. ಮರೆತು ಹೋಗದಂತೆ ಬರೆದಿಟ್ಟುಕೊಳ್ಳುವ ಅಭ್ಯಾಸವನ್ನೂ ರೂಢಿಸಿಕೊಂಡಿದ್ದರು.

ಮಂಗಳಾದೇವಿ ತಿರುಗಾಟದ ಬಳಿಕ ಎಡನೀರು ಮೇಳದಲ್ಲಿ 5 ವರ್ಷ ತಿರುಗಾಟ. ಶ್ರೀ ದಿನೇಶ ಅಮ್ಮಣ್ಣಾಯ ಮತ್ತು ಶ್ರೀ ಪದ್ಯಾಣ ಗಣಪತಿ ಭಟ್ ಭಾಗವತರಾಗಿದ್ದರು. ಇಬ್ಬರೂ ಇವರಿಗೆ ಸಹಕಾರ ಪ್ರೋತ್ಸಾಹ ನೀಡಿದ್ದರು. ಅವರ ಕಸುಬಿನ ಬಗೆಗೆ ಭಾಗವತ ಶ್ರೀ ದಿನೇಶ ಅಮ್ಮಣ್ಣಾಯರಿಗೆ ತೃಪ್ತಿಯಿತ್ತು. ಇವರಲ್ಲಿ ನೇರವಾಗಿ ಹೇಳದಿದ್ದರೂ ಮಠದ ಎಲ್ಲರಲ್ಲೂ ಹೇಳುತ್ತಿದ್ದರಂತೆ.

ಪದ್ಯಾಣ ಭಾಗವತರೂ ಇದೆ ಅಭಿಪ್ರಾಯವನ್ನು ಹೊಂದಿದ್ದರಂತೆ. ಕಳೆದ ಆರು ವರ್ಷಗಳಿಂದ ಸಸಿಹಿತ್ತಿಲು ಮೇಳದಲ್ಲಿ ಪಡ್ರೆ ಆನಂದ ಅವರು ವ್ಯವಸಾಯ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಕಣಿಯೂರು ಸೂರ್ಯನಾರಾಯಣ ಭಟ್, ಪುಣಿಂಚತ್ತಾಯರು, ದಯಾನಂದ ಕೋಡಿಕಲ್, ರವೀಂದ್ರ ಶೆಟ್ಟಿ ಹೊಸಂಗಡಿ, ಚಂದ್ರಶೇಖರ ಕಕ್ಕೆಪದವು, ಶಿವಪ್ರಸಾದ್ ಎಡಪದವು ಮೊದಲಾದವರ ಒಡನಾಟವು ಸಿಕ್ಕಿತ್ತು. 

ಮಳೆಗಾಲದಲ್ಲಿ ಶ್ರೀಧರ ಭಂಡಾರಿ ಅವರ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ ಶ್ರೀ ಆನಂದ ಪಡ್ರೆ  ಅವರು ಭಾಗವಹಿಸಿದ್ದರು. ಪುರಾಣ ಪ್ರಸಂಗಗಳ ಜ್ಞಾನ ಗಳಿಸಲು ಅನುಕೂಲವಾಗಿತ್ತು. ಭಾಗವತ ಪದ್ಯಾಣ ಗಣಪತಿ ಭಟ್ಟರಿಂದ ರಂಗನಡೆ, ಪ್ರಸಂಗ ಮೆರೆಸುವ ರೀತಿಯನ್ನು ಕಲಿಯುವಂತಾಗಿತ್ತು. ಈ ಟೂರಿನಲ್ಲಿ ವಿನಯ ಆಚಾರ್ಯ, ಸರಪಾಡಿ ಚಂದ್ರಶೇಖರ ಅವರ ಒಡನಾಟವೂ ದೊರೆತಿತ್ತು. ಖ್ಯಾತ ಮುಮ್ಮೇಳ ಕಲಾವಿದರೂ ಈ ತಂಡದ ಸದಸ್ಯರಾಗಿದ್ದರು.

ಮಂಗಳಾದೇವಿ ಆರಂಭವಾದ ವರ್ಷ ಹರಿದಾಸ ಶ್ರೀ ಮಲ್ಪೆ ರಾಮದಾಸ ಸಾಮಗರೊಂದಿಗೆ ತಿರುಗಾಟ ನಡೆಸುವ ಭಾಗ್ಯವು ದೊರೆತಿತ್ತು. ಬಳಿಕ ಕಿಶನ್ ಹೆಗ್ಡೆ ಅವರ ಕರ್ನಾಟಕ ಮೇಳದಲ್ಲಿ ಶ್ರೀ ವಾಸುದೇವ ಸಾಮಗರ ಜತೆ ವ್ಯವಸಾಯ ಮಾಡುವ ಅವಕಾಶವೂ ದೊರಕಿತ್ತು.

ಅಲ್ಲದೆ ತಿರುಗಾಟದುದ್ದಕ್ಕೂ ಕೊಕ್ಕಡ ಈಶ್ವರ ಭಟ್, ಕಾಂಚನ ಸಂಜೀವ ರೈ, ಮಿಜಾರು ಅಣ್ಣಪ್ಪ, ಅರುವ ಕೊರಗಪ್ಪ ಶೆಟ್ಟಿ, ಅರುವ ನಾರಾಯಣ ಶೆಟ್ಟಿ, ಸಿದ್ದಕಟ್ಟೆ ಚೆನ್ನಪ್ಪ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಡಿ. ಮನೋಹರ ಕುಮಾರ್, ಕೆ.ಎಚ್ ದಾಸಪ್ಪ ರೈ, ಕೊಳ್ತಿಗೆ ನಾರಾಯಣ ಗೌಡ, ವೇಣೂರು ಸುಂದರ ಆಚಾರ್ಯ, ಸರಪಾಡಿ ಅಶೋಕ ಶೆಟ್ಟಿ, ಮಿಜಾರು ತಿಮ್ಮಪ್ಪ, ಜನಾರ್ದನ ಗುಡಿಗಾರ, ಬಂಟ್ವಾಳ ಜಯರಾಮ ಆಚಾರ್ಯ, ಸೀತಾರಾಮ ಕುಮಾರ್ ಕಟೀಲು, ರಾಧಾಕೃಷ್ಣ ನಾವಡ, ಉದಯ ನಾವಡ, ಕೆದಿಲ ಜಯರಾಮ ಭಟ್, ಧರ್ಮಸ್ಥಳ ಚಂದ್ರಶೇಖರ, ಮವ್ವಾರು ಬಾಲಕೃಷ್ಣ ಮಣಿಯಾಣಿ, ಶಿವರಾಮ ಜೋಗಿ, ತುಂಬೆ ಚಂದ್ರಹಾಸ, ಅಂಬಾ ಪ್ರಸಾದ ಪಾತಾಳ, ಅಲ್ಲದೆ ಮಳೆಗಾಲದ ಟೂರಿನಲ್ಲಿ ಅನೇಖ ಉದಯೋನ್ಮುಖ ಕಲಾವಿದರ ಒಡನಾಟವು ದೊರಕಿತ್ತು. ಇದು ನನ್ನ ಭಾಗ್ಯ ಎಂಬುದು ಪಡ್ರೆ  ಶ್ರೀ ಆನಂದರ ಪ್ರಾಮಾಣಿಕ ಅನಿಸಿಕೆ.

ಪ್ರಸ್ತುತ ಇವರು ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಮದ್ದಳೆಗಾರ ಪಡ್ರೆ  ಶ್ರೀ ಆನಂದ ಅವರ ಪತ್ನಿ ಶ್ರೀಮತಿ ನಳಿನಿ ಗೃಹಣಿ. ಈ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಚಿ| ದೀಪಕ್ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ. ಪುತ್ರಿ ಕು| ದೀಪ್ತಿ 5ನೇ ತರಗತಿಯ ವಿದ್ಯಾರ್ಥಿನಿ. ಮಕ್ಕಳಿಗೆ ಶ್ರೀ ದೇವರ ಅನುಗ್ರಹದಿಂದ ಉಜ್ವಲ ಭವಿಷ್ಯವು ದೊರೆಯಲಿ. ಪಡ್ರೆ ಆನಂದ ಅವರಿಂದ ಕಲಾಮಾತೆಯ ಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕಗಳು. 

ವಿಳಾಸ: ಶ್ರೀ ಪಡ್ರೆ ಆನಂದ, ಯಕ್ಷಗಾನ ಕಲಾವಿದ, ಮೊಬೈಲ್: 9946620886, ಎಲಿಕ್ಕಳ ಮನೆ, ಆದೂರು ಅಂಚೆ, ಕಾಸರಗೋಡು ಜಿಲ್ಲೆ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments