Saturday, January 18, 2025
Homeಯಕ್ಷಗಾನಉತ್ತಮ ಕಿರೀಟ ವೇಷಧಾರಿ ಸರಪಾಡಿ ಶ್ರೀ ವಿಠಲ ಶೆಟ್ಟಿ

ಉತ್ತಮ ಕಿರೀಟ ವೇಷಧಾರಿ ಸರಪಾಡಿ ಶ್ರೀ ವಿಠಲ ಶೆಟ್ಟಿ

“ಕಲಿತು ಮೇಳಕ್ಕೆ ಬರೋದರಿಂದ ಮೇಳಕ್ಕೆ ಬಂದು ಮೇಳದಲ್ಲಿದ್ದುಕೊಂಡೇ ಕಲಿತು ಕಲಾವಿದನಾದರೆ ಒಳ್ಳೆಯದು” ಇದು ಹಿಂದಿನ ಹಿರಿಯ ಕಲಾವಿದರು ಹೇಳುತ್ತಿದ್ದ ಮಾತು. ಹಿಂದೆ ಮೇಳದ ತಿರುಗಾಟದಲ್ಲಿ ಒಂದು ಕೌಟುಂಬಿಕ ವಾತಾವರಣವು ಇರುತ್ತಿತ್ತು. ಹಿರಿಯ ಕಲಾವಿದರು ಕಿರಿಯ ಕಲಾವಿದರಿಗೆ ಪ್ರೀತಿಯಿಂದ ಹೇಳಿಕೊಡುವುದು, ಕಿರಿಯರು ಹಿರಿಯರನ್ನು ಗೌರವಿಸಿ ಅವರಿಂದ ವಿದ್ಯೆ ಕಲಿಯುವುದು, ಹೀಗೆ ಸಾಗುತ್ತಿತ್ತು ಮೇಳದ ಬದುಕು. ಪ್ರದರ್ಶನಗಳು ನಡೆಯುವ ಸ್ಥಳದಿಂದ ದಿನಾ ಮನೆಗೆ ಹೋಗಿ ಬರಲು ಅವಕಾಶಗಳೂ ಇರಲಿಲ್ಲ. ವಾಹನಗಳ ಸಂಖ್ಯೆ ತೀರಾ ಕಡಿಮೆ. ಅಲ್ಲದೆ ಈಗಿನಂತೆ ರಸ್ತೆ ಸೌಕರ್ಯಗಳೂ ಇರಲಿಲ್ಲ. ಹಾಗಾಗಿ ಮೇಳದಲ್ಲಿದ್ದುಕೊಂಡೇ ಕಲಾವಿದರು ಕಲಿತು ಬೆಳೆದು ಹೆಸರು ಗಳಿಸುತ್ತಿದ್ದರು.

ಇದು ವೇಗದ ಯುಗ. ಮೇಳದಲ್ಲಿ ಇದ್ದುಕೊಂಡೇ ಅಭ್ಯಾಸ ಮಾಡಲು ಎಲ್ಲಿದೆ ಅವಕಾಶ? ಬೇರೆ ಉದ್ಯೋಗದಲ್ಲಿದ್ದುಕೊಂಡು ಮೇಳದ ತಿರುಗಾಟ ನಡೆಸುವ ಕಲಾವಿದರಿದ್ದಾರೆ. ಸ್ವ ಉದ್ಯೋಗವನ್ನು ಮಾಡಿಕೊಂಡು ಮೇಳದಲ್ಲಿ ಕಲಾಸೇವೆಯನ್ನು ಮಾಡುವವರಿದ್ದಾರೆ. ವಿದ್ಯಾರ್ಥಿಗಳೂ ಮೇಳಕ್ಕೆ ಬಂದು ವೇಷ ಮಾಡುತ್ತಾರೆ. ಅಂತವರಿಗೆ ದಿನಾ ಮನೆಗೆ ಹೋಗುವುದು ಅನಿವಾರ್ಯ. ತಿರುಗಾಟದಲ್ಲಿದ್ದುಕೊಂಡೇ ಕಲಿತು ಬೆಳೆಯಲು ಅಂತವರಿಗೆ ಅವಕಾಶಗಳು ಸಿಗದು. ಆದರೂ ಹಿರಿಯ ಕಲಾವಿದರುಗಳೆಲ್ಲಾ ಮೇಳದಲ್ಲಿದ್ದುಕೊಂಡೇ ಅಭ್ಯಾಸ ಮಾಡುತ್ತಾ ಉತ್ತಮ ಕಲಾವಿದರಾಗಿ ರೂಪುಗೊಂಡವರು ಎಂಬುದರಲ್ಲಿ ಅನುಮಾನವಿಲ್ಲ.

ಹಂತ ಹಂತವಾಗಿ ಬೆಳೆದು ಪಕ್ವರಾಗುವುದಕ್ಕೆ ಇದರಿಂದ ಅವಕಾಶವಿದೆ. ಹೀಗೆ ಮೇಳದ ತಿರುಗಾಟವನ್ನು ನಡೆಸುತ್ತಾ ಹಂತ ಹಂತವಾಗಿ ಮೇಲೇರಿ ಹೆಸರನ್ನು ಗಳಿಸಿದ ಅನೇಕ ಹಿರಿಯ ಕಲಾಲಾವಿದರಲ್ಲಿ ಶ್ರೀ ಸರಪಾಡಿ ವಿಠಲ ಶೆಟ್ಟರೂ ಒಬ್ಬರು. ಇವರು ಕಟೀಲು ಮೇಳದ ಹಿರಿಯ ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನಾಗಿ ಸುಮಾರು 44 ವರ್ಷಗಳ ಅನುಭವಿ. ಉತ್ತಮ ಕಿರೀಟ ವೇಷಧಾರಿ. ನಾಟಕೀಯ ವೇಷಗಳನ್ನೂ ಚೆನ್ನಾಗಿ ನಿರ್ವಹಿಸಬಲ್ಲರು. 

ಕಟೀಲು ಮೇಳದ ಹಿರಿಯ ಕಲಾವಿದರಲ್ಲಿ ಒಬ್ಬರಾದ ಶ್ರೀ ವಿಠಲ ಶೆಟ್ಟರ ಹುಟ್ಟೂರು ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಸರಪಾಡಿಯ ಆರುಮುಡಿ ಎಂಬಲ್ಲಿ. 1962 ಫೆಬ್ರವರಿ 11ರಂದು ಶ್ರೀ ಬಾಬು ಶೆಟ್ಟಿ ಮತ್ತು ಶ್ರೀಮತಿ ಪೂವಕ್ಕೆ ದಂಪತಿಗಳ ಮಗನಾಗಿ ಜನನ. ವಿದ್ಯಾರ್ಜನೆ ಹತ್ತನೇ ತರಗತಿಯ ವರೆಗೆ. ಓದಿದ್ದು ಸರಪಾಡಿ ಶಾಲೆ ಮತ್ತು ಧರ್ಮಸ್ಥಳ ಹೈಸ್ಕೂಲಿನಲ್ಲಿ. ವಿಠಲ ಶೆಟ್ಟರ ಅಣ್ಣ ಶ್ರೀ ಸೀತಾರಾಮ ಶೆಟ್ಟರು ಅಧ್ಯಾಪಕರೂ, ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದರು. ವಿಠಲ ಶೆಟ್ಟಿ ಅವರು ಬಾಲಕನಾಗಿದ್ದಾಗಲೇ ಯಕ್ಷಗಾನಾಸಕ್ತರಾಗಿದ್ದರು. ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು.

ಧರ್ಮಸ್ಥಳದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿರುವಾಗ ಅನೇಕ ಪ್ರದರ್ಶನಗಳನ್ನು ನೋಡುವ ಅವಕಾಶ ಸಿಕ್ಕಿತ್ತು. ಸಹಜವಾಗಿ ಕಲಾವಿದನಾಗಬೇಕೆಂಬ ಆಸೆಯೂ ಚಿಗುರೊಡೆದಿತ್ತು. ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದಾಗ ಶ್ರೀ ನರೇಂದ್ರ ಮಾಸ್ತರರ ನಿರ್ದೇಶನದಲ್ಲಿ ಕೃಷ್ಣಾರ್ಜುನ ಕಾಳಗ ಪ್ರದರ್ಶನವು ನಡೆದಿತ್ತು. ಈ ಪ್ರದರ್ಶನದಲ್ಲಿ ವಿಠಲ ಶೆಟ್ಟಿ ಅವರು ನಾರದ ಮತ್ತು ದಾರುಕನ ಪಾತ್ರಗಳಲ್ಲಿ ಮೊತ್ತ ಮೊದಲಿಗೆ ಕಾಣಿಸಿಕೊಂಡಿದ್ದರು. ಕಲಾವಿದನಾಗಿ ಮೇಳದಲ್ಲಿ ತಿರುಗಾಟ ನಡೆಸಬೇಕೆಂಬ ಕನಸನ್ನೂ ಕಂಡಿದ್ದರು. 

ಹತ್ತನೆಯ ತರಗತಿಯ ವರೆಗಿನ ಓದು ಮುಗಿದ ಬಳಿಕ ಯಕ್ಷಗಾನ ನೃತ್ಯವನ್ನು ಕಲಿಯಲು ಶ್ರೀ ವಿಠಲ ಶೆಟ್ಟಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿದ್ದರು. ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸ. ಆಗ ನೆಡ್ಲೆ ಶ್ರೀ ನರಸಿಂಹ ಭಟ್ಟರು ಕೇಂದ್ರದಲ್ಲಿ ಹಿಮ್ಮೇಳ ಗುರುಗಳಾಗಿದ್ದರು. ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಚಂದ್ರಶೇಖರ ಹೆಗ್ಡೆ, ಅಂಬಾಪ್ರಸಾದ, ತಾರಾನಾಥ ವರ್ಕಾಡಿ, ಮವ್ವಾರು ಬಾಲಕೃಷ್ಣ ಮೊದಲಾದವರು ಸರಪಾಡಿ ವಿಠಲ ಶೆಟ್ಟರ ಸಹಪಾಠಿಗಳಾಗಿದ್ದರು.

ಕಲಿಕಾ ಕೇಂದ್ರದಲ್ಲಿ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತು ಆ ವರ್ಷ ಧರ್ಮಸ್ಥಳ ಮೇಳದಲ್ಲಿ ಬಾಲಗೋಪಾಲರಾಗಿ ತಿರುಗಾಟ ನಡೆಸಿದ್ದರು. ಮುಂದೆ ನಾಲ್ಕು ವರ್ಷಗಳ ಕಾಲ ಕಲ್ಲಾಡಿ ಶ್ರೀ ವಿಠಲ ಶೆಟ್ರ ಸಂಚಾಲಕತ್ವದ ಮೇಳದಲ್ಲಿ ತಿರುಗಾಟ. ಹಿರಿಯ ಕಲಾವಿದರುಗಳ ಒಡನಾಟವೂ ದೊರಕಿತ್ತು. ಭಾಗವತ ಶ್ರೀ ದಾಮೋದರ ಮಂಡೆಚ್ಚರ ನಿರ್ದೇಶನದಲ್ಲಿ ಬೆಳೆಯಲು ಅನುಕೂಲವಾಗಿತ್ತು. ಇವರ ಪ್ರತಿಭೆಯನ್ನು ಗುರುತಿಸಿದ ಮಂಡೆಚ್ಚರು ವೇಷಗಳನ್ನು ನೀಡಿ ಪ್ರೋತ್ಸಾಹಿಸಿದರು. ಇದು ಕಲಾವಿದನಾಗಿ ಬೆಳೆಯಲು ಅವಕಾಶವಾಗಿತ್ತು.

ಬಳಿಕ ಎರಡು ವರ್ಷಗಳ ಕಾಲ ಅರುವ ನಾರಾಯಣ ಶೆಟ್ಟರ ನಾಯಕತ್ವದ ಮೇಳದಲ್ಲಿ ಕಲಾಸೇವೆ. ಪರಕೆದ ಪಿಂಗಾರ ಪ್ರಸಂಗದಲ್ಲಿ ಸರಪಾಡಿ ವಿಠಲ ಶೆಟ್ರು ಮತ್ತು ತಾರಾನಾಥ ವರ್ಕಾಡಿ ಅವರು ಜೋಡಿ ವೇಷಗಳಲ್ಲಿ ರಂಜಿಸಿದ್ದರು. ಈ ಪ್ರಸಂಗದಲ್ಲಿ ವಿಠಲ ಶೆಟ್ರು ಚಿತ್ರ ಎಂಬ ಪಾತ್ರದಲ್ಲೂ ತಾರಾನಾಥ ಅವರು ಚಂದನ ಎಂಬ ಪಾತ್ರದಲ್ಲೂ ಅಭಿನಯಿಸಿ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರರಾದರು. ಬಳಿಕ 2 ವರ್ಷ ಶ್ರೀ ಶೇಖರ ಶೆಟ್ರ ಬಪ್ಪನಾಡು ಮೇಳದಲ್ಲೂ 1 ವರ್ಷ ಪುತ್ತೂರು ಶ್ರೀಧರ ಭಂಡಾರಿ ಅವರ ಪುತ್ತೂರು ಮೇಳದಲ್ಲೂ ಕಲಾ ಸೇವೆ ಮಾಡಿದ್ದರು.

ಪ್ರಸ್ತುತ ಸುಮಾರು 34 ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕರ್ನಾಟಕ ಮೇಳದಲ್ಲಿ ತಿರುಗಾಟ ನಡೆಸುವಾಗಲೇ ಪುರಾಣ ಪ್ರಸಂಗಗಳ ಅನುಭವವು ಇವರಿಗಾಗಿತ್ತು. ಕಟೀಲು ಮೇಳದಲ್ಲಿ ಪುರಾಣ ಪ್ರಸಂಗಗಳ ಹೆಚ್ಚಿನ ಅನುಭವವನ್ನು ಪಡೆದುಕೊಂಡರು. ಪುಂಡು ವೇಷಧಾರಿಯಾಗಿ ಕಟೀಲು ಮೇಳವನ್ನು ಪ್ರವೇಶಿಸಿದ ಇವರು ಈಗ ಉತ್ತಮ ಕಿರೀಟ ವೇಷಧಾರಿಯಾಗಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪುಂಡುವೇಷಧಾರಿಯಾಗಿ ಆ ವಿಭಾಗಕ್ಕೆ ಸಂಬಂಧಿಸಿದ ಹೆಚ್ಚಿನ ಪಾತ್ರಗಳನ್ನೂ ವಿಠಲ ಶೆಟ್ಟರು ನಿರ್ವಹಿಸಿದ್ದಾರೆ. ಅಕ್ಷಯಾಂಬರ ವಿಲಾಸದ ದುಶ್ಶಾಸನ, ಶಿವಪ್ರಭಾ ಪರಿಣಯದ ಜಯವರ್ಮ, ಕಾಯಕಲ್ಪ ಪ್ರಸಂಗದ ಮದಿರಾಕ್ಷ, ಚಂಡ ಮುಂಡರು ಇವರ ಮೆಚ್ಚಿನ ಪಾತ್ರಗಳು. ಈ ಪಾತ್ರಗಳಲ್ಲಿ ಇವರ ಅಭಿನಯವು ಪ್ರೇಕ್ಷಕರಿಂದ ಪ್ರಸಂಶೆಗೆ ಪಾತ್ರವಾಗಿತ್ತು.

ಕಿರೀಟ ವೇಷಧಾರಿಯಾಗಿ ಇವರು ಪೀಠಿಕೆ ಮತ್ತು ಎದುರು ವೇಷಗಳನ್ನು ನಿರ್ವಹಿಸಬಲ್ಲರು. ಅರ್ಜುನ, ಶತ್ರುಘ್ನ, ಬಲರಾಮ, ಜಾಂಬವ, ಮಧು ಕೈಟಭ, ರಕ್ತಬೀಜ, ಅರುಣಾಸುರ, ವಿಷಂಗ – ವಿಶುಕ್ರರು, ಸುಗ್ರೀವ, ದೇವೇಂದ್ರ ಮೊದಲಾದ ಪಾತ್ರಗಳಲ್ಲಿ ಈಗ ರಂಜಿಸುತ್ತಿದ್ದಾರೆ. ದಂಭೋದ್ಭವ, ಶನಿ, ಕಂಸ, ಸೀತಾ ಕಲ್ಯಾಣದ ರಾವಣ, ದುಶ್ಶಾಸನ ಮೊದಲಾದ ನಾಟಕೀಯ ವೇಷಗಳನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಕೆ.ಗೋವಿಂದ ಭಟ್ ಮತ್ತು ಪೆರುವಾಯಿ ನಾರಾಯಣ ಶೆಟ್ಟರು ಇವರ ಅಚ್ಚುಮೆಚ್ಚಿನ ಕಿರೀಟ ವೇಷಧಾರಿಗಳು. ಅರುವ ಕೊರಗಪ್ಪ ಶೆಟ್ಟರು ಖಳನಾಯಕ ವೇಷಗಳಲ್ಲಿ ವೈವಿಧ್ಯತೆಯನ್ನು ತೋರುವುದನ್ನು ವಿಠಲ ಶೆಟ್ಟರು ಮೆಚ್ಚಿಕೊಳ್ಳುತ್ತಾರೆ.

ಸರಪಾಡಿ ವಿಠಲ ಶೆಟ್ಟರು ಕೃಷಿ ಕಾರ್ಯಗಳಲ್ಲಿ ಆಸಕ್ತರೂ ಹೌದು. ಉತ್ತಮ ಕಲಾವಿದನಾಗಿ ಬೆಳೆದ ಇವರು ಉತ್ತಮ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದಾರೆ. ಶ್ರೀಯುತರ ಪತ್ನಿ ಶ್ರೀಮತಿ ಲೀಲಾವತಿ. (1992ರಲ್ಲಿ ವಿವಾಹ) ಸರಪಾಡಿ ವಿಠಲ ಶೆಟ್ಟಿ, ಲೀಲಾವತಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಧನಶ್ರೀ BCA ಓದಿ ಬೆಂಗಳೂರಿನಲ್ಲಿ ಉದ್ಯೋಗಸ್ಥೆಯಾಗಿದ್ದಾರೆ. ಪುತ್ರ ಧನುಷ್ ಶೆಟ್ಟಿ. ಉಪ್ಪಿನಂಗಡಿಯಲ್ಲಿ ಉದ್ಯೋಗಿ. ಕೃಷಿಕರೂ ಹೌದು. ಹಿರಿಯ ಅನುಭವೀ ಕಲಾವಿದರಾದ ಸರಪಾಡಿ ವಿಠಲ ಶೆಟ್ಟಿ ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಶ್ರೀ ದೇವರ ಅನುಗ್ರಹವು ಸದಾ ಅವರಿಗಿರಲಿ ಎಂಬ ಆಶಯಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments