Saturday, January 18, 2025
Homeಯಕ್ಷಗಾನನಗುಮೊಗದ ಸಹೃದಯಿ ಮದ್ದಳೆಗಾರ - ಕಾವೂರು ಶ್ರೀ ಸುದಾಸ ಆಚಾರ್ಯ 

ನಗುಮೊಗದ ಸಹೃದಯಿ ಮದ್ದಳೆಗಾರ – ಕಾವೂರು ಶ್ರೀ ಸುದಾಸ ಆಚಾರ್ಯ 

ಒಂದು ಕಲೆಯ ಸೊಬಗು ಮತ್ತು ಸೌಂದರ್ಯಗಳು ಹೊಳೆಹೊಳೆದು ಕಾಣಿಸಿಕೊಳ್ಳಬೇಕಾದರೆ ಪೂರಕ ವಿಚಾರಗಳು ಸರಿಯಾಗಿರಲೇಬೇಕು. ಸದಭಿರುಚಿಯ ಪ್ರೇಕ್ಷಕರೂ ಬೇಕು, ಕಲಾವಿದನು ಪ್ರತಿಭಾವಂತನಾಗಿದ್ದರೆ ಸಾಲದು. ತನ್ನ ಪ್ರತಿಭೆಯನ್ನು ಪ್ರಕಟೀಕರಿಸುವ ಕಲೆಯು ಕರಗತವಾಗಿರಬೇಕು. ವಿದ್ವತ್ತನ್ನು ಹೊರಗೆಡಹುವ ಅಭಿವ್ಯಕ್ತಿ ಸಾಮರ್ಥ್ಯವನ್ನು ಕಲಾವಿದನು ಹೊಂದಿರಲೇ ಬೇಕು.

ಯಕ್ಷಗಾನವಿರಲಿ, ಅಥವಾ ಇನ್ನಾವುದೇ ಕಲೆಯಿರಲಿ, ಅತ್ಯುತ್ತಮ ವಿಚಾರಗಳು ಮತ್ತು ಭಾವನೆಗಳಿಂದ ತುಂಬಿರುವ ಗಾನದ (ಹಾಡಿನ) ಸೌಂದರ್ಯವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯುವುದೇ ವಾದಕನ ಕರ್ತವ್ಯ. ಯಕ್ಷಗಾನ ಕಲೆಯಲ್ಲಿ ಚೆಂಡೆ- ಮದ್ದಳೆಗಳೆಂಬ ವಾದ್ಯೋಪಕರಣಗಳನ್ನು ನುಡಿಸುವವರನ್ನು ‘ಮದ್ದಳೆಗಾರ’ ಎಂದು ಕರೆಯುವುದು ರೂಢಿ. ಅದೊಂದು ಶ್ರೇಷ್ಠವಾದ ಸ್ಥಾನ.

ಭಾಗವತನಂತೆ ಪ್ರಸಂಗ ನಡೆ, ಪುರಾಣ ಪ್ರಸಂಗಗಳ ಜ್ಞಾನ, ಪ್ರದರ್ಶನವನ್ನೂ ವೇಷಧಾರಿಯನ್ನೂ ರಂಜಿಸುವ ಕಲೆ, ಮೊದಲಾದ ವಿಚಾರಗಳಲ್ಲಿ ಆತನು ಪರಿಣತನಾಗಿರಬೇಕು. ಹಾಗಿದ್ದರೆ ಮಾತ್ರ ಪ್ರದರ್ಶನವು ಕೆಡದೆ ವಿಜೃಂಭಿಸಲು ಸಾಧ್ಯ. ಭಾಗವತರ ಹಾಡಿನ ಸೌಂದರ್ಯವನ್ನು ಮದ್ದಳೆಗಾರನು ತನ್ನ ವಾದನ ಕೌಶಲದಿಂದ ಹೆಚ್ಚುವಂತೆ ಮಾಡಿ ರಸ ಸ್ಪುರಣೆಗೆ ತಾನೂ ಕಾರಣನಾಗುತ್ತಾನೆ. ಹಾಡನ್ನು ಅನುಸರಿಸುತ್ತಾ ವಾದ್ಯೋಪಕರಣಗಳನ್ನು ನುಡಿಸುವುದು ವಾದಕನ ಜಾಣ್ಮೆ.

ಯಕ್ಷಗಾನದಲ್ಲಿ ವಾದನ ಕ್ರಮವು ಹೇಗಿರಬೇಕೆಂಬುವುದನ್ನು ವಿದ್ವಾಂಸರು, ಹಿರಿಯ ವಾದಕ ಕಲಾವಿದರೂ ನಮಗೆ ತಿಳಿಸಿರುತ್ತಾರೆ. ಸರಳವಾಗಿ ಹೇಳುವುದಾದರೆ ಹಾಡನ್ನು ಮತ್ತು ಕಲಾವಿದರನ್ನು ಚೌಕಟ್ಟಿನೊಳಗೆ ಮೆರೆಸುವ ವಾದಕನಾಗಿರಬೇಕು. ಹಾಡನ್ನು ಸರಿಯಾಗಿ ಕೇಳಿಸದಂತೆ ಅದನ್ನು ಅಡಗಿಸುವ ವಾದನ ಕ್ರಮವು ಸಲ್ಲದು. ಭಾಗವತನ ಹಾಡಿಗೆ ಪೂರಕವಾಗಿ ಚೆಂಡೆ ಮದ್ದಳೆ ನುಡಿಸುತ್ತಾ ಪ್ರದರ್ಶನಗಳ ರಂಜನೆಗೆ ಕಾರಣರಾದ ಅನೇಕ ಹಿರಿಯ ಮದ್ದಳೆಗಾರರು ನಮಗೆ ಆದರ್ಶರು. ಅವರು ಹಾಕಿಕೊಟ್ಟ ದಾರಿಯೇ ನಮಗೆ ಹೆದ್ದಾರಿಯಾಗಿರಬೇಕು.

ಪ್ರಸ್ತುತ ಅನೇಕ ಉದಯೋನ್ಮುಖ ಮದ್ದಳೆಗಾರರು ಕಲಾಸೇವೆಯನ್ನು ಮಾಡುತ್ತಿರುವುದು ನಮಗೆ ಸಂತೋಷವನ್ನು ಕೊಡುವ ವಿಚಾರ. ಅಂತವರ ಸಾಲಿನಲ್ಲಿ ಶ್ರೀ ಸುದಾಸ ಆಚಾರ್ಯ ಕಾವೂರು ಅವರು ಕಾಣಿಸಿಕೊಳ್ಳುತ್ತಾರೆ. ಇವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. ವೇಷಧಾರಿಯಾಗಿ ರಂಗಪ್ರವೇಶ ಮಾಡಿದ್ದ ಇವರು ಈಗ ಮದ್ದಳೆಗಾರನಾಗಿ ವ್ಯವಸಾಯವನ್ನು ಮಾಡುತ್ತಿದ್ದಾರೆ. 

ಶ್ರೀ ಸುದಾಸ ಆಚಾರ್ಯ ಅವರು ಜನಿಸಿದ್ದು ಮಂಗಳೂರು ಸಮೀಪದ ಕಾವೂರಿನಲ್ಲಿ. ಶ್ರೀ ಕೆ.ಪಿ. ಅಪ್ಪುಣ್ಣಿ ಮತ್ತು ಶ್ರೀಮತಿ ಲಕ್ಷ್ಮಿ ದಂಪತಿಗಳ ಪುತ್ರನಾಗಿ ಜನನ. ಇವರ ಮೂಲಮನೆ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ತಿರೂರು. ಕಲಾಯಿಕುಂಡು ಪರಂಬಿಲ್ ಮನೆ. ಶ್ರೀ ಅಪ್ಪುಣ್ಣಿ ಅವರು ಅಲ್ಲಿಂದ ಮಂಗಳೂರಿಗೆ ಎಳವೆಯಲ್ಲಿ ವಲಸೆ ಬಂದವರು. ಮರದ ಕೆಲಸ ಮಾಡುವುದಕ್ಕಾಗಿ ಬಂದವರು. ಅದು ಅವರ ಕುಲಕಸುಬು.

ಸುದಾಸ ಆಚಾರ್ಯ ಅವರು ಹತ್ತನೇ ತರಗತಿ ಮತ್ತು ಡಿಪ್ಲೋಮಾ ಓದಿದ್ದರು. ಕಾವೂರು ಶಾಲೆಯಲ್ಲಿ ಎಸ್. ಎಸ್. ಎಲ್. ಸಿ ವರೆಗೆ ಮತ್ತು ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಡಿಪ್ಲೊಮಾ. ಎಳವೆಯಲ್ಲಿ ಇವರು ಯಕ್ಷಗಾನದತ್ತ ಆಕರ್ಷಿತರಾಗಿದ್ದರು. 5ನೇ ತರಗತಿಯ ವಿದ್ಯಾರ್ಥಿಯಾಗಿರುವಾಗ ಕಾವೂರು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವೆಂಕ ಶೆಟ್ಟಿಗಾರರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತಿದ್ದರು. ಅದೇ ವರ್ಷ ದಕ್ಷಯಜ್ಞ (ಗಿರಿಜಾ ಕಲ್ಯಾಣ) ಪ್ರಸಂಗದಲ್ಲಿ ದಾಕ್ಷಾಯಣಿಯಾಗಿ ರಂಗಪ್ರವೇಶ. ಬಳಿಕ ಗಿರಿಜೆ, ರೇಣುಕೆ, ಚಿತ್ರಾಂಗದೆ, ಸಖಿಯರು ವೃಷಕೇತ, ಇಂದ್ರಜಿತು ಮೊದಲಾದ ಪಾತ್ರಗಳನ್ನೂ ಮಾಡಿದ್ದರು.

5ನೇ ವರ್ಷವಿರುವಾಗಲೇ ರಜಾ ದಿನಗಳಲ್ಲಿ ತಲಕಳ ಮೇಳದಲ್ಲಿ ಬಾಲಗೋಪಾಲ ವೇಷ ಮಾಡಿದ್ದರು. 7ನೇ ತರಗತಿಯಲ್ಲಿ ಓದುತ್ತಿರುವಾಗ ಯಕ್ಷಗಾನ ಹಿಮ್ಮೇಳದತ್ತ ಆಕರ್ಷಿತರಾದರು. ಕಾವೂರು ದೇವಸ್ಥಾನದಲ್ಲಿ ಯಕ್ಷಗಾನ ಹಿಮ್ಮೇಳದ ಗುರು ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಂದ ತರಬೇತಿಯನ್ನು ಪಡೆದರು. 9ನೇ ಕ್ಲಾಸಿನ ವಿದ್ಯಾರ್ಥಿಯಾಗಿರುವಾಗ ಮೇಳದ ಪ್ರದರ್ಶನಗಳಿಗೆ ಚೆಂಡೆ ಮದ್ದಳೆ ಬಾರಿಸಲು ಅವಕಾಶವು ಸಿಕ್ಕಿತ್ತು. ಕಟೀಲು ಮೇಳದಲ್ಲಿ ಖಾಯಂ ಕಲಾವಿದರು ರಜೆ ಮಾಡಿದಾಗ ಸುದಾಸ್ ಅವರು ಹೋಗಿ ಸೇವೆ  ಮಾಡುತ್ತಿದ್ದರು. ಇವರ ಆಸಕ್ತಿ ಮತ್ತು ನುಡಿಸುವಿಕೆಯನ್ನು ನೋಡಿ ನೆಡ್ಲೆ ಶ್ರೀ ನರಸಿಂಹ ಭಟ್ಟರು ಮೆಚ್ಚಿ ಆಶೀರ್ವದಿಸಿದ್ದರು. ವಿದ್ಯಾರ್ಥಿ ಜೀವನದಲ್ಲಿ ಊರ ಪರವೂರ ಪ್ರದರ್ಶನಗಳಲ್ಲಿ, ಮೇಳಗಳಲ್ಲಿ ಕಲಾ ಸೇವೆಯನ್ನು ಮಾಡುತ್ತಾ ಅನುಭವ ಗಳಿಸಿಕೊಂಡಿದ್ದರು. ಶ್ರೀ ಗಣೇಶ್ ಕೊಲಕಾಡಿ ಅವರಿಂದ ಭಾಗವತಿಕೆ ಮತ್ತು ಛಂದಸ್ಸಿನ ಪಾಠವೂ ಆಗಿತ್ತು. 

ಕಾವೂರು ಶ್ರೀ ಸುದಾಸ ಆಚಾರ್ಯರು ಮೊದಲು ತಿರುಗಾಟ ನಡೆಸಿದ್ದು ವರ್ಕಾಡಿ ಐತಪ್ಪ ಅವರ ಪುತ್ತೂರು ಮೇಳದಲ್ಲಿ. ಅದು ಡೇರೆ ಮೇಳವಾಗಿತ್ತು. ಅಲ್ಲಿ ಶ್ರೀ ಪದ್ಮನಾಭ ಉಪಾಧ್ಯಾಯರ ಸಹಕಾರ  ದೊರೆತಿತ್ತು. ಬಳಿಕ ಶ್ರೀ ಕಿಶನ್ ಕುಮಾರ ಹೆಗ್ಡೆ  ಸಂಚಾಲಕತ್ವದ ಮಂಗಳಾದೇವಿ ಮೇಳದಲ್ಲಿ 4 ವರ್ಷ. ಈ ಸಂದರ್ಭದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರ ಸಹಕಾರ ಸಿಕ್ಕಿತ್ತು. ಬಳಿಕ 1 ವರ್ಷ ಹೊಸನಗರ ಮೇಳದಲ್ಲಿ. ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಜಯರಾಮ ಭಟ್ಟರ ಸಹಕಾರವು ದೊರಕಿತ್ತು. ಬಳಿಕ 3 ವರ್ಷ ಧರ್ಮಸ್ಥಳ ಮೇಳದಲ್ಲಿ. ಪುತ್ತಿಗೆ ಶ್ರೀ ರಘುರಾಮ ಹೊಳ್ಳ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ರಾಮಕೃಷ್ಣ ಮಯ್ಯ, ಅಡೂರು ಗಣೇಶ್ ರಾವ್ ಮೊದಲಾದವರ ಒಡನಾಟವು ದೊರೆತಿತ್ತು. 

ಮತ್ತೆ 1 ವರ್ಷ ಕಾಟಿಪಳ್ಳ ಮೇಳದಲ್ಲಿ. ಇಲ್ಲಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಮತ್ತು ಗಣೇಶ್ ರಾಮಕುಂಜರ ಒಡನಾಟ. ಬಳಿಕ ಪ್ರಧಾನ ಮದ್ದಳೆಗಾರರಾಗಿ ಸುಂಕದಕಟ್ಟೆ ಮೇಳಕ್ಕೆ ತೆರಳಿದ್ದರು. ಅಲ್ಲಿ 1 ವರ್ಷ ತಿರುಗಾಟ. ಪ್ರಸ್ತುತ 7 ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪ್ರಥಮ ವರ್ಷ ಮಿಜಾರು ಮೋಹನ ಶೆಟ್ಟಿಗಾರರ ಜೊತೆ 3ನೇ ಮೇಳದಲ್ಲಿ. ಕಳೆದ ಆರು ವರ್ಷಗಳಿಂದ 4ನೇ ಮೇಳದಲ್ಲಿ ಮದ್ದಳೆಗಾರರಾಗಿ ವ್ಯವಸಾಯ ಮಾಡುತ್ತಿದ್ದಾರೆ.

ಕಲಾ ಬದುಕಿನಲ್ಲಿ ಎಲ್ಲಾ ಹಿರಿಯ ಮತ್ತು ಕಿರಿಯ ಭಾಗವತರು ಮತ್ತು ಮದ್ದಳೆಗಾರರೊಂದಿಗೆ ಸಹಕಲಾವಿದರಾಗಿ ಶ್ರೀ ಸುದಾಸ ಆಚಾರ್ಯರು ವೇದಿಕೆಯೇರಿ ಚೆಂಡೆ ಮದ್ದಳೆ ನುಡಿಸಿದ್ದಾರೆ. ಇದು ನಿಜಕ್ಕೂ ಇವರ ಭಾಗ್ಯ. ತಮ್ಮ ಕಲಾ ಬದುಕಿನ ಇಪ್ಪತ್ತೈದನೇ ವರ್ಷವನ್ನು ವಿಶಿಷ್ಟವಾಗಿ ಆಚರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕಾವೂರಿಗೆ ಕಲಾವಲಯದಲ್ಲಿ ಹೆಸರನ್ನು ತಂದಿತ್ತ ಕಾವೂರು ಕೇಶವರ ಸಂಸ್ಮರಣಾ ಕಾರ್ಯಕ್ರಮವನ್ನು ರಜತ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನೆರವೇರಿಸಿದ್ದರು. ಆ ಸಂದರ್ಭ ಗುರು ಸಮಾನರಾದ ಅಡೂರು ಗಣೇಶ ರಾಯರಿಗೆ ಮರಣೋತ್ತರ ಪ್ರಶಸ್ತಿ ಮತ್ತು ಅವರ ಕುಟುಂಬಕ್ಕೆ ಧನ ಸಹಾಯವನ್ನೂ ನೀಡಿದ್ದರು. (ಹತ್ತು ಸಾವಿರ) ಭಾಗವತ ಶ್ರೀ ದಯಾನಂದ ಕೋಡಿಕಲ್ ಅವರನ್ನು ಸನ್ಮಾನಿಸಿದ್ದರು.

ಅನೇಕ ಸಂಘ ಸಂಸ್ಥೆಗಳು ಸುದಾಸ ಆಚಾರ್ಯರ ಕಲಾ ಸೇವೆಯನ್ನು ಗುರುತಿಸಿ ಗೌರವಿಸಿವೆ. ಇವರು ವೃತ್ತಿಜೀವನದಲ್ಲೂ ಸಾಂಸಾರಿಕ ಬದುಕಿನಲ್ಲೂ ಅತ್ಯಂತ ತೃಪ್ತರು. ಇವರ ಪತ್ನಿ ಶ್ರೀಮತಿ ರಂಜಿನಿ (ಇವರು ಬಿ.ಕಾಮ್ ಪದವೀಧರೆ.) ಗೃಹಣಿ. ಶ್ರೀ ಸುದಾಸ್, ರಂಜಿನಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕು| ಶ್ರೀಜನಿ 2ನೇ ತರಗತಿ ವಿದ್ಯಾರ್ಥಿನಿ. ಪುತ್ರ ಮಾ। ಅದ್ವೈತ್ (4 ವರ್ಷ ಪ್ರಾಯ). ಮಕ್ಕಳು ವಿದ್ಯಾವಂತರಾಗಿ ಅವರ ಭವಿಷ್ಯವು ಉಜ್ವಲವಾಗಲಿ. ಮದ್ದಳೆಗಾರ ಕಾವೂರು ಸುದಾಸ ಆಚಾರ್ಯರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments