ಮುಂಬಯಿಯಂತಹಾ ದೈತ್ಯ ನಗರಗಳಲ್ಲಿ, ಸಾಗರದಾಚೆಗಿನ ದೂರದ ದೇಶಗಳಲ್ಲಿ ಕಲಾ ಸಂಘಟನೆ ಅಷ್ಟು ಸುಲಭವಲ್ಲ. ಕಲಾವಿದರನ್ನು ಕರೆಸಿಕೊಂಡು ಪ್ರದರ್ಶನಗಳನ್ನು ಏರ್ಪಡಿಸುವುದು ಎಂದರೆ ಅದೊಂದು ಸಾಹಸವೇ ಹೌದು. ಗುರಿಯು ಸುಂದರವಾದರೂ ಆ ಗುರಿಯನ್ನು ತಲುಪಲು ಕ್ರಮಿಸಬೇಕಾಗಿರುವ ದಾರಿಯು ಅತಿ ದುರ್ಗಮವಾದುದು. ದಾರಿಯ ಬಗ್ಗೆ ಗಮನಹರಿಸದೆ ಸಾಹಸದಿಂದ ಅಡೆತಡೆಗಳನ್ನು ನಿವಾರಿಸಿ, ಕಷ್ಟನಷ್ಟಗಳನ್ನು ಗಣನೆಗೆ ತಾರದೆ ಛಲದಿಂದ ಸಾಗಿದಾಗ ಮಾತ್ರ ಗುರಿಯನ್ನು ತಲುಪಬಹುದು.
ಕಲ್ಲು, ಮಣ್ಣು ಕೊಳೆಗಳನ್ನೆಲ್ಲಾ ಕೊರೆದು ಭೂಮಿಯನ್ನು ತೋಡಿದಾಗ ಮಾತ್ರ ಅಲ್ಲವೇ ಸಿಹಿನೀರು ಸಿಗೋದು. ದೂರದ ನಗರಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಬೇಕಿದ್ದರೆ ಸಂಘಟನಾ ಕೌಶಲ್ಯವನ್ನು ಅದ್ಭುತವಾಗಿ ಹೊಂದಿರಬೇಕು. ನಾಯಕತ್ವದ ಗುಣವು ಬೇಕು. ಆ ಊರಿನ ಸಂಪೂರ್ಣ ಮಾಹಿತಿಯಿರಬೇಕು. ಯೋಚನೆ, ಯೋಜನೆಗಳೆಲ್ಲಾ ಬಲಿಷ್ಠವಾಗಿರಬೇಕು. ಸಂಘಟನಾ ಚಾತುರ್ಯವನ್ನು ಹೊಂದಿ ಸ್ವಯಂ ಪ್ರತಿಭಾವಂತನಾಗಿದ್ದರೆ ಸಾಲದು. ಶ್ರೀ ದೇವರ ಅನುಗ್ರಹವೂ ಬೇಕು.
ಪ್ರತಿಭೆಗೆ ದೇವರ ಅನುಗ್ರಹವೂ ಸೇರಿದಾಗ ಮುಟ್ಟಿದ್ದೆಲ್ಲಾ ಬಂಗಾರವಾಗುವುದು. ಇಲ್ಲವಾದರೆ ಸಂಘಟಕನು ಕೈ ಸುಟ್ಟುಕೊಳ್ಳಬೇಕಾದ ಪರಿಸ್ಥಿತಿಯು ಒದಗುವ ಸಾಧ್ಯತೆಗಳಿವೆ. ಏನೇ ಅಡೆ ತಡೆಗಳಿರಲಿ, ಕಷ್ಟ ನಷ್ಟಗಳಿರಲಿ, ನೋವು ನಲಿವುಗಳಿರಲಿ, ತಾವು ಎಲ್ಲಿದ್ದರೂ ಅತೀವವಾಗಿ ಪ್ರೀತಿಸುವ ಯಕ್ಷಗಾನವನ್ನು ಬಿಟ್ಟು ಬದುಕಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಕಲಾವಿದರನ್ನು ಕರೆಸಿ, ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿ, ಪ್ರೇಕ್ಷಕರು ಹೊಗಳಿದಾಗ ಸಂಘಟಕನಿಗೆ ಆಗುವ ಆನಂದವು ಅವರ್ಣನೀಯವಾದುದು.
ಹೀಗೆ ದೂರ ಊರುಗಳಲ್ಲಿದ್ದುಕೊಂಡು ಕಲಾ ಸಂಘಟನೆಯನ್ನು ಹುಟ್ಟುಹಾಕಿ ಕಲಾವಿದರನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸುವ ಅನೇಕ ಸಂಘಟಕರನ್ನು ನಾವು ಕಾಣಬಹುದು. ಕಲಾಮಾತೆಯ ಸೇವೆಯನ್ನು ಮಾಡುವ ಅಂತ ಶ್ರೇಷ್ಠ ಸಂಘಟಕರಲ್ಲಿ ಶ್ರೀ ಪದ್ಮನಾಭ ಕಟೀಲು ಅವರನ್ನು ನಾವು ಗುರುತಿಸಬಹುದು. ಇವರು ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗಿ. ಕೊಲ್ಲಿ ರಾಜ್ಯದಲ್ಲಿ, ಮುಂಬೈ ನಗರದಲ್ಲಿ ಯಕ್ಷಗಾನ ಕಲಾಸಂಘಟಕರಾಗಿ ಪ್ರಸಿದ್ಧರು.
ಶ್ರೇಷ್ಠ ಸಂಘಟಕ ಕಟೀಲು ಶ್ರೀ ಪದ್ಮನಾಭ ಅವರ ಹುಟ್ಟೂರು ಮಂಗಳೂರು ತಾಲೂಕು ಎಕ್ಕಾರು ಗ್ರಾಮದ ಮಚ್ಚಾರು ಪಡೀಲು ಎಂಬಲ್ಲಿ. 1975 ಜೂನ್ 1ರಂದು ಶ್ರೀ ಚಂದು ಪೂಜಾರಿ ಮತ್ತು ಶ್ರೀಮತಿ ಶ್ಯಾಮಲಾ ಪೂಜಾರಿ ದಂಪತಿಗಳ ಪುತ್ರನಾಗಿ ಜನನ. ಎಳವೆಯಲ್ಲೇ ಯಕ್ಷಗಾನಾಸಕ್ತಿ ತೀವ್ರವಾಗಿತ್ತು. ಕಟೀಲು, ಕರ್ನಾಟಕ, ಧರ್ಮಸ್ಥಳ ಮೊದಲಾದ ಮೇಳಗಳ ಪ್ರದರ್ಶನಗಳನ್ನು ನೋಡುತ್ತಾ ಕಲಾಸಕ್ತಿಯು ಬೆಳೆಯತೊಡಗಿತ್ತು.
ಇವರು ಓದಿದ್ದು ಹತ್ತನೇ ತರಗತಿ ವರೆಗೆ. ಶ್ರೀ ಕ್ಷೇತ್ರ ಕಟೀಲಿನ ಶಾಲೆಯಲ್ಲಿ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಅಧ್ಯಾಪಕರುಗಳಾದ ಪುಚ್ಛೆಕೆರೆ ಶ್ರೀ ಕೃಷ್ಣ ಭಟ್ ಮತ್ತು ಕೊರ್ಗಿ ಶ್ರೀ ವೆಂಕಟೇಶ ಉಪಾಧ್ಯಾಯರು (ವಿದ್ವಾಂಸರು ಮತ್ತು ಖ್ಯಾತ ತಾಳಮದ್ದಳೆ ಅರ್ಥಧಾರಿ) ಶ್ರೀ ಪದ್ಮನಾಭ ಅವರಿಗೆ ಯಕ್ಷಗಾನಾಸಕ್ತಿ ಹುಟ್ಟಲು ಕಾರಣರು. ಪುಚ್ಛೆಕೆರೆ ಶ್ರೀ ಕೃಷ್ಣ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತು ಶಾಲಾ ಪ್ರದರ್ಶನದಲ್ಲಿ ಭಕ್ತ ಚಂದ್ರಹಾಸ ಪ್ರಸಂಗದಲ್ಲಿ ದೂತ ಮತ್ತು ಬಬ್ರುವಾಹನ ಕಾಳಗ ಪ್ರಸಂಗದಲ್ಲಿ ವೃಷಕೇತನ ಪಾತ್ರವನ್ನು ನಿರ್ವಹಿಸಿದ್ದರು.
ಶ್ರೀ ಪದ್ಮನಾಭ ಕಟೀಲು ಅವರ ತೀರ್ಥರೂಪರು ಕೃಷಿಕರು. ಮನೆಯಲ್ಲಿ ಬಡತನವಿತ್ತು. ವಿದ್ಯಾರ್ಜನೆಯನ್ನು ನಿಲ್ಲಿಸಿ ಬದುಕಿಗಾಗಿ ಮುಂಬೈ ನಗರವನ್ನು ಸೇರಿಕೊಂಡಿದ್ದರು. ಪದ್ಮನಾಭ ಅವರು ಮುಂಬೈಗೆ ಹೋದದ್ದು ಚಿಕ್ಕಪ್ಪ ಶ್ರೀ ವಾಮಯ್ಯ ಅಮೀನ್ ಅವರೊಂದಿಗೆ. ಅಲ್ಲಿ ಬೆಸ್ಟ್ ಕಂಪೆನಿಯ ಕ್ಯಾಂಟೀನಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಜತೆಗೆ ರಾತ್ರಿ ಕನ್ನಡ ಭವನ ಕಾಲೇಜು ಸೇರಿ ಪಿಯುಸಿ ಶಿಕ್ಷಣವನ್ನು ಪೂರೈಸಿದರು.
ಮಳೆಗಾಲದಲ್ಲಿ ಮುಂಬೈ ನಗರದಲ್ಲಿ ನಡೆಯುತ್ತಿದ್ದ ಕರ್ನಾಟಕ, ಸುರತ್ಕಲ್, ಕದ್ರಿ, ಪೆರ್ಡೂರು, ಸಾಲಿಗ್ರಾಮ, ಬಚ್ಚಗಾರು, ಶಿರಸಿ ಮೇಳಗಳ ಪ್ರದರ್ಶನಗಳನ್ನು ನೋಡುತ್ತಿದ್ದರು. ಕಲಾವಿದರ ಪರಿಚಯವಾಗಲು ಇದು ಕಾರಣವಾಯಿತು. ಮುಂಬೈಯ ಯಕ್ಷಗಾನ ಸಂಘಟಕರ ಪರಿಚಯವೂ ಆಗಿತ್ತು. ಕಲಾವಿದನಾಗುವ ಬದಲು ತಾನೊಬ್ಬ ಉತ್ತಮ ಯಕ್ಷಗಾನ ಸಂಘಟಕನಾಗಬೇಕು ಎಂಬ ಬಯಕೆಯು ಶ್ರೀ ಪದ್ಮನಾಭರಿಗೆ ಹುಟ್ಟಿಕೊಂಡಿತು.
1995ರಲ್ಲಿ ವಾಲ್ಪಾಡಿ ಶ್ರೀ ಸದಾಶಿವ ಸಾಲ್ಯಾನ್ ರ ಸಾಲಿಗ್ರಾಮ ಮೇಳದ ಕಾಂಟ್ರಾಕ್ಟ್ ನ್ನು ಪಡೆದು ರತಿರೇಖಾ ಎಂಬ ಪ್ರಸಂಗವನ್ನು ಆಯೋಜಿಸಿದರು. ಇದು ಕಿಕ್ಕಿರಿದ ಜನಸಂದಣಿಯಿಂದ ಪ್ರದರ್ಶಿಸಲ್ಪಟ್ಟಿತು. ಬಳಿಕ ಮುಂಬಯಿಯ ಯಶಸ್ವೀ ಸಂಘಟಕರಾದ ಶ್ರೀ ಪ್ರಕಾಶ್ ಎಂ.ಶೆಟ್ಟರ ಸಹಾಯವೂ ದೊರಕಿತ್ತು. ಅತ್ಯುತ್ತಮ ಸಂಘಟಕರಾದ ಶ್ರೀ ಪ್ರಕಾಶ್ ಶೆಟ್ರು ಶ್ರೀ ಪದ್ಮನಾಭ ಅವರನ್ನು ಪ್ರೋತ್ಸಾಹಿಸಿ ಪ್ರದರ್ಶನಗಳನ್ನು ಏರ್ಪಡಿಸಲು ಸಹಾಯ ಮಾಡಿದ್ದರು. ಅವರ ಒಡನಾಟದಲ್ಲಿ ಉತ್ಸಾಹ, ಧೈರ್ಯವೂ ಬಂದಿತ್ತು.
ಕರ್ನಾಟಕ, ಕದ್ರಿ, ಸಾಲಿಗ್ರಾಮ ಪೆರ್ಡೂರು, ಸುರತ್ಕಲ್, ಕುಂಟಾರು, ಶಿರಸಿ, ಮಂಗಳಾದೇವಿ ಮೇಳಗಳ ಪ್ರದರ್ಶನಗಳನ್ನು ಏರ್ಪಡಿಸಿದರು. ಏಳು ಬೀಳುಗಳೊಂದಿಗೆ, ಕಷ್ಟ ನಷ್ಟಗಳೊಂದಿಗೆ, ಸುಮಾರು 150ಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಆಯೋಜಿಸಿದ ಕೀರ್ತಿ ಶ್ರೀ ಪದ್ಮನಾಭರದ್ದು. ಶ್ರೀ ಪದ್ಮನಾಭ ಕಟೀಲು ಅವರು ಕಟೀಲು ಅಮ್ಮನವರ ಭಕ್ತ. ದೇವಳದ ಅಭಿವೃದ್ಧಿಗೆ ಕಾರಣರಾಗಿದ್ದ ಕೀರ್ತಿಶೇಷ ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ಮುಂಬೈ ಎಂಬ ಸಂಸ್ಥೆಯನ್ನು 2002ರಲ್ಲಿ ಹುಟ್ಟುಹಾಕಿದ್ದರು. ಎಕ್ಕಾರು ಶ್ರೀ ಹರಿದಾಸ ಉಡುಪರ ಮುಖಾಂತರ ಈ ಸಂಸ್ಥೆಯ ರಚನೆಯಾಗಿತ್ತು, ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರ ಸಂಪೂರ್ಣ ಆಶೀರ್ವಾದವೂ ದೊರೆತಿತ್ತು.
ಈ ಸಂಸ್ಥೆಯ ಮೊದಲ ಕಾರ್ಯಕ್ರಮ ಮುಂಬೈಯ ಖ್ಯಾತ ಉದ್ಯಮಿ ಐಕಳ ಶ್ರೀ ಹರೀಶ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ಪ್ರತಿವರ್ಷವೂ ಉಪಸ್ಥಿತರಿರುತ್ತಾರೆ. ಪ್ರತಿ ವರ್ಷವೂ ಶ್ರೀ ಕ್ಷೇತ್ರ ಕಟೀಲಿನ ಆಸ್ರಣ್ಣ ಬಂಧುಗಳು ಈ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರುತ್ತಾರೆ. 2017ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ವೀರೇಂದ್ರ ಹೆಗಡೆ ಅವರು ಭಾಗವಹಿಸಿ ಆಶೀರ್ವದಿಸಿದ್ದರು. ಪೇಜಾವರ, ಅದಮಾರು ಶ್ರೀಗಳೂ ಚಿತ್ತೈಸಿ ಆಶೀರ್ವದಿಸಿದ್ದರು.
ಮುಂಬೈಯ ಪ್ರತಿಷ್ಠಿತ ಉದ್ಯಮಿಗಳ ಉಪಸ್ಥಿತಿಯಲ್ಲಿ ಪ್ರತಿ ವರ್ಷವೂ ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿಯ ಅಡಿಯಲ್ಲಿ ಯಕ್ಷಗಾನ ಪ್ರದರ್ಶನ, ಕಲಾವಿದರಿಗೆ ಮತ್ತು ನೇಪಥ್ಯ ಕಲಾವಿದರಿಗೆ ಸನ್ಮಾನಗಳು ನಡೆಯುತ್ತವೆ. ತೆಂಕು ಬಡಗಿನ ಖ್ಯಾತ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಸಂಸ್ಥೆಯಡಿ ಶ್ರೀ ಪದ್ಮನಾಭ ಕಟೀಲು 220ಕ್ಕೂ ಮಿಕ್ಕಿದ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದ್ದಾರೆ. ಅಪಾರ ಸಂಖ್ಯೆಯ ಪ್ರೇಕ್ಷಕರು ಈ ಅದ್ದೂರಿಯ ಪ್ರದರ್ಶನವನ್ನು ನೋಡಿ ಆನಂದಿಸುತ್ತಾರೆ. ಶ್ರೀ ಕ್ಷೇತ್ರ ಕಟೀಲಿನ ಭಕ್ತರೂ, ಮುಂಬೈ ಕಲಾಭಿಮಾನಿಗಳೂ ವಿಶೇಷ ಭಕ್ತಿ ಉತ್ಸಾಹಗಳಿಂದ ನೋಡಿ ಆನಂದಿಸುವ ಪ್ರದರ್ಶನವಿದು.
ಇದನ್ನು ಯಶಸ್ವಿಯಾಗಿ ನಡೆಸುವಲ್ಲಿ ಶ್ರೀ ಪದ್ಮನಾಭ ಅವರಿಗೆ ಮುಂಬಯಿ ನಗರದ ಉದ್ಯಮಿಗಳ ಮತ್ತು ಶ್ರೀ ಕ್ಷೇತ್ರ ಕಟೀಲಿನ ಭಕ್ತರ, ಕಲಾಭಿಮಾನಿಗಳ ಪ್ರೋತ್ಸಾಹ ಸಹಕಾರಗಳೂ ದೊರೆತಿದೆ. 2005ರಿಂದ ತೊಡಗಿ ಶ್ರೀ ಪದ್ಮನಾಭ ಅವರು ಕಟೀಲು ಮೇಳದ ಬಯಲಾಟವನ್ನು ಹರಕೆಯ ರೂಪದಲ್ಲಿ ಆಡಿಸುತ್ತಿದ್ದಾರೆ. ಪ್ರತೀ ವರ್ಷವೂ ಕಲಾವಿದರನ್ನು ಸನ್ಮಾನಿಸಿ ಗೌರವಿಸುತ್ತಾರೆ. ಕಳೆದ 9 ವರ್ಷಗಳಿಂದ ಶ್ರೀ ಧರ್ಮಸ್ಥಳ ಮೇಳದ ಬಯಲಾಟವನ್ನೂ ನಡೆಸಿ ಕಲಾವಿದರನ್ನು ಗೌರವಿಸುತ್ತಾ ಬಂದಿರುತ್ತಾರೆ.
2010ರಲ್ಲಿ ಶ್ರೀ ಪದ್ಮನಾಭ ಕಟೀಲು ಅವರು ಉದ್ಯೋಗ ನಿಮಿತ್ತ ದುಬಾಯಿಗೆ ತೆರಳಿದ್ದರು. ಅಲ್ಲಿನ ಊರ ಕಲಾಭಿಮಾನಿಗಳು ಮತ್ತು ಖ್ಯಾತ ಉದ್ಯಮಿಗಳ ಸಂಪರ್ಕ, ಒಡನಾಟವು ದೊರೆತಿತ್ತು. ಅವರ ಸಹಕಾರ, ಪ್ರೋತ್ಸಾಹದಿಂದ ಕೀರ್ತಿಶೇಷ ಶ್ರೀ ಗೋಪಾಲಕೃಷ್ಣ ಸಂಸ್ಮರಣಾ ಸಮಿತಿಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಅವಕಾಶವಾಗಿತ್ತು. ಆರಂಭದಿಂದ ಇಲ್ಲಿಯ ವರೆಗೂ ಶ್ರೀ ಪದ್ಮನಾಭ ಕಟೀಲು ಅವರು ಸದ್ರಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳೆದ ಹನ್ನೆರಡು ವರ್ಷಗಳಿಂದ ಕಟೀಲು ಜಾತ್ರೋತ್ಸವದ ಸಂದರ್ಭದಲ್ಲಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಪ್ರದರ್ಶನದ ಪ್ರಾಯೋಜಕತ್ವವನ್ನು ವಹಿಸುತ್ತಿದ್ದಾರೆ. ಈ ಎಲ್ಲಾ ಕಲಾ ಚಟುವಟಿಕೆಗಳಿಗೂ ಶ್ರೀ ಕ್ಷೇತ್ರ ಕಟೀಲಿನ ಆಸ್ರಣ್ಣ ಬಂಧುಗಳ ಆಶೀರ್ವಾದ, ಸಹಕಾರ ಶ್ರೀ ಪದ್ಮನಾಭ ಅವರಿಗಿದೆ. ಇವರು ಕೃಷಿಯಲ್ಲಿಯೂ ಆಸಕ್ತರು. ಶ್ರೀ ಪದ್ಮನಾಭ ಕಟೀಲು ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಅವರ ನೇತೃತ್ವದಲ್ಲಿ ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯಲಿ. ಶ್ರೀ ದೇವರು ಅವರ ಮನೋಕಾಮನೆಗಳನ್ನೆಲ್ಲಾ ಅನುಗ್ರಹಿಸಲಿ. ಅವರಿಗೆ ಸಕಲ ಸೌಭಾಗ್ಯಗಳೂ ವೃದ್ಧಿಸಲಿ ಎಂಬ ಹಾರೈಕೆಗಳು.
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions