Saturday, January 18, 2025
Homeಯಕ್ಷಗಾನವಿದೇಶದಲ್ಲಿದ್ದುಕೊಂಡು ಕಲಾಸೇವೆ - ಕಲಾವಿದ, ಸಂಘಟಕ ರಫೀಕುದ್ದೀನ್ ಮಡಂತ್ಯಾರ್ 

ವಿದೇಶದಲ್ಲಿದ್ದುಕೊಂಡು ಕಲಾಸೇವೆ – ಕಲಾವಿದ, ಸಂಘಟಕ ರಫೀಕುದ್ದೀನ್ ಮಡಂತ್ಯಾರ್ 

ಉದ್ಯೋಗ ನಿಮಿತ್ತ ದೂರ ಸಾಗರದಾಚೆ ತೆರಳಿದರೂ ಕೂಡಾ ಕಲಾವಿದರಾಗಿ, ಸಂಘಟಕರಾಗಿ, ಪೋಷಕರಾಗಿ ಪ್ರೇಕ್ಷಕರಾಗಿ ಯಕ್ಷಗಾನ ಕಲೆಯೊಂದಿಗೇ ಬದುಕುವುದನ್ನು ನಾವು ಕಾಣಬಹುದು. ಕಲಾಮಾತೆಯ ಸೇವೆಯನ್ನು ಮಾಡುವ ಅವಕಾಶ ಸಿಕ್ಕಿತೆಂಬ ಧನ್ಯತೆ ಅವರಿಗಿದೆ. ಹೀಗೆ ಹೊರದೇಶದಲ್ಲಿದ್ದುಕೊಂಡು ಇಂದು ಅನೇಕ ಮಂದಿಗಳು ಕಲಾಸೇವೆಯನ್ನು ಮಾಡುತ್ತಿದ್ದಾರೆ. ಅಂತಹಾ ಮಹನೀಯರಲ್ಲಿ ಶ್ರೀ ರಫೀಕುದ್ದೀನ್ ಮಡಂತ್ಯಾರ್ ಅವರೂ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಇವರು ವಿದ್ಯಾವಂತರೂ ಗುಣಾಢ್ಯರೂ ಹೌದು. ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನಾಗಿ, ಸಂಘಟಕನಾಗಿ, ಉತ್ತಮ ಪ್ರೇಕ್ಷಕನಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಶ್ರೀ ರಫೀಕುದ್ದೀನ್ ಅವರು ಹಿಮ್ಮೇಳ ಮತ್ತು ಮುಮ್ಮೇಳಗಳೆರಡನ್ನೂ ಬಲ್ಲ ಕಲಾವಿದರು. ಪ್ರಸ್ತುತ ಕುವೈತ್ ದೇಶದಲ್ಲಿ ಉದ್ಯೋಗಿಯಾಗಿದ್ದುಕೊಂಡು ಕಲಾಸೇವೆಯನ್ನು ಮಾಡುತ್ತಿದ್ದಾರೆ. 

ಶ್ರೀ ರಫೀಕುದ್ದೀನ್ ಅವರ ಹುಟ್ಟೂರು ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ಮಡಂತ್ಯಾರು. 1972ನೇ ಇಸವಿ ಜುಲೈ 7ರಂದು ಶ್ರೀ ಅಬ್ದುಲ್ ಶುಕೂರ್ ಶ್ರೀಮತಿ ಸಾರಂಬಿ ದಂಪತಿಗಳ ಪುತ್ರನಾಗಿ ಜನನ. ಈ ದಂಪತಿಗಳಿಗೆ ಮೂರು ಮಂದಿ ಮಕ್ಕಳು. (2 ಹೆಣ್ಣು ಮತ್ತು ಒಂದು ಗಂಡು). ಶ್ರೀ ಅಬ್ದುಲ್ ಶುಕೂರ್ ಅವರು ಆ ಕಾಲದಲ್ಲಿ ಜಮೀನುದಾರರಾಗಿ, ಉತ್ತಮ ಕೃಷಿಕರಾಗಿ ಖ್ಯಾತರಾಗಿದ್ದರು. ತುಳುನಾಡ ಸಂಸ್ಕೃತಿಯನ್ನು ಪ್ರೀತಿಸುತ್ತಾ ಬದುಕಿದ್ದ ಅವರು ಕಲಾಸಕ್ತರೂ ಆಗಿದ್ದರು.

ಸ್ವಯಂ ಪ್ರೇಕ್ಷಕರಾಗಿ ಆಟ, ಕೂಟ, ಕೋಲ ಕಂಬಳಗಳನ್ನು ಕಣ್ತುಂಬಿಸಿಕೊಂಡು ಬೆಳೆದವರು. ಎಳವೆಯಲ್ಲಿ ತೀರ್ಥರೂಪರೊಂದಿಗೆ ರಫೀಕುದ್ದೀನ್ ಅವರು ಈ ಎಲ್ಲಾ ಧಾರ್ಮಿಕ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ಶ್ರೀ ರಫೀಕುದ್ದೀನ್ ಅವರು ಓದಿದ್ದು ಬಿಕಾಂ ವರೆಗೆ. ಬಳಿಕ ಒಂದು ವರ್ಷ ಟೆಲಿಕಮ್ಯುನಿಕೇಷನ್ ನಲ್ಲಿ ಕಂಪ್ಯೂಟರ್ ವಿದ್ಯೆಯನ್ನೂ ಕಲಿತಿದ್ದರು.

1ರಿಂದ 7ನೇ ತರಗತಿ ವರೆಗೆ ಮಡಂತ್ಯಾರಿನ ಗಾರ್ಡಿಯನ್ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಜನೆ. ಬಳಿಕ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ. ಶಾಲಾ ಬಾಲಕನಾಗಿದ್ದಾಗಲೇ ಇವರಿಗೆ ಯಕ್ಷಗಾನದಲ್ಲಿ ಆಸಕ್ತಿ ಇತ್ತು. ಪ್ರದರ್ಶನಗಳನ್ನು ನೋಡುತ್ತಿದ್ದರು. ಅಂತಿಮ ಪದವಿ ಓದುತ್ತಿರುವಾಗ ಕಾಲೇಜಿನ ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶಿಸುವುದೆಂಬ ನಿರ್ಣಯವನ್ನು ಸೇಕ್ರೆಡ್ ಕಾಲೇಜಿನ ಆಡಳಿತ ಮಂಡಳಿಯು ಕೈಗೊಂಡಿತ್ತು. ಮಕ್ಕಳಿಗೆ ನಾಟ್ಯ ತರಬೇತಿಯನ್ನು ನೀಡಲು ಪ್ರಸಿದ್ಧ ಕಲಾವಿದ ಶ್ರೀ ಜನಾರ್ದನ ಗುಡಿಗಾರರನ್ನು ಕರೆಸಿಕೊಳ್ಳಲಾಗಿತ್ತು.

ರಫೀಕುದ್ದೀನ್ ಅವರು ಶ್ರೀ ಜನಾರ್ದನ ಗುಡಿಗಾರರಿಂದ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತರು. ಆಗ ಗುಡಿಗಾರರೊಂದಿಗೆ ಹೆಸರಾಂತ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯ ಮತ್ತು ಪೆರ್ಲ ಜಗನ್ನಾಥ ಶೆಟ್ಟರೂ ಬಂದು ಮಕ್ಕಳಿಗೆ ಹೇಳಿಕೊಡುತ್ತಿದ್ದರಂತೆ. ವಿದ್ಯಾರ್ಥಿಗಳು ಕುಣಿಯುವಾಗ ಶ್ರೀ ಜಯರಾಮ ಆಚಾರ್ಯರು ಚೆಂಡೆ ಮದ್ದಳೆಗಳನ್ನು ನುಡಿಸುತ್ತಿದ್ದರಂತೆ. ಮದ್ದಳೆಗಾರರಾದ ಶ್ರೀ ಚಂದ್ರಶೇಖರ ದೇವಾಡಿಗರು ಚೆಂಡೆ ಬಾರಿಸಲು ಬರುತ್ತಿದ್ದರು. ಇವರು ಶ್ರೀ ಗೋಪಾಲಕೃಷ್ಣ ಕುರುಪ್ ಅವರ ಶಿಷ್ಯ. ಒಳ್ಳೆಯ ಮದ್ದಳೆಗಾರರಾಗಿ ಶ್ರೀ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದವರು. 1993-94ರಲ್ಲಿ ಕಾಲೇಜಿನ ವಾರ್ಷಿಕೋತ್ಸವದ ಯಕ್ಷಗಾನ ಪ್ರದರ್ಶನ. ಪ್ರಸಂಗ ದೇವಿ ಮಹಾತ್ಮ್ಯೆ . ವಿದ್ಯುನ್ಮಾಲಿಯನ್ನು ಸಂಹರಿಸುವ ಯಕ್ಷನಾಗಿ ರಫೀಕುದ್ದೀನ್ ಅವರು ರಂಗಪ್ರವೇಶ ಮಾಡಿದ್ದರು. ಅಂದು ಶ್ರೀದೇವಿಯಾಗಿ ಖ್ಯಾತ ಕಲಾವಿದ ಶ್ರೀ ಅರುವ ಕೊರಗಪ್ಪ ಶೆಟ್ಟರ ಪುತ್ರಿ ಕು| ವತ್ಸಲಾ ಅವರು ಅಭಿನಯಿಸಿದ್ದರು. 

ಶ್ರೀ ರಫೀಕುದ್ದೀನ್ ಮಡಂತ್ಯಾರು ಅವರಿಗೆ ಯಕ್ಷಗಾನ ಹಿಮ್ಮೇಳದ ಮೇಲೂ ಆಸಕ್ತಿಯುಂಟಾಗಿತ್ತು. ಶ್ರೀ ಚಂದ್ರಶೇಖರ ದೇವಾಡಿಗರಿಂದ ಕಲಿತು  ಕಾಲೇಜಿನ ಮುಂದಿನ ಪ್ರದರ್ಶನಗಳಲ್ಲಿ  ಭಾಗವಹಿಸಿದ್ದರು. ಕನ್ನಡಿಕಟ್ಟೆ ಪಡಂಗಡಿ ಶಾಲೆಯ, ಊರ, ಪರವೂರ ಪ್ರದರ್ಶನಗಳಲ್ಲಿ ಹಿಮ್ಮೇಳ ಕಲಾವಿದನಾಗಿ ಭಾಗವಹಿಸುವ ಅವಕಾಶವೂ ಸಿಕ್ಕಿತ್ತು.  ಸಂದರ್ಭ 1 ವರ್ಷ ಡಿಸಿಸಿ ಬ್ಯಾಂಕಿನಲ್ಲಿ  ಮಾಡಿದ್ದರು. ಪೂಂಜಾಲಕಟ್ಟೆ, ಬಳ್ಳಮಂಜ, ಶ್ರೀ ಮಧುಕರ ಮಲ್ಯರು ಆಯೋಜಿಸುತ್ತಿದ್ದ ಗುರುವಾಯನಕೆರೆಯ ವಾರದ ಕೂಟಗಳಲ್ಲೂ ಭಾಗವಹಿಸುತ್ತಿದ್ದರು. ಹಿಮ್ಮೇಳ, ಮುಮ್ಮೇಳಗಳ ಕಲಾವಿದನಾಗಿ ಕಲಾಸೇವೆ ಮಾಡುವ ಅವಕಾಶವಾಗಿತ್ತು.

ಬಳಿಕ ಮಂಗಳೂರಿನ ಇಲೆಕ್ಟ್ರಾನಿಕ್ಸ್ ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ಈ ಸಂದರ್ಭ ತೊಕ್ಕೊಟ್ಟಿನ ಕಲಾಸಂಸ್ಥೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವಾಗಿತ್ತು. ಇಲ್ಲಿ ಕದ್ರಿ ಕಂಬಳಗುತ್ತು ಶ್ರೀ ನವನೀತ ಶೆಟ್ಟಿ, ಶರತ್ ಕುಮಾರ್ ಕದ್ರಿ, ಕೋಟೆಕಾರು ಹರಿಶ್ಚಂದ್ರ ನಾಯ್ಗ, ದಿನಕರ ಪಚ್ಚನಾಡಿ, ದಯಾನಂದ ಪಾವೂರು ಮೊದಲಾದವರ ಒಡನಾಟವು ದೊರಕಿತ್ತು. ಇದರಿಂದಾಗಿ ಹವ್ಯಾಸಿ ಬಳಗ ಕದ್ರಿ, ರಥಬೀದಿ, ವಾಗೀಶ್ವರಿ ಕಲಾ ಸಂಸ್ಥೆಗಳ ಪ್ರದರ್ಶನಗಳಲ್ಲಿ ಹಿಮ್ಮೇಳ ಕಲಾವಿದನಾಗಿ ಕಾಣಿಸಿಕೊಂಡಿದ್ದರು. ಇವರುಗಳ ಪ್ರೋತ್ಸಾಹವನ್ನು ಶ್ರೀ ರಫೀಕುದ್ದೀನರು ಈಗಲೂ ನೆನಪಿಸುತ್ತಾರೆ.

ಹರೇಕಳದ ಯಕ್ಷಗಾನ ಪ್ರದರ್ಶನವೊಂದಕ್ಕೆ ಅನಿವಾರ್ಯ ಕಾರಣಗಳಿಂದ ಕಲಾವಿದರೊಬ್ಬರು ಬಾರದಿದ್ದಾಗ ಬೆಳಗಿನ ವರೆಗೂ ಚೆಂಡೆ ಮದ್ದಳೆ ನುಡಿಸಿದ್ದು ರಫೀಕ್ ಅವರಿಗೊಂದು ಮರೆಯಲಾಗದ ಘಟನೆಯಾಗಿ ಉಳಿದಿದೆ. ಮುಂದಿನ ವರ್ಷ ಮಂಗಳೂರಿನಿಂದ ಮಡಂತ್ಯಾರು ಮನೆಗೆ ಮರಳಿದ ಇವರು ಊರ ಪರವೂರ ಪ್ರದರ್ಶನಗಳು ಅಲ್ಲದೆ ಕನ್ನಡಿಕಟ್ಟೆ ಪಡಂಗಡಿ ಶಾಲೆಯ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರಸ್ತುತ ತೆಂಕಿನ ಯುವ ಭಾಗವತರಾದ ಹನುಮಗಿರಿ ಮೇಳದ ರವಿಚಂದ್ರ ಕನ್ನಡಿಕಟ್ಟೆ ಅವರು ಶಾಲಾ ವಿದ್ಯಾರ್ಥಿಯಾಗಿ ವೇಷ ಮಾಡುತ್ತಿದ್ದರು. 

ಶ್ರೀ ರಫೀಕುದ್ದೀನ್ ಮಡಂತ್ಯಾರು ಅವರಿಗೆ 2003ರಲ್ಲಿ ಉದ್ಯೋಗ ನಿಮಿತ್ತವಾಗಿ ಕುವೈತ್ ದೇಶಕ್ಕೆ ಹೋಗುವ ಅವಕಾಶ ಬಂದಿತ್ತು. ದೂರ ಸಾಗರದಾಚೆ ತೆರಳಿದರೂ ಇವರು ತನ್ನ ಅಚ್ಚುಮೆಚ್ಚಿನ ಕಲೆಯಾದ ಯಕ್ಷಗಾನವನ್ನು ಬಿಟ್ಟು ಬದುಕಿದವರಲ್ಲ. ಅಲ್ಲಿ 1990ರಲ್ಲಿ ಸ್ಥಾಪಿಸಲ್ಪಟ್ಟ ‘ತುಳುಕೂಟ ಕುವೈತ್’ ಎಂಬ ಸಂಸ್ಥೆ ಯಕ್ಷಗಾನ ಮತ್ತು ನಾಟಕ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಅಲ್ಲದೆ ಕುವೈತ್ ನ ಬಂಟರ ಸಂಘ, ಬಿಲ್ಲವರ ಸಂಘ, ಕನ್ನಡ ಸಂಘ, ಭಾರತೀಯ ಪರಿಷತ್ ಎಂಬ ಸಂಘಟನೆಗಳೂ ಕಲಾ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದರು. ಹಿಮ್ಮೇಳ, ಮುಮ್ಮೇಳ ಕಲಾವಿದನಾಗಿ ನೇಪಥ್ಯ ಮತ್ತು ಬಣ್ಣಗಾರಿಕೆಯ ನಿರ್ದೇಶಕನಾಗಿ ಇವರಿಗೆ ಈ ಸಂಸ್ಥೆಗಳಲ್ಲಿ ಭಾಗವಹಿಸಲು ಅವಕಾಶವಾಗಿತ್ತು.

2017ರಲ್ಲಿ ಬಂಟರ ಸಂಘವು ಬಡಗಿನ ಪ್ರದರ್ಶನವೊಂದನ್ನು ಏರ್ಪಡಿಸಿತ್ತು. ಖ್ಯಾತ ಭಾಗವತ ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು ಅವರ ತಂಡ. ಶಿವಾನಂದ ಕೋಟ, ರಾಘವೇಂದ್ರ ಹೆಗಡೆ ಯಲ್ಲಾಪುರ,ತೀರ್ಥಳ್ಳಿ ಗೋಪಾಲಾಚಾರ್ಯ, ಅಶೋಕ್ ಭಟ್ ಸಿದ್ಧಾಪುರ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ಶ್ರೀಧರ ಭಟ್ ಕಾಸರಕೋಡು, ಮೊದಲಾದ ಕಲಾವಿದರಿದ್ದ ತಂಡ. ಪ್ರಸಂಗ ಪಾಂಚಜನ್ಯ. ರಫೀಕುದ್ದೀನ್ ಅವರು ಪಂಚಜನ ಪಾತ್ರದಲ್ಲಿ ಅಭಿನಯಿಸಿದ್ದರು. ಬಡಗಿನ ಮೇರು ಕಲಾವಿದರೆಲ್ಲಾ ಇವರಿಗೆ ಅತ್ಯಂತ ಸಹಕರಿಸಿ ಪಾತ್ರವು ರಂಜಿಸುವಂತೆ ಮಾಡಿದ್ದರು. 2015ರಲ್ಲಿ ಶ್ರೀ ಸುಜಯಿಂದ್ರ ಹಂದೆ ಮತ್ತು ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ಅವರ ತಂಡ, ತುಳುಕೂಟದ ವತಿಯಿಂದ  ‘ಯಕ್ಷ ರೂಪಕ’ದಲ್ಲಿ ಘೋರ ಶೂರ್ಪನಖಿಯಾಗಿ ಅಭಿನಯಿಸಿದ್ದರು, ಪ್ರಸ್ತುತ ಶ್ರೀ ರಫೀಕುದ್ದೀನ್ ಅವರು ಶ್ರೀ ಪ್ರಸಾದ್ ಚೇರ್ಕಾಡಿ ಅವರಿಂದ ಯಕ್ಷಗಾನ ಭಾಗವತಿಕೆಯನ್ನು ಕಲಿಯುತ್ತಿದ್ದಾರೆ. (2020ರಿಂದ). 

ಶ್ರೀ ರಫೀಕುದ್ದೀನ್ ಮಡಂತ್ಯಾರು ಅವರು ಸಂಘಟಕರಾಗಿಯೂ ಕಾಣಿಸಿಕೊಂಡವರು. ಶ್ರೀ ಸುರೇಶ ರಾವ್ ನೇರಂಬಳ್ಳಿ (ಆರ್ಯಭಟ ಪ್ರಶಸ್ತಿ ವಿಜೇತ) ಮತ್ತು ಬಾಲಕೃಷ್ಣ ಪೂಜಾರಿ ಮುಡಿಪು ಇವರ ಜತೆಸೇರಿ 2021 ಸೆಪ್ಟೆಂಬರ್ ನಲ್ಲಿ ‘ಯಕ್ಷಮಿತ್ರರು ಕುವೈತ್” ಎಂಬ ಕಲಾ ಸಂಸ್ಥೆಯನ್ನು ಆರಂಭಿಸಿರುತ್ತಾರೆ. ಸ್ಥಳೀಯ ಕಲಾವಿದರಿಗೆ ತರಬೇತಿಯನ್ನು ನೀಡಿ ಪ್ರದರ್ಶನಗಳನ್ನು ಏರ್ಪಡಿಸುವ ಉದ್ದೇಶದಿಂದ ಚಿಗುರೊಡೆದ ಈ ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ ಎಂದು ನಾವೆಲ್ಲರೂ ಹಾರೈಸೋಣ. ಈ ಸಂಸ್ಥೆಯು ಭಾರತೀಯ ಪರಿಷತ್ತಿನ ಪ್ರಾಯೋಜಕತ್ವದಲ್ಲಿ ಕೃಷ್ಣಾರ್ಜುನ ಕಾಳಗ ತಾಳಮದ್ದಳೆ ಏರ್ಪಡಿಸಿತ್ತು. ಈ ತಾಳಮದ್ದಳೆಯಲ್ಲಿ ಭಾಗವತಿಕೆಯನ್ನು ರಫೀಕ್ ಅವರೇ ಮಾಡಿದ್ದರು.

ಊರಿಗೆ ಬಂದಾಗ ಪ್ರದರ್ಶನಗಳಲ್ಲಿ ಶ್ರೀ ರಫೀಕ್ ಅವರು ಆಸಕ್ತಿಯಿಂದ ಭಾಗವಹಿಸುತ್ತಾರೆ. ಈ ಬಾರಿ ಯಕ್ಷಸಂಗಮ ಮೂಡಬಿದಿರೆ ಅವರು ಏರ್ಪಡಿಸಿದ ತಾಳಮದ್ದಳೆಯಲ್ಲಿ ಮದ್ದಳೆ ನುಡಿಸುವುದನ್ನು ನಾವೆಲ್ಲರೂ ಕಂಡಿದ್ದೇವೆ. ಸಂಘಟಕ ಶ್ರೀ ಶಾಂತಾರಾಮ ಕುಡ್ವ ಅವರು ಇವರ ಬಗೆಗೆ ಲೇಖನವೊಂದನ್ನು 2019ರಲ್ಲಿ ಬರೆದಿದ್ದರು. ಇದು ತುಳುಕೂಟ ಕುವೈತ್ ಅವರ ವಾರ್ಷಿಕ ಪತ್ರಿಕೆಯಲ್ಲೂ ಪ್ರಕಟವಾಗಿತ್ತು.

ಶ್ರೀ ರಫೀಕುದ್ದೀನರ ಪತ್ನಿ ಶ್ರೀಮತಿ ಶಬನಮ್ (2004ರಲ್ಲಿ ವಿವಾಹ). ಶ್ರೀಮತಿ ಶಬನಮ್ ಅವರು ಸಂತುಷ್ಟ ಗೃಹಣಿ. ಶ್ರೀ ರಫೀಕುದ್ದೀನ್, ಶಬನಮ್ ದಂಪತಿಗಳಿಗೆ ಒಬ್ಬ ಪುತ್ರ. ಮಾ| ಸಾದ್. ಮೈಸೂರಿನಲ್ಲಿ ಪೇಜಾವರ ಮಠದಿಂದ ನಡೆಸಲ್ಪಡುವ ಶ್ರೀ ವಿಜಯ ವಿಠಲ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ. ಇವರೂ ಕಲಾಸಕ್ತರು. ಇಸ್ಕಾನ್ ನವರು ನಡೆಸಿದ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಮೆಚ್ಚಿದ ಮಠಾಧಿಪತಿಗಳು ಇವರಿಗೆ ಪ್ರಸಾದವನ್ನು ನೀಡಿ ಆಶೀರ್ವದಿಸಿರುತ್ತಾರೆ.

ಕಲಾ ಸೇವೆಯನ್ನು ಮಾಡುವಲ್ಲಿ ಶ್ರೀ ರಫೀಕುದ್ದೀನ್  ಅವರಿಗೆ ಮನೆಯವರ, ಕುಟುಂಬದವರ ಪರಿಪೂರ್ಣ ಸಹಕಾರವೂ ಪ್ರೋತ್ಸಾಹವೂ ದೊರೆತಿದೆ. ಇವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯ ಅನುಗ್ರಹವು ಶ್ರೀ ರಫೀಕ್ ಮತ್ತು ಅವರ ಮನೆಯವರಿಗೆ ಸದಾ ಇರಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments