ಹಾಸ್ಯಗಾರ ಶ್ರೀ ಚಂದ್ರಹಾಸ ಪೂಜಾರಿ ತುಂಬೆ ಓರ್ವ ಬಹುಮುಖ ಪ್ರತಿಭೆಯ ಕಲಾವಿದ. ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನು ಬಿಟ್ಟು ಉಳಿದ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲರು. ವೇಷಭೂಷಣ ತಯಾರಿಕಾ ಕಲೆಯನ್ನೂ ಬಲ್ಲವರು. ಪೋಸ್ಟರ್ ಮತ್ತು ಬ್ಯಾನರ್ ಬರೆಯುವ ಕಲೆಯೂ ಇವರಿಗೆ ಕರಗತ. ಮನೆ, ಕಟ್ಟಡಗಳಿಗೆ ಪೈಂಟಿಂಗ್ ಮಾಡುವ ಕೆಲಸವನ್ನೂ ತಿಳಿದವರು.
ಸುಮಾರು 40 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪ್ರಸ್ತುತ ಶ್ರೀ ಕಟೀಲು ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಹಾಸ್ಯಗಾರರಾಗಿ ತಿರುಗಾಟ ನಡೆಸುತ್ತಿದ್ದಾರೆ.
ಹಾಸ್ಯಗಾರ ಶ್ರೀ ಚಂದ್ರಹಾಸ ಪೂಜಾರಿ ತುಂಬೆ ಅವರ ಹುಟ್ಟೂರು ಬಂಟ್ವಾಳ ತಾಲೂಕಿನ ತುಂಬೆ. ಶ್ರೀ ಕೊರಗಪ್ಪ ಪೂಜಾರಿ ಮತ್ತು ಶ್ರೀಮತಿ ಲಿಂಗಮ್ಮ ದಂಪತಿಗಳ ಪುತ್ರನಾಗಿ 1964ರಲ್ಲಿ ಜನನ. ಕೊರಗಪ್ಪ ಪೂಜಾರಿ ಅವರ ನಾಲ್ಕು ಮಂದಿ ಗಂಡು ಮಕ್ಕಳಲ್ಲಿ ಇವರು ಕಿರಿಯವರು. ವಿದ್ಯಾರ್ಜನೆ 9ನೇ ತರಗತಿ ವರೆಗೆ. ತುಂಬೆ ಶಾಲೆ ಮತ್ತು ಪಾಣೆಮಂಗಳೂರು ಹೈಸ್ಕೂಲಿನಲ್ಲಿ.
ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಕಲೆಯು ಕೈಬೀಸಿ ಕರದಿತ್ತು. ಪ್ರದರ್ಶನಗಳನ್ನು ಆಸಕ್ತಿಯಿಂದ ನೋಡುತ್ತಿದ್ದರು. ಮನೆಯ ಹತ್ತಿರ ಸುಂಕದಕಟ್ಟೆ ಮೇಳದ ಪ್ರದರ್ಶನ ನೋಡಲು ಹೋಗಿದ್ದರು. ಚೌಕಿಗೆ ತೆರಳಿ ಮೇಳದ ಮ್ಯಾನೇಜರರಲ್ಲಿ ನಾನು ಮೇಳಕ್ಕೆ ಬರುತ್ತೇನೆ ಎಂದು ಕೇಳಿಕೊಂಡಿದ್ದರು. ಮನೆಯವರ ಒಪ್ಪಿಗೆ ಪಡೆದು ಬಾ ಎಂದು ಎಂದು ಹೇಳಿ ಮ್ಯಾನೇಜರ್ ಅವರು ಚಂದ್ರಹಾಸ ಪೂಜಾರಿ ಅವರನ್ನು ಮನೆಗೆ ಕಳಿಸಿದ್ದರು.
ಮನೆಯವರ ಒಪ್ಪಿಗೆಯಿರಲಿಲ್ಲ. ಮನೆಯವರಲ್ಲಿ ಹೇಳದೆ ಶಾಲಾ ಸಹಪಾಠಿಗಳಿಗೆ ಮಾತ್ರ ವಿಚಾರ ತಿಳಿಸಿ ಸುಂಕದಕಟ್ಟೆ ಮೇಳ ಸೇರಿದ್ದರು. ಮೇಳದಲ್ಲಿ ಕೆಲಸದ ಜತೆ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಿದ್ದರು. ಮೇಳದಲ್ಲಿದ್ದುಕೊಂಡೇ ಕಲಾವಿದ ಶ್ರೀ ಕುಂಞಿರಾಮ ಅವರಿಂದ ಹೆಜ್ಜೆಗಾರಿಕೆ ಕಲಿತರು. ಕೋಡಂಗಿಯಿಂದ ಆರಂಭಿಸಿ ಬಾಲಗೋಪಾಲ, ಪೀಠಿಕೆ ಸ್ತ್ರೀ ವೇಷ ಮಾಡುತ್ತಿದ್ದರು.
ಆ ವರ್ಷದ ತಿರುಗಾಟ ಮುಗಿದ ಬಳಿಕ ಮಳೆಗಾಲದಲ್ಲಿ ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಯಾಗಿ ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸ. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ತರಬೇತಿ ಪಡೆದು ಸುಂಕದಕಟ್ಟೆ ಮೇಳದಲ್ಲಿ ನಾಲ್ಕು ವರ್ಷ ತಿರುಗಾಟ ನಡೆಸಿದ ಚಂದ್ರಹಾಸ ಅವರು ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ವೇಷ ಮಾಡಿದರು.
ಆಗ ಬೇಕೂರು ಕೇಶವ ಹಾಸ್ಯಗಾರರಾಗಿದ್ದರು. ಅವರಿಂದ ಹಾಸ್ಯ ಪಾತ್ರಗಳನ್ನು ನಿರ್ವಹಿಸುವ ರೀತಿಯನ್ನು ತಿಳಿದುಕೊಂಡರು. ಬಳಿಕ ಶ್ರೀ ತಿಮ್ಮಪ್ಪ ಗುಜರನ್ ಅವರ ನಾಯಕತ್ವದ ತಲಕಳ ಕಾಶೀ ವಿಶ್ವನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ಪುಂಡುವೇಷಧಾರಿಯಾಗಿ ವ್ಯವಸಾಯ. ಬಳಿಕ ಮೂರು ವರ್ಷ ಪುತ್ತೂರು ಶ್ರೀಧರ ಭಂಡಾರಿಗಳ ಪುತ್ತೂರು ಮೇಳದಲ್ಲಿ ಪುಂಡುವೇಷಗಳ ಜತೆ ಹಾಸ್ಯ ಪಾತ್ರಗಳನ್ನೂ ಮಾಡಿದ್ದರು.
ನಂತರ ಪುತ್ತೂರು ಶ್ರೀಧರ ಭಂಡಾರಿಗಳ ಕಾಂತಾವರ ಮೇಳದಲ್ಲಿ ಒಂದು ವರ್ಷ. ಬಳಿಕ ಕೆ.ಎಚ್ ದಾಸಪ್ಪ ರೈಗಳ ಕುಂಬಳೆ ಮೇಳದಲ್ಲಿ ಹಾಸ್ಯಗಾರರಾಗಿ 2 ವರ್ಷ. ಮುಂದೆ ಮಧೂರು ಮೇಳದಲ್ಲಿ ಒಂದು ವರ್ಷ, ವರ್ಕಾಡಿ ಐತಪ್ಪ ಅವರ ಪುತ್ತೂರು ಮೇಳದಲ್ಲಿ ಒಂದು ವರ್ಷ, ಕಲ್ಲಾಡಿ ದೇವಿಪ್ರಸಾದ್ ಶೆಟ್ಟರ ಕರ್ನಾಟಕ ಮೇಳದಲ್ಲಿ ಒಂದು ವರ್ಷ, ಕಿಶನ್ ಹೆಗ್ಡೆಯವರ ಮಂಗಳಾದೇವಿ ಮೇಳದಲ್ಲಿ ಒಂದು ವರ್ಷ, ದಯಾನಂದ ಗುಜರನ್ ಅವರ ಸಸಿಹಿತ್ಲು ಮೇಳದಲ್ಲಿ ಎಂಟು ವರ್ಷ ವ್ಯವಸಾಯ ಮಾಡಿದ್ದರು.
ಬಳಿಕ ಎರಡು ವರ್ಷ ಧರ್ಮಸ್ಥಳ ಮೇಳ,ವಿನೋದ್ ಕುಮಾರ್ ಬಜಪೆ ಅವರ ಬಪ್ಪನಾಡು ಮೇಳದಲ್ಲಿ ಒಂದು ವರ್ಷ, ಸಸಿಹಿತ್ಲು ಮೇಳದಲ್ಲಿ ಎರಡು ವರ್ಷ, ವರ್ಕಾಡಿ ಐತಪ್ಪ ಅವರ ತಲಕಳ ಮೇಳದಲ್ಲಿ ಒಂದು ವರ್ಷ, ಹೀಗೆ ಚಂದ್ರಹಾಸ ತುಂಬೆ ಅವರ ಕಲಾಸೇವೆ ಸಾಗಿತ್ತು.
ಕಳೆದ ಐದು ವರ್ಷಗಳಿಂದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರಧಾನ ಹಾಸ್ಯಗಾರರಾಗಿದ್ದಾರೆ. ತುಂಬೆ ಚಂದ್ರಹಾಸ ಪೂಜಾರಿ ಅವರು ಪುರಾಣ ಮತ್ತು ತುಳು ಪ್ರಸಂಗಗಳ ಅನುಭವಿ. ಪುಂಡುವೇಷ ಮತ್ತು ಹಾಸ್ಯಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಿದವರು. ಕಿರೀಟ ವೇಷ ಮತ್ತು ಬಣ್ಣದ ವೇಷಗಳನ್ನೂ ಮಾಡಬಲ್ಲವರು.
ಕಳೆದ ಇಪ್ಪತ್ತು ವರ್ಷಗಳಿಂದ ಯಕ್ಷಗಾನ ವೇಷಭೂಷಣ ತಯಾರಿಕೆಯ ಕೆಲಸದಲ್ಲೂ ತೊಡಗಿಸಿಕೊಂಡಿರುತ್ತಾರೆ. ಕಳೆದ ಮೂರು ವರ್ಷಗಳಿಂದ ಕಟೀಲು ಮೇಳಗಳ ವೇಷಭೂಷಣ ತಯಾರಿಕೆಯ ಕೆಲಸ ಮಾಡುತ್ತಿದ್ದಾರೆ. ಪೋಸ್ಟರ್, ಬ್ಯಾನರ್ ಬರೆಯುವ ಮತ್ತು ಕಟ್ಟಡಗಳಿಗೆ ಪೈಂಟಿಂಗ್ ಮಾಡುವ ಕಲೆಯೂ ಇವರಿಗೆ ಕರಗತವಾಗಿದೆ.
ಪ್ರಸ್ತುತ ಕಿನ್ನಿಗೋಳಿ ಸಮೀಪದ ಕೆರೆಕಾಡು ಎಂಬಲ್ಲಿ ವಾಸವಾಗಿದ್ದಾರೆ. ಹಾಸ್ಯಗಾರ ಶ್ರೀ ಚಂದ್ರಹಾಸ ಪೂಜಾರಿ ತುಂಬೆ ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ.
ಲೇಖಕ: ರವಿಶಂಕರ್ ವಳಕ್ಕುಂಜ
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions