ರಾಪರ್ ಸಮೇತ ಚಾಕಲೇಟ್ ತಿಂದು 6 ವರ್ಷದ ಬಾಲಕಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬಿಜೂರು ಗ್ರಾಮ ಪಂಚಾಯತಿನಲ್ಲಿರುವ ಬವಳಾಡಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿನಿ ಸಮನ್ವಿ (6) ಅಲ್ಲಿಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎರಡನೆಯ ತರಗತಿಯ ವಿದ್ಯಾರ್ಥಿನಿ. ಇಂದು ಬುಧವಾರ ಬೆಳಿಗ್ಗೆ ಶಾಲೆಗೆ ಹೊರಡಲು ಅನುಮಾನಿಸುತ್ತಿದ್ದ ಮಗಳನ್ನು ಸಮಾಧಾನಿಸಲು ಆಕೆಯ ಇಚ್ಛೆಯಂತೆ ಅವಳಮ್ಮ ಚಾಕಲೇಟ್ ಕೊಟ್ಟಿದ್ದರು.
ಅಷ್ಟರಲ್ಲಿ ಶಾಲೆಗೆ ಹೋಗುವ ಬಸ್ ಬಂದುದರಿಂದ ಅವಸರದಿಂದ ಚಾಕಲೇಟ್ ಕವರ್ ಸಮೇತ ಬಾಯಿಗೆ ಹಾಕಿದ್ದ ಸಮನ್ವಿಯ ಗಂಟಲಲ್ಲಿ ಅದು ಸಿಕ್ಕಿಹಾಕಿಕೊಂಡಿತ್ತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಬೈಂದೂರಿನ ಆಸ್ಪತ್ರೆಗೆ ಸೇರಿಸಲಾಯಿತು.
ಅಲ್ಲಿ ಗಂಟಲಲ್ಲಿದ್ದ ಚಾಕಲೇಟ್ ಹೊರತೆಗೆದಿದ್ದರೂ ಮಗುವಿನ ಪ್ರಾಣ ಉಳಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.