ಯಕ್ಷಗಾನ ದೈಹಿಕ ಮತ್ತು ಮಾನಸಿಕ ದೃಢತೆಯೊಂದಿಗೆ ಭಾಷಾ ಶುದ್ಧಿಯಾಗಿ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ. ಕರಾವಳಿ ಭಾಗಕ್ಕೆ ಸೀಮಿತವಾದ ಯಕ್ಷಗಾನದ ವ್ಯಾಪ್ತಿಯನ್ನು ನಾಡಿನಾದ್ಯಂತ ವಿಸ್ತರಿಸುವಲ್ಲಿ ಮಹತ್ತರವಾದ ಸೇವೆಯನ್ನು ಸಲ್ಲಿಸುತ್ತಿರುವ ಯಕ್ಷದೇಗುಲ ಶಿಕ್ಷಣ ಸಂಸ್ಥೆಗಳನ್ನು ಕೇಂದ್ರೀಕರಿಸಿಕೊ0ಡು ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ನಡೆಸುತ್ತಿರುವುದು ಶ್ಲಾಘನೀಯ. ಕೊರೋನೋತ್ತರ ಕಾಲವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಅವರ ಕಾರ್ಯಕ್ಕೆ ಯಶಸ್ಸು ಸಿಗಲಿ ಎಂದು ಯಕ್ಷಗಾನ ಕಲಾರಂಗ ಉಡುಪಿ ಇದರ ಕಾರ್ಯದರ್ಶಿ ಮುರುಳಿ ಕಡೆಕಾರ್ ಹೇಳಿದರು.
ಅವರು ದಿನಾಂಕ 28-03-2022ರಂದು ಅನುದಾನಿತ ಪ್ರೌಢಶಾಲೆ ನಿಟ್ಟೂರು ಇಲ್ಲಿ ಯಕ್ಷದೇಗುಲ ಬೆಂಗಳೂರು ಇವರ ಯಕ್ಷಗಾನ ಪ್ರಾತ್ಯಕ್ಷಿಕೆ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹೇಳಿದರು.
ಹಿಂದೆ ಕರಾವಳಿ ಭಾಗದ ಯಕ್ಷಗಾನ ತಂಡಗಳು ಬೆಂಗಳೂರು ಮುಂತಾದ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡುತ್ತಿದ್ದೇವು. ಆದರೆ ಇಂದು ಬೆಂಗಳೂರಿನ ಸಂಸ್ಥೆ ಕರಾವಳಿಯ ಶಾಲೆಗಳಲ್ಲಿ ಪರಂಪರೆ ಯಕ್ಷಗಾನ ಪ್ರದರ್ಶನ ಸಾಧ್ಯತೆಗಳನ್ನು ತೋರಿಸಿಕೊಡುತ್ತಿರುವುದು ಸಂತೋಷದ ವಿಚಾರ ಎಂದು ನಿವೃತ್ತ ಮುಖ್ಯೋಪಾಧ್ಯಾಯರು ಎಸ್. ವಿ.ಭಟ್. ಹೇಳಿದರು.
ಯಕ್ಷಗಾನ ಕರ್ನಾಟಕ ಪ್ರದಾನ ಕಲೆಯಾಗಿ ಗುರುತಿಸಿಕೊಂಡಾಗ ಮಾತ್ರ ಕಲೆಯ ಉಳಿವಿಗಾಗಿ ಅವಿರತ ಶ್ರಮಿಸಿದ ಕಲಾವಿದರ ಶ್ರಮಕ್ಕೆ ಸಾರ್ಥಕತೆ ಒದಗಿ ಬರುತ್ತದೆ ಎಂದು ಹಂಸಲೇಖ ದೇಸಿ ಪ್ರದರ್ಶನ ಕಲೆ ವಿದ್ಯಾಲಯದ ಶ್ರೀನಿಧಿ ರಾಜು ಹೇಳಿದರು.
ಯಕ್ಷಗಾನ ವಿದ್ವಾಂಸ ಹೆಚ್. ಸುಜಯೀಂದ್ರ ಹಂದೆ ಮುಖ್ಯೋಪಾಧ್ಯಾಯರಾಗಿರುವ ಅನುಸೂಯ, ಪ್ರಭಾರ ಮುಖ್ಯೋಪಾಧ್ಯಾಯರಾಗಿರುವ ಶೃಂಗೇಶ್ವರ ಚಲನಚಿತ್ರ ಸಹಾಯಕ ನಿರ್ದೇಶಕ ಗಣೇಶ್, ಯಕ್ಷದೇಗುಲದ ಸುದರ್ಶನ ಉರಾಳರು ಸಭೆಯಲ್ಲಿ ಉಪಸ್ಥಿತರಿದ್ದರು. ರಾಘವೇಂದ್ರ ತುಂಗ ಕೋಟ ಕಾರ್ಯಕ್ರಮ ನಿರೂಪಿಸಿದರು, ನವೀನ್ ಕೋಟ ಸ್ವಾಗತಿಸಿ, ಲಂಬೋದರ ಹೆಗಡೆ ವಂದಿಸಿದರು.
ನಂತರ ಕೆ. ಮೋಹನ್ ನಿರ್ದೇಶನದ ಸುದರ್ಶನ ಉರಾಳ ಸಂಯೋಜನೆಯಲ್ಲಿ ಸುಜಯೀಂದ್ರ ಹಂದೆ, ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಸುದೀಪ ಉರಾಳ, ಕೃಷ್ಣಮೂರ್ತಿ ಉರಾಳ, ತಮ್ಮಣ್ಣ ಗಾಂವ್ಕರ್, ನವೀನ್ ಕೋಟ, ರಾಜು ಪೂಜಾರಿ ಮುಂತಾದ ಕಲಾವಿದರನ್ನೊಳಗೊಂಡ ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿತು.
ಪದಾಭಿನಯ, ಹಸ್ತಾಭಿನಯ, ಮುದ್ರೆಗಳ ಬಳಕೆ, ಬಣ್ಣದ ವೇಷ ರಚನಾ ಕ್ರಮ, ಅಟ್ಟೆ ಕೇದಗೆ ಮುಂದಲೆ ಕಟ್ಟುವ ಕ್ರಮ, ಪರಂಪರೆಯ ಕುಣಿತಗಳು, ಯುದ್ಧ ಕುಣಿತ, ಪ್ರಯಾಣ ಕುಣಿತ, ರಸಾಭಿನಯ, ಪ್ರಸಂಗ ಸನ್ನಿವೇಷ ಪ್ರದರ್ಶನ ಆಯುಧಗಳ ಬಳಕೆ ಮುಂತಾದ ವಿವರಗಳನ್ನೊಳಗೊಂಡ ಪ್ರಾತ್ಯಕ್ಷಿಕೆ ಪ್ರೇಕ್ಷಕರ ಗಮನ ಸೆಳೆಯಿತು.
ಕೋಟ ಸುದರ್ಶನ ಉರಾಳ, ಮೊ: 9448547237