Saturday, January 18, 2025
Homeಯಕ್ಷಗಾನಯಶೋಧರ ಚರಿತೆ(ಜೀವದಯಾ ಪ್ರಬೋಧೆ) ಎಂಬ ಯಕ್ಷಗಾನ ರೂಪಕ

ಯಶೋಧರ ಚರಿತೆ(ಜೀವದಯಾ ಪ್ರಬೋಧೆ) ಎಂಬ ಯಕ್ಷಗಾನ ರೂಪಕ

ಭಾರತದ ನಾನಾ ಭಾಷೆಗಳಲ್ಲಿ ಬರೆಯಲ್ಪಟ್ಟಿರುವ, ಅದರಲ್ಲೂ ಕವಿ ಜನ್ನನಿಂದ ರಚಿತವಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತವಾದಂತಹ ಕೃತಿ‘ಯಶೋಧರಚರಿತೆ’.ದಕ್ಷಿಣ ಕನ್ನಡದ ಗಂಡುಕಲೆಯೆಂದೇ ಖ್ಯಾತವಾದ ಯಕ್ಷಗಾನದಲ್ಲಿ ರಾಮಾಯಣ, ಮಹಾಭಾರತಾದಿ ಕಥೆಗಳೊಂದಿಗೆ ವೈದಿಕ ಸಾಹಿತ್ಯವು ಯಕ್ಷಗಾನ ರೂಪದಿಂದ ಜನತೆಯ ಅನುಭವಕ್ಕೆ ಬಂದಿರುವುದು ನಮಗೆಲ್ಲ ವೇದ್ಯವಾದ ವಿಚಾರ.

ಆದರೆ ಜೈನ ಸಾಹಿತ್ಯವು ಎಲ್ಲ ಜನಮನಕೆ ತಲುಪಿಲ್ಲದೇ ಇರುವುದರಿಂದ ಆ ದಿಶೆಯ ಪ್ರಯತ್ನವಾಗಿ ಕಂಡು ಬರುವುದು1955ರಲ್ಲಿ ಕವಿಭೂಷಣ ವೆಂಕಪ್ಪ ಶೆಟ್ಟಿ ಅವರಿಂದ ರಚಿತವಾದ ಪಾತ್ರವರ್ಗದ ಮಾತುಗಳಿಂದ ಕೂಡಿದ ‘ಯಶೋಧರಚರಿತೆ’(ಜೀವದಯಾ ಪ್ರಬೋಧೆ) ಎಂಬ ಯಕ್ಷಗಾನರೂಪಕ.


ಸಂಕಲ್ಪ ಹಿಂಸೆಯ ಪರಿಣಾಮ ಯಶೋಧರ-ಚಂದ್ರಮತಿಯರು ಜನ್ಮಾಂತರಗಳಲ್ಲಿ ಬಳಲಿದ ಕಥೆಯನ್ನು, ಅಹಿಂಸಾ ಧರ್ಮದ ಮಹತ್ವವನ್ನು ಸಾರುವುದೇ ಕೃತಿಯ ಮೂಲ ಉದ್ದೇಶವಾಗಿದೆ.ಧರ್ಮದ ಹೆಸರಿನಲ್ಲಿ ದೇವತಾ ಸನ್ನಿಧಿಯಲ್ಲಿ ಪ್ರಾಣಿಬಲಿಯನ್ನು ಕೊಡುವುದು ಶಾಸ್ತçಕ್ಕೆ ವಿರುದ್ಧವಾಗಿರುವ ತಾಮಸ ಕರ್ಮವಾಗಿದೆ.

ಮನುಷ್ಯನು ತನ್ನ ಒಳಿತಿಗಾಗಿ ಮೂಕಪಶುವನ್ನು ಬಲಿ ಕೊಡುವುದನ್ನುತಡೆಗಟ್ಟುವ ಸಂಪ್ರದಾಯಕ್ಕೆ ನಾಂದಿ ಹಾಡಲು, ಭಾವಹಿಂಸೆಯೇ ಜನ್ಮಾಂತರದ ದುಃಖವನ್ನು ತರುವುದು ಎಂದಾದಲ್ಲಿ, ನಿಜ ಹಿಂಸೆಯು ಇನ್ನಷ್ಟು ಘೋರ ದುಃಖವನ್ನು ತAದೊಡ್ಡುವುದು ಎಂಬ ವಿಚಾರವನ್ನು ಜನರ ಮನಸ್ಸಿನಲ್ಲಿ ಮೂಡಿಸುವ ಉದ್ದೇಶ ಈ ಕೃತಿಯದು. ಈ ರೂಪಕದಲ್ಲಿನ ಬೋಧನಾಪರ ವಾಕ್ಯಗಳು ಸಂದರ್ಭಾನುಸಾರ ಗಂಭೀರತೆಯಿಂದ ಮೂಡಿ ಕಥೆಯು ಅತ್ಯಂತ ಸೊಗಸಾಗಿ ಸಾಗಿದೆ.


ಇಲ್ಲಿ ಜನ್ನ ವಿರಚಿತ‘ಯಶೋಧರಚರಿತೆ’ಯು ನಾಲ್ಕು ಅವತಾರಗಳ ಕಂದ ವೃತ್ತಗಳಿಂದ ಕೂಡಿದ ಸೊಗಸಾದ ಯಕ್ಷಗಾನ ರೂಪಕವಾಗಿ ಮಾರ್ಪಾಡಾಗಿದೆ.ಇದರಲ್ಲಿ ಶೃಂಗಾರ, ವೀರ, ಕರುಣ, ಹಾಸ್ಯ, ರೌದ್ರ, ಭಯಾನಕ, ಭೀಭತ್ಸ, ಅದ್ಭುತ, ಶಾಂತ ರಸಗಳ ಸಮಾವೇಶವಿದೆ. ಹಿಂಸೆ ಅಹಿಂಸೆಯಾಗಿ, ಕ್ರೌರ್ಯ ದಯೆಯಾಗಿ, ಅಧರ್ಮ ಧರ್ಮವಾಗಿ ಪರಿವರ್ತನೆಯಾಗುವ ಚಿತ್ರಣವು ಇಲ್ಲಿದೆ.


ಶಾರದಾ ಪ್ರಾರ್ಥನೆಯೊಂದಿಗೆ ಆರಂಭವಾಗುವ ಪ್ರಸಂಗವು ಪಾತ್ರಗಳ ವಿವರಗಳೊಂದಿಗೆ, ಮಾತ್ರೆ, ತಾಳ ಪ್ರಸ್ತಾರದ ವಿವರಗಳನ್ನು ಒಳಗೊಂಡಿದೆ. ಇದರ ಕೊನೆಯಲ್ಲಿ ಅಹಿಂಸಾಧರ್ಮದ ಬಗೆಗೆ ಮಹಾಭಾರತದಲ್ಲಿ ಕಂಡುಬರುವ ಉಲ್ಲೇಖಗಳು ಹಾಗೂ ಇದಕ್ಕೆ ವಿರುದ್ಧವಾಗಿ ಅಲ್ಲಿ ಕಂಡುಬರುವ ಸನ್ನಿವೇಶದ ವಿವರಗಳನ್ನೂ ನೀಡಿದ್ದಾರೆ.


ಹೆಚ್ಚಾಗಿ ರಾಮಾಯಣ, ಮಹಾಭಾರತದಿಂದ ಆಯ್ದ ಪ್ರಸಂಗಗಳ ನಡುವೆ ಜೈನಧರ್ಮಕ್ಕೆ ಸಂಬಂಧಿಸಿದ ಕನ್ನಡ ಸಾಹಿತ್ಯ ಮಾತ್ರವಲ್ಲ ಭಾರತದ ಹೆಚ್ಚಿನ ಎಲ್ಲ ಭಾಷೆಗಳಲ್ಲೂ ಪ್ರಚುರತೆಯನ್ನು ಪಡೆದಿರುವ ಕಥಾನಕವೊಂದು ಯಕ್ಷಗಾನ ರೂಪಕವಾಗಿ ಸುಮಾರು 75 ವರ್ಷಗಳ ಹಿಂದೆಯೇ ರಚಿತವಾಗಿದ್ದುದು ಕಣ್ಣಿಗೆ ಬಿದ್ದಾಗ ವಿಶೇಷವೆನಿಸಿದ್ದಂತೂ ನಿಜ.

ಲೇಖಕಿ: ಡಾ. ಮೈತ್ರಿ ಭಟ್


ಡಾ. ಮೈತ್ರಿ ಭಟ್,
ಉಪನ್ಯಾಸಕಿ, ಕನ್ನಡ ವಿಭಾಗ,
ವಿವೇಕಾನಂದಕಾಲೇಜು,
ನೆಹರೂ ನಗರ, ಪುತ್ತೂರು – 574203
ಮೊಬೈಲು ಸಂಖ್ಯೆ: 9449793584

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments