ಡೊಳ್ಳು ಕುಣಿತ ಪುರುಷರಿಗೆ ಮಿಸಲಾದ ಕಲೆ ಎನ್ನುವುದಕ್ಕಾಗಿ ಅದನ್ನು ಗಂಡುಕಲೆ ಎಂದೇ ಕರೆಯುತ್ತಾರೆ. ಇದೊಂದು ಜಾನಪದ ಕಲೆಯೂ ಹೌದು. ಶಾಸ್ತ್ರೀಯ ಕಲೆಯೂ ಹೌದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರೂ ಡೊಳ್ಳು ಕುಣಿತದಲ್ಲಿ ಭಾಗವಹಿಸುವುದು ಹೇರಳವಾಗಿ ಕಂಡುಬರುತ್ತದೆ. ಒಳ್ಳೆಯ ದೇಹದಾರ್ಡ್ಯತೆ ಮತ್ತು ಶಕ್ತಿ ಇರುವ ಕಲಾವಿದರು ಮಾತ್ರ ಈ ಕಲೆಯನ್ನು ಉತ್ತಮವಾಗಿ ಪ್ರದರ್ಶಿಸಬಲ್ಲರು.
ಉತ್ತರಕರ್ನಾಟಕದ ಬಹುತೇಕ ಜಿಲ್ಲೆಗಳು ಮತ್ತು ಮಧ್ಯ ಕರ್ನಾಟಕದ ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳು ಕುಣಿತ ತನ್ನ ವಿಶಿಷ್ಟವಾದ ನೃತ್ಯಗಾರಿಕೆಗೆ ಹೆಸರುವಾಸಿಯಾಗಿದೆ. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂಬ ಹೆಸರು ಬಂದಿರಬಹುದು ಎಂದೆನಿಸುತ್ತದೆ.
ಕುರುಬ ಜನಾಂಗದ ಕಲೆಯಾಗಿರುವ ಡೊಳ್ಳು ಕುಣಿತ ಹಳ್ಳಿಯ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ. ಡೊಳ್ಳು ಕುಣಿತದ ತಂಡದಲ್ಲಿ ಸಾಮಾನ್ಯವಾಗಿ ನಾಲ್ಕು ಜನರಿರುತ್ತಾರೆ ಕೆಲವು ಬಾರಿ ಇಷ್ಟೆ ಜನರಿರಬೇಕು ಎಂಬ ನಿಯಮವಿಲ್ಲ. ಹಿನ್ನೆಲೆಯಲ್ಲಿ ತಾಳ, ತಪ್ಪಡಿ,ಕಹಳೆ ಜಾಗಟೆ, ಕೊಳಲು ಬಳಸುತ್ತಾರೆ. ಪದ ಹೇಳಿಕೊಂಡು ಡೊಳ್ಳನ್ನು ಬಾರಿಸುತ್ತಾರೆ.
ಪದಕ್ಕೆ ಪ್ರತ್ಯೇಕವಾದ ಕೈಪಟ್ಟು ಬಳಸುತ್ತಾರೆ ಡೊಳ್ಳು ಬಾರಿಸುವಾಗ ಬಲಗೈಯಲ್ಲಿ ಮಾತ್ರ ಕೋಲಿರುತ್ತದೆ. ಒಮ್ಮೆ ಕೋಲಿನಿಂದ ಬಾರಿಸಿದರೆ ಎಡಗೈಯಲ್ಲಿ ಒಂದು ಪೆಟ್ಟು ಕೊಡಬೇಕು. ವೃತ್ತಾಕಾರವಾಗಿ ನಿಂತು ಸಜ್ಜುಗೊಂಡ ತಂಡದ ಸದಸ್ಯರು ನಿಧಾನವಾಗಿ ಡೊಳ್ಳು ಭಾರಿಸಲು ತೊಡಗುವುದರೊಂದಿಗೆ ಸುತ್ತಲು ಪ್ರಾರಂಭಿಸುತ್ತಾರೆ. ಹಿಮ್ಮಳವೂ ಜೊತೆಗೂಡುತ್ತದೆ. ಕ್ರಮೇಣ ಗತ್ತು ಹೋದಂತೆ ಡೊಳ್ಳನ್ನು ಶಕ್ತಿ ಮೀರಿ ಕೇಳುವವರ ಕಿವಿ ಗಡಗುಟ್ಟುವಂತೆ ಬಾರಿಸುತ್ತಾರೆ.
ಒಂದು ಗತ್ತು ಶಿಖರವನ್ನು ಮುಟ್ಟಿದ ಬಳಿಕ ನಿಧಾನವಾಗಿ ಬೇರೊಂದು ಪ್ರಕಾರದ ಬಡಿತ ಆರಂಭವಾಗುತ್ತದೆ. ಬಾರಿಸುವ ವಿಧಾನ ಎಲ್ಲಾ ಗತ್ತುಗಳಲ್ಲಿಯು ಒಂದೇ ರೀತಿ ಇರುತ್ತದೆ. ಲೆಕ್ಕದಲ್ಲಿ ಬಾರಿಸುವಿಕೆ ಹೊಡೆತಗಳ ಸಂಖ್ಯೆಯನ್ನು ಜೊಡಿಸುತ್ತದೆ. ಒಂದು ಗುಣಿ ಎಂದರೆ ಮೊದಲ ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಕೋಲು ಬಲಕ್ಕೆ ಒಂದು ಪೆಟ್ಟು ಎಡಕ್ಕೆ. ಇದೇ ಕ್ರಮೇಣ ಹೆಚ್ಚುತ್ತಾ ಹೊಗುತ್ತದೆ. ಹೆಚ್ಚು ಗುಣಿಯನ್ನು ಬಾರಿಸುವಾಗ ಜೊಡಿ ಕಲಾವಿದರು ಎದುರು ಬದುರು ಬಂದು ನಿಂತುಕೊಂಡು ಬಲಗಾಲು ಮುಂದಿಟ್ಟು ಬಾಗಿ ಪೈಪೊಟಿಯಿಂದ ಗತ್ತು ಬಾರಿಸುತ್ತಾರೆ.
ಆಗ ಕಲಾವಿದರ ಭಂಗಿ, ಬಾರಿಸುವ ಗತ್ತುಗಾರಿಕೆ ನೋಡಲು ರಂಜನಿಯ. ಕೊಲಿನ ಪೆಟ್ಟು ಏರಿಕೆಯಲ್ಲಿಯೇ ಮುಂದುವರಿದು ಮುಕ್ತಾಯಕ್ಕೆ ಬರುತ್ತೆ. ಇದಕ್ಕೆ ಕಲಬುರಗಿ (ಗುಲ್ಬರ್ಗಾ) ಜಿಲ್ಲೆಯಲ್ಲಿ ಹೆಜ್ಜೆಗೆ ಪಾವುದಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಕುರುಬರು ಮೈಗೆ ಕಂಬಳಿ ಸುತ್ತಿ ಡೊಳ್ಳು ಬಾರಿಸುತ್ತಾರೆ. ಮಧ್ಯದಲ್ಲಿ ವೀರಗಾರನೊಬ್ಬ ಕಾವಿ ಉಟ್ಟಿರುತ್ತಾನೆ. ಈತ ಡೊಳ್ಳು ಬಾರಿಸುವುದಿಲ್ಲ ಬದಲಿಗೆ ತಾಳ ನುಡಿಸುತ್ತಾ ಹಾಡು ಹೇಳುತ್ತಾನೆ. ಈತ ಮೆಳಕ್ಕೆ ಸೂತ್ರದಾರನಿದ್ದಂತೆ. ಕಾಲಿನ ಗೆಜ್ಜೆಯ ಸದ್ದು ಕೂಡ ಹಿನ್ನೆಲೆಯಾಗುತ್ತದೆ.
ವಿವಿಧ ಬಗೆಯ ಡೊಳ್ಳು ಕುಣಿತಗಳು : ೧. ಕುಳಿತು ಭಾರಿಸುವುದು, ೨. ಲಾಗ ಹಾಕುವುದು ೩. ಹಾರಿ ಬಾರಿಸುವುದು ೪. ಮಂಡಿ ಬಡಿತ ೫. ಮರಗಾಲು ಬಡಿತ ೬. ಗಾಡಿ ಚಕ್ರದ ಬಡಿತ
ಕುಳಿತು ಭಾರಿಸುವುದು – ಕುಕ್ಕರ ಗಾಲಿನಲ್ಲಿ ಕುಳಿತು ಡೊಳ್ಳು ಬಡಿಯುತ್ತಾ ಕುಪ್ಪಳಿಸುವುದು. ಸುಂದರವಾದ ಶೈಲಿ
ಲಾಗ ಹಾಕುವುದು- ಡೊಳ್ಳು ಬಾರಿಸುವಾಗಲೇ ಗತ್ತಿಗೆ ತಕ್ಕಂತೆ ಲಾಗ ಹಾಕುವುದು, ಮತ್ತೆ ನೇರ ಸ್ಥಿತಿಗೆ ಬಂದು ಗತ್ತು ತಪ್ಪದೆ ಪೆಟ್ಟು ಹಾಕುವುದು.
ಹಾರಿ ಬಾರಿಸುವುದು- ಡೊಳ್ಳು ಬಾರಿಸುವಾಗ ಎರಡು ಅಥವಾ ಮೂರು ಅಡಿ ಮೇಲೆ ಹಾರಿ ಕುಣಿಯುವುದು. ಮತ್ತೆ ಬಾರಿಸುವುದು.
ಮಂಡಿ ಬಡಿತ- ಜೊತೆ ಕಲಾವಿದರು ಎಡಗಾಲು ಮಂಡಿಯನ್ನು ನೇಲಕ್ಕೆ ಒತ್ತಿ ಬಲಗಾಲನ್ನು ಊರಿಕೊಂಡು ಡೊಳ್ಳು ಬಾರಿಸುವುದು.ಮರಗಾಲು ಬಡಿತ- ಒಂದು ಅಥವಾ ಎರಡು ಅಡಿ ಎತ್ತರದ ಮರಗಾಲನ್ನು ಕಟ್ಟಿಕೊಂಡು ಡೊಳ್ಳನ್ನು ಬಾರಿಸುವುದು. ಗಾಡಿ ಚಕ್ರದ ಬಡಿತ: ಕಬ್ಬಿಣದ ಅಚ್ಚಿನ ಮೇಲೆ ಎತ್ತಿನ ಗಾಡಿಯ ಚಕ್ರವನ್ನಿಟ್ಟು ಅದರ ಮೇಲೆ ನಿಂತುಕೊಂಡು ತಲೆಯ ಮೇಲೆ ತುಂಬಿದ ಕೊಡವನ್ನಿಟ್ಟುಕೊಂಡು ಡೊಳ್ಳು ಬಾರಿಸುವುದು.
ಇನ್ನಿತರ ಶೈಲಿಗಳು : ಕಲಾವಿದನ ಹಿಂಭಾಗ ಹಾಗೂ ಮುಂಭಾಗಗಳಿಗೆ ಒಂದೊಂದು ಡೊಳ್ಳನ್ನು ಕಟ್ಟಿ ಅ ಡೊಳ್ಳಿನ ಮೇಲೆ ಚಿಕ್ಕ ಬಾಲಕರನ್ನು ಕೂರಿಸಿಕೊಂಡು ಎರಡು ಡೊಳ್ಳುಗಳನ್ನು ಬಾರಿಸುವುದು. ಅಲ್ಲದೆ ಒಂದ್ಹೆಜ್ಜೆ ಕುಣಿತ, ಎರಡ್ಡೆಜ್ಜೆ ಕುಣಿತ, ಮಂಡಲ ಕುಣಿತ, ಜೋಡು ಕುಣಿತ ಮುಂತಾದ ಗತ್ತುಗಳಿವೆ. ಜೊಡುಪಾಯಿಲಿ ಎಂದರೆ ಎದುರು ಬದುರು ಕುಳಿತುಕೊಂಡು ಎದೆಯ ಮೇಲೆ ಡೊಳ್ಳು ಕಟ್ಟಿಕೊಂಡು ಹಿಂಬಾಗದಲ್ಲಿ ನೆಲದ ಮೇಲೆ ಇಟ್ಟಿರುವ ಕೊಬ್ಬರಿಯನ್ನೊ ಅಥವಾ ರೂಪಾಯಿ ನೋಟನ್ನೊ ಬಾಯಲ್ಲಿ ತೆಗೆಯುವುದು. ಡೊಳ್ಳು ಕುಣಿತದಲ್ಲಿ ಮತ್ತೊಂದು ರೀತಿ ಲವಳ ಹಾಕುವುದು. ಕೆಲವು ಕಡೆ ಇದನ್ನು ಜಡೆ ಹೆಣೆಯುವುದು ಎಂದು ಕರೆಯತ್ತಾರೆ. ಈ ಕಲೆಯಲ್ಲಿ ಕುಣಿತವಷ್ಟೆ ಅಲ್ಲ ಒಳ್ಳೆಯ ಸಾಹಿತ್ಯವೂ ಇದೆ.
