‘ಕರ್ನಾಟಕ ರಾಜ್ಯ ಹಲವಾರು ಪ್ರಾದೇಶಿಕ, ಜಾನಪದ ಹಾಗೂ ಲಲಿತ ಕಲೆಗಳ ಆಗರ. ಅವುಗಳಲ್ಲಿ ನಮ್ಮ ಕಣ್ಣು ಮತ್ತು ಕಿವಿಗಳಿಗೆ ಅದ್ಭುತರಮ್ಯ ಅನುಭವ ನೀಡುವ ಯಕ್ಷಗಾನ ರಾಜ್ಯದ ಶ್ರೇಷ್ಠ ಕಲೆ. ಅದರ ಜನಪ್ರಿಯತೆಯಲ್ಲಿ ಕಲಾವಿದರು ಹಾಗೂ ಕಲಾ ಸಂಘಟನೆಗಳು ಮಹತ್ತರ ಪಾತ್ರವಹಿಸಿವೆ’ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವ ಮತ್ತು ವಿಕಾಸ್ ಕಾಲೇಜಿನ ಸ್ಥಾಪಕಾಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ಹೇಳಿದ್ದಾರೆ.
‘ ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದಲ್ಲಿ ಮಂಗಳೂರು ವಿ.ವಿ. ಕಾಲೇಜು ರವೀಂದ್ರ ಕಲಾಭವನದಲ್ಲಿ ಆಯೋಜಿಸಿದ ಎರಡು ದಿನಗಳ ‘ಯಕ್ಷಗಾನ ತಾಳಮದ್ದಳೆ ಪರ್ವ’ 9ನೇ ವರ್ಷದ ನುಡಿಹಬ್ಬ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಕ್ಷಗಾನದ ಹಿರಿಯ ಸ್ತ್ರೀವೇಷಧಾರಿ 88ರ ಹರೆಯದ ‘ಯಕ್ಷ ಶಾಂತಲಾ’ ಬಿರುದಾಂಕಿತ ಪಾತಾಳ ವೆಂಕಟ್ರಮಣ ಭಟ್ಟರಿಗೆ ಯಕ್ಷಾಂಗಣ ಗೌರವ ಪ್ರಶಸ್ತಿಯನ್ನು ಅವರು ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಪುರುಷೋತ್ತಮ ಪ್ರಸಂಗ, ಪದ್ಯಾಣ ಪ್ರಣತಿ ಹಾಗೂ ದಿ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣೆಯೂ ಜರಗಿತು.
ಕನ್ನಡ ಭಾಷೆಯ ಹಿರಿಮೆ: ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಸಮಾರಂಭವನ್ನು ಉದ್ಘಾಟಿಸಿದರು. ಅವರು ಮಾತನಾಡಿ ‘ಸಾಂಸ್ಕೃತಿಕ ಹಿರಿಮೆ ಹಾಗೂ ಶುದ್ಧ ಕನ್ನಡ ಭಾಷಾ ಪ್ರಯೋಗ ಯಕ್ಷಗಾನ ರಂಗದಲ್ಲಿ ಬಹುವಾಗಿ ಬಳಕೆಯಲ್ಲಿರುವ ಕಾರಣ ಯಕ್ಷಗಾನದ ಶ್ರೇಯಸ್ಸು ಜಗತ್ತಿನಾದ್ಯಂತ ಹರಡುವಂತಾಗಿದೆ. ಅದರಿಂದ ಕಲಾವಿದರಿಗೂ ಮಾನ ಸನ್ಮಾನಗಳು ಪ್ರಾಪ್ತವಾಗಿವೆ’ ಎಂದರು.
ಕೆನರಾ ಬ್ಯಾಂಕ್ ವಲಯ ಮುಖ್ಯಸ್ಥರು ಹಾಗೂ ಪ್ರಧಾನ ವ್ಯವಸ್ಥಾಪಕ ಯೋಗೀಶ್ ಆಚಾರ್ಯ ಮುಖ್ಯ ಅತಿಥಿಯಾಗಿದ್ದರು
ಯಕ್ಷಾಂಗಣ ದಶಮಾನೋತ್ಸವ: ಯಕ್ಷಾಂಗಣ ಮಂಗಳೂರು ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಯಕ್ಷಗಾನ ರಂಗದಲ್ಲಿ ಹೊಸ ಆಲೋಚನೆಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಯಕ್ಷಾಂಗಣವು 2022 ರಲ್ಲಿ ದಶಮಾನೋತ್ಸವ ಆಚರಿಸುತ್ತಿದೆ. ಅದರಂತೆ ಮುಂದಿನ ನವಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಹತ್ತುದಿನಗಳ ನುಡಿಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಗುವುದು’ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪೂಂಜ – ಪದ್ಯಾಣ ಸಂಸ್ಮರಣೆಯನ್ನು ಮಂಗಳೂರು ವಿ.ವಿ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಶ್ರೀಪತಿ ಕಲ್ಲೂರಾಯ ನೆರವೇರಿಸಿದರು.ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ರಾಜ್ಯ ಅಲೆಮಾರಿ ಆಯೋಗದ ರವೀಂದ್ರ ಶೆಟ್ಟಿ, ವಿವಿ ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ, ದಿ.ಪುರುಷೋತ್ತಮ ಪೂಂಜರ ಧರ್ಮಪತ್ನಿ ಶೋಭಾ ಪೂಂಜಾ, ದಿ.ಪದ್ಯಾಣ ಗಣಪತಿ ಭಟ್ಟರ ಪುತ್ರ ಸ್ವಸ್ತಿಕ್ ಪದ್ಯಾಣ ಉಪಸ್ಥಿತರಿದ್ದರು.
ಆರಂಭದಲ್ಲಿ ಯಕ್ಷಾಂಗಣದ ಸದಸ್ಯರು ನಾಡಗೀತೆಯನ್ನು ಹಾಡಿದರು. ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು; ಸಂಚಾಲಕ ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಉಮೇಶ್ ಆಚಾರ್ಯ ಗೇರುಕಟ್ಟೆ ವಂದಿಸಿದರು. ಪದಾಧಿಕಾರಿಗಳಾದ ಸುಧಾಕರ ರಾವ್ ಪೇಜಾವರ, ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಕೃಷ್ಣಪ್ಪ ಗೌಡ ಪಡ್ಡಂಬೈಲ್, ಸಿದ್ದಾರ್ಥ ಅಜ್ರಿ,ನಿವೇದಿತಾ ಎನ್.ಶೆಟ್ಟಿ ಮತ್ತು ಸುಮಾ ಪ್ರಸಾದ್ ಸಹಕರಿಸಿದರು.
ತಾಳಮದ್ದಳೆ: ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಪುರುಷೋತ್ತಮ ಸರಣಿಯಲ್ಲಿ ದಿ.ಬೊಟ್ಟಿಕೆರೆ ಪುರುಷೊತ್ತಮ ಪೂಂಜ ವಿರಚಿತ ‘ಗಂಗಾ ಸಾರಥ್ಯ’ ಮತ್ತು ‘ಮಾ ನಿಷಾದ’ ಪ್ರಸಂಗಗಳ ತಾಳಮದ್ದಳೆ ಜರಗಿತು. ಹರೀಶ್ ಶೆಟ್ಟಿ ಸೂಡ ಮತ್ತು ಗಣೇಶ್ ಕುಮಾರ್ ಹೆಬ್ರಿ ಅವರ ಭಾಗವತಿಕೆಯಲ್ಲಿ ಪ್ರಸಿದ್ಧ ಕಲಾವಿದರು ಅರ್ಥಧಾರಿಗಳಾಗಿ ಪಾಲ್ಗೊಂಡರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions