ಕಲಾಸಂಗಮ ಚಾರಿಟೇಬಲ್ ಟ್ರಸ್ಟಿನ ಅಂಗಸಂಸ್ಥೆಯಾದ ಶ್ರೀ ಯಕ್ಷಗಾನ ಕಲಾಮೇಳ, ಶಿರಸಿಯು ತನ್ನ ಈ ವರ್ಷದ ತಿರುಗಾಟವನ್ನು ಆರಂಭಿಸಲು ಅಣಿಯಾಗಿದೆ. ಈ ವರ್ಷದ ಪ್ರಥಮ ಪ್ರದರ್ಶನ ‘ಮಾಳವಿಕಾ ಪರಿಣಯ’ ಎಂಬ ನೂತನ ಪ್ರಸಂಗದೊಂದಿಗೆ ದಿನಾಂಕ 05.12.2021ರ ಭಾನುವಾರದಂದು ಶಿರಸಿಯ ಲಯನ್ಸ್ ಸಭಾಂಗಣದಲ್ಲಿ (ಸಂಜೆ ಘಂಟೆ 5ರಿಂದ 10ರ ವರೆಗೆ) ಆರಂಭವಾಗಲಿದೆ ಎಂದು ಮೇಳದ ವ್ಯವಸ್ಥಾಪಕರೂ ಕಲಾಸಂಗಮ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರೂ ಆಗಿರುವ ಶ್ರೀ ಕೇಶವ ಹೆಗಡೆ ಮಂಗಳೂರು (ನಾಗರಕುರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಹೊಸ ಪ್ರಸಂಗ ‘ಮಾಳವಿಕಾ ಪರಿಣಯ’ ಎಂಬ ಕಥಾನಕವು ಮಹಾಕವಿ ಕಾಳಿದಾಸ ವಿರಚಿತ “ಮಾಳವಿಕಾಗ್ನಿಮಿತ್ರಮ್” ಎಂಬ ಸಂಸ್ಕೃತ ನಾಟಕದ ಕಥಾ ಭಾಗವಾಗಿದೆ. ಈ ಕತೆಯನ್ನು ಯಕ್ಷಗಾನಕ್ಕೆ ಅಳವಡಿಸಿದವರು ಶ್ರೀ ಕೇಶವ ಹೆಗಡೆ ಮಂಗಳೂರು (ನಾಗರಕುರ). ಪ್ರಸಂಗದ ಪದ್ಯ ರಚನೆಯನ್ನು ತೆಂಕು ಬಡಗಿನ ಕಲಾವಿದ ಎಂ.ಕೆ. ರಮೇಶ ಆಚಾರ್ಯ ಅವರು ಮಾಡಿದ್ದಾರೆ. ಶ್ರೀ ಯಕ್ಷಗಾನ ಕಲಾಮೇಳ, ಶಿರಸಿಯು ಉತ್ಸಾಹಿ ಕಲಾವಿದರನ್ನೊಳಗೊಂಡ ತಂಡವಾಗಿದೆ. ಶ್ರೀ ಕೇಶವ ಹೆಗಡೆ ಮಂಗಳೂರು ಅವರ ಸಾರಥ್ಯದಲ್ಲಿ ತಿರುಗಾಟಕ್ಕೆ ಹೊರಟು ನಿಂತಿರುವ ಮೇಳಕ್ಕೆ ಕಲಾಭಿಮಾನಿಗಳು ಶುಭ ಹಾರೈಸಿದ್ದಾರೆ.