Saturday, January 18, 2025
Homeಯಕ್ಷಗಾನಭರವಸೆಯ ಕಿರೀಟ ವೇಷಧಾರಿ - ಶ್ರೀ ಜನಾರ್ದನ ಕೊಕ್ಕಡ

ಭರವಸೆಯ ಕಿರೀಟ ವೇಷಧಾರಿ – ಶ್ರೀ ಜನಾರ್ದನ ಕೊಕ್ಕಡ

ಪ್ರತಿಯೊಂದು ಮನೆಯಲ್ಲೂ ಕಲಾವಿದರೂ ಕಲಾಸಕ್ತರೂ ಇದ್ದೇ ಇರುತ್ತಾರೆ. ನಾವೂ ಯಕ್ಷಗಾನ ಕಲೆಯ ಒಂದು ಅಂಗವಾಗಿದ್ದೇವೆ ಎಂದು ಸಂತೋಷಪಟ್ಟುಕೊಳ್ಳುತ್ತಾರೆ. ಕಲಾವಿದನಾಗಬೇಕೆಂಬ ಆಸೆ ಇದ್ದವರಿಗೆಲ್ಲಾ ಅದು ಎಟಕುವುದೂ ಇಲ್ಲ. ಎಳವೆಯಲ್ಲಿ ಕಲಾಸಕ್ತಿ ಇಲ್ಲದವರೂ ಯಕ್ಷಗಾನ ಕಲಾವಿದರಾಗಿ ಬೆಳೆದದ್ದೂ ಇದೆ. ಯಕ್ಷಾಗಸದಲ್ಲಿ ಮಿಂಚುತ್ತಿರುವ ಕಲಾತಾರೆಗಳು ಅನೇಕರು. ಅವರಲ್ಲಿ ಒಬ್ಬರನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ಇದು.

ಯಕ್ಷಗಾನ ಕ್ಷೇತ್ರದಲ್ಲಿ ಉತ್ತಮ ಕಿರೀಟ ವೇಷಧಾರಿಗಳಾಗಿ (ರಾಜಪಾತ್ರಗಳು) ಇಂದು ಹಲವಾರು ಕಲಾವಿದರು ಮಿಂಚುತ್ತಿದ್ದಾರೆ. ಅವರಲ್ಲಿ ಒಬ್ಬರು ಶ್ರೀ ಜನಾರ್ದನ ಕೊಕ್ಕಡ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. ಹಂತ ಹಂತವಾಗಿ ಮೇಲೇರಿದ ಇವರು ಇಂದು ಉತ್ತಮವಾಗಿ ಕಿರೀಟ ವೇಷಗಳಲ್ಲಿ ಮಿಂಚುತ್ತಿದ್ದಾರೆ. ರಂಗದ ನಡೆ, ಸಹಕಲಾವಿದರೊಂದಿಗೆ ಸಂಭಾಷಣೆ ಎಲ್ಲವೂ ಅತ್ಯುತ್ತಮವಾಗಿದೆ. ಒಳ್ಳೆಯ ನಾಟಕೀಯ ಪ್ರಜ್ಞೆ ಇರುವ ಕಲಾವಿದ. ಯಾವ ವೇಷವನ್ನೂ ಕೊರತೆಯಾಗದಂತೆ ನಿರ್ವಹಿಸಬಲ್ಲವರು. ಪಾತ್ರಕ್ಕೆ ಬೇಕಾದಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ದೇರಾಜೆ ಎಂಬ ಸ್ಥಳವು ಜನಾರ್ದನ ಕೊಕ್ಕಡ ಅವರ ಹುಟ್ಟೂರು. ಶ್ರೀ ತಿಮ್ಮಪ್ಪ ಗೌಡ ಮತ್ತು ಶ್ರೀಮತಿ ಸೇಸಮ್ಮ ದಂಪತಿಗಳ ಪುತ್ರನಾಗಿ 1982ನೇ ಇಸವಿ ಏಪ್ರಿಲ್ 16ರಂದು ಜನನ. ಶ್ರೀ ತಿಮ್ಮಪ್ಪ ಗೌಡರು ಕೃಷಿಕರು. ಬದುಕಿಗೆ ಅದುವೇ ಆಧಾರ. ಜನಾರ್ದನ ಅವರು ಓದಿದ್ದು ಎಸ್ ಎಸ್ ಎಲ್ ಸಿ ವರೆಗೆ. ಒಂದನೇ ತರಗತಿಯಿಂದ ಏಳರ ವರೆಗೆ ಪಟ್ಟೂರು ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಕೊಕ್ಕಡ ಸರಕಾರಿ ಹೈಸ್ಕೂಲಿನಲ್ಲಿ. ಶಾಲಾ ಜೀವನದ ಬಳಿಕ ತಂದೆಗೆ ಕೃಷಿಕಾರ್ಯಗಳಲ್ಲಿ ನೆರವಾಗಿದ್ದರು.

ಜನಾರ್ದನ ಕೊಕ್ಕಡ ಅವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡಲು ಬೇಕಾದಷ್ಟು ಅವಕಾಶಗಳು ಸಿಗುತ್ತಿತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೂ ಚಿಗುರೊಡೆದಿತ್ತು. ಖ್ಯಾತ ಕಲಾವಿದ ಕೊಕ್ಕಡ ಶ್ರೀ ಪರಮೇಶ್ವರ ಆಚಾರ್ಯರಿಂದ ನಾಟ್ಯ ಅಭ್ಯಾಸ. ಶಾಲಾ ವಾರ್ಷಿಕೋತ್ಸವದ ಯಕ್ಷಗಾನ ಪ್ರದರ್ಶನ. ದ್ರೋಣ ಪರ್ವ ಪ್ರಸಂಗದಲ್ಲಿ ರಂಗ ಪ್ರವೇಶ ಮಾಡಿದ್ದರು. 

ಜನಾರ್ದನ ಕೊಕ್ಕಡ ಅವರು ಮೇಳದ ತಿರುಗಾಟ ಆರಂಭಿಸಿದ್ದು 1999-2000ದಲ್ಲಿ. ಕಟೀಲು ಮೇಳದ ನಾಲ್ಕನೇ ತಂಡದಲ್ಲಿ ಬಾಲಗೋಪಾಲನಾಗಿ ತಿರುಗಾಟ ಆರಂಭ. ಎರಡು ತಿರುಗಾಟ ಮಾಡಿ ಮತ್ತೆ ಒಂದು ವರ್ಷ ಮನೆಯಲ್ಲಿದ್ದು ಕೃಷಿ ಕಾರ್ಯದಲ್ಲಿ ಮಗ್ನರಾಗಿದ್ದರು. ಮತ್ತೆ ನಾಲ್ಕನೇ ಮೇಳಕ್ಕೆ ಪುನರಾಗಮನ. ಪೂರ್ವರಂಗದಲ್ಲಿ ಮುಖ್ಯ ಸ್ತ್ರೀವೇಷ, ಪೀಠಿಕಾ ಸ್ತ್ರೀ ವೇಷ ಅಲ್ಲದೆ ಪ್ರಸಂಗದ ವೇಷಗಳನ್ನೂ ನಿರ್ವಹಿಸಿದ್ದರು. ಹಂತ ಹಂತವಾಗಿ ನಿರ್ವಹಿಸಿದ ಪಾತ್ರಗಳಲ್ಲಿ ಪಕ್ವರಾಗಿಯೇ ಮೇಲೇರಿದರು. ಎರಡನೇ ಪುಂಡುವೇಷಗಳನ್ನು ನಿರ್ವಹಿಸುವಷ್ಟು ಬೆಳೆದರು.

ಕುಶಲವರು, ಅಭಿಮನ್ಯು, ಭಾರ್ಗವ, ಶ್ರೀಕೃಷ್ಣ, ಷಣ್ಮುಖ, ಚಂಡಮುಂಡರು, ಮೊದಲಾದ ವೇಷಗಳನ್ನು ನಿರ್ವಹಿಸುತ್ತಾ ಕಿರೀಟ ವೇಷಧಾರಿಯಾಗಿ ಕಾಣಿಸಿಕೊಂಡರು. ನಾಲ್ಕನೇ ಮೇಳದಲ್ಲಿ ಕುಬಣೂರರ ಸಾರಥ್ಯ. ಉತ್ತಮ ಕಲಾವಿದರ ಒಡನಾಟ ಕಲಿಕೆಗೆ ಕಾರಣವಾಗಿತ್ತು. ಕಟೀಲು ಐದನೇ ಮೇಳ ಆರಂಭವಾದ ವರ್ಷ. ಜನಾರ್ದನ ಕೊಕ್ಕಡ ಅವರು ಮೂರನೇ ಮೇಳಕ್ಕೆ ಕಿರೀಟ ವೇಷಧಾರಿಯಾಗಿ ತೇರ್ಗಡೆಯಾದರು. ಶ್ರೀ ಗೋಪಾಲಕೃಷ್ಣ ಮಯ್ಯರ ಭಾಗವತಿಕೆ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಕೈರಂಗಳ ಕೃಷ್ಣ ಮೂಲ್ಯ, ಗಣೇಶ ಚಂದ್ರಮಂಡಲ, ಗಣೇಶ ಕನ್ನಡಿಕಟ್ಟೆ ಮೊದಲಾದ ಕಲಾವಿದರ ಒಡನಾಟವೂ ಸಿಕ್ಕಿತ್ತು.

ನಾಲ್ಕನೇ ಮತ್ತು ಮೂರನೇ ಮೇಳದಲ್ಲಿ ಮದ್ದಳೆಗಾರರಾದ ಶ್ರೀ ಮೋಹನ ಶೆಟ್ಟಿಗಾರರ ಒಡನಾಟವೂ ದೊರಕಿತ್ತು. ಹೆಚ್ಚಿನ ಎಲ್ಲಾ ಕಿರೀಟ ವೇಷಗಳನ್ನು ಮಾಡಿ ಅನುಭವವನ್ನು ಗಳಿಸಿಕೊಂಡರು. ಕಳೆದ ಮೂರು ವರ್ಷಗಳಿಂದ ಕಟೀಲು ನಾಲ್ಕನೇ ಮೇಳದಲ್ಲಿ ಕಿರೀಟ ವೇಷಧಾರಿಯಾಗಿ ಕಲಾಸೇವೆ ಮಾಡುತ್ತಿದ್ದಾರೆ. ಅವರ ಹಿರಣ್ಯಾಕ್ಷ, ಇಂದ್ರಜಿತು, ಶಿಶುಪಾಲ, ಕೌಂಡ್ಲಿಕ, ಕೌಶಿಕ, ರಕ್ತಬೀಜ, ಅರುಣಾಸುರ ಅಲ್ಲದೆ ಅನೇಕ ವೇಷಗಳನ್ನು ನೋಡಿದ್ದೇನೆ. ಅಲ್ಲದೆ ಸಹಕಲಾವಿದನಾಗಿ ನಾನು ರಂಗದಲ್ಲಿ ಕೊಕ್ಕಡ ಜನಾರ್ದನರಿಗೆ ಜತೆಯಾಗಿದ್ದೇನೆ. ಒಳ್ಳೆಯ ವೇಷಧಾರಿ. ಉತ್ತಮ ಪಾತ್ರನಿರ್ವಹಣೆ ಇವರದು. ಮಳೆಗಾಲದಲ್ಲಿ ಪುತ್ತೂರು ಶ್ರೀಧರ ಭಂಡಾರಿಗಳ ನಾಯಕತ್ವದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುತ್ತೂರು ತಂಡದಲ್ಲಿ ಅನೇಕ ಕಲಾಸೇವೆ ಮಾಡಿದ್ದಾರೆ. 

2018ರಲ್ಲಿ ಹರಿಣಾಕ್ಷಿ ಜತೆ ವಿವಾಹ. ಶ್ರೀ ಜನಾರ್ದನ, ಹರಿಣಾಕ್ಷಿ ದಂಪತಿಗಳಿಗೆ ಇಬ್ಬರು ಪುತ್ರರು. ಅವಳಿ ಮಕ್ಕಳು. ಮಾಸ್ಟರ್ ಮಿಥುನ್ ಮತ್ತು ಮಾಸ್ಟರ್ ಮಿಲನ್. ಇವರಿಗೆ ಮೂರು ವರ್ಷ ಪ್ರಾಯ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಜನಾರ್ದನ ಕೊಕ್ಕಡ ಅವರಿಗೆ ಸಕಲ ಭಾಗ್ಯಗಳೂ ಸಿದ್ಧಿಸಲಿ. ಕಲಾಸೇವೆಯು ನಿರಂತರವಾಗಿ ಅವರಿಂದ ನಡೆಯಲಿ. ಶ್ರೀದೇವರ ಅನುಗ್ರಹವು ಸದಾ ಇರಲಿ ಎಂಬ ಆಶಯಗಳು 

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments