ಅನುಭವಗಳನ್ನು ಗಳಿಸಿ ಹಂತ ಹಂತವಾಗಿ ಬೆಳೆದು ಮುಂಭಡ್ತಿಗೊಂಡು ಸ್ಥಾನಗಳನ್ನು ಪಡೆಯುವುದು ಎಲ್ಲಾ ಕ್ಷೇತ್ರಗಳಲ್ಲಿ ನಡೆಯುವ ಸಹಜವಾದ ಕ್ರಿಯೆಯು. ಕೆಳಸ್ಥರಗಳಲ್ಲಿ ಪಡೆದ ಅನುಭವಗಳೇ ಮುಂದೆ ಎದುರಾಗುವ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂಬುದರಿಂದ ಈ ವ್ಯವಸ್ಥೆಯು ಸರಿಯಾದುದೇ ಆಗಿದೆ. ಯಕ್ಷಗಾನದಲ್ಲೂ ಇದೇ ರೀತಿಯ ನಿಯಮಗಳಿತ್ತು ಎಂಬುದನ್ನು ನಾವು ಕೇಳಿರುತ್ತೇವೆ.
ಪೂರ್ವರಂಗ, ಸ್ತ್ರೀವೇಷ, ಪುಂಡುವೇಷ, ಪೀಠಿಕೆವೇಷ ಎದುರು ವೇಷ ಎಂಬ ಹಂತಗಳನ್ನು ದಾಟಿ ಬಂದವರು ಬಣ್ಣದ ವೇಷಧಾರಿಯಾಗುತ್ತಾರೆ. ಬಣ್ಣದ ವೇಷಗಳನ್ನು ನಿರ್ವಹಿಸಿ ಯಶಸ್ವಿಯಾದ ಮೇಲೆ ಅವರಿಗೆ ಹಾಸ್ಯಗಾರ ಸ್ಥಾನವು ದೊರಕುತ್ತಿತ್ತು. ಇದು ಪರಿವರ್ತನಾಶೀಲವಾದ ಪ್ರಪಂಚ. ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆಯನ್ನು ಕಾಣಬಹುದು. ದೇಶ, ಕಾಲಕ್ಕೆ ತಕ್ಕಂತಹ ಬದಲಾವಣೆಯನ್ನು ನಾವು ಆಕ್ಷೇಪಿಸದೆ ಸ್ವಾಗತಿಸಲೇಬೇಕಾಗುತ್ತದೆ. ಇಂದು ಯಕ್ಷಗಾನದಲ್ಲಿ ಕಲಾವಿದರಿಗೆ ಅವರವರ ಆಸಕ್ತಿಯನ್ನು ಹೊಂದಿ ಆಯ್ಕೆಗೆ ಅವಕಾಶಗಳಿವೆ.
ಏನೇ ಇರಲಿ, ಕಲಾವಿದನು ಸ್ಥಾನವನ್ನು ಹೇಗೆ ಗಿಟ್ಟಿಸಿಕೊಂಡ ಎಂಬುದು ಮುಖ್ಯವಲ್ಲ. ನಾವು ಧರಿಸಿದ ಪಾತ್ರಕ್ಕೆ, ಕಲೆಗೆ ಅಪಚಾರವಾಗದಂತೆ ಅಭಿನಯಿಸುವ ಕಲೆಯನ್ನು ಹೊಂದಿರುವುದು ಮುಖ್ಯ. ಯಕ್ಷಗಾನ ಎಂಬ ಮೇರು ಕಲೆಗೆ ಯಾವತ್ತೂ ಕೊರತೆಯಾಗಬಾರದು ಎಂಬ ಎಚ್ಚರದಿಂದ ಪಾತ್ರಗಳನ್ನು ನಿರ್ವಹಿಸಿದರೆ ಆತ ಕಲಾವಿದನಾಗಿ ಯಶಸ್ವಿಯಾಗುತ್ತಾನೆ. ಹಿಂದಿನ ಕಾಲದಲ್ಲಿ ಅನೇಕರು ಹಂತಹಂತವಾಗಿ ಬೆಳೆದೇ ಬಣ್ಣದ ವೇಷಧಾರಿಗಳಾಗಿ ಕಾಣಿಸಿಕೊಂಡರು. ಪ್ರಸಂಗ ಜ್ಞಾನ, ರಂಗ ನಡೆ ಮೊದಲಾದ ವಿಚಾರಗಳನ್ನು ತಮ್ಮ ದೀರ್ಘ ಅನುಭವದ ಹಿನ್ನೆಲೆಯಿಂದ ತಿಳಿದುಕೊಂಡಿದ್ದರು.
ಅಂತಹ ಬಣ್ಣದ ವೇಷಧಾರಿಗಳಲ್ಲೊಬ್ಬರು ಶ್ರೀ ಉದ್ಯಾವರ ದಿ| ಸಂಜೀವ ಚೌಟರು. ನಿವೃತ್ತಿಯ ಸಮಯದಲ್ಲಿ ಉದ್ಯಾವರ ಶ್ರೀ ಸಂಜೀವ ಚೌಟರು ಕಟೀಲು ನಾಲ್ಕನೇ ಮೇಳದಲ್ಲಿ ಮುಖ್ಯ ಬಣ್ಣದ ವೇಷಧಾರಿಯಾಗಿದ್ದರು. ಅವರ ಜತೆ ಹಲವು ವರ್ಷಗಳ ತಿರುಗಾಟ ನಡೆಸುವ ಅವಕಾಶವೂ ನನಗೆ ಸಿಕ್ಕಿದೆ. ಅವರ ಖಳ ಪಾತ್ರಗಳಿಗೆ ಹಾಸ್ಯ ಪಾತ್ರಗಳನ್ನು ನಿರ್ವಹಿಸಿರುತ್ತೇನೆ. ಆದುದರಿಂದ ಅವರ ಬಣ್ಣಗಾರಿಕೆ, ವೇಷನಿರ್ವಹಣೆ ಮತ್ತು ವ್ಯಕ್ತಿತ್ವಗಳ ಬಗೆಗೆ ತಿಳಿದುಕೊಳ್ಳಲು ಪ್ರತ್ಯಕ್ಷವಾಗಿ ಅನುಕೂಲವಾಗಿದೆ.
ಆಟ ನೋಡಿದ ನಂತರ ಕೆಲವರು ಚೌಕಿಗೆ ಬಂದು ರಾಕ್ಷಸ ಪಾತ್ರವನ್ನು ಮಾಡಿದವರಾರೆಂದು ಕೇಳುತ್ತಿದ್ದರು. ವೇಷ ಕಳಚಿ ವಿಶ್ರಾಂತಿಯಲ್ಲಿರುತ್ತಿದ್ದ ಸಂಜೀವ ಚೌಟರನ್ನು ನಾವು ಅವರಿಗೆ ತೋರಿಸುತ್ತಿದ್ದೆವು. ಆದರೆ ಅವರು ನಂಬುತ್ತಿರಲಿಲ್ಲ. ಅಸುರ ಪಾತ್ರವನ್ನು ಹಾಕಿದವರು ಇವರಲ್ಲ ಎಂದೇ ಹೇಳುತ್ತಿದ್ದರು. ಅಷ್ಟು ಸಣಕಲು ದೇಹ ಸಂಜೀವ ಚೌಟರದ್ದು. ಆಗ ವಯಸ್ಸು ಎಪ್ಪತ್ತು ದಾಟಿತ್ತು. ತರುಣರಾಗಿದ್ದಾಗ ಹೇಗಿದ್ದರೆಂಬುದು ತಿಳಿದಿಲ್ಲ. ದೇಹ ಹಾಗಿದ್ದರೂ ಎಪ್ಪತ್ತರ ವಯಸ್ಸಿನಲ್ಲೂ ರಂಗದಲ್ಲಿ ಅಷ್ಟು ಚುರುಕಾಗಿದ್ದರು. ರಾಕ್ಷಸರಾಗಿ ಅಬ್ಬರಿಸುತ್ತಿದ್ದರು. ಯುದ್ಧದ ಸಂದರ್ಭಗಳಲ್ಲಿ ಎದುರಾಳಿಯ ವೇಷವೂ ರಂಜಿಸುವಂತೆ ಅವರನ್ನು ಕೆಣಕಿ ಅಭಿನಯಿಸುತ್ತಿದ್ದರು.
ಬಣ್ಣದ ವೇಷಧಾರಿ ಶ್ರೀ ಸಂಜೀವ ಚೌಟರು ಜನಿಸಿದ್ದು ಮಂಜೇಶ್ವರ ಸಮೀಪದ ಉದ್ಯಾವರ ಎಂಬಲ್ಲಿ. ಉದ್ಯಾವರ ಶ್ರೀ ತಿಮ್ಮಯ್ಯ ಚೌಟ ಮತ್ತು ಶ್ರೀಮತಿ ಮಂಡ್ಯಪ್ಪು ದಂಪತಿಗಳ ಪುತ್ರನಾಗಿ ಜನನ. ತಿಮ್ಮಯ್ಯ ಚೌಟರು ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಹಾಗಾಗಿ ಕಲೆಯ ರಕ್ತಗತವಾಗಿಯೇ ಇತ್ತು. ಪರಿಸರದಲ್ಲಿ ನಡೆಯುತ್ತಿದ್ದ ಆಟಕೂಟಗಳಿಗೆ ತೆರಳುತ್ತಿದ್ದರು. ಬಿಕರ್ನಕಟ್ಟೆ ಐತಪ್ಪ ಎಂಬ ಕಲಾವಿದರು ಕಲಿಕಾಸಕ್ತರಿಗೆ ತರಬೇತಿಯನ್ನು ನೀಡುತ್ತಿದ್ದಾಗ ನೋಡುತ್ತಾ ಆಸಕ್ತರಾದರು. ತಾನೂ ತಂಡವನ್ನು ಸೇರಿಕೊಂಡು ನಾಟ್ಯ ಕಲಿತರು. ಹಾಗಾಗಿ ಪರಿಸರದ ಪ್ರೇರಣೆಯಿಂದಲೇ ಸಂಜೀವ ಚೌಟರೊಳಗೆ ಅಡಗಿದ ಕಲಾವಿದನು ಜಾಗೃತನಾದ ಎಂದು ಹೇಳಿದರೆ ತಪ್ಪಾಗಲಾರದು. ಟೈಲರ್ ರಾಮಪ್ಪ ಬೆಳ್ಚಾಡರಿಂದ ಅರ್ಥಗಾರಿಕೆಯನ್ನೂ ಕಲಿತರು. ಹವ್ಯಾಸವಾಗಿ ಆರಂಭಿಸಿದ್ದ ಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿದರು.
ಮೊತ್ತಮೊದಲು ಸೇರಿದ್ದು ಉದ್ಯಾವರ ಮೇಳಕ್ಕೆ. ಬಾಲಗೋಪಾಲನಾಗಿ. ಬಳಿಕ ಕುದ್ರೋಳಿಯ ಭಗವತೀ ಮೇಳ. ಬಳಿಕ ಸಜಿಪ, ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮೀ ಮೇಳಗಳಲ್ಲಿ ತಿರುಗಾಟ. ನಂತರ ಶ್ರೀ ಮಾರಣಕಟ್ಟೆ ಮೇಳದಲ್ಲಿ ಸ್ತ್ರೀ ವೇಷ ಮತ್ತು ಕಿರೀಟ ವೇಷಧಾರಿಯಾಗಿ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ಹಂತ ಹಂತವಾಗಿ ಬೆಳೆದು ಬಣ್ಣದ ವೇಷಗಳನ್ನು ಮಾಡಲು ತೊಡಗಿದ್ದರು. ಬಳಿಕ ಕಟೀಲು ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ಸುದೀರ್ಘ ತಿರುಗಾಟ (ಸುಮಾರು 45ಕ್ಕೂ ಹೆಚ್ಚಿನ ತಿರುಗಾಟ) ಕಟೀಲು ಮೇಳದಲ್ಲಿ ಸಣ್ಣ ತಿಮ್ಮಪ್ಪ, ಕಾವು ಕಣ್ಣ, ಕೇದಗಡಿ ಗುಡ್ಡಪ್ಪ ಗೌಡ, ಬಣ್ಣದ ಕುಟ್ಯಪ್ಪು ಮುಂತಾದ ಪ್ರಸಿದ್ಧ ಕಲಾವಿದರ ಒಡನಾಟವೂ ಸಿಕ್ಕಿತ್ತು.
ಕೇಶಾವರೀ ಕಿರೀಟದ ಮತ್ತು ಹೆಣ್ಣು ಬಣ್ಣಗಳನ್ನು ನಿರ್ವಹಿಸುವುದರಲ್ಲಿ ಶ್ರೀ ಸಂಜೀವ ಚೌಟರು ಖ್ಯಾತರು. ಶುಂಭಾಸುರ,ಭಂಡಾಸುರ, ಶೂರಪದ್ಮ, ತಾರಕ, ರಾವಣ, ಕಾಲಜಂಘ, ಶತ್ರುಪ್ರಸೂಧನ, ತಮಾಸುರ, ಮತ್ಸ್ಯ, ಅಜಮುಖಿ, ಪೂತನಿ, ಲಂಕಿಣಿ, ಶೂರ್ಪನಖಿ, ತಾಟಕಿ. ವೃತ್ತಜ್ವಾಲೆ, ಹಿಡಿಂಬೆ, ಮೈರಾವಣ, ಕಿರಾತ ಮೊದಲಾದ ಪಾತ್ರಗಳಲ್ಲಿ ಸಂಜೀವ ಚೌಟರ ಅಭಿನಯವನ್ನು ಕಾಣುವುದಕ್ಕೆ ಸಾಧ್ಯವಾಗಿದೆ. ಕೊರತೆಯಾಗದಂತೆ, ಅತ್ಯುತ್ತಮವಾಗಿ ಎಲ್ಲಾ ಬಣ್ಣದ ಪಾತ್ರಗಳನ್ನೂ ಚಿತ್ರಿಸುತ್ತಿದ್ದರು. ವಯಸ್ಸು ಮತ್ತು ಅನಾರೋಗ್ಯದ ಸಮಸ್ಯೆಯಿಂದ ಇವರು 2012ರ ಸುಮಾರಿಗೆ ವೃತ್ತಿ ಬದುಕಿನಿಂದ ನಿವೃತ್ತರಾಗಿದ್ದರು. ವಿಶ್ರಾಂತಿ ಬದುಕನ್ನು ನಡೆಸುತ್ತಿದ್ದ ಉದ್ಯಾವರ ಮಾಡ ಶ್ರೀ ಸಂಜೀವ ಚೌಟರು ನಿವೃತ್ತಿಯ ಎರಡು ವರ್ಷಗಳ ಬಳಿಕ ನಿಧನ ಹೊಂದಿದ್ದರು. ಇವರಿಗೆ ಐದು ಮಂದಿ ಮಕ್ಕಳು (ಒಂದು ಹೆಣ್ಣು ಮತ್ತು ನಾಲ್ಕು ಗಂಡು).